ಅಡಿಕೆ ಸಿಪ್ಪೆ ಅಮೂಲ್ಯ ಅಗಾಧ ಶಕ್ತಿ ಗೊತ್ತೆ ?

9
ಅಡಿಕೆ ಸಿಪ್ಪೆ
ಲೇಖಕರು: ಸಾಯಿಲ್‌ ವಾಸು, ಕೃಷಿತಜ್ಞರು

ಅಡಿಕೆ ಮರ, ಅಡಿಕೆ ಕಾಯಿ ಹೊತ್ತು , ಬೆಳೆಸುತ್ತದೆ. ಅದನ್ನು ಭೂಮಿಗಿಳಿಸಿ ಅದರ ಒಡಲಲ್ಲಿದ್ದ ಅಡಿಕೆ ಹೊರತೆಗೆಯುತ್ತಾರೆ. ಬರಿಯ ಸಿಪ್ಪೆಯನ್ನು ರಸ್ತೆಯ ಬದಿಗಳಲ್ಲಿ ಬಿಸಾಡಿ, ಒಣಗಿಸಿ ಕಡೆಗೆ ಬಿಂಕಿಯಿಡುತ್ತಾರೆ. ಇದು ಸರಿಯೇ ?

ಹೊಳಲ್ಕೆರೆಯ ಸಿಂಗೇನಹಳ್ಳಿಯಲ್ಲಿ ಅಡಿಕೆ ಬೆಳೆಗಾರರೊಂದಿಗೆ ಚರ್ಚೆ ಇತ್ತು. ಅಡಿಕೆ ಬೆಳೆಯುವ ಮಣ್ಣಿನ ಸ್ಥಿತಿಗತಿ, ಎಗ್ಗಿಲ್ಲದೆ ಬಳಸುತ್ತಿರುವ ಕಳೆನಾಶಕಗಳು , ಇದರಿಂದ ಹದಗೆಟ್ಟಿರುವ ಮಣ್ಣಲ್ಲಿ ಪೋಷಕಾಂಶ ಕೊರತೆ, ಪೀಡೆ ಹಾವಳಿ, ರೋಗದ ಭೀತಿ,  ಅಡಿಕೆ ಸುಲಿದ ನಂತರ ಉಳಿಯುವ ಅಡಿಕೆ ಸಿಪ್ಪೆಯ ಸಮರ್ಪಕ ಬಳಕೆ ಇತ್ಯಾದಿ ಮಾತುಕತೆಯಾಯಿತು.

ಕಾರ್ಯಕ್ರಮ ನಂತರ ಕಣಿವೆಹಳ್ಳಿ ದಾಟಿ ಹೊಸದುರ್ಗ ಮಾರ್ಗದತ್ತ ಕಾರು ಹೊರಳಿಸಿದಾಗ, ರಸ್ತೆಯ ಬದಿಯಲ್ಲಿ ಒಣಗಿದ ಅಡಿಕೆ ಸಿಪ್ಪೆಯನ್ನು ಎಸೆದಿರುವ, ಕೆಲವೆಡೆ ಎಸೆದಿರುವ ಅಡಿಕೆ ಸಿಪ್ಪೆಯ ರಾಶಿಗೇ ಬೆಂಕಿಯಿಟ್ಟಿರುವ ದೃಶ್ಯಗಳು ಕಾಣಿಸಿದವು.

ರಸ್ತೆಬದಿಗೆ ಸುರಿದಿರುವ ಅಡಿಕೆಸಿಪ್ಪೆ ರಾಶಿ

ಬೆಂಕಿಯಿಡುವ ಮುನ್ನ, ಅಡಿಕೆಯಂತಹ ಅಡಿಕೆಯನ್ನೇ ರೂಪಿಸಿ, ಬೆಳೆಸಿದ ಈ ಒಣಗಿದ ಸಿಪ್ಪೆಯ ಇನ್ನಿತರ ಉಪಯೋಗಗಳ ಬಗ್ಗೆ ಬಹುತೇಕ ಬೆಳೆಗಾರರು ಯೋಚಿಸುತ್ತಿಲ್ಲ. ಈ ಒಣಗಿದ ಸಿಪ್ಪೆಯಲ್ಲಿ ಮಣ್ಣಿಗೆ ಮರುರೂಪ ಕೊಡುವಂತಹ ಇಂಗಾಲ ಅಂಶ ಇದೆ. ಈ ಇಂಗಾಲಾಂಶದಿಂದ ಮಣ್ಣು ಚೇತನಗೊಳ್ಳುತ್ತದೆ.

ಮಣ್ಣಲ್ಲಿ ಬೆರೆತ ಅಡಿಕೆ ಸಿಪ್ಪೆಯಿಂದ ಇಂಗಾಲಾಂಶ ಪಡೆದುಕೊಳ್ಳುವ ಮಣ್ಣು ತನ್ನಲ್ಲಿನ ಮರಳು – ಗೋಡು – ಜೇಡಿ ಕಣಗಳನ್ನು ಸಂಯೋಜಿಸಿಕೊಳ್ಳುತ್ತವೆ. ಇದರಿಂದ ಮಣ್ಣಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಈ ಮಣ್ಣಲ್ಲಿ ಬೆಳೆಯುವ ಬೆಳೆಗಳು ಆರೋಗ್ಯವಾಗಿ ಇರುತ್ತವೆ. ಬೀಳುವ ಮಳೆನೀರಿನ ಹನಿಹನಿಯೂ ಹೊರಹೋಗದೆ ಮಣ್ಣಲ್ಲೇ ಇಂಗುತ್ತವೆ. ನೀರು ಇಂಗಿದ ಪರಿಣಾಮ ಮಣ್ಣು ತಂಪಾಗಿರುತ್ತದೆ. ತಂಪು ಮಣ್ಣಲ್ಲಿ ಬಹುಬಗೆಯ ಮಣ್ಣುಜೀವಿಗಣಗಳು ಸೃಷ್ಟಿಯಾಗುತ್ತವೆ. ಈ ಜೀವಿಗಳು ಬರಡು ಮಣ್ಣಿಗೋದು ಸಜೀವಿ ರೂಪ ಕೊಡುತ್ತವೆ.

ಒಣಗಿದ ಸಿಪ್ಪೆಯಲ್ಲಿ ಮ್ಯಾಂಗನೀಸ್ ಅಂಶವಿದ್ದು, ಅದರಿಂದ ದ್ಯುತಿಸಂಶ್ಲೇಷಣೆ ಸರಾಗವಾಗಿ ಆಗುತ್ತದೆ. ಆ ಮಣ್ಣಲ್ಲಿ ಬೆಳೆಯುವ ಗಿಡಗಳಿಗೆ ಸಾರಜನಕ ಅಂಶ ಸಹಜವಾಗಿ ಸಿಗುತ್ತದೆ. ಗಿಡದಲ್ಲಿ ಕ್ಲೋರೋಫಿಲ್ ಅಂಶ ಸೃಷ್ಟಿಯಾಗುತ್ತದೆ.

ಒಣಗಿದ ಅಡಿಕೆಸಿಪ್ಪೆಗೆ ಬೆಂಕಿ ಹಾಕಿ ಸುಟ್ಟಿರುವುದು

ಒಣಗಿದ ಅಡಿಕೆ ಸಿಪ್ಪೆಯಲ್ಲಿ ಬೊರಾನ್ ಅಂಶವಿರುವುದೆ. ಈ ಅಂಶವಿರುವ ಮಣ್ಣಿನಾಸರೆಯಲ್ಲಿ ಬೆಳೆಯುವ ಗಿಡಗಳ ಬೇರುವಲಯ ಉತ್ತಮವಾಗಿ ಇರುತ್ತದೆ. ಗಿಡದಲ್ಲಿ ಮೂಡುವ ಮೊಗ್ಗು, ಹೂವು, ಕಾಯಿ, ಧಾನ್ಯ, ಕಾಳು , ತೆನೆ, ಹಣ್ಣು ಇನ್ನಿತರ ಫಲಗಳ ಉದುರುವಿಕೆ ನಿಲ್ಲುತ್ತದೆ. ಗಿಡದಲ್ಲಿ ಉತ್ಪನ್ನವಾಗುವ ಫಲಗಳನ್ನು ಹೊರುವ ಧಾರಣಾ ಶಕ್ತಿ ಹೆಚ್ಚಾಗುತ್ತದೆ. ಗಿಡಗಳು ಸದಾಕಾಲ ಹಸಿರಾಗಿಯೂ, ದೃಢವಾಗಿಯೂ ಹಾಗೂ ಆರೋಗ್ಯವಾಗಿಯೂ ಇದ್ದು, ಇಳುವರಿಯ ಪ್ರಮಾಣ ಹೆಚ್ಚಾಗುತ್ತದೆ.

ಒಣಗಿದ ಅಡಿಕೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶವೂ ಸೇರಿದ್ದು, ಇದನ್ನು ಹೊಂದಿರುವ ಮಣ್ಣಿನ ಬಣ್ಣ ದಟ್ಟವಾಗಿರುತ್ತದೆ – ಮಣ್ಣಲ್ಲಿ ಆಮ್ಲಜನಕ ಸೃಷ್ಟಿಯಾಗುತ್ತದೆ. ಗಿಡವು ದೃಢವಾಗಿ ನಿಲ್ಲುತ್ತವೆ. ಬಲಿಷ್ಠವಾಗಿ ಬೆಳೆಯುತ್ತದೆ. ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಏರುಪೇರಿನ ಹವಾಮಾನದಲ್ಲೂ ಒತ್ತಡದಲ್ಲಿ ಬೆಳೆಯುವ ಗಿಡಗಳಿಗೆ ಮಣ್ಣಲಿನ ಕಬ್ಬಿಣದ ಅಂಶ ರಕ್ಷಾಕವಚವಾಗಿ ಇರುತ್ತದೆ.

ಇನ್ನು ಒಣಗಿದ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಅಂಶವೂ ಕೂಡ ಇದೆ. ಇದರಿಂದ ಬೇರುಗಳು ಉತ್ತಮವಾಗಿ ಬೆಳೆಯುತ್ತವೆ. ಗಿಡಕ್ಕೆ ಅಧಿಕ ಭಾರ ಹೊರುವ ಸಾಮರ್ಥ್ಯ ಸಿಗುತ್ತದೆ. ಗಿಡದ ಎತ್ತರ, ಗಾತ್ರ ಸಮತೋಲನೆಯಲ್ಲಿರುತ್ತದೆ. ಗಿಡದಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ ಹಾಗೂ ಮಣ್ಣಿಗೆ ನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯ ದೊರೆಯುತ್ತದೆ. ಇಷ್ಟಿದ್ದೂ ಅನೇಕ ಬೆಳೆಗಾರರು ಬೆಂಕಿಯಿಡುವ ಮುನ್ನ ಅಡಿಕೆ ಸಿಪ್ಪೆಯ ಅಗಾಧ ಸಾಮರ್ಥ್ಯದ ಬಗ್ಗೆ ಯೋಚಿಸುವುದೇ ಇಲ್ಲ.

9 COMMENTS

  1. ಸರ್ ಅದು ಮಣ್ಣಿನಲ್ಲಿ ಕರಗಿಸುವ ವಿಧಾನ ಕೊಡಿ.
    ಅದು ಕರ್ಗೋದು ತುಂಬಾ ಲೇಟ್

  2. ಸರ್ ನಿಮ್ಮ ಮಾಹಿತಿ ಗೆ ದನ್ಯವಾದಗಳು
    ಆದರೆ. ಅದನ್ನು ಹೇಗೆ ಬಳಸಬೇಕು ಅನ್ನೋದನ್ನ
    ಹೇಳಲಿಲ್ಲ ದಯವಿಟ್ಟು ಅದು ತಿಳಿಸಿ

  3. ಸರ್ ನಿಮ್ಮ ಮಾಹಿತಿ ಗೆ ದನ್ಯವಾದಗಳು

    ಆದ್ರೆ ಅದನ್ನ ಹೇಗೆ ಬಳಸುವದು ಅಂತ. ಹೇಳಿಲ್ಲಾ

    ದಯವಿಟ್ಟು ಅದನ್ನ ತಿಳಿಸಿ

  4. It’s similar in respect of all grains whose outer cover one tends to discard.e.g paddy husk.
    These should be used back in the soil

  5. ಅಡಿಕೆ ಸಿಪ್ಪೆಯನ್ನು ತಿಪ್ಪೇಗುಂಡಿಗೆ ಒಂದು ಹಾಸು ಸಗಣಿ, ಒಂದು ಹಾಸು ಸಿಪ್ಪೆ ಹಾಕಿ ಮಳೆಗಾಲದಲ್ಲಿ ಹಾಕಬೇಕು. ಸಿಪ್ಪೆಯ ಮೇಲೆ ಸ್ವಲ್ಪ ಯೂರಿಯಾ ಗೊಬ್ಬರವನ್ನು ಹಾಕಬೇಕು. ಮಳೆಗಾಲದಲ್ಲಿ ತಿಪ್ಪೆ ಗುಂಡಿಯಲ್ಲಿ ಅಡಿಕೆ ಸಿಪ್ಪೆ ಕಳಿಯುತ್ತದೆ

LEAVE A REPLY

Please enter your comment!
Please enter your name here