ಉದ್ಯೋಗ ಖಾತ್ರಿ ಯೋಜನೆ; ಕೃಷಿಭೂಮಿ ಮೇಲ್ಮಣ್ಣು, ನೀರು ಸಂರಕ್ಷಣೆ

0
ಲೇಖಕರು: ಮಂಜುನಾಥ್ ಜಿ.

ರೈತರ ಕೃಷಿ ಜಮೀನುಗಳು ತಮ್ಮ ಫಲವತ್ತತೆಯನ್ನು ಹಲವಾರು ಕಾರಣಗಳಿಗಾಗಿ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿಯ ಚಟುವಟಿಕೆಗಳು ಹೇಗಿದ್ದವು ಎನ್ನುವುದರ ಕುರಿತು ಪರಿಶೀಲಿಸಿದಾಗ ಗಮನಾರ್ಹ ಸಂಗತಿಗಳು ತಿಳಿಯುತ್ತವೆ.  ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ ಯುಗಾದಿಯ ಹಿಂದೆ ಮುಂದೆ ಮಳೆಗಾಲದಲ್ಲಿ ಕೃಷಿ ಭೂಮಿಯ ಮೇಲೆ ಬಿದ್ದು ಹರಿದು ಹೋದ ಮಳೆನೀರು ಫಲವತ್ತಾದ ಮಣ್ಣನ್ನು ಕೆರೆಗೆ ಒಯ್ದಿರುತ್ತದೆ,

ಬರೀ ಮಣ್ಣನ್ನು ಮಾತ್ರವಲ್ಲದೇ ಎಲೆ- ಸೊಪ್ಪು ಮುಂತಾದ ಪೋಷಕಾಂಶಗಳನ್ನೂ ಒಯ್ದು ಹಾಕಿರುತ್ತದೆ. ಹಾಗಾಗಿ ಎತ್ತಿನ ಬಂಡಿಗಳಲ್ಲಿ ಫಲವತ್ತಾದ ಕೆರೆ ಹೂಳನ್ನು ತಂದು ವಾಪಾಸ್‌ ಜಮೀನಿಗೆ ಹಾಕಿಕೊಳ್ಳುತ್ತಿದ್ದರು. ಇದರಿಂದಾಗಿ ಕೃಷಿಭೂಮಿಗೆ ಫಲವತ್ತಾದ ಗೋಡು ಮಣ್ಣು ದೊರೆಯುತ್ತಿತ್ತು. ಜೊತೆಗೆ ಕೆರೆಯಲ್ಲಿ ಅನವಶ್ಯಕವಾಗಿ ತುಂಬುವ  ಹೂಳು ಪ್ರಮಾಣವೂ ಕಡಿಮೆಯಾಗುತ್ತಿತ್ತು.

ಬೇಸಿಗೆ ಉಳುಮೆ ಮಾಡಿ ತಿಪ್ಪೆಗೊಬ್ಬರವನ್ನು ಹಾಕಿ ಮುಂಗಾರಿಗೆ ಜಮೀನು ಹದ ಮಾಡುತ್ತಿದ್ದರು.  ರಾಸಾಯನಿಕಗಳ ಉಪಯೋಗವೂ ಇಲ್ಲದೇ ಕೃಷಿ ಭೂಮಿ ತಂಪಾಗಿರುತ್ತಿತ್ತು. ಆದರೆ ಕಾಲಕ್ರಮೇಣವಾಗಿ ತಿಪ್ಪೆಗೊಬ್ಬರ ಇಲ್ಲದೇ  ರಾಸಾಯನಿಕಗಳ ಅತಿಯಾದ ಬಳಕೆ, ಬೆಳೆ ವೈವಿದ್ಯತೆಯಿಲ್ಲದ ಏಕ ಬೆಳೆ, ಮಳೆನೀರು ಬಂದರೂ ಒಡ್ಡುಗಳನ್ನು ಹಾಕುವುದನ್ನು ಬಿಟ್ಟ ಪರಿಣಾಮ ಜೋರಾಗಿ ಮಳೆ ಬಂದಾಗ ನೀರಿನ ಜೊತೆಗೆ ಕೃಷಿಗೆ ಅಗತ್ಯವಾದ ಮೇಲ್ಮಣ್ಣು ಕೊಚ್ಚಿ ಹೋಗಲು ಪ್ರಾರಂಭವಾಯತು.

ಭಾರತದಲ್ಲಿ 2010ರಲ್ಲೇ ಸುಮಾರು 5334 ಮಿಲಿಯನ್‌ ಟನ್‌ಗಳಷ್ಟು ಮೇಲ್ಮಣ್ಣು ಕೊಚ್ಚಿ ಹೋಗುತ್ತಿತ್ತು, ಇನ್ನು ಇತ್ತೀಚಿನ ವರದಿಯಂತೆ 2023 ನೋಡಿದರೆ ಬರೀ ಕರ್ನಾಟಕ ರಾಜ್ಯದಲ್ಲಿ ಶೇ 36.29ರಷ್ಟು ಅಂದ್ರೇ (69.6 ಲಕ್ಷ ಹೆಕ್ಟೇರ್) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶವಾಗಿದೆ. ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ.. ಕಳೆದ ಎರಡು ಮೂರು ದಶಕದಿಂದ ಅವೈಜ್ಞಾನಿಕ ವಿಧಾನದ ಕೃಷಿಯಿಂದಾಗಿ ಮಣ್ಣಿನ ಫಲವತ್ತತೆ ನಿರಂತರವಾಗಿ ಕುಸಿಯುತ್ತಿದೆ. ಕೃಷಿ ಉತ್ಪಾದನೆಯ ದೃಷ್ಟಿಯಲ್ಲಿ ಇದು ಆತಂಕಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹೀಗಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸುವತ್ತ ಸರ್ಕಾರವೂ ಸಂಘ ಸಂಸ್ಥೆಗಳು ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿವೆ. ಇದರ ಬಾಗವಾಗಿ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಉದ್ಯೋಗ ಕೊಡಲು ಪ್ರತೀ ಕುಟುಂಬಕ್ಕೆ೧೦೦ ದಿನಗಳ ಕೆಲಸವನ್ನು ಖಾತ್ರಿ ಗೊಳಿಸುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ/ ಕಾಯ್ದೆ (MGNREGA) ಬಳಕೆಯಾಗುತ್ತಿದೆ. ಈ  ಯೋಜನೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಸಿ ಜಾರಿಗೊಳಿಸಲಾಗಿದೆ.

ಇಂತಹ ಒಂದು ಕಾರ್ಯಕ್ರಮವನ್ನು ಬಳಸಿಕೊಂಡು ರಾಯಚೂರಿನ ಸವಳು ಸಮಸ್ಯೆಗೆ ಒಳಗಾದ ರೈತರ ಮಾಲಿಕತ್ವದ ಕೃಷಿಭೂಮಿಯ ಫಲವತ್ತತೆ ಹೆಚ್ಚಳ ಮಾಡುವ ಉದ್ದೇಶದಿಂದ ಪ್ರಾರಂಭ ಸಂಸ್ಥೆ. ವೆಲ್‌ ಲ್ಯಾಬ್ಸ್‌, ಸಾಯಿಲ್‌ ಸಂಸ್ಥೆಗಳು  ರಾಯಚೂರಿನ ದೇವದುರ್ಗ ತಾಲ್ಲೂಕಿನಲ್ಲಿ ರೈತರ ಜೊತೆಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮಣ್ಣು, ನೀರಿನ ಸಂರಕ್ಷಣೆ, ಜಮೀನು ಅಭಿವೃದ್ಧಿ, ಬೆಳೆ ವೈವಿಧ್ಯತೆ ತಂತ್ರಗಳನ್ನು ಬಳಸಿಕೊಂಡು ಭೂಮಿಯ ಉತ್ಪಾದನಾ ಶಕ್ತಿ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ಕಳೆದ ಒಂದು ವರ್ಷದಿಂದ ಮಾಡಲಾಗುತ್ತಿದೆ.

ಕಾರ್ಯಾಚರಣೆ ವಿಧಾನ:

  1. ತಮ್ಮದೇ ಜಮೀನುಗಳಲ್ಲಿ ದುಡಿಯಲು ಶಕ್ತಿ ಮತ್ತು ಉತ್ಸಾಹ ಆಸಕ್ತಿಯಿರುವ ಜನರ ಗುಂಪು ಮಾಡುವುದು.
  2. ಫಲವತ್ತತೆ ಕಳೆದುಕೊಂಡ ಕೃಷಿ ಭೂಮಿಗೆ ಸಾವಯವ ಇಂಗಾಲ ಅಧಿಕವಾಗಿರುವ ವಸ್ತುಗಳನ್ನು ಸೇರಿಸುವಿಕೆ. ಬೆಳೆಯುಳಿಕೆಗಳನ್ನು ಸುಡದೇ ಮತ್ತೆ ಅವನ್ನೇ ಸಾವಯವ ಇಂಗಾಲ ಮತ್ತು ಪೋಷಕಾಂಶಗಳನ್ನಾಗಿ ಪರಿವರ್ತಿಸುವ ಕಾಂಪೋಸ್ಟ್‌ ಆಗಿ ಪರಿವರ್ತನೆ ಮಾಡುವುದು. ಹೀಗೆ ಹಂತಹಂತವಾಗಿ ಬೆಳೆ ಯೋಜನೆ ರೂಪಿಸುವ ಕೆಲಸ ಆಗಬೇಕಿದೆ

ಕಂದಕ ಬದು ನಿರ್ಮಾಣ

ಮೊದಲಿಗೆ ಕೃಷಿ ಮಾಡುವ ಜಮೀನುಗಳಲ್ಲಿ ಬದುಗಳು ತುಂಬಾ ಮುಖ್ಯ ಹಾಗಾಗಿಯೇ ಮೊದಲೆಲ್ಲಾ ಮಳೆಗಾಲ ಶುರುವಾಗುವ ಮುಂಚೆಯೇ ಬದುಗಳನ್ನು ಮಣ್ಣು ಏರಿಸಿ ಭದ್ರ ಮಾಡಿಕೊಳ್ಳುತ್ತಿದ್ದರು ಇದಕ್ಕೆ  ಮಹತ್ವ ಕೊಡುತ್ತಿದ್ದರು ಇಲ್ಲವಾದಲ್ಲಿ ಕೆಲವು ಸಲ ಜೋರಾಗಿ ಬರುವ ಮಳೆ ಕೃಷಿ ಮೂಲವಾದ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಇದರಿಂದಾಗಿ ಕೃಷಿಭೂಮಿಯ ಫಲವತ್ತತೆ ಹಂತಹಂತವಾಗಿ ಕಡಿಮೆಯಾಗುತ್ತದೆ.

ಮಣ್ಣು ಕೊಚ್ಚಣೆ ತಡೆಯುವ ಸಲುವಾಗಿ ನಾಲ್ಕು ದಿಕ್ಕಿನಲ್ಲಿ ಮಣ್ಣು ಏರಿಸುವುದನ್ನೇ ಬದು ನಿರ್ಮಾಣ ಎನ್ನುತ್ತೇವೆ. ಆದರೆ ಈ ಕಂದಕ ಬದು ಅಂದರೆ ಕೊರೊನಾ ಕಾಲದಲ್ಲಿ ಜನರಿಗೆ ಕೂಲಿ ಕೊಡಿಸುವ ಗ್ರಾಮೀಣ ಕೂಲಿ ಕಾರ್ಮಿಕ ಯೋಜನೆ ನೆರವಿಗೆ ಬಂತು.

ಪ್ರಾರಂಭ ಸಂಸ್ಥೆಯು ಪಿಲಿಗುಂಡ ಗ್ರಾಮದಲ್ಲಿನ ತಮ್ಮ ಮೂರು ಎಕರೇ ಜಮೀನಿನಲ್ಲಿ ಈ ಕಂದಕ ಬದು ನಿರ್ಮಾಣ ಮಾಡಿದರು. ಇದರಿಂದಾಗಿ ಮೂರ್ನಾಲ್ಕು ವರ್ಷದಲ್ಲಿ ಮೇಲ್ಮಣ್ಣು ಇಲ್ಲದೇ ಬಂಜರಾಗಿ ಕಾಣುತ್ತಿದ್ದ ಭೂಮಿ ಫಲವತ್ತತೆ ಪಡೆಯಲು ಸಾಧ್ಯವಾಯಿತು. ಇದರ ಅನುಭವದಲ್ಲೇ ಕೊರೊನಾ ಕಾಲದಲ್ಲಿ ಕೃಷಿ ಕಾರ್ಮಿಕರಿಗೆ ಕೆಲಸ ಸಿಗದೇ ತೊಂದರೆಯಾದಾಗ ಅವರ ಜಾಬ್‌ ಕಾರ್ಡ್‌ಗಳಲ್ಲಿ ಉಳಿದಿದ್ದ ಮಾನವ ದಿನಗಳ ಬಳಕೆ ಮಾಡಲು ಸಾಧ್ಯವಾಯಿತು. ಸಾಮುದಾಯಿಕ ಸ್ಥಳಗಳಾದ ಗುಡ್ಡ, ಗೋಮಾಳ ಗಾಯರಾಣಿ ಇಲ್ಲೆಲ್ಲಾ ಇಳಿಜಾರಿಗೆ ಅಡ್ಡಲಾಗಿ ಕಂಟೂರ್‌ ಮಾದರಿಯ ಬದುಗಳನ್ನು ನಿರ್ಮಾಣ ಮಾಡಲಾಯಿತು, ಇದರ ನೇರ ಪ್ರಯೋಜನ ಅದೇ ವರ್ಷದ ಮಳೆಗಾಲ ಕಳೆದಾಗ ನಮ್ಮ ಅರಿವಿಗೆ ಬಂತು.

ಕಂದಕ ಬದುಗಳ ಪ್ರಯೋಜನವನ್ನು ನಾವು ಕಂಡುಕೊಂಡ ಮೇಲೆ ಜಿಲ್ಲಾ ಸಭೆಯಲ್ಲಿ ಇದನ್ನು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಮನಕ್ಕೆ ತರಲಾಯಿತು. ಅದರ ನಂತರ ಈ ಕಾರ್ಯದ ಉಪಯುಕ್ತತೆ ತಿಳಿದ ಅವರು 2015-16ರಲ್ಲೀ ಇದನ್ನು ಇಡೀ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಿದರು. ಹಾಗಾಗಿಯೇ ರಾಯಚೂರು ಜಿಲ್ಲೆ MGNREGA ಅನುಷ್ಟಾನದಲ್ಲಿ ರಾಜ್ಯದಲ್ಲಿ ಎರಡನೆಯ ಸ್ಥಾನಕ್ಕೆ ಏರಿತು.

ಆಗಲೇ ಇದನ್ನು ರೈತರ ಸ್ವಂತ ಜಮೀನುಗಳಲ್ಲೂ Soil and Water Conservation ಭಾಗವಾಗಿ ಮಾಡಬಹುದು ಎನ್ನುವ ಯೋಚನೆ ಬಂತು. ಪ್ರಾರಂಭದ ನಿರ್ದೇಶಕರಾದ ಎಸ್‌.ಎಸ್‌ಘಂಟಿಯವರ ಜೊತೆಗೆ ಮಾತನಾಡಿದಾಗ ರಾಯಚೂರು ಮೂಲತಃ ಮಳೆಯಾಶ್ರಿತ ಬೆಳೆ ಬೆಳೆಯುವ ಪ್ರದೇಶ.  ಬಿಳಿ ಚಿನ್ನವೆಂದೇ ಕರೆಯುವ ಹತ್ತಿ, ತೊಗರಿ, ಶೇಂಗಾ ಬಿಳಿಜೋಳ, ಸಜ್ಜೆ ಮುಂತಾದ ಬೆಳೆಗಳ ಜೊತೆಗೆ ಅಕ್ಕಡಿಸಾಲು ವಿಧಾನದಲ್ಲಿ ಬೆಳೆಯುವಾಗ ಬೆಳೆ ವೈವಿಧಯ ಮಣ್ಣಿನ ಆರೋಗ್ಯ ರಕ್ಷಣೆಯ ಜೊತೆಗೆ ರೈತ ಕುಟುಂಬದ ಆಹಾರ ಭದ್ರತೆಗೂ ಸಹಕಾರಿಯಾಗಿತ್ತು. ನಂತರದಲ್ಲಿ ಇಲ್ಲಿ ಶುರುವಾದ ರಾಸಾಯನಿಕ ಕೇಂದ್ರಿತ ಏಕಬೆಳೆ ಪದ್ಧತಿಯಿಂದಾಗಿ ಅಕ್ಕಡಿಸಾಲು ವಿಧಾನ ಮರೆಯಾಯಿತು. ರಾಸಾಯನಿಕಗಳನ್ನು ಅನಿಯಂತ್ರಿತವಾಗಿ ಹಾಕುವುದರಿಂದಾಗಿ ಮೇಲ್ಮಣ್ಣಿನ ಆರೋಗ್ಯ ಹಾಳಾಗಲಾರಂಬಿಸಿತು. ಇದು ಈಗಲೂ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆಗಳ ಸಹಾಯ ಪಡೆದು ಮಣ್ಣಿನ ಆರೋಗ್ಯ ಕಾಪಾಡಬಹದು ಎಂಬುದನ್ನು ನಮ್ಮ ಅನುಭವದಿಂದ ಕಲಿತೆವು. ದೇವದುರ್ಗ ತಾಲ್ಲೂಕಿನ ಅಮರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸವಳು ಸಮಸ್ಯೆ ನಿವಾರಣೆಗೆ ಸಾಯಿಲ್‌ ವಾಸುರವರ ಮಾರ್ಗದರ್ಶನವೂ ಸಹಕಾರಿ ಆಯಿತು. ಬೆಳೆ ಮುಗಿದ ತಕ್ಷಣವೇ ಅದನ್ನು ಸುಟ್ಟು ಹಾಕುವ ಪ್ರವೃತ್ತಿಯಿಂದ ರೈತರು ಕ್ರಮೇಣವಾಗಿ ಬದಲಾಗುತ್ತಿದ್ದಾರೆ ಈ ಬೆಳೆಯುಳಿಕೆಗಳನ್ನು ಇದೇ ಕಂದಕ ಬದುವಿನಲ್ಲಿ ಹಾಕಿ ಉತ್ತಮ ಕಾಂಪೋಸ್ಟ್‌ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ.

ಒಮ್ಮೆ ಮಳೆ ಬಂದರೆ ಒಂದು TCBಯಲ್ಲಿ 2700 ಲೀಟರ್‌ ನೀರು ಶೇಖರಣೆ ಆಗುತ್ತದೆ. ಜೊತೆಗೆ ಮೇಲ್ಮಣ್ಣು ಕೊಚ್ಚಿಕೊಂಡು ಹೋಗೋದು ತಪ್ಪುತ್ತದೆ. ಒಂದು ಕಂದಕ ಬದುವಿನ ಸುತ್ತಲೂ ಇರುವ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಬದುಗಳಲ್ಲಿ ಗಿಡ ನೆಟ್ಟರೇ ನೀರಿಲ್ಲದ ಸಂದರ್ಭದಲ್ಲೂ ತೇವಾಂಶ ಕೊಟ್ಟುಕೊಂಡು ಗಿಡ  ಉಳಿದುಕೊಳ್ಳುತ್ತದೆ. ಅದು ಮರಮುಟ್ಟು ಆಗಬಹುದು ಹಣ್ಣಿನ ಮರಗಳಾಗಬಹುದು. ಕಂದಕ ಬದುವಿನದಿಂದ ನಷ್ಟವಾಗುವ ಭೂಮಿಗೆ ಪರಿಹಾರದಂತೆ ಕೆಲಸ ಮಾಡುತ್ತದೆ.

ಅಮರಾಪುರ ಗ್ರಾಮ ಪಂಚಾಯಿತಿ ಮುಕ್ಕನಾಳ ಗ್ರಾಮದ 17 ರೈತರಿಗೆ ಸೇರಿದ   ಒಟ್ಟು 50 ಎಕರೆ ಜಮೀನುಗಳಲ್ಲಿ  ಕಳೆದ ವರ್ಷ ಜುಲೈವರೆಗೂ 2598.8 ಮಾನವ ದಿನಗಳ ಕೆಲಸ ಸೃಷ್ಟಿ ಮಾಡಿದೆವು. ಜುಲೈ 2023ರ ಕೊನೆಯ ಹೊತ್ತಿಗೆ 783 TCBʻs ಕೆಲಸ ಮುಗಿಯಿತು. 803041/- ರೂಗಳಷ್ಟು ವೆಚ್ಚದ ಕಂದಕ ಬದು ನಿರ್ಮಾಣದ ಕೆಲಸ ಆಗಿತ್ತು.

ಇದೇ ಉದ್ಯೋಗ ಖಾತ್ರಿ ಅಡಿಯಲ್ಲಿ NRBC ಕಾಲುವೆಯ ಹೆಚ್ಚುವರಿ ನೀರು ಹರಿದು ಹೋಗುವ ಹಳ್ಳದ ಪಕ್ಕದಲ್ಲಿ ಗೋಮಾಳ ಜಾಗದಲ್ಲಿ 4 ಎಕರೆ ಕೆರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದು ಅದರಿಂದಾಗಿ 4832 ಮಾನವ ದಿನಗಳ ಕೂಲಿಯನ್ನು ಬಳಸಿಕೊಂಡು 1492873/- ರೂಗಳ ಕಾಮಗಾರಿ ನಡೆದಿತ್ತು. ಒಟ್ಟಾರೆಯಾಗಿ ರೈತ ಕೂಲಿ ಕಾರ್ಮಿಕರಿಗೆ 2295914/- ರೂಗಳಷ್ಟು ನೇರವಾಗಿ ತಲುಪಿದೆ.

ಹೀಗೆ ನಿರ್ಮಾಣವಾದ TCBಗಳನ್ನು ರೈತರು ಅದರ ಮೂಲ ಉದ್ದೇಶವಾದ ಮೇಲ್ಮಣ್ಣು ಮತ್ತು ನೀರಿನ ಸಂರಕ್ಷಣೆ ಜೊತೆಗೆ ಬೆಳೆಯುಳಿಕೆಗಳನ್ನು ಅದರಲ್ಲೇ ಹಾಕಿ ಕಾಂಪೋಸ್ಟ್‌ ತಯಾರಿಕೊಳ್ಳುತ್ತಿದ್ದಾರೆ. ಒಂದು TCBಯಲ್ಲಿ ಒಂದು ಎತ್ತಿನಗಾಡಿಯಷ್ಟು ಕಾಂಪೋಸ್ಟ್‌ 6 ತಿಂಗಳಲ್ಲೇ ತಯಾರಾಗುವುದು ಇದರ ವಿಶೇಷ. ಕಟಾವಾದ ಬಳಿಕ ಮಾಡಿಕೊಂಡರೆ ಮುಂದಿನ ಬೆಳೆ ಹೊತ್ತಿಗೇ ಕಾಂಪೋಸ್ಟ್‌ ತಯಾರಾಗಿರುತ್ತದೆ ಎಂದು ರೈತರ ಜೊತೆಗೆ ಕೆಲಸ ಮಾಡುತ್ತಿರುವ ಪ್ರಾರಂಭ ಸಂಸ್ಥೆಯ ರೇವಣ್ಣ ಸಿದ್ದಪ್ಪ ರಾಯಚೂರು ತಿಳಿಸಿದರು.

ಇಂದು ಜಾನುವಾರುಗಳ ಕೊರತೆಯಿಂದಾಗಿ ಕೊಟ್ಟಿಗೆ ಗೊಬ್ಬರದ ಲಭ್ಯತೆ ಕಡಿಮೆಯಾಗುತ್ತಿದೆ. ಈ  ಸಂದರ್ಭದಲ್ಲಿ ಹೀಗೆ ಕಂದಕ ಬದುವಿನಂತ ಬಹುಪಯೋಗಿ ಮಾದರಿಗಳ ಸದ್ಭಳಕೆ ತುಂಬಾ ಉಪಯುಕ್ತವಾಗಿದೆ. ನಮ್ಮ ಜಮೀನಿನಲ್ಲಿ ಮೊದಲು ಮಳೆನೀರು ಮತ್ತು ಕಟ್ಟುವ ನೀರು ಹೆಚ್ಚಾಗಿ ಮಣ್ಣು ಕೊಚ್ಚಿಹೋಗುತ್ತಿತ್ತು ಕಳೆದ ವರ್ಷ ನಮ್ಮ ಜಮೀನಿನಲ್ಲಿ ಒಟ್ಟು 37 ಕಂದಕ ಬದು ನಿರ್ಮಾಣ ಮಾಡಿಕೊಂಡೆವು ಈಗ ಮೇಲ್ಮಣ್ಣು ಕೊಚ್ಚಿಹೋಗುವುದು ನಿಂತಿದೆ ಜೊತೆಗೆ ಬೆಳೆಯುಳಿಕೆಗಳನ್ನು ಬಳಸಿಕೊಂಡು ಕಾಂಪೋಸ್ಟ್‌ ತಯಾರು ಮಾಡಿಕೊಳ್ಳುತ್ತಿದ್ದೀವಿ ಎನ್ನುವುದು ಮುಕ್ಕನಾಳ ಗ್ರಾಮದ ರೈತ ಶಿವಪ್ಪನವರ ಅನುಭವದ ಮಾತು.

ಇದಲ್ಲದೇ ಉದ್ಯೋಗಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಎರೆಹುಳು ಗೊಬ್ಬರದ ಘಟಕ, ಕೈತೋಟ ಹೀಗೆ ಹಲವಾರು ಸುಸ್ಥಿರ ಕೃಷಿಗೆ ಬೇಕಾದ ಕಾರ್ಯಕ್ರಮಗಳಿವೆ. ಅವುಗಳನ್ನು ಬಳಸಿಕೊಂಡು ತಮ್ಮ ವೈಯಕ್ತಿಕ ಜಮೀನುಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದಾಗಿದೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮ ಪಂಚಾಯಿತಿ/ ಕೃಷಿ ಇಲಾಖೆಗೆ ಭೇಟಿ ಕೊಟ್ಟು ತಮ್ಮತಮ್ಮ ಜಮೀನುಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here