ಸಮಸ್ಯೆಗಳಿಗೆ ಬೆಳಕಿನ ಬೇಸಾಯ ಪರಿಹಾರ

0
Beautiful greenery
ಲೇಖಕರು – ಕೃಷಿತಜ್ಞರು: ಅವಿನಾಶ್‌ ಟಿಜಿಎಸ್

ಇತ್ತೀಚೆಗೆ ರಾಜಶೇಖರ್ ಎನ್ನುವವರು ನಾನು ರಚಿಸಿರುವ “ಬೆಳಕಿನ ಬೇಸಾಯ” ಪುಸ್ತಕ ಎಲ್ಲಿ  ಸಿಗುತ್ತದೆ ಎಂದು ವಿಚಾರಿಸಲು ಪೋನ್ ಮಾಡಿದ್ದರು. ಇದರ ಮಾಹಿತಿಯನ್ನು ನೀಡಿದೆ.  ನಂತರ ಅವರು ತಮ್ಮ ಮಾತುಗಳನ್ನು ಮುಂದುವರಿಸಿದರು.  “ಸರ್‌,  ನಮ್ಮ ಏಳು ವರ್ಷದ ಮಗುವಿಗೆ ಎ ಪ್ಲಾಸ್ಟಿಕ್ ಅನೀಮಿಯಾ ಕಾಯಿಲೆ ಬಂದಿದೆ. ಆಸ್ಪತ್ರೆಯಲ್ಲಿ ಇದೇವೆ. ಇದು ಗುಣವಾಗಲು ಬೋನ್ ಮಾರೋ ಚಿಕಿತ್ಸೆಗಾಗಿ ಸುಮಾರು 25 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ.  ದಾನಿಗಳ ಹತ್ತಿರ ದುಡ್ಡನ್ನು ಹೊಂದಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ” ಎಂದು ತಮ್ಮ ದುಃಖ ತೋಡಿಕೊಂಡರು.

ಈ ಕಾಯಿಲೆಗೆ ಏನು ಕಾರಣ  ಎಂದು ಕೇಳಿದೆ. “ನಾವು ತಿನ್ನುವ ಆಹಾರದಲ್ಲಿ ರಾಸಾಯನಿಕಗಳು ಬೆರೆತಿವೆ.  ಅದರಿಂದ ಈ ತರಹದ ಕಾಯಿಲೆಗಳು ಬರುತ್ತಿವೆ ಎಂದು ಡಾಕ್ಟ‌ರ್ ತಿಳಿಸಿದ್ದಾರೆ.  ಈ ಮುಂಚೆ ನಾನು ಗೋಬಿ ಮಂಚೂರಿ ಅಂಗಡಿಯನ್ನು ನಡೆಸುತ್ತಿದ್ದೆ. ಅದ್ನು ತಯಾರಿಸಲು ಬಳಸುವ ಎಲೆಕೋಸು ಮತ್ತು ಹೂ ಕೋಸನ್ನು ಬೆಳೆಯಲು ವಿಪರೀತ ಕ್ರಿಮಿನಾಶಕಗಳನ್ನು ಬಳಸುತ್ತಾರೆ.  ಮತ್ತೆ ನಾವು  ತಯಾರಿಸುವಾಗಲೂ ರಾಸಾಯನಿಕಗಳನ್ನು ಬಳಸುತ್ತೇವೆ.  ಬಣ್ಣ, ಎಸೆನ್ಸ್‌ಗಳನ್ನು ಧಾರಾಳವಾಗಿ ಬಳಸುತ್ತೇವೆ” ಎಂದು ವಿವರಿಸಿದರು.

ಮುಂದುವರಿದು “   ನನ್ನ ಮಗಳು ಗೋಬಿ ತಿನ್ನುತ್ತಿದ್ದಳು. ಇದರ ಜೊತೆ ರಾಸಾಯನಿಕಗಳಿಂದ ಕೂಡಿದ ಆಹಾರ ಪದಾರ್ಥಗಳು ಸೇರಿಕೊಂಡು  ಈ ಪರಿಸ್ಥಿತಿ ಬಂದಿದೆ. ಈಗ ನನಗೆ ಈ ರಾಸಾಯನಿಕಗಳು, ಕ್ರಿಮಿನಾಶಕಗಳಿಂದಾಗುವ ದುಷ್ಪರಿಣಾಮಗಳು ಅರ್ಥವಾಗಿವೆ. ಹಾಗಾಗಿ ಇನ್ನು ಮುಂದೆ ಗೋಬಿ ಅಂಗಡಿಯನ್ನು ತೆರೆಯುವುದಿಲ್ಲ, ಮತ್ತೆ ರಾಸಾಯನಿಕಗಳಿಂದ ಬೆಳೆದ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ. ನಮಗೆ ನಾಲ್ಕು ಎಕರೆ ಭೂಮಿ ಇದೆ. ಅದರಲ್ಲಿ ಬೆಳಕಿನ ಬೇಸಾಯ ಪದ್ಧತಿಯಲ್ಲಿ ಆಹಾರವನ್ನು ಬೆಳೆದು ನನ್ನ ಮಗಳ ಆರೋಗ್ಯ ಜೊತೆಗೆ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳಲು ನಿರ್ಧರಿಸಿದ್ದೇನೆ. ದಯವಿಟ್ಟು ನನಗೆ ಸಹಕಾರ ಮಾಡಿ” ಎಂದು  ವಿನಂತಿಸಿಕೊಂಡರು.  “ನನ್ನ ಸಹಕಾರ ನಿಮ್ಮೊಂದಿಗೆ ಸದಾ ಇರುತ್ತದೆ” ಎಂದು ತಿಳಿಸಿ,  ವಿಷಾದದಿಂದ ಫೋನ್ ಇಟ್ಟೆ.

ಕೃಷಿ ಮಾಡುವಾಗ ಬಳಸಿದ ರಾಸಾಯನಿಕಗಳ ಶೇಷಾಂಶಗಳು ಕೃಷಿ ಉತ್ಪನ್ನಗಳಲ್ಲಿ ಉಳಿದಿರುತ್ತವೆ. ಈ ನಂತರ ಆ ಉತ್ಪನ್ನಗಳನ್ನು ಮೌಲ್ಯವರ್ದನೆ ಮಾಡುವಾಗಲೂ ರಾಸಾಯನಿಕ ಬಳಕೆಯಾಗಿರುತ್ತದೆ. ಗೋಬಿ ಮತ್ತಿತರ ತಿನಿಸುಗಳನ್ನು ತಯಾರಿಸುವಾಗಲೂ ರಾಸಾಯನಿಕ ಮಿಶ್ರಣವಾಗಿರುತ್ತದೆ. ಇದಲ್ಲದೇ ಆಹಾರ ಪದಾರ್ಥಗಳನ್ನು  ಸಂರಕ್ಷಿಸಿಡುವಾಗ ಅಂದರೆ ಪ್ಯಾಕ್ ಮಾಡುವಾಗಲೂ ರಾಸಾಯನಿಕಗಳನ್ನು ಮತ್ತು ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲಾಗುತ್ತದೆ.

ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ, ಹಣ್ಣು, ಕಾಳುಗಳು ಸದಾ ತಾಜಾತಾಜಾ ಆಗಿರುವಂತೆ ಮಾಡಲು ರಾಸಾಯನಿಕಗಳನ್ನು, ಕೃತಕ ಬಣ್ಣಗಳನ್ನು, ವ್ಯಾಕ್ಸ್ ಕೋಟಿಂಗ್ ಬಳಸಲಾಗುತ್ತಿದೆ. ಇದು ಸಾಲದೆಂಬಂತೆ ಜಾಗತಿಕವಾಗಿ ತಾಪಮಾನ ಏರಿಕೆಗೆ ಕಾರಣವಾಗಿರುವ ಈ ಶಾಖವರ್ಧಕ ಅನಿಲಗಳು, ದೂಳು, ಪ್ಲಾಸ್ಟಿಕ್‌ ಕಣಗಳು ಗಾಳಿ ಹಾಗೂ ನೀರನ್ನು ನಿರಂತರವಾಗಿ ಕಲುಷಿತಗೊಳಿಸುತ್ತಿವೆ. ಇವೆಲ್ಲವೂ ನೇರವಾಗಿ ನಮ್ಮ ದೇಹ ಸೇರುತ್ತಿವೆ. ಮತ್ತೊಂದು ಸಂಶೋಧನೆಯ ಪ್ರಕಾರ  ನಮ್ಮ ದೇಹದ ರಕ್ತದ ಕಣಗಳಲ್ಲಿ ಪ್ಲಾಸ್ಟಿಕ್‌ನ ಸೂಕ್ತಾ ತಿಸೂಕ್ಷ್ಮ ಕಣಗಳು ಸೇರಿವೆ’ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದು ಅತ್ಯಂತ ಆತಂಕಕಾರಿಯಾಗಿದೆ.

ಸಾವಯವ ಕೃಷಿ ಮಾಡಲು ಆಸಕ್ತಿ ಇರುವ ಉತ್ಸಾಹಿ ರೈತರಿಗೆ ಯಾವ ತರಹದ ಕೃಷಿ ಪದ್ದತಿಯನ್ನು ತಿಳಿಸಬೇಕು ಎಂದು ಯೋಚಿಸಿದಾಗ, ಪ್ರಸ್ತುತ ನಮ್ಮ ಮಧ್ಯೆ ನೈಸರ್ಗಿಕ ಕೃಷಿ, ಸಾವಯವ ಕೃಷಿ,  ಸಹಜ ಕೃಷಿ ಇತ್ಯಾದಿಗಳಾದಿಯಾಗಿ ಸಾಕಷ್ಟು ಹೆಸರುಗಳ ಕೃಷಿ ಪದ್ಧತಿಗಳಿವೆ.

ಇಷ್ಟೆಲ್ಲಾ ಹೆಸರುಗಳು ಕೃಷಿಕರನ್ನು ಗೊಂದಲಕ್ಕೆ ಈಡು ಮಾಡುತ್ತಿದೆ. ಈ ಪದ್ಧತಿ ಸರಿಯಾ ? ಆ ಪದ್ಧತಿ ಸರಿಯಾ? ಎನ್ನುವ ಪ್ರಶ್ನೆಗಳು ಕಾಡುತ್ತಿವೆ. ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದು ಈ ಎಲ್ಲ ಪದ್ಧತಿಗಳ ಮೂಲ ಆಶಯಗಳು ಒಂದೇ ಆಗಿವೆ.

ಇಲ್ಲಿ ಮೂಲ ಆಶಯಗಳು ಎಂದರೆ, ಒಂದು ಎಕರೆಯಲ್ಲಿ ಸಹಜವಾಗಿ ಒದಗುವ ಬೆಳಕನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ವೃದ್ಧಿಸಲು ಹ್ಯೂಮಸ್ ಹಾಗೂ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚು ಮಾಡುತ್ತಾ ಮಳೆಗಾಲದಲ್ಲಿ ಹನಿಹನಿ ನೀರನೂ ಹಿಡಿದಿಟ್ಟುಕೊಳ್ಳಬೇಕು.

ಈ ಎಲ್ಲವನ್ನೂ ಸಾಧಿಸಬೇಕಾದರೆ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಯೂ ನಮ್ಮದಾಗಬೇಕಾಗಿದೆ. ಅಂದರೆ ನಮ್ಮ ಭೂಮಿಯನ್ನು ಆಹಾರ ಬನವನ್ನಾಗಿ ಪರಿವರ್ತಿಸಬೇಕು. ಆಗ ನಮ್ಮ ಭೂಮಿಯಲ್ಲಿ ಜೀವಾಣುಗಳು, ಸೂಕ್ಷ ಜೀವಾಣುಗಳು, ಎರೆಹುಳುಗಳು, ಪಾಣಿಪಕ್ಷಿಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ. ಇದರಿಂದ ಭೂಮಿಯಲ್ಲಿ ಸಹಜವಾಗಿ  ರಾಸಾಯನಿಕ, ಭೌತಿಕ ಹಾಗೂ ಜೈವಿಕ ಕ್ರಿಯೆಗಳು ನಡೆಯುತ್ತವೆ.

ಈ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ನಡೆಯುತ್ತಿದ್ದಾಗ ಮಾತ್ರ ಹಣ್ಣು, ಕಾಳುಗಳಲ್ಲಿ ನಮ್ಮ ದೇಹಕ್ಕೆ ಅವಶ್ಯವಿರುವ ಕ್ಯಾಲೊರೀಸ್, ವಿಟಮಿನ್ಸ್, ಪ್ರೋಟನ್ಸ್, ನ್ಯೂಟ್ರಿಯೆಂಟ್ಸ್, ಕಾರ್ಬೋಹೈಡ್ರೆಟ್ಸ್ ದೊರೆಯುತ್ತವೆ. ಇದರಿಂದ ರೋಗ ನಿರೋಧಕತೆ ಹೆಚ್ಚಾಗುತ್ತದೆ.

ಬಹು ಮುಖ್ಯವಾಗಿ ಅಪೌಷ್ಟಿಕತೆಯನ್ನು ನಿವಾರಿಸಿಕೊಳ್ಳಬಹುದು. ಹಾಗೂ ಪರಿಶುದ್ಧವಾದ ವಾತಾವರಣವನ್ನು ಕಾಪಾಡಿಕೊಂಡು ಹೊಸ ಹೊಸ ಕಾಯಿಲೆಗಳು ಬಾರದಂತೆ ತಡೆಹಿಡಿಯುತ್ತಾ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ  ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕಾಗಿದೆ.

ಈಗ ಚಾಲ್ತಿಯಲ್ಲಿರುವ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಯೋಜನೆಗಳನ್ನು ಒಂದು ಸೂರಿನಡಿ ತರಬೇಕು. ಪ್ರತಿ ಹಳ್ಳಿಯಲ್ಲೂ ಒಂದೊಂದು ಮಾದರಿ ತೋಟಗಳನ್ನು ನಿರ್ಮಿಸಬೇಕು. ಆಯಾ ರೈತರನ್ನು ಮಾರ್ಗದರ್ಶಿಗಳಾಗಿ ನೇಮಕ ಮಾಡಬೇಕು.  ಆಯಾ ಗ್ರಾಮ ವ್ಯಾಪ್ತಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಅಲ್ಲಿಯೇ ಮೌಲ್ಯವರ್ಧನೆ ಮಾಡಿ, ಆಯಾ ಗ್ರಾಮ ವ್ಯಾಪ್ತಿಯಲ್ಲಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಬಹುಮುಖ್ಯ ಆಗುತ್ತದೆ. ಆಗ ಮಾತ್ರ ರಾಜಶೇಖರ್ ಅವರ ಮಗಳಿಗೆ ಬಂದಂತಹ ಕಾಯಿಲೆ ಇನ್ನಾವ ಮಕ್ಕಳಿಗೂ ಬರುವುದಿಲ್ಲ.

LEAVE A REPLY

Please enter your comment!
Please enter your name here