ಹಾಲು ಉತ್ಪನ್ನಗಳ ಆಮದನ್ನು ನಿಷೇಧಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ರಾಜ್ಯದ 28ಸಂಸತ್ ಸದಸ್ಯರೊಂದಿಗೆ ಪ್ರಧಾನಿ ಹಾಗೂ ಕೇಂದ್ರದ ಕೃಷಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಜಿಕೆವಿಕೆಯಲ್ಲಿ ಆಯೋಜಿತವಾಗಿರುವ ಕೃಷಿಮೇಳ ಉದ್ಘಾಟಿಸಿ ಅವರು ಮಾತನಾಡಿದರು, ಆರ್.ಸಿ.ಇ.ಪಿ ಒಪ್ಪಂದ ಜಾರಿ ಬಗ್ಗೆ ರಾಜ್ಯದ ರೈತರು ಭಯ ಪಡುವ ಅವಶ್ಯಕತೆಯಿಲ್ಲ. ಕೇಂದ್ರದ ಮೇಲೆ ಇದು ಜಾರಿಯಾಗದಂತೆ ಒತ್ತಡ ಹೇರುವ ಮೂಲಕ ಯಶಸ್ವಿಯಾಗಲಿದ್ದೇವೆ ಎಂದು ಭರವಸೆ ನೀಡಿದರು.

ನಮ್ಮಲ್ಲಿ ನೀರಾವರಿ ಬೇಸಾಯ ಶೇ. 35 ಮಾತ್ರ ಇದೆ. ಬಹುಪಾಲು ಒಣಬೇಸಾಯವೇ ಆಗಿದೆ. ಯುವಕರು ಕೃಷಿಯಿಂದ ವಿಮುಖರಾಗಿ ಹಳ್ಳಿಯಿಂದ ನಗರಕ್ಕೆ ಉದ್ಯೋಗಕ್ಕಾಗಿ ವಲಸೆ ಬರುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣದ ಜೊತೆ ರಾಜ್ಯದಿಂದಲೂ ಎರಡೂ ಸಾವಿರ ಹಣವನ್ನು ಮೊದಲ ಕಂತು ರೈತರಿಗೆ ನೀಡಲಾಗಿದೆ .ದೇಶದ ಇತಿಹಾಸದಲ್ಲಿ
ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ೫ ಲಕ್ಷ ರೂ.ನೀಡಲಾಗುತ್ತಿದೆ. ಮತ್ತೆ ರಾಜ್ಯದಲ್ಲಿ ಅತಿವೃಷ್ಟಿ ತಲೆದೋರಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಸಮಾಲೋಚನೆ ನಡೆಸಲಾಗಿದೆ. ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದರು.
ಕೃಷಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಕೃಷಿ ಯಂತ್ರೋಪಕರಣಗಳನ್ನು, ಯೋಜನೆಗಳನ್ನು ಪರಿಚಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದು, 2020 ರೊಳಗಾಗಿ ರೈತರ ಕೃಷಿ ಆದಾಯ ದುಪ್ಪಟ್ಟಾಗಬೇಕೆಂದು ಸೂಚಿಸಿದ್ದಾರೆ ಎಂದರು.

ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಆಹಾರದಲ್ಲಿ ಶೇ.45 ಪೋಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 102 ನೇ ಸ್ಥಾನದಲ್ಲಿದೆ. ಕೃಷಿಯಿಂದ ದೂರ ಸರಿಯುತ್ತಿರುವ ಯುವಕರನ್ನು ಕೃಷಿಯತ್ತ ಬರುವಂತೆ ಮಾಡಬೇಕಿದೆ. ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ ಹೆಸರಿನಲ್ಲಿ ಕೃಷಿಮೇಳ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕೃಷಿ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಮಾತನಾಡಿ, ಗ್ರಾಮೀಣ ಮಹಿಳೆಯರ ಹಾಲಿನ ವ್ಯವಸಾಯಕ್ಕೆ ಪ್ರತಿಲೀಟರ್ ಗೆ ಐದು ರೂ.ಸಹಾಯಧನ ನೀಡಲಾಗುತ್ತಿದೆ. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಹಾಲಿನ ಉತ್ಪಾದನೆ ಆಗುತ್ತಿರುವುದಕ್ಕೆ ಹಾಗೂ ಹೊರ ರಾಜ್ಯಗಳಿಗೆ ಹಾಲು ವಿತರಣೆಯಾಗಲು ಯಡಿಯೂರಪ್ಪ ಅವರೇ ಕಾರಣ. ಹಿಂದೆ ಅವರು ಹಾಲು ಉತ್ಪಾದನೆಗೆ ಎರಡು ರೂ.ಸಹಾಯಧನ ನೀಡಿರುವುದೇ ಅದಕ್ಕೆ ಮುಖ್ಯ ಕಾರಣ. ಭಾರತದಲ್ಲಿ ಹಾಲಿನ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದರು.ನೆರೆಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ನಿಯಮಗಳನ್ನೂ ಮೀರಿ ಸಹಾಯ ನೀಡಲಾಗಿದೆ. ಪ್ರತಿಹೆಕ್ಟೇರ್ ಗೆ 10 ಸಾವಿರ ಹೆಚ್ಚುವರಿ ರೂ.ಹಾನಿಯಾದ ಮನೆಗಳಿಗೆ 50 , ಸಾವಿರದಿಂದ ಒಂದು ಲಕ್ಷ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಸಹಾಯಧನ ನೀಡುತ್ತಿದೆ ಎಂದರು.

ಕೇವಲ ರಸಗೊಬ್ಬರ, ಕ್ರಿಮಿನಾಶಕ ಬಳಸುವುದು ಯೋಗ್ಯವಲ್ಲ. ಇದರಿಂದ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ. ರೈತರ ಆದಾಯ ಹೆಚ್ಚಳದೊಂದಿಗೆ ಆರೋಗ್ಯವೂ ಮುಖ್ಯ. ಆಹಾರಪದ್ಧತಿ ಬದಲಾವಣೆಯಿಂದ ರೋಗಗ್ರಸ್ತ ಸಮಾಜ ನಿರ್ಮಾಣವಾಗಿದೆ.ಹೀಗಾಗಿ ಸಾವಯವ ಕೃಷಿಗೆ ಹೆಚ್ಚು ಮಹತ್ವ ನೀಡಬೇಕಿದೆ ಎಂದು ಪ್ರತಿಪಾದಿಸಿದರು.

ಮಾಜಿ ಕೃಷಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಕೇಂದ್ರ, ಆರ್.ಸಿ.ಇ.ಪಿ  ಒಪ್ಪಂದ ಜಾರಿಗೆ ತರಬಾರದು. ಹೊರದೇಶದ ಹಾಲು ಉತ್ಪನ್ನಗಳು ಬಂದರೆ ರಾಜ್ಯದ ರೈತರ ಜೀವನ ದುಃಸ್ಥಿತಿಯಾಗಲಿದೆ. ಹಾಲು ಉತ್ಪಾದನೆ ಗ್ರಾಮೀಣ ಜನರ ಜೀವನ ಎತ್ತಿಹಿಡಿದಿದೆ. ರೈತರ ಬಗ್ಗೆ ಕಾಳಜಿ ಇರುವ ಯಡಿಯೂರಪ್ಪ ಆರ್.ಸಿ.ಇ.ಪಿ ಒಪ್ಪಂದ ಜಾರಿ ಆಗದಂತೆ ಕೇಂದ್ರದ ಮೇಲೆ ಒತ್ತಡ ಹಾಗೂ ಪ್ರಭಾವ ಬೀರಬೇಕು. ಕಾಯಿದೆ ಜಾರಿಯಿಂದ ರೈತರ ಬದುಕಿಗೆ ಬರೆಯಾಗಲಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಕೇಂದ್ರದ ಮೇಲೆ ಒತ್ತಡ ಹಾಗೂ ಪ್ರಭಾವ ಬೀರಬೇಕು. ಕಾಯಿದೆ ಜಾರಿಯಿಂದ ರೈತರ ಬದುಕಿಗೆ ಬರೆಯಾಗಲಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.

ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತೊಂದು ಕಡೆ ಬರಗಾಲದ ನಡುವೆ ರೈತರ ಬದುಕು ಹಲವು ಸವಾಲುಗಳಿಂದ ಕೂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರೈತರ ಹಾಗೂ ಜನರ ಆದಾಯ ಕಡಿಮೆಯಾಗಿದೆ ಎಂದು ಎನ್.ಎಸ್.ಎಸ್.ಓ ಸರ್ವೆ ಹೇಳಿದೆ. ಹೊಸಹೊಸ ತಂತ್ರಜ್ಞಾನಗಳ ಮೂಲಕ ರೈತರ ಬದುಕು ಹಸನು ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್ ರಾಜೇಂದ್ರಪ್ರಸಾದ್ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿದೆ. ಸುಧಾರಿತ ತಳಿಗಳು, ಹೊಸ ತಂತ್ರಜ್ಞಾನ ಆವಿಷ್ಕಾರಗಳಿಂದಾಗಿ ರಾಷ್ಟ್ರಮಟ್ಟದಲ್ಲಿಯೂ ಹೆಸರು ಪಡೆದಿದೆ. ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸೂರ್ಯಕಾಂತಿ ತಳಿಯೊಂದು ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿದೆ ಹೆಸರು ಎಂದು ವಿಶ್ವವಿದ್ಯಾಲಯದ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಶ್ವವಿದ್ಯಾಲಯಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಿದ್ದು, ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವೇದಿಕೆಯಲ್ಲಿ ವಿಶ್ವವಿದ್ಯಾಲಯದಿಂದ ಡಾ.ಎಂ.ಹೆಚ್.ಮರಿಗೌಡ(ಅತ್ಯುತ್ತಮ ತೋಟಗಾರಿಕೆ) ರಮೇಶ್ ಜಿ , ಕುಮಾರಸ್ವಾಮಿ ಹೆಚ್.ಕೆ. ಅವರಿಗೆ ಡಾ. ದ್ವಾರಕೀನಾಥ್ (ಅತ್ಯುತ್ತಮ ರೈತ)ಸವಿತಾ ಮಂಗಾನವರ ಅವರಿಗೆ (ಡಾ.ದ್ವಾರಕೀನಾಥ್ ಅತ್ತುತ್ತಮವಿಸ್ತರಣಾ ಕಾರ್ಯಕರ್ತೆ)ರಾಜ್ಯಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಕೃಷಿ ಸಾಧಕರ ಕುರಿತು, ಆಧುನಿಕ ಬೇಸಾಯ ಕುರಿತಾದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ವಿಸ್ತರಣಾ ನಿರ್ದೇಶಕ ಡಾ. ಎಂ,ಎಸ್, ನಟರಾಜು ವಂದಸಿದರು. ಕೃಷಿ ಸಂಶೋಧನಾ ನಿರ್ದೇಶಕ ಡಾ, ಷಡಾಕ್ಷರಿ,  ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಂ.ಸಿ.ವೇಣುಗೋಪಾಲ್, ಎನ್.ಶ್ರೀನಿವಾಸಯ್ಯ, ಪ್ರೊ.ಶಕುಂತಲಾ ಶ್ರೀಧರ್, ವಿ. ಸುಬ್ರಮಣಿ, ಹೆಚ್.ಎ. ಶಿವಕುಮಾರ್, ಡಾ.ಎಸ್.ಪಿ. ಅಶ್ವಥನಾರಾಯಣ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here