ಹಸಿರು ಮೇವಿನ ದಿಗ್ಗಜ

0
Vithura Farm

ಭಾಗ – 1

ಜಾನುವಾರುಗಳನ್ನು ಸಾಕಾಣೆ ಮಾಡಿದವರು ಅವುಗಳ ಸಂಖ್ಯೆಗೆ ತಕ್ಕ ಹಸಿರುಹುಲ್ಲು ಬೆಳೆಸುವುದು ಅತ್ಯಗತ್ಯ, ಇದರಿಂದ ಅವುಗಳ ಮೇವು ಪೂರೈಕೆಗೆ ಮಾಡುವ ಖರ್ಚಿನಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗುತ್ತದೆ. ಅತ್ಯಧಿಕ ಇಳುವರಿ ನೀಡುವ ಹುಲ್ಲಿನ ಸಾಕಷ್ಟು ತಳಿಗಳು ಲಭ್ಯವಿವೆ, ಇವುಗಳಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆಯಲು ಅನುಕೂಲವಿರುವ ತಳಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನೀವು ರಾಸುಗಳನ್ನು ಇನ್ನೂ ಪುಷ್ಟಿಯುತವಾಗಿ ಸಾಕಬಹುದು. ಏಕದಳ ಮತ್ತು ದ್ವಿದಳ ತಳಿಗಳ ಹುಲ್ಲನ್ನು ರಾಸುಗಳು ಬಹಳ ಇಷ್ಟಪಟ್ಟು ಮೇಯುತ್ತವೆ. ಇದರಿಂದ ಮಾರುಕಟ್ಟೆಯಿಂದ ಖರೀದಿಸಿ ತರಬೇಕಾದ ಪಶು ಆಹಾರದ ಪ್ರಮಾಣವೂ ಇಳಿಮುಖವಾಗಿರುತ್ತದೆ.
ಹಸಿರು ಮೇವಿನ ಬೆಳೆಗಳಲ್ಲಿ ಮುಖ್ಯವಾಗಿ ಎರಡು ವಿಧ. ಒಂದನೇಯದು ಏಕದಳ, ಎರಡನೆಯದು ದ್ವಿದಳ, ಇದಲ್ಲದೇ ಮೇವಿನ ಮರಗಳು ಮತ್ತು ಹುಲ್ಲುಗಾವಲಿಗೆ ಬೆಳೆಗಳಿವೆ. ಏಕದಳ ಬೆಳೆಯಲ್ಲಿ ವಾರ್ಷಿಕ ಏಕದಳ ಬೆಳ, ಬಹುವಾರ್ಷಿಕ ಏಕದಳ ಬೆಳೆ ಅದೇ ರೀತಿ ದ್ವಿದಳದಲ್ಲಿ ವಾರ್ಷಿಕ ದ್ವಿದಳ ಬೆಳೆ ಮತ್ತು ಬಹುವಾರ್ಷಿಕ ದ್ವಿದಳ ಬೆಳೆಗಳಿವೆ. ಇವುಗಳ ವೈಶಿಷ್ಠತೆ ಎಂದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಬೆಳೆಯುವಂಥ ತಳಿಗಳಾಗಿರುವುದು.
ವಾರ್ಷಿಕ ಏಕದಳ ಬೆಳೆಯಲ್ಲಿ ಜೋಳ, ಮುಸುಕಿನ ಜೋಳ, ರಾಗಿ, ಸಜ್ಜೆ, ಬಹು ವಾರ್ಷಿಕ ಏಕದಳ ಬೆಳೆಯಲ್ಲಿ ಹೈಬ್ರಿಡ್ ನೇಪಿಯರ್, ಎನ್ ಬಿ-31. ಕೋ-1, ಕೋ-2. ಕೋ ೩, ಬಿಎಚ್-9, ಬಿಎಚ್-18. ಥಿನ್ ನೇಪಿಯರ್, ಜೆಯಿಂಟ್ ನೇಪಿಯರ್, ಗಿನಿ , ರೋಡ್ಸ್, ಚೌಗು ಪ್ರದೇಶದಲ್ಲಿ ಬೆಳೆಯಬಹುದಾದ ಪ್ಯಾರಾತಳಿಗಳಿವೆ.

ಗರಿಷ್ಠ ಹಾಲು ಉತ್ಪಾದನೆಗಾಗಿ ಹೈನು ರಾಸುಗಳಿಗೆ ಆತ್ಯಂತ ಪ್ರಿಯವಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಬೆಳೆದು ಅದರ ಮೇವು ನೀಡಬಹುದು. ನೀರಾವರಿ ಅನುಕೂಲವಿದ್ದಲ್ಲಿ ವರ್ಷದ ಎಲ್ಲ ಹಂತಗಳಲ್ಲಿಯೂ ಇದನ್ನು ಬೆಳೆಯಬಹುದು. ಈ ಜೋಳ ಅಧಿಕ ಪ್ರಮಾಣದಲ್ಲಿ ಕಚ್ಚಾ ಸಾರಜನಕ ಹೊಂದಿದೆ. ಈ ಎಲ್ಲ ಕಾರಣಗಳಿಂದ ಈ ಮೇವನ್ನು ‘ಹಸಿರು ಮೇವಿನ ದಿಗ್ಗಜ’ ಎಂದು ಕರೆಯಲಾಗುತ್ತದೆ. ಇದನ್ನು ಮತ್ತು ವೆಲ್ವೇಟ್ ಬೀನ್ಸ್ ಅನ್ನು ಒಟ್ಟಿಗೆ ಬೆಳೆದಾಗ ಹೆಚ್ಚು ಇಳುವರಿ ನಿರೀಕ್ಷಿಸಬಹುದು. ಇದಲ್ಲದೇ ಇವೆರಡರ ಸೂಕ್ತ ಸಂಮಿಶ್ರಣದ ಮೇವು ಸೇವಿಸಿದ ಹೈನುರಾಸುಗಳು: ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸುತ್ತವೆ.
ಮುಂದುವರಿಯುತ್ತದೆ

LEAVE A REPLY

Please enter your comment!
Please enter your name here