ಗಂಜಲ ಬಳಸಿ – ಭೂಸಾರ ಉಳಿಸಿ

0
ಲೇಖಕರು: ಮಂಜುನಾಥ ಹೊಳಲು

ಆರ್ಯುವೇದ ಚಿಕೆತ್ಸೆಯಲ್ಲಿ 40ಕ್ಕೂ ಹೆಚ್ಚು ಔಷಧಗಳಲ್ಲಿ ಬಳಕೆಯಾಗುತ್ತಿರುವ ಗಂಜಲ ವೈಜ್ಞಾನಿಕ ಮಹತ್ವವುಳ್ಳ ಅಮೂಲ್ಯ ನೈಸರ್ಗಿಕ ಸಂಪನ್ಮೂಲ. ಗಂಜಲದ ಹಕ್ಕು ಸ್ವಾಮ್ಯತೆಗೆ (ಪೇಟೆಂಟ್) ಅಮೇರಿಕಾ ದೇಶ ವಿಶ್ವಮಟ್ಟದಲ್ಲಿ ಹೋರಾಟವನ್ನು ನಡೆಸಿದರೂ ಅದರ ಪೇಟೆಂಟ್ ಪಡೆಯಲು ವಿಫಲವಾದದ್ದು ಎಲ್ಲರಿಗೂ ತಿಳಿದ ವಿಚಾರ. ಮಣ್ಣು ಹಾಗು ಮಾನವನ ಆರೋಗ್ಯ ಕಾಪಾಡುವ ಗಂಜಲದ ಬಳಕೆ ಸರಿಯಾಗಿ ಆಗಬೇಕು. ಸುರಕ್ಷಿತ ಆಹಾರಕ್ಕಾಗಿ ಗಂಜಲ ಮಹತ್ವದ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ.

ಕೃಷಿಯಲ್ಲಿ ಗಂಜಲದ ಬಳಕೆ ಹೊಸದಲ್ಲ ಹಾಗು ಇದು ಕೇವಲ ಭಾರತದಲ್ಲಿ ಮಾತ್ರ ಉಪಯೋಗಿಸದೇ ನಮ್ಮ ಪಕ್ಕದ ದೇಶವಾದ ಬರ್ಮಾ ಹಾಗು ಆಫ್ರಿಕಾ ಖಂಡದ ದೇಶವಾದ ನೈಜೀರಿಯಾದಲ್ಲಿ ಸಹ ಪರಂಪರೆ ಚಿಕಿತ್ಸೆಯಲ್ಲಿ ಬಳಕೆಯಲ್ಲಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಗಂಜಲವನ್ನು ನಮ್ಮ ರೈತ ಸಮುದಾಯ ಪ್ರತಿ ನಿತ್ಯ ಚರಂಡಿಗೆ ಚಲ್ಲುತ್ತಿರುವುದು ವಿಷಾದನೀಯ. ದೇಸೀ ಹಸುವಿನ ಗಂಜಲಕ್ಕೆ ಸಿಮೀತವಾಗದೇ; ಎಲ್ಲಾ ಬಗೆಯ ಜಾನುವಾರುಗಳ ಗಂಜಲದ ಬಳಕೆ ಅನಿವಾರ್ಯ. ದೇಸೀ ಹಸುವಿನ ಗಂಜಲ ಬಹಳ ಒಳ್ಳೆಯದು, ಇದ್ದರೆ ಖಂಡಿತ ಬಳಸಿ. ಸಾಕಲು ಮತ್ತು ಖರೀದಿಸಲು ಶಕ್ತರಾದವರು ದೇಸೀ ಹಸುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಿ. ಇಲ್ಲವಾದರೆ ಇತರೆ ರಾಸುಗಳನ್ನು ಸಾಕಿ ಹಾಗು ಅವುಗಳಿಂದ ಗಂಜಲವನ್ನು ಸಂಗ್ರಹಿಸಿ.

ರಾಸು (ಗೋ ಮಾತ್ರ ಅಲ್ಲ) ಆಧಾರಿತ ಕೃಷಿ ಅಧಿಕ ಆಗಬೇಕು, ಇದರಿಂದ ಸುಸ್ಥರ ಇಳುವರಿ ಕಾಣಲು ಸಾಧ್ಯ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ ಹಾಗು ಈ ನಿಟ್ಟಿನಲ್ಲಿ ಅನೇಕ ರೈತರ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. 25 ಎಕರೆಗೆ ಬೇಕಾಗುವಷ್ಟು ಪೋಷಕಾಂಶವನ್ನು ಕೇವಲ ಒಂದು ಹಸುವಿನಿಂದ ಪಡೆಯಬಹುದು ಎಂದು ಸುಭಾಸ್ ಪಾಳೆಕಾರ್ ಅತಿಶೋಯೋಕ್ತಿ ಹೇಳಿದರು ಆದರೆ ಗಂಜಲದ ಮಹತ್ವವನ್ನು ಕಡೆಗಣಿಸಬಾರದು.

ಅಧಿಕ ಆಹಾರ ಉತ್ಪಾದನೆ ಹೆಸರಲ್ಲಿ ಹಸಿರುಕ್ರಾಂತಿ ಯೋಜನೆ ಅನುಷ್ಟಾನಕ್ಕೆ ತಂದರು. ಇದರಿಂದಾಗಿ ಕೃತಕ ರಾಸಾಯನಿಕ ಗೊಬ್ಬರಗಳ ಬಳಕೆ ಅಧಿಕವಾಗಿ ಮಣ್ಣಿನ ಆರೋಗ್ಯ ಹದಗೆಟ್ಟಿತು. ಇದರಿಂದಾಗಿ ನೀರು ಹಾಗು ಆಹಾರ ವಿಷವಾಯಿತು. ಕೃಷಿಯ ಖರ್ಚು ಅಧಿಕಗೊಂಡು ಲಾಭ, ಮರೀಚಿಕೆ ಆಯ್ತು. ಸುಸ್ಥಿರ ಹಾಗು ಸ್ವಸ್ಥ ಸಮಾಜಕ್ಕಾಗಿ ಪರಂಪರೆ ಸಾರುವ ದೇಸೀ ಕೃಷಿ ಪದ್ಧತಿಗಳು ಕಣ್ಮರೆ ಆದವು. ಕೃಷಿ ರೈತ ಕೇಂದ್ರಿತ ಆಗಿತ್ತು; ಬದಲಾಗಿ ಹಸಿರುಕ್ರಾಂತಿ ಯೋಜನೆಯಿಂದ ಬೀಜ-ಗೊಬ್ಬರ ಕಂಪನಿ ಕೇಂದ್ರದತ್ತ ಸಾಗಿತು.

ನಮ್ಮ ರೈತ ಸಮುದಾಯ ಗಂಜಲವನ್ನು ಬೇಡವಾದ ವಸ್ತು ಎಂದು ಪರಿಗಣಿಸಿದ್ದಾರೆ. ಗಂಜಲದಲ್ಲಿ ದೊಡ್ಡ ಪ್ರಮಾಣದ ಯೂರಿಕ್ ಆಮ್ಲ ಇದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೃತಕ ಯೂರಿಯಾ ಗೊಬ್ಬರ ಬಳಸುವುದಕ್ಕಿಂತ ನಮ್ಮಲ್ಲೇ ಸಿಗುವ ಗಂಜಲ ಬಳಸುವುದು ಅತಿ ಸೂಕ್ತ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕುರಿ ಮಂದೆಗಳನ್ನು ಹೊಲದಲ್ಲಿ ನಿಲ್ಲಿಸಿಕೊಂಡಿರಿರುತ್ತಾರೆ. ಆದರೆ ಮನೆಯಲ್ಲಿ ಸಿಗುವ ಗಂಜಲವನ್ನು ಚರಂಡಿ ಪಾಲು ಮಾಡುತ್ತಾರೆ. ಪಂಚಗವ್ಯ, ಬೀಜಾಮೃತ, ಜೀವಾಮೃತ, ತ್ರಿಮೂರ್ತಿ ಟಾನಿಕ್ ಹಾಗು ಪೂಂಚಿಮರಂದು ತಯಾರಿಕೆಯಲ್ಲಿ ಗಂಜಲ ಒಂದು ಪ್ರಮುಖ ಅಂಶ ಆಗಿದೆ. ಸಾವಯವ ಕೃಷಿಯಲ್ಲಿ ಜೀವಾಮೃತ ಹಾಗು ಪಂಚಗವ್ಯದ ಬಳಕೆ ಹೆಚ್ಚಾಗಿದೆ. ಗಂಜಲ ಕೇವಲ ಕೃಷಿಗೆ ಸೀಮಿತ ಆಗದೇ ಮಾನವರ ಆರೋಗ್ಯ ಕಾಪಾಡುವಲ್ಲಿ ಅತಿ ಮುಖ್ಯವಾಗಿದೆ. ಅದರಲ್ಲಿ ಮುಖ್ಯವಾಗಿ ಗಂಜಲದ (ಹಸುವಿನ ಗಂಜಲ) ‘ಆರ್ಕ’ವನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಲ್ಲಿದೆ.

ಗಂಜಲದಲ್ಲಿರುವ ಪೋಷಕಾಂಶ ಹಾಗು ಔಷಧಿ ಗುಣಗಳು

ಗಂಜಲದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಜೀವಚೈತನ್ಯ ನೀಡುವ ಕಿಣ್ವಗಳು ಹಾಗು ಜೀವಸತ್ವಗಳು ಇವೆ. ಗಂಜಲದಲ್ಲಿ ಶೇಕಡ 95ರಷ್ಟು ನೀರು, ಶೇಕಡ 2.5ರಷ್ಟು ಯೂರಿಯಾ ಹಾಗು ಇನ್ನುಳಿದ ಶೇಕಡ 2.5ರಷ್ಟು ಸತ್ವ, ಕಿಣ್ವ, ಉಪ್ಪು ಹಾಗು ಖನಿಜಗಳು ಇವೆ. ಗಂಜಲದಲ್ಲಿ ಸಾರಜನಕದ ಅಂಶ ಪ್ರತಿ ಲೀಟರ್ ಗಂಜಲದಲ್ಲಿ 6.8–21.6 ಗ್ರಾಂ ಇದೆ.

ಗಂಜಲ ಒಂದು ಪರಿಪೂರ್ಣವಾದ ಪೋಷಕಾಂಶ ಆಗಿದೆ. ನಿಯಮಿತವಾಗಿ ಗಂಜಲವನ್ನು ಬೆಳೆಗಳಿಗೆ ಬಳಸಿದರೆ ಖರ್ಚು ಕಡಿಮೆಯೊಂದಿಗೆ, ಅಧಿಕ ಇಳುವರಿ ಪಡೆಯಬಹುದು. ಆಧುನಿಕ ಕೃಷಿ ವ್ಯವಸ್ಥೆ ಅಡಿಯಲ್ಲಿ ಗಂಜಲದ ಮಹತ್ವವನ್ನು ಸಂಪೂರ್ಣವಾಗಿ ತಿರಸ್ಕಾರಗೊಂಡಿದೆ. ಆಧುನಿಕ ಕೃಷಿ ಉತ್ಪನ್ನಗಳಾದ ರಾಸಾಯನಿಕ ಗೊಬ್ಬರಗಳು, ಪೀಡೆನಾಶಕಗಳು ಹಾಗು ಕಳೆನಾಶಕಗಳು ಲಗ್ಗೆ ಇಟ್ಟವು. ಗಂಜಲ ಕೇವಲ ಪೋಷಕಾಂಶ ಅಲ್ಲ; ಬದಲಾಗಿ ಶೀಲಿಂದ್ರನಾಶಕ ಹಾಗು ಕಳೆನಾಶಕವಾಗಿ ಕೆಲಸಮಾಡುತ್ತದೆ. ಹಳ್ಳಿಗಳಲ್ಲಿ ಮನೆ ಅಕ್ಕ-ಪಕ್ಕದಲ್ಲಿ ಬೆಳೆದ ನಾಚಿಕೆಮುಳ್ಳು ನಿಯಂತ್ರಿಸಲು ಗಂಜಲವನ್ನು ಬಳಸುತಿದ್ದರು

ಜ್ವರ ಗುಣಪಡಿಸಲು ಗಂಜಲದೊಂದಿಗೆ ಕಾಳುಮೆಣಸು, ಮೊಸರು ಹಾಗು ತುಪ್ಪ ಬೆರೆಸಿ ಕೊಡುತ್ತಾರೆ. ರಕ್ತಹೀನತೆ ಹೋಗಲಾಡಿಸಲು ಗಂಜಲ, ತ್ರಿಫಲ ಚೂರ್ಣ ಹಾಗು ಹಸುವಿನ ಹಾಲುನೊಂದಿಗೆ ಮಿಶ್ರಣ ಮಾಡಿ ಕೊಡುತ್ತಾರೆ. ಕುಷ್ಠರೋಗ ತಡೆಗಟ್ಟಲು ಗಂಜಲ, ವಾಸಕ ಎಲೆ ಹಾಗು ಕುರೇಲ್ಲಾ ಚಕ್ಕೆದೊಂದಿಗೆ ಬೆರೆಸಿ ಕೊಡುತ್ತಾರೆ.

ರೈತರ ಅನುಭವದ ಮಾತುಗಳು…

ಎತ್ತಿನ ಗಂಜಲದಿಂದ ಜೋಳಕ್ಕೆ ಬರುವ ಕಾಡಿಗೆ ರೋಗವನ್ನು ನಿಯಂತ್ರಣ ಮಾಡಬಹುದು. ಜೋಳದ ಕಾಳಿಗೆ ಕಾಡಿಗೆ ತಾಗಿದರೆ ತಿನ್ನಲಿಕ್ಕೆ ಬರುವುದಿಲ್ಲ. ಬಿತ್ತನೆ ಬೀಜಗಳನ್ನು ಎತ್ತಿನ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೆ ನೆರಳಲ್ಲಿ ಒಣಗಿಸಬೇಕು. ಆನಂತರ ಆ ಬೀಜಗಳನ್ನು ಬಿತ್ತಿಬೇಕು ಎಂದು ನವಲಗುಂದದ ರೈತ ಭೀಮರೆಡ್ಡಿ ಅನುಭವದ ಮಾತು.

ಗಂಜಲದೊಂದಿಗೆ ಸಗಣಿ ಮಿಶ್ರಣ ಮಾಡಿ ಹತ್ತಿ ಎಲೆಗೆ ಸಿಂಪರಣೆ ಮಾಡಿದರೆ ಸಂಪೂರ್ಣವಾಗಿ ಹತ್ತಿ ಎಲೆ ಸುರಳಿಪೂಚಿ ರೋಗವನ್ನು ನಿಯಂತ್ರಿಸಬಹುದು ಎಂದು ಶಿಗ್ಗಾಂವನ ಕಂಕಣವಾಡ ಗ್ರಾಮದ ಸಿ.ಡಿ ಪಾಟೀಲ್ ಹೇಳುತ್ತಾರೆ.

ಗೋಧಿ ಹೊಲದಲ್ಲಿ ಕಾಡುವ ಗೆದ್ದಲಿನ ಕಾಟಕ್ಕೆ ಕತ್ತೆಯ ಗಂಜಲ ಉತ್ತಮ. ಗೋಧಿ ಬಿತ್ತನೆ ಬೀಜಗಳನ್ನು ಬಿತ್ತನೆಗೆ ಮೊದಲು ಕತ್ತೆಯ ಗಂಜಲನಲ್ಲಿ ನೆನಸಬೇಕು. ಬಿತ್ತನೆ ಬೀಜಗಳನ್ನು ಕತ್ತೆ ಗಂಜಲದಲ್ಲಿ ಎರಡು ನಿಮಿಷ ನೆನೆಸಿ ಕೂಡಲೆ ನೆರಳಲ್ಲಿ ಒಣಗಿಸಬೇಕು. ಆನಂತರ ಆ ಬೀಜಗಳನ್ನು ಬಿತ್ತಿಬೇಕು ಎಂದು ಗುಜರಾತಿನ ಸಬರಕಾಂತ ಜಿಲ್ಲೆಯ ಚದರಾನಿ ಗ್ರಾಮದ ಧನಬಾಯಿ ಕೀಮಾಭಾಯಿ ಅನುಭವದ ಮಾತು.

ಯಾವುದೇ ಬೀಜವನ್ನು ಎಮ್ಮೆಯ ಗಂಜಳದಲ್ಲಿ ಎರಡು ನಿಮಿಷ ನೆನೆಯಿಸಿ ಕೂಡಲೆ ನೆರಳಲ್ಲಿ ಒಣಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜವನ್ನು ಬಿತ್ತಿದರೆ ಅದು ಶಕ್ತಿಭರಿತವಾಗಿ ಬೇಗನೆ ಮೊಳಕೆ ಬರುವುದು.

ಉತ್ತರಖಂಡ ರಾಜ್ಯದಲ್ಲಿ ಕೆಲ ವಿಜ್ಞಾನಿಗಳು ಸಂಶೋಧನೆಯಲ್ಲಿ ಅಚ್ಚರಿ ವಿಷಯವನ್ನು ಕಂಡುಕೊಂಡಿದ್ದಾರೆ. ಗಂಜಲ ಮೂಲಕ ಜೇನುಹುಳು ಗೂಡು ಹಾನಿ ಮಾಡುವ ‘ಯುರೋಪಿನ್ ಬ್ರೂಡ್’ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಹೇಳಿದ್ದಾರೆ.

ಹಲವಾರು ರೀತಿಯ ಪೋಷಕಾಂಶಗಳು ಗಂಜಲದಲ್ಲಿವೆ. ಗಂಜಲವನ್ನು ಗೊಬ್ಬರವಾಗಿ, ಬೆಳೆ ಪ್ರಚೋದಕವಾಗಿ, ಪೀಡೆನಾಶಕವಾಗಿ, ಶಿಲೀಂದ್ರನಾಶಕವಾಗಿ, ಔಷಧವಾಗಿ, ನೆಲ ತೊಳೆಯಲು ಹೀಗೆ ಹಲವಾರು ರೀತಿಯಲ್ಲಿ ಉಪಯೋಗಿಸುತ್ತಾರೆ.

LEAVE A REPLY

Please enter your comment!
Please enter your name here