ಕಾಲ ಸರಿದಂತೆ ಕೃಷಿಯ ಬದುಕು ಬದಲಾಗುತ್ತಿದೆಯೇ

0
ಲೇಖಕರು: ನಂದಿನಿ ಹೆದ್ದುರ್ಗ

ಷಷ್ಠಿ ಕಳೆದು ತಿಂಗಳಾಗಿದೆ. ನಮ್ಮ ಕಡೆಗೆ ಷಷ್ಠಿ ಅಂದ್ರೆ ಸಣ್ಣ ಹಬ್ಬ ಅಂತೇನು ತಿಳಿಬೇಡಿ. ಅಡುಗೆ ಮೂರೇ ಬಗೆಯಾದರೂ ಅಚ್ಚುಕಟ್ಟು ಜೋರು. ಮನೆಯ ಮೂಲೆ ಮುಡುಕು ಅಟ್ಟ ಸೂರು ಹಿತ್ಲು ಎಲ್ಲಕ್ಕೂ ಪೊರಕೆಯ ಮೂತಿ ಮುಟ್ಟಿಸದಿದ್ದರೆ ಮನಸ್ಸಿಗೆ ಏನೋ ಸಮಾಧಾನವಿಲ್ಲ. ಅಚ್ಚುಕಟ್ಟು ಆಯ್ತೋ.ಈ ಭೂಮಿಯ ಒಳಗಿನ ತಿನ್ನಲು ಅರ್ಹವಾದಂತ ಸಕಲ ಗೆಡ್ಡೆಗೆಣಸಿನ ಜೊತೆಗೆ, ಬಳ್ಳಿಯಲ್ಲಿ ಬೆಳೆಯುವ ಎಲ್ಲ ತರಕಾರಿಗಳೂ , ಮೊಳಕೆ ಬರಿಸಿದ ಕಾಳು ಸೇರಿಸಿ ಕೂಟು ಮಾಡುವುದು ಷ಼ಷ್ಠಿಯ ಸಂಪ್ರದಾಯ. ಹಾಗೆಯೇ ಆಚೀಚೆ ಮನೆಯವರಿಗೆ ತರಕಾರಿ ಹಂಚುವುದು ವಾಡಿಕೆ. ಖಿಚಡಿ, ಷಷ್ಠಿ ಸಾಂಬಾರು ,ಪಾಯಸ ಅವತ್ತಿಗೆ ಸುಬ್ರಹ್ಮಣ್ಯ ನಿಗೆ ನೈವೇದ್ಯ.

ಷಷ್ಠಿ ಕಳೆದ ನಂತರ ಸರಾಸರಿ ಒಂದು ತಿಂಗಳಿಗೆ ಸಂಕ್ರಾಂತಿ ಬರ್ತದೆ. ಇದು ಹಿಂದೂಗಳಿಗೆ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ. ಷಷ್ಠಿ ತಲೆಯಮೇಲೆ ನಾಲ್ಕು ಮಳೆ ಹನಿ ಗ್ಯಾರೆಂಟಿಯಾದರೆ ಅದರ ನಂತರದ ಸಂಕ್ರಾಂತಿಯಲ್ಲಿ ಕರುಳು ಕಳಚಿಬೀಳುವಷ್ಟು ಚಳಿ. ಅದಾಗಿ ತಿಂಗಳಿಗೆ ಬರುವ ಶಿವರಾತ್ರಿಗೆ ಚಳಿ ಶಿವಶಿವ ಅಂತ ಕೈ ಮುಗಿದು ಹೊರಟುಹೋಗುತ್ತೆ ಎನ್ನುವುದು ಗ್ರಾಮೀಣರ ಮಾತು.

ಜನಪದರ ಈ ಮಾತು ತೀರ ಇತ್ತೀಚಿನವರೆಗೂ ಹಾಗೇ ನಡೆಯುತ್ತಿತ್ತು. ಜಾಗತಿಕ ತಾಪಮಾನ ಏರಿಳಿತದ ಕಥೆ ಹೇಳ್ತಾ ಹೇಳ್ತಾ ಸಾಗರಕ್ಕೆ ಖಿನ್ನತೆ ಎನ್ನುವ ನೆವ ಹೇಳ್ತಾ ಭೂಮಿ ತನ್ನ ಋತುಮಾನದ ಕಾಲಾವಧಿಯನ್ನು ಮರುವ್ಯಾಖ್ಯಾನಿಸಿ, ಪುನರ್ರಚನೆ ಮಾಡಿಕೊಳ್ತಿದೆ. ನೆಲ ನಂಬಿ ಬದುಕುವವರಿಗೆ ಲಯಬದ್ಧವಾಗಿ ದಿಗಿಲು ಹುಟ್ಟಿಸ್ತಿದೆ.

ಕಳೆದ ತಿಂಗಳ ಮಳೆಯಿಂದ ಕಾಫಿ ಭತ್ತ ಮೆಣಸು ಮಾವಿನ ಬೆಳೆಗೆ ಹಾನಿಯಾಗಿದೆ. ಧಾನ್ಯದ ಬೆಳೆಗಳು ತೆನೆಯಲ್ಲೋ ಬಣವೆಯಲ್ಲೋ ಮೊಳಕೆಯೊಡೆದು ವ್ಯರ್ಥ ಆಗ್ತಿದೆ. ವರ್ಷದ ಸರಾಸರಿ ಮಳೆಯ ಪ್ರಮಾಣ ಒಂದೇ ಇದ್ದರೂ ವಾರ್ಷಿಕ ಮಳೆದಿನಗಳು ಹೆಚ್ಚಾಗಿವೆ.ಕೃಷಿಗೆ ಇದರ ನೇರ ಹೊಡೆತ.

ಆಲೂರು, ಸಕಲೇಶಪುರ ಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ.  ಕೊಯ್ಲಿನ ಕಾಲವಿದು. ಕಾಫಿಗಿಡ ಹಣ್ಣಾಗಿ ಬಾಗಿವೆ. ದೂರದ ರಾಜ್ಯಗಳಿಂದ ಬರುತ್ತಿರುವ ಕೂಲಿಕಾರ್ಮಿಕರಿಂದ ಅನುಕೂಲವಾಗ್ತಿದೆಯಾದರೂ ಅವರ ಬ್ಲ್ಯಾಕ್ ಮೇಯ್ಲ್ ತಂತ್ರಗಳಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.ಇಪ್ಪತ್ತು, ಐವತ್ತು ಕಾರ್ಮಿಕರು ಕೊಯ್ಲು ಮಾಡ್ತಿದ್ದರೂ ಕಣಕ್ಕೆ ಬಂದು ಬೀಳುವ ಕಾಫಿಯ ಪ್ರಮಾಣ ಕಣ್ಣು ತುಂಬುವಷ್ಟಿರುವುದಿಲ್ಲ.ಇಷ್ಟೂ ಮಂದಿಗೆ ವಾರದ ಬಟವಾಡೆ ಹಣ ಹಲವು ದಶ ಸಾವಿರಗಳಷ್ಟಾಗುತ್ತಿದೆ.

ಈ ಎಲ್ಲದರ ನಡುವೆಯೂ ಕಾಲ ನಿಲ್ಲುವುದಿಲ್ಲ. ಮರೆವು ಮನುಷ್ಯನಿಗೆ ವರವೇ ಹೌದು.ಕಂಗಾಲಾಗಿದ್ದ ಬೆಳೆಗಾರರು ರೈತರೂ ಮೂರೇ ದಿನಕ್ಕೇ ಮೈಯನ್ನೂ ಮನಸ್ಸನ್ನೂ ಕೊಡವಿಕೊಂಡು ಮತ್ತೆ ಮಾಮೂಲಿಯಂತಾಗುತ್ತಾರೆ.

ಸಂಕ್ರಾಂತಿ ಬಹುತೇಕ ಎಲ್ಲ ಊರಿನ ಆಚರಣೆಯಂತೆ ನಮ್ಮಲ್ಲೂ ಸುಗ್ಗಿಯ ಹಬ್ಬ. ಯಾವುದೇ ಹಬ್ಬದ ಆಚರಣೆಯ ಕುರಿತು ಹೇಳಬೇಕೆಂದರೂ ದಶಕಗಳ ಹಿಂದಕ್ಕೆ ಹೋಗಿ ನೆನಪುಗಳನ್ನು ಹಸಿರಾಗಿಸಿಕೊಂಡು ವರ್ತಮಾನಕ್ಕೆ ಬರಬೇಕೆನಿಸುತ್ತದೆ.

ಭತ್ತದ ಗದ್ದೆಯ ಪ್ರತಿಕೆಲಸಕ್ಕೂ ಈಚೀಚಿನ ವರ್ಷಗಳಲ್ಲಿ ಎಗ್ಗಿಲ್ಲದೇ ಏರುತ್ತಲೇ ಹೋದ ದಿನಗೂಲಿಯ ಜೊತೆಗೆ ಏರಿಕೆಯನ್ನೇ ಕಾಣದ ಬೆಲೆಯಿಂದಾಗಿ ಬಹುತೇಕ ಭತ್ತದ ಗದ್ದೆಗಳು ನಮ್ಮಲ್ಲಿ ಕಾಫಿ, ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ.

ಉಣ್ಣುವ ಅನ್ನವನ್ನಾದರೂ ಗೊಬ್ಬರ ಸೋಕಿಸದೇ ಬೆಳೆದುಕೊಳ್ಳುವ ಆಸೆಯಿದ್ದವರು ಗದ್ದೆ ಮಾಡುತ್ತಿದ್ದಾರೆ. ಜೊತೆಗೆ ಸಣ್ಣ ರೈತರು ಮುಯ್ಯಾಳಿನೊಂದಿಗೆ ನಾಟಿ ,ಒಕ್ಕಲಾಟ ಮುಗಿಸಿ ಕೊಳ್ಳುವ ಶಕ್ತಿ ಇದ್ದವರು ಗದ್ದೆ ಕೃಷಿ ಮಾಡುತ್ತಿದ್ದಾರೆ ಅಷ್ಟೇ.

ದಶಕಗಳ ಹಿಂದಕ್ಕೆ ಹೋದರೆ ಆಗ ನಾವೆಲ್ಲರೂ ಆರಂಭ ಮಾಡುತ್ತಿದ್ದೆವು.(ಆರಂಭವೆಂದರೆ ಭತ್ತ ಬೆಳೆಯುವುದು ಎಂಬರ್ಥ ನಮ್ಮಲ್ಲಿ) ಸಂಕ್ರಾಂತಿ ಗೆ ಸರಿಯಾಗಿ ಗದ್ದೆ ಮಾಗಿ ಬಂಗಾರ ವರ್ಣ ತಳೆಯುತ್ತಿದ್ದವು. ಸಂಕ್ರಾಂತಿಯ ದಿನ ಬೆಳಿಗ್ಗೆ ಶುಭ ಸಮಯ ನೋಡಿಕೊಂಡು ಮೂರು ಸೂಡು ಪೈರು ಕುಯ್ದು ಅದನ್ನು ಜಗುಲಿಯಲ್ಲೋ ದೇವರ ಮನೆಯಲ್ಲೋ ಅಲಂಕರಿಸಿದ ಮಣೆಯ ಮೇಲಿಟ್ಟು ಹಾಲುತುಪ್ಪ ಎರೆದು ಗಣಪತಿ ಇಟ್ಟು ಪೂಜಿಸುತ್ತಿದ್ದೆವು. ನಂತರ ಅದನ್ನು ಬಡಿದು ಹಿಡಿಯಷ್ಟು ಅಕ್ಕಿ ಮಾಡಿಕೊಂಡು ಆ ಅಕ್ಕಿಯನ್ನು ಮೊದಲಿಗೆ ಹಾಲಿನಲ್ಲಿ ನೆನೆಹಾಕಿ ಅದರ ಜೊತೆಗೆ ಮತ್ತಷ್ಟು ಅಕ್ಕಿ ಸೇರಿಸಿ ಹಾಲು ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕುದಿಸಿ ಇಳಿಸುವಾಗ ಎರಡು ಅರಿಷಿನದ ಎಲೆ ಹಾಕಿ ಮುಚ್ಚಳ ಮುಚ್ಚಿದರೆ ಘಮಘಮಿಸುವ ಹೊಸಕ್ಕಿ ಪಾಯಸ ನೈವೇದ್ಯಕ್ಕೆ ತಯಾರಾಗ್ತಿತ್ತು.

ಈಗ ವರ್ತಮಾನಕ್ಕೆ ಬರ್ತೇನೆ. ಕಾಲದ ಹಾದಿಯಲ್ಲಿ ಬರುವ ಬದಲಾವಣೆಗಳೆಲ್ಲವನ್ನೂ ಸಹಜವಾಗಿಯೇ ಸ್ವೀಕರಿಸುವುದನ್ನು ನಾವು ಕಲಿಯಬೇಕು. ಈಗ ಬಹುತೇಕ ಮದ್ಯಮ ವರ್ಗದ ಮಲೆನಾಡಿಗರು ಭತ್ತ ಬೆಳೆಯುತ್ತಿರುವುದು ಕಡಿಮೆಯಾಗಿದೆ.ನಮ್ಮ ಪರಿಸರದಲ್ಲಿ ಭತ್ತದ ಇಳುವರಿಯೂ ಬಹಳ ಕಡಿಮೆ. ಆರ್ಥಿಕವಾಗಿ ಹೊರೆಯಾಗುವ ಭತ್ತ ಬೆಳೆದು ನವೆದುಹೋಗುವುದು ಬೇಡ ಎನ್ನುವ ನಿರ್ಧಾರಕ್ಕೆ ಎಂಬತ್ತು ಪ್ರತಿಶತ ಗದ್ದೆ ಉಳ್ಳವರು ನಿರ್ಧರಿಸಿಯಾಗಿದೆ. ಇನ್ನೂ ಅಲ್ಲಿ ಇಲ್ಲಿ ಕಾಣುವ ನಾಕಾರು ಗದ್ದೆಗಳಲ್ಲಿ ಈಗೆಲ್ಲಾ ಕಾಣುವ ಹೈಬ್ರೀಡ್ ತಳಿಯಿಂದಾಗಿ ಸಂಕ್ರಾಂತಿಗೂ ಮೊದಲೇ ಭತ್ತ ಕಣ ಸೇರಿಯಾಗಿರುತ್ತದೆ.

LEAVE A REPLY

Please enter your comment!
Please enter your name here