ಬೆಂಗಳೂರು: ಅಕ್ಟೋಬರ್ 19: (ಅಗ್ರಿಕಲ್ಚರ್ ಇಂಡಿಯಾ) ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೃಷಿ ವಿಜ್ಞಾನಿಗಳು ರೋಗ ನಿರೋಧಕ ಜೊತೆಗೆ ಅಧಿಕ ಇಳುವರಿ ನೀಡುವ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅವುಗಳು ನವೆಂಬರ್ 3 ರಿಂದ 6ರ ತನಕ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ನಡೆಯುವ ಕೃಷಿಮೇಳದಲ್ಲಿ ಲೋಕಾರ್ಪಣೆಯಾಗುತ್ತವೆ. ಹೊಸ ತಳಿಗಳ ವಿವರ ಮುಂದಿದೆ.
1) ಭತ್ತ: ಕೆ.ಎಂ.ಪಿ-225: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿದೆ. ಈ ತಳಿಯ ಅಕ್ಕಿಯು ಬಿಳಿ ಬಣ್ಣದಾಗಿದ್ದು, ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಐಆರ್-64 ಭತ್ತದ ಕಾಳುಗಳ ಹಾಗೆ ಹೆಚ್ಚಾಗಿ ಹೋಲುತ್ತವೆ. ಐಆರ್-64 ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-225 ತಳಿಯು ಎಲೆ ಹಾಗೂ ಕುತ್ತಿಗೆ ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆಯನ್ನು ಹೊಂದಿರುತ್ತದೆೆ. ಆದ ಕಾರಣ ಬೆಂಕಿರೋಗಕ್ಕೆ ತುತ್ತಾಗುವ ಐಆರ್-64 ತಳಿಯ ಬದಲು ಕೆ.ಎಂ.ಪಿ.-225 ತಳಿಯನ್ನು ಬೆಳೆಯಬಹುದಾಗಿದೆ. ಈ ತಳಿಯು ಪ್ರತಿ ಎಕರೆಗೆ 24-26 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.
2) ಭತ್ತ: ಆರ್.ಎನ್.ಆರ್-15048: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿರುತ್ತದೆ. ಈ ತಳಿಯ ಅಕ್ಕಿಯು ತುಂಬ ಸಣ್ಣದಾಗಿದ್ದು, ಉತ್ಕೃಷ್ಟ ದರ್ಜೆಯದಾಗಿರುತ್ತದೆ. ಈ ತಳಿಯು ಪ್ರತಿ ಎಕರೆಗೆ 22-24 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.
3) ಮುಸುಕಿನ ಜೋಳ: ಎಂ.ಎ.ಹೆಚ್ 14-138: ಮುಸುಕಿನ ಜೋಳದ ಏಕ ಸಂಕರಣ ತಳಿ. ಅಧಿಕ ಇಳುವರಿ (34-38 ಕ್ವಿ/ಎ) ಮತ್ತು ಮಧ್ಯಮಾವಧಿ (115-120 ದಿನಗಳು) ಸಂಕರಣ ತಳಿಯಾಗಿದೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆ ಮತ್ತು ಕೇದಿಗೆ ರೋಗಕ್ಕೆ ಸಾಧಾರಣಾ ನಿರೋಧಕತೆ ಹೊಂದಿದ್ದು, ಕಟಾವಿನ ಹಂತದಲ್ಲಿಯೂ ಹಸಿರಾಗಿದ್ದು, ಮೇವಾಗಿ ಕೂಡ ಉಪಯೋಗಿಸಬಹುದಾಗಿದೆ. ಇದರ ತೆನೆಗಳು ನೀಳವಾಗಿದ್ದು, ಕಾಳುಗಳು ತೆಳು ಕಿತ್ತಳೆ ಹಳದಿ ಬಣ್ಣದಿಂದ ಕೂಡಿದ್ದು ಮಾರುಕಟ್ಟೆ ಯಲ್ಲಿ ಉತ್ತಮ ಧಾರಣೆ ಸಿಗುತ್ತದೆ. ದಕ್ಷಿಣ ಕರ್ನಾಟಕದ ಪೂರ್ವ ಒಣ ವಲಯ (ವಲಯ 5) ಮತ್ತು ದಕ್ಷಿಣ ಒಣ ವಲಯ (ವಲಯ 6) ಗಳಿಗೆ ಶಿಫಾರಸ್ಸು ಮಾಡಲಾಗಿದೆ.
4) ಕೊರಲೆÉ: ಜಿಪಿಯುಬಿಟಿ-2: ಈ ತಳಿಯು ಅಧಿಕ ಧಾನ್ಯದ ಇಳುವರಿ (6-8 ಕಿ/ಎ) ಹಾಗೂ ಮೇವಿನ ಇಳುವರಿ (1.0-1.2 ಟ/ಎ) ನೀಡುತ್ತದೆ ಮತ್ತು ಸುಮಾರು 85-90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಗಿಡಗಳು ಮಧ್ಯಮ ಎತ್ತರಕ್ಕೆ ಬೆಳೆಯುತ್ತವೆ (110-120 ಸೆಂ.ಮಿ) ಮತ್ತು ಸುಮಾರು 15-20 ತೆಂಡೆಗಳು ಬಿಡುತ್ತವೆ. ದಟ್ಟವಾದ ಮತ್ತು ಉದ್ದವಾದ ತೆನೆಯನ್ನು ಹೊಂದಿದ್ದು ದುಂಡು ಕೊರಲೆಯೆಂದು ಕರೆಯುತ್ತಾರೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ. ವಲಯ 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.
5) ಅವರೆ: ಹೆಚ್‌ಎ-5: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (90-95 ದಿನಗಳು), ಹೆಚ್ಚಿನ ಹಸಿ ಕಾಯಿ (13-14 ಕ್ವಿಂ/ಎ) ಮತ್ತು ಒಣ ಬೀಜದ (2.5-3.0 ಕ್ವಿಂ/ಎ) ಇಳುವರಿ ಕೊಡುತ್ತದೆ. ಸೂರ್ಯ ರಶ್ಮಿ ಅವಧಿಗೆ ಸಂವೇಧನಾಶೀಲತೆ ಹೊಂದಿರುವುದಿಲ್ಲ ಮತ್ತು ಅರೆ ನಿರ್ಣಾಯಕ ಬೆಳವಣಿಗೆ ಆವಾಸಸ್ಥಾನ ಹೊಂದಿದೆ. ವಲಯ 5ಕ್ಕೆ ಶಿಫಾರಸ್ಸು ಮಾಡಲಾಗಿದೆ.
6) ಎಳ್ಳು: ಜಿಕೆವಿಕೆಎಸ್-1: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (80-85 ದಿನಗಳು), ಹೆಚ್ಚು ರೆಂಬೆಗಳು, ತುಂಬಿದ ಕಾಯಿಗಳು ಮತ್ತು ಕಾಯಿ ಬಲಿಯುವಾಗಲೂ ಎಲೆ ಹಸಿರಾಗಿರುತ್ತದೆ. ಬಿಳಿ ಬಣ್ಣದ ಬೀಜಗಳಿದ್ದು, ಶೇ. 47-48ರಷ್ಟು ಎಣ್ಣೆ ಅಂಶವನ್ನು ಹೊಂದಿರುತ್ತದೆ. 1.8-2.0 ಕ್ವಿಂ/ಎ ಬೀಜಗಳ ಇಳುವರಿ ಮತ್ತು 90-95 ಕಿ.ಗ್ರಾಂ ಎಣ್ಣೆ ಇಳುವರಿಯನ್ನು ನೀಡುತ್ತದೆ. ವಲಯ 5ಕ್ಕೆ ಶಿಫಾರಸ್ಸು ಮಾಡಲಾಗಿದೆ.
7) ಹುಚ್ಚೆಳ್ಳು: ಕೆಬಿಎನ್-2: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (80-85 ದಿನಗಳು), ಹೆಚ್ಚು ರೆಂಬೆಗಳು ಮತ್ತು ತುಂಬಿದ ಕಾಯಿಗಳಿಂದ ಕೂಡಿರುತ್ತದೆ. ಪ್ರತಿ ಎಕರೆಗೆ 1.9-2.0 ಕ್ವಿಂಟಾಲ್ ಬೀಜಗಳ ಇಳುವರಿ ಮತ್ತು 90-100 ಕಿ.ಗ್ರಾಂ ಎಣ್ಣೆ ಇಳುವರಿಯನ್ನು ನೀಡುತ್ತದೆ. ಕಪ್ಪಾದ ದಪ್ಪನೆಯ ಬೀಜಗಳು ಶೇ.47-48 ರಷ್ಟು ಎಣ್ಣೆ ಅಂಶವನ್ನು ಹೊಂದಿರುತ್ತದೆ. ಅಂತರ ಬೆಳೆಗೆ ಸೂಕ್ತವಾದ ತಳಿಯಾಗಿರುತ್ತದೆ. ವಲಯ 5ಕ್ಕೆ ಶಿಫಾರಸ್ಸು ಮಾಡಲಾಗಿದೆ
8) ಹರಳು ಸಂಕರಣ ತಳಿ ಐಸಿಹೆಚ್-66: ಅಧಿಕ ಇಳುವರಿ ಸಾಮರ್ಥ್ಯವಿರುವ (6-7 ಕ್ವಿಂ/ಎಕರೆಗೆ) ಮಧ್ಯಮಾವಧಿ (ಪ್ರಥಮ ಗೊಂಚಲು ಪಕ್ವತೆ ಹೊಂದಲು ಸುಮಾರು 95-98 ದಿನಗಳು ತೆಗೆದುಕೊಳ್ಳುತ್ತದೆ) ಸಂಕರಣ ತಳಿ. ಕೆಂಪಾದ ಕಾಂಡ, ಕಾಯಿಗಳ ಮೇಲೆ ಕಡಿಮೆ ಮುಳ್ಳುಗಳಿದ್ದು, ಸುಂಕೂ/ಬೂದಿ ಮುಚ್ಚಣಿಕೆ ಗಿಡದ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತದೆ. ದಕ್ಷಿಣ ಕರ್ನಾಟಕದ ವಲಯಗಳಾದ 4, 5 ಮತ್ತು 6ರಲ್ಲಿ ಮುಂಗಾರು ಹಂಗಾಮಿಗೆ (ಜೂನ್-ಜುಲೈ) ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದೆ. ಸೊರಗು ರೋಗಕ್ಕೆ ನಿರೋಧಕತೆಯಿದ್ದು ಹಾಗೂ ಹಸಿರು ಜಿಗಿ ಹುಳುವಿನ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಸಹಹೊಂದಿರುತ್ತದೆ. ಈ ಸಂಕರಣ ತಳಿಯನ್ನು ವಲಯ 4, 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.
9) ಮೇವಿನ ಜೋಳ: ಸಿಎನ್‌ಎಫ್‌ಎಸ್-1: ಮುಂಗಾರು ಹಾಗೂ ಮಳೆಯಾಶ್ರಿತ (ಜೂನ್-ಜುಲೈ) ಮತ್ತು ಹಿಂಗಾರಿಗೆ (ಅಕ್ಟೋಬರ್- ನವೆಂಬರ್) ಸೂಕ್ತವಾದ ತಳಿ. ಈ ತಳಿಯು ಹೆಚ್ಚು ಹಸಿರು ಮೇವಿನ ಇಳುವರಿಯನ್ನು (22-23 ಟನ್/ಎ), ಉತ್ತಮ ಗುಣಮಟ್ಟದ ನಾರಿನಂಶ (35-36%) ಮತ್ತು ಸಸಾರಜನಕ (9-10%) ವನ್ನು ಕೊಡುವ ತಳಿಯಾಗಿದೆ. ಈ ತಳಿಯನ್ನು ವಲಯ 6ಕ್ಕೆ ಶಿಫಾರಸ್ಸು ಮಾಡಲಾಗಿದೆ.