ತೃಣ ಧಾನ್ಯಗಳು ಮಾನವರ ಆಹಾರದಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತವೆ. ಅತಿ ಕಡಿಮೆ ಮಳೆ ಬಿಳುವ ಪ್ರದೇಶದಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಮೆ, ರೋಗಮುಕ್ತವಾಗಿರುತ್ತದೆೆ. ಆದ್ದರಿಂದ ಇದನ್ನು ಬರಗಾಲದ ಬೆಳೆಯೆಂದೆ ಕರೆಯಬಹುದು.
ಸಾಮೆ (ಪ್ಯಾನಿಕಮ್ ಸೂಮಾಟ್ರೆನ್ಸ್) ಪೋಯೇಸಿಯಿ ಕುಟುಂಬದಲ್ಲಿನ ಕಿರುಧಾನ್ಯದ ಒಂದು ಪ್ರಜಾತಿ. ಬರಗು ಧಾನ್ಯಕ್ಕಿಂತಲೂ ಚಿಕ್ಕದೆನ್ನುವುದನ್ನು ಬಿಟ್ಟರೆ ತೃಣಧಾನ್ಯದ ಈ ಪ್ರಜಾತಿ ಪ್ರವೃತಿಯಲ್ಲಿ ಅದನ್ನೇ ಹೋಲುತ್ತದೆ. ಇದು ಎತ್ತರದಲ್ಲಿ ೩೦ ಸೆ.ಮಿ. ಇಂದ ೧ ಮಿ. ವರೆಗೆ ನೇರವಾಗಿ ಅಥವಾ ಮಡಚಿದ ದಳಗಳೊಂದಿಗೆ ಬೆಳೆಯುವ ಒಂದು ವರ‍್ಷಿಕ ಮೂಲಿಕೆಯಂಥ ಸಸ್ಯ. ಸಾಮೆಯನ್ನು ಅಕ್ಕಿಯಂತೆ ಬೇಯಿಸಲಾಗುತ್ತದೆ.
ತರಹೇವಾರಿ ತೃಣ ಧಾನ್ಯಗಳಲ್ಲಿ ಅತೀ ಚಿಕ್ಕದಾದ ಕಾಳು ಸಾಮೆ. ಇದರಲ್ಲಿ ಗೋಧಿ ಮತ್ತು ಆಕ್ಕಿಯಲ್ಲಿರುವಷ್ಟೆ ಪ್ರಮಾಣದ ಸಸಾರಜನಕ, ಕ್ಯಾಲ್ಸಿಯಂ, ರಂಜಕಗಳಿರುತ್ತವೆ. ಒಟ್ಟಾರೆ ಶರ್ಕರ ಪಿಷ್ಠದ ಪ್ರಮಾಣ ಬೇರೆ ಧಾನ್ಯಗಳು ಮತ್ತು ತೃಣ ಧಾನ್ಯಗಳಿಗಿಂತ ಕಡಿಮೆ ಇದ್ದು ಉಪಯುಕ್ತ ನಾರಿನಾಂಶವು ಹೆಚ್ಚಿದೆ.
ಸಾವೆಯಲ್ಲಿರುವ ಪೋಷಕಾಂಶಗಳು
ಸಸಾರಜನಕ(ಗ್ರಾ): 7.70
ಕೋಬ್ಬು: 4.7
ಪಿಷ್ಠ: 65.25
ನಾರಿನಂಶ: 15.9
ಕ್ಯಾಲ್ಸಿಯಂ: 17.0
ಕಬ್ಬಿಣ: 9.3
ಭತ್ತದಿಂದ ಅಕ್ಕಿ ತಯಾರಿಸುವಂತೆ ಸಾವೆಯನ್ನು ಒರಳಲ್ಲಿ ಒನಕೆಯಿಂದ ಕುಟ್ಟಿ ಹೊಟ್ಟು ಬೇರ್ಪಡಿಸಬೇಕು ಮತ್ತು ಅದರಿಂದ ಸಾಮೆ ಅಕ್ಕಿ ತಯಾರಿಸಬಹುದು. ಇದರ ಉಪಯುಕ್ತ ನಾರಿನಂಶವೆ ಅದರ ವಿಶೇಷ಼ ಆರೋಗ್ಯಕಾರಿ ಗುಣವಾಗಿದೆ.
ಸಾಮೆಯಲ್ಲಿರುವ ನಾರಿನಂಶ ಅದರಲ್ಲೂ ಕರಗುವ ಉಪಯುಕ್ತ ನಾರಿನಂಶವು ರಕ್ತದಲ್ಲಿರುವ ಕೊಲೆಸ್ಟ್ರಾಲ್, ಸಕ್ಕರೆ ಮುಂತಾದ ಅಂಶಗಳನ್ನು ಕಡಿಮೆಮಾಡಿ ಮಧುಮೆಹ, ಹೃದಯ ಸಂಬಂಧಿತ ರೊಗಗಳ ನಿಯಂತ್ರಣಕ್ಕೆ ಅನುಕೂಲವಾಗಿರುತ್ತದೆ. ಜೊತೆಗೆ ಮಲಬದ್ಧತೆ, ದೊಡ್ಡ ಕರುಳಿನ ಕ್ಯಾನ್ಸರ, ಬೊಜ್ಜು ಮೊದಲಾದ ರೋಗಗಳನ್ನು ತಡೆಯಲು ಸಹಾಯಕಾರಿಯಾಗಿದೆ. ಸಾಮೆ ಅಕ್ಕಿಯನ್ನು ದಿನ ಬಳಕೆಯ ಇತರ ಧಾನ್ಯಗಳಂತೆ ವಿವಿಧ ಅಡುಗೆ ಪದಾರ್ಥಗಳಾಗಿ ಬಳಸಬಹುದು. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
1. ಸಾಮೆ ಅಕ್ಕಿ ಇಡ್ಲಿ- ಬೇಕಾಗುವ ಸಾಮಗ್ರಿಗಳು:
ಸಾವಕ್ಕಿ: 1 ಕಟೊರಿ
ಅಕ್ಕಿ: 1 ಕಟೊರಿ
ಅವಲಕ್ಕಿ: 1/4 ಕಟೊರಿ
ಉದ್ದಿನ ಬೇಳೆ: 3/4 ಕಟೊರಿ
ಎಣ್ಣೆ: 1/4 ಕಟೊರಿ
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಅಕ್ಕಿ, ಸಾಮೆ ಮತ್ತು ಉದ್ದಿನ ಬೇಳೆಯನ್ನು 4-5 ತಾಸುಗಳವೆರಗೆ ಮತ್ತು ಅವಲಕ್ಕಿಯನ್ನು 15-20 ನಿಮಿಷಗಳವರಗೆ ನೆನೆಹಾಕಿ ನಂತರ ಅದನ್ನು ರುಬ್ಬಿ ಹದಗೊಳಿಸಿ ರಾತ್ರಿ ಇಡಿ ಇಡಬೇಕು. ಮರುದಿನ ಬೆಳ್ಳಿಗ್ಗೆ ಇಡ್ಲಿ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 10-12 ನಿಮಿಷ ಉಗಿಯಲ್ಲಿ ಬೇಯಿಸಿ ತೆಗೆಯಿರಿ ನಂತರ ರುಚಿಯಾದ ಇಡ್ಲಿ ಸವಿಯಲು ಸಿದ್ದ.
2. ಸಾಮೆ ಅಕ್ಕಿ ದೋಸೆ – ಬೇಕಾಗುವ ಸಾಮಗ್ರಿಗಳು:
ಸಾಮೆ ಅಕ್ಕಿ: 2 ಕಟೊರಿ
ಅವಲಕ್ಕಿ: 1/4 ಕಟೊರಿ
ಉದ್ದಿನ ಬೇಳೆ: 1 ಕಟೊರಿ
ಎಣ್ಣೆ: 1/2 ಕಟೊರಿ
ಉಪ್ಪು: ರುಚಿಗೆ ತಕ್ಕಷ್ಟು
ಸಾಮೆ ಅಕ್ಕಿ ದೋಸಾ ಮಾಡುವ ವಿಧಾನ: ಮೊದಲಿಗೆ ಸಾಮೆ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 4-5 ತಾಸುಗಳವೆರಗೆ ಮತ್ತು ಅವಲಕ್ಕಿಯನ್ನು 15-20 ನಿಮಿಷಗಳವರಗೆ ನೆನೆಹಾಕಿ ನಂತರ ಅದನ್ನು ರುಬ್ಬಿ ಹದಗೊಳಿಸಿ ರಾತ್ರಿ ಇಡಿ ಇಡಬೇಕು. ಮರುದಿನ ಬೆಳ್ಳಿಗ್ಗೆ ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ದೋಸಾ ಕಾವಲಿಗೆ ಸ್ವಲ್ಪ ಎಣ್ಣೆ ಸವರಿ ದೋಸೆ ತಯಾರಿಸಬೇಕು.
3. ಸಾಮೆ ತಾಲಿಪಟ್ಟು- ಬೇಕಾಗುವ ಸಾಮಗ್ರಿಗಳು:
ಸಾವಕ್ಕಿ: 1 ಕಟೊರಿ
ಗೋಧಿ ಹಿಟ್ಟು: 1/4 ಕಟೊರಿ
ಕಡಲೆ ಬೆಳೆ ಹಿಟ್ಟು: 1/4 ಕಟೊರಿ
ಈರುಳಿ: 1
ಮೆಂತೆ ಸೊಪ್ಪು: 1/2 ಕಟೊರಿ
ಹಸಿ ಮೆಣಸಿನಕಾಯಿ: 2
ಎಣ್ಣೆ: 1/2 ಕಟೊರಿ
ಉಪ್ಪು: ರುಚಿಗೆ ತಕ್ಕಷ್ಟು
ಸಾಮೆ ಅಕ್ಕಿ ತಾಲಿಪಟ್ಟು ಮಾಡುವ ವಿಧಾನ: ಮೊದಲಿಗೆ ಬೇಕಾದ ಎಲ್ಲಾ ಹಿಟ್ಟುಗಳನ್ನು ಜರಡಿ ಹಿಡಿದುಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಮೆಂತೆ ಸೊಪ್ಪು, ಹಸಿ ಮೆಣಸಿನಕಾಯಿ ಒಟ್ಟಿಗೆ ಹಾಕಿ
ಗಟ್ಟಿಯಾಗಿ ಹಿಟ್ಟನ್ನು ನಾದಿ ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಚಪಾತಿ ತರ ಲಟ್ಟಿಸಿ ಕಾವಲಿಯ ಮೇಲೆ ಎಣ್ಣೆ ಹಾಕಿ ಬೇಯಿಸಿರಿ. ನಂತರ ರುಚಿಯಾದ ತಾಲಿಪಟ್ಟು ಸವಿಯಲು ಸಿದ್ದ.
4. ಸಾಮೆ ಅಕ್ಕಿ ಉಪ್ಪಿಟ್ಟು: ಸಾವಕ್ಕಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು:
ಸಾಮೆ ಅಕ್ಕಿ: 1 ಕಟೊರಿ
ಹೆಚ್ಚಿದ ಈರುಳಿ: 1/4 ಕಟೊರಿ
ಮೆಂತೆ ಸೋಪ್ಪು: 1/2 ಕಟೊರಿ
ಉದ್ದಿನ ಬೇಳೆ 2 ಚಮಚ
ಹಸಿ ಮೆಣಸಿನಕಾಯಿ: 2
ಹಡಲೆ ಬೇಳೆ 2 ಚಮಚ
ಎಣ್ಣೆ: 1/2 ಕಟೊರಿ
ನಿಂಬೆ ಹಣ್ಣು: ಅರ್ಧ, ಕರಿಬೆವು ಮತ್ತು ಉಪ್ಪು: ರುಚಿಗೆ ತಕ್ಕಷ್ಟು
ಮೊದಲು ಸಾಮೆ ಅಕ್ಕಿ ಹುರಿಯಬೇಕು ನಂತರ ಎಣ್ಣೆಯನ್ನು ಬಿಸಿಮಾಡಿ ಒಗ್ಗರಣೆಗೆ ಕರಿಬೇವು, ಉದ್ದಿನ ಬೇಳೆ ಹಡಲೆ ಬೇಳೆ ಹಾಕಿ ಕೆಂಪಗೆ ಹುರಿಯಬೇಕು. ನಂತರ ಅದಕ್ಕೆ ನೀರನ್ನು ಒಂದಕ್ಕೆ ಮೂರರ ಪ್ರಮಾಣದಂತೆ ಹಾಕಿ ನಂತರ ಅದು ಕುದಿಯತೊಡಗಿದಾಗ ಸಾಮೆ ಅಕ್ಕಿ ಹಾಕಿ ಬೇಯುವವರೆಗೆ ಮುಗಚಬೇಕು. ನಂತರ ರುಚಿಯಾದ ಉಪ್ಪಿಟ್ಟು ಸವಿಯಲು ಸಿದ್ದ. ಸಾಮೆ ಅನೇಕ ರಿತಿಯಲ್ಲಿ ಬಹುಪಯೋಗಿ !
ಲೇಖಕರು: ಡಾ. ಸ್ವಾತಿ ವನ್ನೂರ್, ಆದಿತ್ಯ ಅರುಣ್ ಕುಮಾರ್ ಬಿಕ್ಕನವರ್
Swati Vannur and Aditya Arunkumar Bikkanavar, E-mail: [email protected] Department of Family Resource Management, College of Community Science, University of Agricultural Sciences, Dharwad-580005