ಅವಳಿ ಶಿಶುಗಳು ಎಂದರೆ ಎಲ್ಲರಿಗೂ ಕುತೂಹಲ; ಕಾರಣ ಏನೆಂದರೆ ಬಹುತೇಕ ಸಂದರ್ಭಗಳಲ್ಲಿ ಅವರ ರೂಪು ಒಂದೇ ಆಗಿರುತ್ತದೆ. ನಿಕಟ ಸಂಬಂಧಿಗಳನ್ನು ಹೊರತುಪಡಿಸಿ ಉಳಿದವರು ಪ್ರತ್ಯೇಕತೆಯ ಅಂಶಗಳನ್ನು ಗುರುತಿಸುವುದು ಕಷ್ಟ. ಮನುಷ್ಯರಲ್ಲಿ ಸಾಮಾನ್ಯವಾಗಿರುವ ಅವಳಿ ಜನನ; ಪ್ರಾಣಿಗಳಲ್ಲೂ ಇವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ.
ಸಸ್ತನಿಗಳಾದ ಬೆಕ್ಕು, ಹಂದಿ, ನಾಯಿ ಇವುಗಳು ಒಮ್ಮೆಲೆ ಒಂದಕ್ಕಿಂತ ಹೆಚ್ಚು ಮರಿಗಳಿಗೆ ಒಂದೇ ದಿನ ಜನ್ಮವಿತ್ತರೂ ಅವುಗಳು ಅವಳಿಗಳೆನ್ನಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಅವುಗಳು ಪ್ರತ್ಯೇಕ ವೀರ್ಯಾಣು, ಅಂಡಾಣುಗಳ ಮೂಲಕ ಫಲೋತ್ಪಾತಿಯಾಗಿ ವೃದ್ದಿ ಹೊಂದಿ ಜನಸಿರುತ್ತವೆ.
ಅಮರಿಕಾದ ಮಿಸ್ಸಿಸ್ಸಿಪ್ಪಿ ಸ್ಟೇಟ್ ಯೂನಿವರ್ಸಿಟಿಯ ಪಶು ವೈದ್ಯಕೀಯ ಕಾಲೇಜಿನ ವಿಜ್ಞಾನಿಗಳು ಇದರ ಬಗ್ಗೆ ನಿರಂತರ ಅಧ್ಯನ ಮಾಡಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಅನೇಕ ನಾಯಿಗಳು, ಬೆಕ್ಕುಗಳ ಮರಿಗಳನ್ನು ಗಮನಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಸಾಮಾನ್ಯವಾಗಿ ಅವುಗಳು ಅವಳಿಗಳಾಗಿಲ್ಲದೇ ಇರುವುದನ್ನು ದಾಖಲಿಸಿದ್ದಾರೆ
ಅವಳಿಗಳೆಂದರೆ ಒಂದೇ ಅಂಡಾಣು ಎರಡಾಗಿ ಬೆಳೆದು ಎರಡು ಭ್ರೂಣಗಳು ಬೆಳವಣಿಗೆ ಹೊಂದುತ್ತದೆ. ಇನ್ನೂ ಸರಳವಾಗಿ ವಿವರಿಸಬೇಕೆಂದರೆ ಒಂದೇ ವೀರ್ಯವು ಒಂದೇ ಮೊಟ್ಟೆಯನ್ನು ಫಲವತ್ತಾಗಿಸುತ್ತದೆ, ಅದು ಎರಡು ಪ್ರತ್ಯೇಕ ಕೋಶಗಳಾಗಿ ವಿಭಜನೆಗೊಂಡು ಎರಡು ಶಿಶುಗಳಾಗಿ ಬೆಳೆಯುತ್ತದೆ. ಈ ಶಿಶುಗಳು ಒಂದೇ ಡಿಎನ್‌ಎಯನ್ನು ಹಂಚಿಕೊಳ್ಳುತ್ತವೆ. ಆದ್ದರಿಂದ ಅವಳಿಗಳನ್ನು ಮೂಲಭೂತವಾಗಿ ಪರಸ್ಪರ ಪ್ರತ್ಯೇಕಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅವಳಿ ಮಕ್ಕಳನ್ನು ಒಂದೇ ಗರ್ಭದಿಂದ ಎರಡು ಸಂತತಿ ಎಂದು ವ್ಯಾಖ್ಯಾನಿಸಲಾಗಿದೆ.
ಅವಳಿಗಳು ಸಹ ಸಹೋದರರಾಗಿರಬಹುದು. ಒಂದೇ ಸಮಯದಲ್ಲಿ ಎರಡು ಪ್ರತ್ಯೇಕ ಮೊಟ್ಟೆಗಳನ್ನು ಪ್ರತ್ಯೇಕವಾಗಿ ಫಲವತ್ತಾಗಿಸಿದಾಗ ಅದು ಅವಳಿ ಫಲಿತಾಂಶವಾಗಿರುತ್ತದೆ. ಪ್ರತಿ ಅವಳಿ ತಾಯಿ ಮತ್ತು ತಂದೆಯಿಂದ ತನ್ನದೇ ಆದ ಜೀನ್‌ಗಳನ್ನು ಹೊಂದಿರುತ್ತವೆ. ಅವಳಿಗಳಲ್ಲಿ ಒಂದು ಹೆಣ್ಣು, ಮತ್ತೊಂದು ಗಂಡಾಗಬಹುದು. ಅಮೆರಿಕಾದಲ್ಲಿ ನೂರು ಮಾನವ ಗರ್ಭಧಾರಣೆಗಳಲ್ಲಿ ಕನಿಷ್ಟ ಮೂರಾದರೂ ಅವಳಿ ಇರುವ ಗರ್ಭಗಳೆಂದು ಅಧ್ಯಯನಗಳು ಹೇಳುತ್ತವೆ.
ಪ್ರತಿ ಪ್ರಾಣಿಯು ತನ್ನದೇ ಆದ ಪ್ರಮಾಣಿತ ಸಂಖ್ಯೆಯ ಸಂತತಿಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಸಾಕುಪ್ರಾಣಿಗಳ ಬಗ್ಗೆ ಸಾಕಣೆದಾರರಿಗೆ ಹೆಚ್ಚು ಮಾಹಿತಿ ಇರುತ್ತದೆ. ನಾಯಿಗಳಲ್ಲಿ ನಾನಾ ತಳಿಗಳಿವೆ. ಶುದ್ಧ ತಳಿಯ ೧೦, ೦೦೦ ನಾಯಿಗಳನ್ನು ಅಧ್ಯಯನ ಮಾಡಿದಾಗ ತಳಿಯಿಂದ ತಳಿಗೆ ಸರಾಸರಿ ನಾಯಿಮರಿಗಳ ಸಂಖ್ಯೆಯು ವ್ಯತ್ಯಾಸಗೊಳ್ಳುತ್ತದೆ ಎಂದು ತಿಳಿದು ಬಂದಿದೆ.
ಒಂದು ನಾಯಿ ಒಂದೇ ದಿನ ಕೆಲವೇ ಸಮಯದ ಅಂತರದಲ್ಲಿ ಎರಡು ಮರಿಗಳಿಗೆ ಮಾತ್ರ ಜನ್ಮವಿತ್ತಾಗ ಸಾಕಣೆದಾರರು ಅವುಗಳನ್ನು ಅವಳಿಗಳೆಂದು ಕರೆಯುತ್ತಾರೆ. ಆಡುಗಳಲ್ಲಿ ಅವಳಿ ಮರಿಗಳ ಜನನ ಅತ್ಯಂತ ಸಾಮಾನ್ಯ ಗರ್ಭಾವಸ್ಥೆಯ ಫಲಿತಾಂಶವಾಗಿದೆ. ಕುರಿಗಳು ಅಪರೂಪದ ಪ್ರಕರಣಗಳಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ.
11 ರಿಂದ 12 ತಿಂಗಳು ಅವಧಿ ತನಕ ಗರ್ಭ ಧರಿಸುವ ಕುದುರೆಗಳು ಮತ್ತು ೯ ರಿಂದ 10 ತಿಂಗಳವರೆಗೆ ಗರ್ಭಿಣಿಯಾಗಿರುವ ಹಸುಗಳು, ಒಂದು ಸಮಯದಲ್ಲಿ ಕೇವಲ ಒಂದು ಮರಿಗೆ ಜನ್ಮ ನೀಡುತ್ತವೆ. ತೀರಾ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅವಳಿ ಸಂಭವಿಸಬಹುದು.
ಹಾಲಿಗಾಗಿ ಸಾಕುವ ಜಾನುವಾರುಗಳಲ್ಲಿ ಅವಳಿಗಳ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವುದು ಆರ್ಥಿಕವಾಗಿ ಪ್ರಯೋಜನಕಾರಿ ಎಂದು ಪಶುವೈದ್ಯರು ಮತ್ತು ಸಾಕಣೆದಾರರು ಬಹಳ ಹಿಂದಿನಿಂದಲೂ ನಂಬಿದ್ದಾರೆ. ಒಂದೇ ಹಸು, ಒಂದೇ ಸಮಯದಲ್ಲಿ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದರೆ ಬಂಪರ್ ಲಾಟರಿ ಎಂದು ಭಾವಿಸುತ್ತಾರೆ. ಆದರೆ ಜಾನುವಾರುಗಳಲ್ಲಿ ಅವಳಿಗಳು ಕಡಿಮೆ ಗಾತ್ರದ ಹಸುಗಳಲ್ಲಿ ಜನನದ ತೊಡಕುಗಳನ್ನು ಉಂಟುಮಾಡಬಹುದು ಮತ್ತು ಅವುಗಳು ಕಡಿಮೆ ಬದುಕುಳಿಯುವಿಕೆಯ ಪ್ರಮಾಣ ಕಡಿಮೆ ಆಗಿರಬಹುದು. ಇದೇ ರೀತಿಯ ಅಪಾಯಗಳು ಕುದುರೆಗಳಲ್ಲಿ ಸಹ ಕಾಣುತ್ತದೆ. ಒಂದು ಕುದುರೆ ಗರ್ಭದಲ್ಲಿ ಅವಳಿಯಿದ್ದರೆ ಅದು ಗರ್ಭಾವಸ್ಥೆಯ ತೊಡಕುಗಳಿಗೆ ಕಾರಣವಾಗುತ್ತದೆ. ಇದರಿಂದ ಗರ್ಭ ಧರಿಸಿದ ಕುದುರೆಯ ಜೀವಕ್ಕೆ ತೊಡಕಾಗಬಹುದು.
ಹೆಚ್ಚಿನ ಪ್ರಾಣಿಗಳಲ್ಲಿ ಒಂದೇ ರೀತಿಯ ಅವಳಿಗಳು ಜನಿಸುವುದು ಬಹಳ ಅಪರೂಪ ಎಂದು ಜೀವಶಾಸ್ತ್ರಜ್ಞರು ನಂಬುತ್ತಾರೆ. ಬಹಳಷ್ಟು ಪ್ರಾಣಿಗಳಲ್ಲಿ ಒಡಹುಟ್ಟಿದ ಮರಿಗಳಲ್ಲಿ ತುಂಬ ಹೋಲಿಕೆ ಇರುತ್ತದೆ. ಇವುಗಳು ತಮ್ಮ ಎಲ್ಲಾ ಜೀನ್‌ಗಳನ್ನು ಹಂಚಿಕೊಳ್ಳುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ಸಂಶೋಧಕರು ಡಿಎನ್‌ಎ ಪರೀಕ್ಷೆಯನ್ನು ಮಾಡಬೇಕಾಗುತ್ತದೆ
ಒಂದೇ ರೀತಿಯ ಅವಳಿ ನಾಯಿಗಳ ಒಂದು ದಾಖಲಿತ ವರದಿಯನ್ನು ಡಿಎನ್ಎ ಪರೀಕ್ಷೆಯಿಂದ ದೃಢಪಡಿಸಲಾಗಿದೆ. ಆದರೆ ಫಲವತ್ತಾದ ಪ್ರಾಣಿಗಳ ಅಂಡಾಣುಗಳು ಎಷ್ಟು ಬಾರಿ ವಿಭಜನೆಗೊಂಡು ಒಂದೇ ರೀತಿಯ ಅವಳಿ ಪ್ರಾಣಿಗಳಾಗಿ ಬೆಳೆಯುತ್ತವೆ ಎಂಬ ಬಗ್ಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ.
ಪ್ರಾಣಿಗಳಲ್ಲಿ ಅವಳಿಗಳು ಜನಿಸಿದಾಗ ವಿಜ್ಞಾನಿಗಳಿಗೆ ಖಚಿತವಾಗಿರದ ಇನ್ನೂ ಬಹಳಷ್ಟು ಸಂತಿಗಳಿವೆ. ಡಿಎನ್ಎ ಪರೀಕ್ಷೆಯನ್ನು ಸಾಮಾನ್ಯವಾಗಿ ಪ್ರಾಣಿಗಳಲ್ಲಿ ನಡೆಸಲಾಗುವುದಿಲ್ಲವಾದ್ದರಿಂದ, ಒಂದೇ ರೀತಿಯ ಅವಳಿಗಳು ಎಷ್ಟು ಬಾರಿ ಜನಿಸುತ್ತವೆ ಎಂಬುದು ತಿಳಿದಿಲ್ಲ. ಇಷ್ಟಿದ್ದರೂ ಸಹ ಒಂದೇ ರೀತಿಯ ಅವಳಿಗಳು ಕೆಲವು ಪ್ರಾಣಿ ಜಾತಿಗಳಲ್ಲಿ ಜನಿಸಿರಬಹುದು. ಆದರೆ ಇದರಲ್ಲಿ ಖಚಿತತೆಯಿಲ್ಲ !