ಇಂದಿಗೂ ಸಾಕಷ್ಟು ಮಂದಿ ಸಾವಯವಗೊಬ್ಬರಗಳಿಂದಾಗುವ ಪ್ರಯೋಜನಗಳೇನು ? ಅವುಗಳನ್ನು ಕೃಷಿಭೂಮಿಗೆ ಹಾಕದೇ ರಾಸಾಯನಿಕ ಗೊಬ್ಬರಗಳನ್ನಷ್ಟೇ ಹಾಕಿದರೆ ಸಾಕಲ್ಲವೇ ಎಂದು ಪ್ರಶ್ನೆ ಮಾಡುತ್ತಿರುತ್ತಾರೆ. ಮುಖ್ಯವಾಗಿ ಸಾವಯವ ಗೊಬ್ಬರಗಳು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳನ್ನು ಉತ್ತಮಗೊಳಿಸುತ್ತವೆ ಮತ್ತು ಬೆಳೆಗಳ ರೋಗ ನಿರೋಧಕತೆಯನ್ನು ಹೆಚ್ಚಿಸಿ ಕೀಟಗಳು ಹಾಗೂ ರೋಗಗಳ ಹಾವಳಿಯನ್ನು ಕಡಿಮೆಗೊಳಿಸುತ್ತವೆ.
ಭೌತಿಕ ಗುಣಗಳು:
ಮಣ್ಣಿನ ರಚನೆ (ಕಣಗಳ ಜೋಡಣೆ) ಉತ್ತಮಗೊಂಡು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಗೆ ಅನುಕೂಲವಾಗುತ್ತದೆ. ನೀರು, ಪೋಷಕಾಂಶಗಳು ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುತ್ತವೆ. ಜೇಡಿಯುಕ್ತ ಮಣ್ಣಿನಲ್ಲಿ, ಮಣ್ಣಿನ ಕಣಗಳ ನಡುವಣ ಅಂತರವನ್ನು ಮತ್ತು ರಂಧ್ರಗಳ ಪ್ರಮಾಣವನ್ನು ಹೆಚ್ಚಿಸಿ ಬೇರುಗಳು ಸುಲಭವಾಗಿ ಬೆಳೆಯಲು ಅನುವು ಮಾಡಿಕೊಡುವುದಲ್ಲದೆ ಗಾಳಿಯಾಡುವಿಕೆಯನ್ನು ಸುಧಾರಿಸುತ್ತದೆ. ಮಣ್ಣಿನಲ್ಲಿ ಮಳೆ ನೀರು ಇಂಗುವಿಕೆ ಪ್ರಮಾಣ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸುತ್ತವೆ ಹಾಗೂ ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸುತ್ತವೆ. ಕೆಂಪು ಮಣ್ಣಿನಲ್ಲಿ, ಮಣ್ಣಿನ ಹೆಪ್ಪುಗಟ್ಟುವಿಕೆಯು ಕಡಿಮೆಯಾಗಿ ಮೊಳಕೆಯೊಡೆಯುವಿಕೆಯ ಪ್ರಮಾಣ ಉತ್ತಮಗೊಳ್ಳುತ್ತದೆ.


ಸಾವಯವ ಗೊಬ್ಬರಗಳಲ್ಲಿರುವ ಅಂಶಗಳು:
ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ನಿಧಾನವಾಗಿ, ನಿರಂತರವಾಗಿ ಮತ್ತು ಅಗತ್ಯಕ್ಕನುಗುಣವಾಗಿ ಒದಗಿಸುತ್ತವೆ. ಸಾವಯವ ಗೊಬ್ಬರಗಳ ಬಳಕೆಯಿಂದ ಉತ್ಪತ್ತಿಯಾಗುವ ಹ್ಯೂಮಿಕ್ ಮತ್ತು ಫೆಲ್ವಿಕ್ ಆಮ್ಲಗಳಲ್ಲದೆ ಬೇರೆ ಸಾವಯವ ಸಂಯುಕ್ತಗಳ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುತ್ತವೆ ಮತ್ತು ಅವು ಸಸ್ಯಗಳಿಗೆ ಸುಲಭವಾಗಿ ದೊರಕುವಂತೆ ಮಾಡುತ್ತವೆ. ಮಣ್ಣಿನ ಧನ ಅಯಾನು ವಿನಿಮಯ ಸಾಮಥ್ರ್ಯ(ಸಿಇಸಿ) 2 ರಿಂದ 30 ಪಟ್ಟು ಹೆಚ್ಚಾಗುವುದರಿಂದ ಬೆಳೆಗಳಿಗೆ ಪೋಷಕಾಂಶಗಳ ಪೂರೈಕೆಯ ಸಾಮಥ್ರ್ಯವು ಅಧಿಕಗೊಳ್ಳುತ್ತದೆ. ಅನೇಕ ಸೂಕ್ಷ್ಮ ಪೋಷಕಾಂಶಗಳು ವಿಷಕಾರಿಯಾಗಿ ಪರಿಣಮಿಸಬಲ್ಲ ಪ್ರಮಾಣದಲ್ಲಿದ್ದಾಗ ಸಾವಯವ ವಸ್ತುಗಳೊಡನೆ ಸಂಕೀರ್ಣ ಹೊಂದಿ ಕರಗದ ರೂಪಕ್ಕೆ ತಿರುಗುತ್ತವೆ. ಇದರಿಂದ ಅವುಗಳಿಂದಾಗುವ ಅಪಾಯವು ತಪ್ಪುತ್ತದೆ. ಸಾವಯವ ಗೊಬ್ಬರಗಳು ಕಳಿಯುವಾಗ ಬಿಡುಗಡೆಯಾಗುವ ಆಮ್ಲಗಳು ಹಾಗೂ ಇಂಗಾಲದ ಡೈಆಕ್ಸೈಡ್ ಮಣ್ಣಿನ ಕ್ಷಾರತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತವೆ. ಸಸ್ಯ ಪ್ರಚೋದಕಗಳು, ಅಕ್ಸಿನ್ ಮತ್ತು ಜೀವ ನಿರೋಧಕಗಳ ಕಾರ್ಯ ದಕ್ಷತೆಯನ್ನು ಹೆಚ್ಚಿಸುತ್ತವೆ

ಜೈವಿಕ ಗುಣಗಳು:
ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಿಗೆ ಬೇಕಾಗುವ ಇಂಗಾಲ ಮತ್ತು ಮಣ್ಣಿನಲ್ಲಿರುವ ಅನೇಕ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಮಣ್ಣಿನಲ್ಲಿ ನಡೆಯುವ ಜೈವಿಕ ಚಟುವಟಿಕೆಗಳಾದ ಸಾರಜನಕ ಸ್ಥೀರಿಕರಣ, ರಂಜಕದ ಲಭ್ಯತೆ ಮತ್ತು ಇತರೆ ಪೋಷಕಾಂಶಗಳ ಬಿಡುಗಡೆ ಹಾಗೂ ಜೈವಿಕ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಸಾವಯವ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗುವುದಲ್ಲದೆ, ಹೆಚ್ಚು ಕಾರ್ಯ ಚಟುವಟಿಕೆಯಿಂದ ಕೂಡಿರುತ್ತವೆ

ಎರೆಹುಳುಗಳಿಂದ ಕೂಡಿರುವ ಕಳಿತ ಸಾವಯವ ಗೊಬ್ಬರ

ಸಾವಯವ ಪೋಷಕಾಂಶಗಳ ಮೂಲಗಳು: ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು, ಪ್ರೆಸ್ಮಡ್ ಜೈವಿಕ ಅನಿಲದ ಬಗ್ಗಡ, ಜೈವಿಕ ಗೊಬ್ಬರಗಳು, ದ್ರವರೂಪದ ಗೊಬ್ಬರಗಳು ಪ್ರಮುಖವಾದವುಗಳು.

ಲೇಖಕರು: ಡಾ. ದೇವಕುಮಾರ್, ಸಾವಯವಕ್ಷೇತ್ರದ ಹಿರಿಯ ಕೃಷಿವಿಜ್ಞಾನಿ

LEAVE A REPLY

Please enter your comment!
Please enter your name here