ಬೆಂಗಳೂರು: ಕೃಷಿವಿಶ್ವವಿದ್ಯಾಲಯ, ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 24ರಂದು ಬೆಳಗ್ಗೆ 11.30ಕ್ಕೆ ಚಾಲನೆ ನೀಡುತ್ತಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ‍ರಾಜೇಂದ್ರಪ್ರಸಾದ್ ತಿಳಿಸಿದರು.

 ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು ಅಕ್ಟೋಬರ್ 24 ರಿಂದ 27ರವರೆಗೆ ಮೇಳ ನಡೆಯಲಿದೆ. 2019ರ ಕೃಷಿಮೇಳ ವಿಶೇಷತೆಗಳಿಂದ ಕೂಡಿದೆ. ಈ ಬಾರಿಯ  ಘೋಷವಾಕ್ಯ “ನಿಖರ ಕೃಷಿ ಸುಸ್ಥಿರ ಅಭಿವೃದ್ದಿ”  ಇದಲ್ಲದೇ ಏಳು ಹೊಸ ತಳಿಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಅವುಗಳ ಬಿತ್ತನೆಬೀಜಗಳನ್ನು ರೈತರಿಗೆ ವಿತರಿಸುವ ಕಾರ್ಯಕ್ರಮವೂ ನಡೆಯುತ್ತದೆ ಎಂದು ತಿಳಿಸಿದರು.

ನಿಖರ ಕೃಷಿ – ಸುಸ್ಥಿರ ಕೃಷಿಯ ಮೂಲ ತಿರುಳು ಮಳೆನೀರಿನ ಸಮರ್ಪಕ ಕೊಯ್ಲು ಮತ್ತು ಅವುಗಳ ಬಳಕೆ. ಇದರಲ್ಲಿ  ಕೃಷಿಯ ಕಾರ್ಯಗಳು ನಿಖರವಾಗಿ ನಡೆಯುತ್ತವೆ. ಸೂಕ್ತ ಪ್ರಮಾಣದಲ್ಲಿ ನೀರು, ಗೊಬ್ಬರಗಳನ್ನು ಪೂರೈಸಲಾಗುವುದು. ಇದರ ಅಳವಡಿಕೆಯಿಂದ ರೈತಸಮುದಾಯಕ್ಕೆ ಅಪಾರ ಪ್ರಯೋಜನವಿದೆ ಎಂದರು.

ಬೇರೆಬೇರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಇದರಲ್ಲಿ ಖಾಸಗಿ ಕೃಷಿಸಂಸ್ಥೆಗಳು ಸಹ ಪಾಲ್ಗೊಳ್ಳುತ್ತಿರುವುದು ವಿಶೇಷ. ಸೌರಶಕ್ತಿ ಬಳಸಿಕೊಂಡು ಕೃಷಿ ಮಾಡಲು ಯೋಜಿಸಲಾಗಿದೆ. ಇದರಲ್ಲಿ ವಾಟರ್ ಪಂಪ್ ಗಳನ್ನು ಆನ್ ಮಾಡುವುದು. ಹನಿ ನೀರಾವರಿ, ತುಂತುರು ನೀರಾವರಿ ಮುಖಾಂತರ ದ್ರವ ಪೋಷಕಾಂಶಗಳನ್ನು ಕರಾರುವಾಕ್ಕಾಗಿ ನೀಡುವುದರ ಬಗ್ಗೆಯೂ ಪ್ರಾತ್ಯಕ್ಷಿಕೆ ಇರುತ್ತದೆ.

ಖುಷ್ಲಿ ಬೇಸಾಯದಲ್ಲಿ 64 ತಾಂತ್ರಿಕತೆಗಳನ್ನು ಪರಿಚಯಿಸುತ್ತಿದ್ದೇವೆ. ಇದು ಹವಾಮಾನ ಆಧಾರಿತ ಕೃಷಿಯಾಗಿದ್ದು, ಮಳೆ ಕಡಿಮೆಯಾದ, ಹೆಚ್ಚಾದ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗುವುದು. ಇದರಿಂದ ಬೆಳೆ ನಷ್ಟವಾಗುವುದನ್ನು ತಪ್ಪಿಸಬಹುದು.  ಕೊಯ್ಲು, ಕೊಯ್ಲೋತ್ತರ ತಂತ್ರಜ್ಞಾನಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲೆಡೆ ಕೃಷಿಕಾರ್ಮಿಕರ ಕೊರತೆ ಹೆಚ್ಚಾಗಿದೆ. ಆದ್ದರಿಂದ ಬೇರೆಬೇರೆ ಯಂತ್ರೋಪಕರಣಗಳ ಅಭಿವೃದ್ಧಿ ಮಾಡಲಾಗಿದೆ. ಅವುಗಳ  ಪ್ರಾತ್ಯಕ್ಷಿಕೆ ಜೊತೆಗೆ ಮಾರಾಟ ವ್ಯವಸ್ಥೆಯೂ ಇರುತ್ತದೆ ಎಂದು ತಿಳಿಸಿದರು.

ಪೋಷಕಾಂಶ ಉಂಡೆ: ಬಡತನದ ರೇಖೆಯಲ್ಲಿ ಇರುವವರು ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿದ್ದಾರೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಬೇರೆಬೇರೆ ಧಾನ್ಯಗಳನ್ನು ಬಳಸಿಕೊಂಡು ಪೌಷ್ಟಿಕಾಂಶಯುಕ್ತ ಉಂಡೆಗಳನ್ನು ನಮ್ಮ ಗೃಹವಿಜ್ಞಾನ ವಿಭಾಗದವರು ಮೌಲ್ಯವರ್ಧನೆ ಮಾಡಿದ್ದಾರೆ. ಈ ರೀತಿ ಮೌಲ್ಯವರ್ಧನೆ ಕಾರ್ಯ ಆಗುವುದು ಕೃಷಿಕರು ಬೆಳೆದ ಧಾನ್ಯಗಳ ಹೆಚ್ಚಿನ ಮಾರುಕಟ್ಟೆಗೂ ಸಹಾಯವಾಗುತ್ತದೆ ಎಂದು ತಿಳಿಸಿದರು.

ಕೃಷಿಮೇಳದ ಸಂದರ್ಭದಲ್ಲಿ ಕೃಷಿಯಲ್ಲಿ  ಗಮನಾರ್ಹ ಸಾಧನೆ ಮಾಡಿದ ಕೃಷಿಕರಿಗೆ ಪ್ರಶಸ್ತಿಗಳ ವಿತರಣೆ ಮಾಡಲಾಗುತ್ತಿದೆ. ವಿಶೇಷವಾಗಿ ಯುವಜನತೆ ಪ್ರೋತ್ಸಾಹಿಸಲು 35 ವರ್ಷ ವಯೋಮಾನದ ಒಳಗಿರುವ ಕೃಷಿಕರನ್ನು ಸಹ ಗುರುತಿಸಲಾಗಿದೆ. ಇವರಿಗೂ ಕೂಡ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಎಲ್ಲ ಕೃಷಿ ತಂತ್ರಜ್ಞಾನಗಳು ಒಂದೇ ಆವರಣದಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕತೆಗಳ ಪರಿಚಯ ಮಳೆಯಾಶ್ರಿತ ಬೆಳೆಯಿಂದಲೇ ಆರಂಭವಾಗುತ್ತದೆ. ಮೇಳಕ್ಕೆ ಬಂದ ಕೃಷಿಕರು ಯಾವುದೇ ಗೊಂದಲವಿಲ್ಲದೇ ಮೇಳವನ್ನು ಸಂಪೂರ್ಣವಾಗಿ ನೋಡಿ, ಅರಿತುಕೊಳ್ಳುವುದುಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕೃಷಿಮೇಳ  – 19 ಎಂಬ ಆ್ಯಪ್ ಕೂಡ ಅಭಿವೃದ್ಧಿ ಮಾಡಲಾಗಿದೆ. ಇದನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.  ಕೃಷಿಯನ್ನು ಉದ್ಯಮವಾಗಿ ನೋಡಬೇಕು. ಇದಕ್ಕಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಯುವಕರು ಕೃಷಿರಂಗಕ್ಕೆ ಬರಬೇಕು. ಈ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು  ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಮನೋಜ್ ರಾಜನ್ ತಿಳಿಸಿದರು..

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್. ನಟರಾಜ್, ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಾಕ್ಷರಿ, ಮಾಹಿತಿ ವಿಭಾಗದ ಮುಖ್ಯಸ್ಥ ಡಾ. ಶಿವರಾಮು, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಪತ್ರಿಕಾಗೋಷ್ಠಿ ನಂತರ ವಿವಿಧ ತಾಕುಗಳು, ತಾಂತ್ರಿಕ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಆಗಿರುವ ಬೆಳವಣಿಗೆಗಳನ್ನು ವಿವರಿಸಲಾಯಿತು.

LEAVE A REPLY

Please enter your comment!
Please enter your name here