ಗೇರು ಅಥವಾ ಗೋಡಂಬಿ ಕೃಷಿ. ಪ್ರಯೋಜನಗಳು ಅನೇಕ. ಕರಾವಳಿಗರಿಗೆ ಗೇರು ಕೃಷಿಯು ಒಂದು ವರದಾನ. ಹಲವಾರು ಮಹಿಳೆಯರಿಗೆ ಜೀವನಾಧಾರ; ಬದುಕಿಗೆ ದಾರಿದೀಪ. ಬಹುತೇಕ ಹೆಣ್ಣುಮಕ್ಕಳು ಗೇರು ಸಂಸ್ಕರಣೆಯನ್ನು ಗುಡಿ ಕೈಗಾರಿಕೆಯಾಗಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಹಲವಾರು ಉದಾಹರಣೆಗಳನ್ನು ನೋಡಬಹುದು.
ಗೇರು ಸಂಸ್ಕರಣೆಯ ದೊಡ್ಡ ದೊಡ್ಡ ಉದ್ಯಮಗಳಿಂದು ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿವೆ. ಬಹುಶಃ ಈ ನಡುವೆ ಗೇರು ಸಂಸ್ಕರಣೆಯನ್ನು ವ್ಯಾಪಾರೀಕರಣಗೊಳಿಸಿದ ಕಾರಣದಿಂದ ಅವರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸವಲತ್ತುಗಳಿಗೆ ಕಡಿವಾಣ ಬಿದ್ದಿದೆ. ಆದರೆ ಕೃಷಿ ವಲಯಕ್ಕೆ ಸಿಗುವ ಎಲ್ಲಾ ಸವಲತ್ತುಗಳು ಸಿಗುತ್ತಿವೆ. ಗೇರು ಬೀಜಕ್ಕೆ, ಅದರ ಕೃಷಿಗೆ ಎಂದೂ ಬೇಡಿಕೆ ಕಡಿಮೆಯಾಗದೇ ಇದ್ದರೂ ಗೇರು ಕೃಷಿಗೆ ದೊರೆಯಬೇಕಾದ ಮಹತ್ವ ದೊರಕಿಲ್ಲದಿರುವುದು ಆಶ್ಚರ್ಯಕರ.
ನಾಲ್ಕು ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ವಸಹಾತುಶಾಹಿಗಳಾಗಿ ಬಂದ ಪೋರ್ಚುಗೀಸರು ಈ ಮರವನ್ನು ಇಲ್ಲಿ ಪರಿಚಯಿಸಿದರು. ಕರಾವಳಿ ತೀರ ಪ್ರದೇಶಗಳಲ್ಲಿ ಮರಳು ಕೊಚ್ಚಿ ಹೋಗುವುದನ್ನು ತಡೆಯವುದು, ಬೋಳು – ಬರಡು ಗುಡ್ಡಗಳನ್ನು ಹಸಿರಾಗಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಈ ಮರಗಳ ದೊಡ್ಡ ದೊಡ್ಡ ತೋಪುಗಳು ನಿರ್ಮಾಣವಾಗಿ ಬೋಳು ಗುಡ್ಡಗಳೆಲ್ಲಾ ಹಸಿರುಮಯವಾದವು. ಜೊತೆಗೆ ಇದರಿಂದ ಮಣ್ಣು ಕೊಚ್ಚಿ ಹೋಗಿ ಮಣ್ಣಿನ ಫಲವತ್ತತೆಗೆ ದಕ್ಕೆಯಾಗುವುದು ಕಡಿಮೆಯಾಯ್ತು. ಫಲವತ್ತಾದ ಹಸಿರು ಪ್ರದೇಶಗಳು ನಿರ್ಮಾಣವಾದವು. ಇದರಿಂದ ಅತ್ಯಧಿಕ ಲಾಭವಾಯ್ತು.
ಕನಿಷ್ಟ ಆರೈಕೆಯನ್ನಷ್ಟೇ ಬೇಡುವ ಈ ಸಸ್ಯವನ್ನು ಬೆಳೆಸುವುದು ಮತ್ತು ಅದರಿಂದ ಲಾಭ ಪಡೆದುಕೊಳ್ಳುವುದು ಅಂತಹ ಕಷ್ಟದ ಕೆಲಸವೇನಲ್ಲ. ಹಾಗಾಗಿ ನಮ್ಮ ದೇಶದಿಂದ ವಸಹಾತುಶಾಹಿಗಳ ನಿರ್ಗಮನದ ನಂತರವೂ ಇದರ ಕೃಷಿ ಸಾಗಿಬಂದಿದೆ. ದೇಶ ವಿದೇಶಗಳಿಗೆ ಇದರ ಉತ್ಪನ್ನಗಳು ರಪ್ತಾಗುತ್ತಿವೆ.
ವಿದೇಶಿ ವಿನಿಮಯ ಗಳಿಸುತ್ತಿರುವ ಮುಖ್ಯವಾದ ಬೆಳೆಗಳಲ್ಲಿ ಒಂದಾದ ಗೇರನ್ನು ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳು ಒಳನಾಡು ಒಣ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದರ ಹಣ್ಣನ್ನು ಸಂಸ್ಕರಿಸಿ ಹಲವು ವಿಧದ ಪಾನೀಯಗಳು ಮತ್ತು ಮದ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಗೋವಾ ರಾಜ್ಯವು ಇದರ ಮದ್ಯವನ್ನು ಹೆಚ್ಚಿನ ಮಟ್ಟದಲ್ಲಿ ಉತ್ಪಾದಿಸುತ್ತಿದೆ.
ಕೃಷಿ ಅಭಿವೃದ್ಧಿಯ ಮೂಲಕವೇ ಇತರ ವಲಯಗಳ ಅಭಿವೃದ್ಧಿಗೆ ಮಾರ್ಗವನ್ನು ಕಲ್ಪಿಸಿ ಕೊಳ್ಳಬೇಕಾಗುತ್ತದೆ. ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಆರ್ಥಿಕಾಭಿವೃದ್ಧಿಗೆ ಭದ್ರ ನೆಲೆಯೇ ಇರುವುದಿಲ್ಲ ಕೃಷಿ ಅಭಿವೃದ್ಧಿಯ ಭದ್ರ ತಳಪಾಯದ ಮೇಲೆ ಕೈಗಾರಿಕೆ, ಸಾರಿಗೆ-ಸಂಪರ್ಕ ಮತ್ತು ಇತರ ವಲಯಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಇಂತಹ ಒಂದು ಆರ್ಥಿಕಾಭಿವೃದ್ಧಿಗೆ ಮೂಲವೆನಿಸಿರುವ ಹಲವಾರು ಕೃಷಿ ಉತ್ಪನ್ನಗಳಲ್ಲಿ ಗೇರು ಕೃಷಿಯೂ ಒಂದು.
ಸಾಕಷ್ಟು ಪ್ರಯೋಜನಕಾರಿ ಅಂಶಗಳು ಇದ್ದೂ ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗೇರುಕೃಷಿಯ ಪ್ರಾಮುಖ್ಯತೆ ಕಡಿಮೆಯಾಗಿದೆ. ಇದಕ್ಕೆ ಕಾರಣಗಳು ಅನೇಕವಾದರೂ ಕಡಿಮೆ ಖರ್ಚು-ಹೆಚ್ಚಿನ ಲಾಭ ತರುವ ಇದರತ್ತ ಹೆಚ್ಚಿನ ಗಮನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗೇರುಕೃಷಿಯ ಲೇಖನ ಸರಣಿ ಆರಂಭಿಸಲಾಗಿದೆ.
ಲೇಖಕರು: ಡಾ. ಸುಜಾತ, ಕೃಷಿವಿಜ್ಞಾನಿ
ಮುಂದುವರಿಯುತ್ತದೆ….
Sr I need some cashew trees information. Where available this trees.
ಪುತ್ತೂರಿನ ಗೇರುಕೃಷಿ ಸಂಶೋಧನಾ ಕೇಂದ್ರದಲ್ಲಿ ಗುಣಮಟ್ಟದ ಸಸಿಗಳು ದೊರೆಯುತ್ತವೆ, ವಿಚಾರಿಸಿ
Sir I m NarayanaGouda from Sirsi taluk Sir humble request I want cashu plant in near
ಚಿಂತಾಮಣಿಯ ಕೃಷಿಸಂಶೋಧನಾ ಕೇಂದ್ರದಲ್ಲಿ ವಿಚಾರಿಸಿ. ಪುತ್ತೂರಿನ ಗೇರುಕೃಷಿ ಸಂಶೋಧಾನ ಕೇಂದ್ರದಲ್ಲಿ ವೈವಿಧ್ಯಮಯ ತಳಿಗಳ ಸಸಿಗಳು ದೊರೆಯುತ್ತವೆ.
ನಾನು, ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಜಿ.ಡಿ.ಪಾಳ್ಯ ನಿವಾಸಿ, ಗೇರುಸಸಿಗಳು ಬೇಕು. ಗುಣಮಟ್ಟದ ಸಸಿಗಳು ಎಲ್ಲಿ ದೊರೆಯುತ್ತವೆ ತಿಳಿಸಿ
ಪುತ್ತೂರಿನ ಗೇರುಕೃಷಿ ಸಂಶೋಧನಾ ಕೇಂದ್ರದಲ್ಲಿ ವೈವಿಧ್ಯಮಯ ಗೇರುಸಸಿಗಳು ದೊರೆಯುತ್ತವೆ, ವಿಚಾರಿಸಿ….