ಲೇಖಕರು: ರಾಜಾರಾಂ ತಲ್ಲೂರ್

ಬಹಳಷ್ಟು ಮಂದಿ ಹಾವು ಕಂಡ ಕೂಡಲೇ ಕೊಲ್ಲಲ್ಲು ಮುಂದಾಗುತ್ತಾರೆ. ಹಾವು ಎಂದರೆ ವಿಷ ಎಂಬ ತಪ್ಪು ತಿಳಿವಳಿಕೆಯೂ, ಅವುಗಳ ಬಗ್ಗೆ ಇರುವ ಕಪೋಲಕಲ್ಪಿತ ಕಥೆಗಳೂ ಇದಕ್ಕೆ ಕಾರಣ. ಪಟ್ಟಣ – ನಗರ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡವೆಂದರೆ ಅವುಗಳ ಸಾವು ಖಚಿತ ಎಂದಾಗಿಬಿಟ್ಟಿದೆ. ಈ ನಡುವೆ ಕೆಲವರು ಉರಗತಜ್ಞರಿಗೆ ಕರೆ ಮಾಡಿ ಹಾವನ್ನು ಹಿಡಿದು ಕಾಡಿಗೆ ಬಿಡುವಂತೆ ಮಾಡುತ್ತಾರೆ. ಇದೇ ಪ್ರವೃತ್ತಿಯನ್ನು ಎಲ್ಲರೂ ಅನುಕರಿಸುವುದು ಅಗತ್ಯ.
ಈ ನಿಟ್ಟಿನಲ್ಲಿ ವಿಷ ಇರುವ ಹಾವುಗಳು ಯಾವುವು, ವಿಷ ಇಲ್ಲದ ಹಾವುಗಳು ಯಾವುವು, ಜನವಸತಿ ಪ್ರದೇಶದಲ್ಲಿ ಅವುಗಳು ಕಾಣಿಸಿಕೊಂಡಾಗ ನಾವೂ ಗಾಬರಿಯಾಗಿ ಅವುಗಳು ಗಾಬರಿಯಾಗದಂತೆ ಮಾಡುವುದು ಹೇಗೆ ಎಂದೆಲ್ಲ ವಿವರಗಳನ್ನು ತಿಳಿಯುವುದು ಅಗತ್ಯ. ಇಂಥ ವಿಷಯ ಕುರಿತ ಪುಸ್ತಕಗಳು ಅಗತ್ಯ ಮಾಹಿತಿ ಪಡೆಯಲು ಸಹಾಯ ಮಾಡುತ್ತವೆ.
ಉಡುಪಿಗೆ ಬಂದ ಬಳಿಕ ಎರಡು ವರ್ಷಗಳ ಹಿಂದೆ ಕೋಟೇಶ್ವರದಲ್ಲಿ ನಮ್ಮ ಮನೆಯಲ್ಲಿ ಆರು ತಿಂಗಳ ಅವಧಿಯಲ್ಲಿ ಮೂವತ್ತಕ್ಕೂ ಹೆಚ್ಚು ಹಾವಿನ ಮರಿಗಳು ಕಾಣಿಸಿಕೊಂಡವು. ಸಹಜವಾಗಿಯೇ ಗಾಬರಿಯಾಯಿತು. ಅಲ್ಲಲ್ಲಿ ಕೇಳಿ ಗೊತ್ತಿದ್ದ ಉರಗತಜ್ಞ ಗುರುರಾಜ್ ಸನಿಲ್ ಅವರನ್ನು ಸಂಪರ್ಕಿಸಿದೆ. ಹೀಗೆ ಆದ ಪರಿಚಯ ಮುಂದುವರಿಯಿತು.


ಭೇಟಿಯಾದಗಲೆಲ್ಲ ಹಾವುಗಳ ಬಗ್ಗೆ ಮಾತನಾಡುತ್ತಿದ್ದ ಗುರುರಾಜ್ ಅವರು ಅವುಗಳಿಂದ ಆಗುವ ಜೈವಿಕ ಸಮತೋಲನ, ಉಪಯುಕ್ತತೆ ಬಗ್ಗೆ ಹೇಳುತ್ತಿದ್ದರು. ಈ ವಿಷಯಗಳು ಎಲ್ಲರಿಗೂ ತಿಳಿಯಲಿ ಎಂದು 2001ರಲ್ಲಿ “ಹಾವು ನಾವು” ಕೃತಿ ಪ್ರಕಟಿಸಿದರು. ಆಸಕ್ತಿಯಿಂದ ಖರೀದಿಸಿದ್ದೆ. ಬಹಳ ಉಪಯುಕ್ತ ಮಾಹಿತಿಗಳು ಅದರಲ್ಲಿವೆ. ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿ ಅವರು ವಿವಿಧ ರೀತಿಯ ಹಾವುಗಳು ಮತ್ತು ಅವುಗಳ ಸ್ವಭಾವಗಳ ಬಗ್ಗೆ ವಿವರಿಸಿದ್ದಾರೆ.
ಬಹು ಅತ್ಯಮೂಲ್ಯ ಮಾಹಿತಿಗಳಿರುವ ಹಾವು-ನಾವು ಪುಸ್ತಕ ಬಹಳ ಬೇಗ ಎರಡನೇ ಮುದ್ರಣ ಕಂಡಿತು. ಇದರಲ್ಲಿ ಮತ್ತಷ್ಟೂ ವಿಷಯಗಳನ್ನು ಸೇರಿಸಿದ್ದರು. ಈ ಆವೃತ್ತಿಯನ್ನೂ ಅವರು ನನಗೆ ಕೊಟ್ಟಿದ್ದರು. ಓದಿ ನನ್ನ ಮೆಚ್ಚುಗೆಯನ್ನು ತಿಳಿಸಿದ್ದೆ. ಎರಡನೇ ಆವೃತ್ತಿಯೂ ಬಹಳ ಬೇಗ ಮಾರಾಟವಾಯಿತು. ಅದೇ ಪುಸ್ತಕದ ಮೂರನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟವಾಗಿದೆ. ಈ ಕೃತಿಯನ್ನೂ ಬಹು ವಿಶ್ವಾಸದಿಂದ ಕಳುಹಿಸಿಕೊಟ್ಟಿದ್ದಾರೆ.
ಕರಾವಳಿಯ ಪ್ರತೀ ಮನೆಯಲ್ಲೂ ಕಡ್ಡಾಯ ಇರಲೇ ಬೇಕಾದ ಪುಸ್ತಕ ಇದು. ಹಾವು ಬಂದಾಗ ಭಯ ಬೀಳುವ ಬದಲಿಗೆ ಅದು ಯಾವ ಹಾವು, ಅದರಿಂದ ಅಪಾಯ ಎಷ್ಟು, ಅದೇನು ಮಾಡೀತು ಎಂದು ಅರಿಯುವುದಕ್ಕೆ ಸಿದ್ಧ ಆಕರ ಈ ಪುಸ್ತಕ. ಅನ್ಯಾಯವಾಗಿ ಹಾವುಗಳನ್ನು ಕೊಲ್ಲುವುದನ್ನು ತಪ್ಪಿಸುವುದಕ್ಕೂ, ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಯ ಕುರಿತ ಮಾಹಿತಿಯನ್ನೂ ಇದು ನೀಡುತ್ತದೆ.
ಮೊದಲ ಆವೃತ್ತಿಯಲ್ಲಿ 40, ಎರಡನೆಯದರಲ್ಲಿ 47 ಮತ್ತು ಈಗ ಮೂರನೆಯದರಲ್ಲಿ 49 ಜಾತಿಯ ವಿಷಸಹಿತ-ರಹಿತ ಹಾವುಗಳ ಸಚಿತ್ರ ವಿವರಣೆಗಳು ಮತ್ತು ಹಾವುಗಳ ಬಗ್ಗೆ ಕಣ್ಣು ತೆರೆಸುವ ಹಲವು ಮಾಹಿತಿಗಳು ಪುಸ್ತಕದಲ್ಲಿವೆ. ಇಂತಹದೊಂದು ಉಪಯುಕ್ತ ಪುಸ್ತಕಕ್ಕಾಗಿ ನಾನು ಗುರುರಾಜ್ ಸನಿಲ್ ಅವರಿಗೆ ಋಣಿ.

ಸಂಚಾರಿ ದೂರವಾಣಿ ಸಂಖ್ಯೆ  9845083869 ಗೆ ಕರೆಮಾಡಿ ಪುಸ್ತಕ ತರಿಸಿಕೊಳ್ಳಬಹುದು.

ನಾಗರಹಾವು ಚಿತ್ರದ ಕೃಪೆ: ಅಂತರ್ಜಾಲ

LEAVE A REPLY

Please enter your comment!
Please enter your name here