ನಮ್ಮ ರಾಜ್ಯದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಅಗಾಧವಾದ ಸಂಶೋಧನೆ ನಿರಂತರವಾಗಿ ನಡೆದಿದೆ. ಇದರ ಫಲವಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ ಸಹಾಯವಾಗುವ ಉಪಯುಕ್ತ ಆವಿಷ್ಕಾರಗಳೂ ಹೊರಬಂದಿವೆ.
ಇಂಥ ಮಹತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವಿಜ್ಞಾನಿ ವೃಂದಕ್ಕೆ ಅಭಿನಂದನೆಗಳು. ಆದರೆ ವಿಜ್ಞಾನಿಗಳ ನಿಸ್ವಾರ್ಥ ಶ್ರಮದ ಫಲವನ್ನು” ಪ್ರಯೋಗ ಶಾಲೆಯಿಂದ ರೈತನ ಮನೆಬಾಗಿಲಿಗೆ ತಲುಪಿಸುವ ಕಾರ್ಯ ” ಪರಿಣಾಮಕಾರಿಯಾಗಿ ನಡೆಯುತ್ತಿದೆಯೇ? ಎಂಬುದು ನನ್ನ ಅಳಲು.
ಪಟ್ಟಣ ಪ್ರದೇಶಗಳು ಹಾಗೂ ವಿಶ್ವವಿದ್ಯಾಲಯಗಳ ಸಮೀಪದ ಸ್ಥಳಗಳನ್ನು ಹೊರತುಪಡಿಸಿದರೆ , ಕರ್ನಾಟಕದ ಗ್ರಾಮೀಣ ಭಾಗದ ಅನೇಕ ಕಡೆ ಹೆಚ್ಚಿನ ಪಶುಪಾಲಕರಿಗೆ ಈ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವಿದೆ.
ಅಂತರ್ಜಾಲದ ಮೂಲಕ ವಿಷಯ ಗ್ರಹಿಕೆ ಸುಲಭವೆಂಬುದು ಕೆಲವರ ಅನಿಸಿಕೆಯಾದರೂ, ನಮ್ಮ ರಾಜ್ಯದ ಗ್ರಾಮೀಣ ಭಾಗದ ಹೆಚ್ಚಿನ ಪಶುಪಾಲಕರಿಗೆ ಅಂತರ್ಜಾಲದ ಮೂಲಕ ವಿಷಯ ಗ್ರಹಿಕೆ ಬಗ್ಗೆ ಹೆಚ್ಚಿನ ತರಬೇತಿ ಅಗತ್ಯವಿದೆ.
ಹೀಗಾಗಿ ಪಶುಪಾಲಕರ ಕುಟುಂಬದ ಸದಸ್ಯರು ಅಂತರ್ಜಾಲದ ಮೂಲಕ ವಿಷಯ ಗ್ರಹಿಕೆ ಮಾಡುವ ಕೌಶಲ್ಯವನ್ನು ಪಡೆದಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ದಿನನಿತ್ಯದ ಬದುಕಿನಲ್ಲಿ ಇದು ಅಷ್ಟು ಸರಳವಲ್ಲವೆಂಬುದು ನನ್ನ ಭಾವನೆ. ಬಹುಶಃ ನಿರಂತರ ಪ್ರಯತ್ನಗಳ ಮೂಲಕ ಮುಂದಿನ ದಿನಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಪ್ರಯತ್ನಗಳು ಯಶಸ್ವಿಯಾಗಬಹುದು, ಎಂಬ ಬಗ್ಗೆ ನನಗೆ ಆಶಾಭಾವನೆ ಖಂಡಿತಾ ಇದೆ.
ಪಶುಪಾಲನಾ ಕ್ಷೇತ್ರದ ಅಭಿವೃದ್ಧಿಗೆ ಆಧಾರದ ಸ್ಥಂಭಗಳಾದ, ಆಹಾರ ನೀಡಿಕೆ, ಸಂಗೋಪನೆ, ನಿರ್ವಹಣೆ ಹಾಗೂ ಆರೋಗ್ಯ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದ ಪಶುವೈದ್ಯರ ಪಡೆ ಈ ಹಿಂದಿನಿಂದಲೂ “ಎಲೆಮರೆಯ ಕಾಯಿಯಂತೆ ” ದುಡಿಯುತ್ತಿದೆ.
ಇವರ ನಿರಂತರ ಪರಿಶ್ರಮ ಹಾಗೂ ವಿಸ್ತರಣಾ ಶಿಕ್ಷಣದ ಫಲವಾಗಿ ” ಪ್ರಯೋಗ ಶಾಲೆಯಲ್ಲಿನ ಅನ್ವೇಷಣೆ” ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಕಾರ್ಯ ತಕ್ಕಮಟ್ಟಿಗೆ ಯಶಸ್ನನ್ನು ಕಂಡಿದೆ.
ಇವರ ಪರಿಶ್ರಮಕ್ಕೆ ತಕ್ಕ ಬೆಂಬಲ ಹಾಗೂ ಪ್ರೋತ್ಸಾಹ ದೊರೆತಲ್ಲಿ ಮಾತ್ರ ದೇಶದ ಪರಿಕಲ್ಪನೆಯಾದ ” ಕಡಿಮೆ ಖರ್ಚು ಹಾಗೂ ಕಡಿಮೆ ಪರಿಶ್ರಮದ ಮೂಲಕ ರೈತರ ಉತ್ಪಾದನೆ ದ್ವಿಗುಣ ಗೊಳಿಸುವ” ಉಪಾಯಗಳು ಯಶಸ್ಸನ್ನು ಕಾಣುತ್ತದೆ.