
ಗಿಡ ಬೆಳೆಸುವುದು ಹೇಗೆ?
ಪ್ಯಾಶನ್ ಹಣ್ಣನ್ನು ನಮ್ಮ ಮಲೆನಾಡಿನಲ್ಲಿ ಯಾರೂ ಬೆಳೆಸುತ್ತಿರಲಿಲ್ಲ. ಅಲ್ಲಿನ ಕಾಡುಗಳಲ್ಲಿ ತನ್ನಷ್ಟಕ್ಕೆ ಬೆಳೆಯುವ ಹಣ್ಣು. ಕರಾವಳಿಯಲ್ಲಿ ಕಾಡಿನಲ್ಲಿ ಸಿಗದಿದ್ದರೂ ಇದನ್ನು ಬೆಳೆಯಲು ಯಾವುದೇ ಆರೈಕೆ ಬೇಡ. ಬಳ್ಳಿ ಹಬ್ಬಲು ಒಂದು ಮರ ಇದ್ದರೆ ಸಾಕು. ಟೆರೇಸ್ ನಲ್ಲಿಯೂ ಬೆಳೆಯಬಹುದು.
ಕುಂಡದಲ್ಲಿ ಬೀಜ ಬಿತ್ತಿ ಸಸಿಯಾದ ಒಂದೆರಡು ತಿಂಗಳ ಬಳಿಕ ಹಬ್ಬಲು ಒಂದು ಕೋಲು ಅಥವಾ ಹಗ್ಗ ಕಟ್ಟಿ ಟೆರೇಸ್ ಮೇಲೆ ಹಬ್ಬಿಸಿದರಾಯ್ತು. ಬಳ್ಳಿ ಒಣಗದ ಹಾಗೆ ನೋಡಿಕೊಂಡು ಎರಡು ದಿನಕ್ಕೆ ಒಮ್ಮೆ ನೀರು ಹಾಕಿದರಾಯ್ತು. ನೆಟ್ಟ ಎರಡು ತಿಂಗಳಿನಿಂದಲೇ ಹೂವು ಬಿಡಲು ಪ್ರಾರಂಭವಾಗುತ್ತದೆ.
ವರ್ಷದಲ್ಲಿ ಎರಡು ಬಾರಿ ಹೂವು ಅರಳಿ ಕಾಯಿ ಬಿಡುತ್ತದೆ. ಹಣ್ಣಾಗಲು ಮೂರು ನಾಲ್ಕು ತಿಂಗಳು ಬೇಕು. ಹಲಸು ಮಾವಿನ ಮರಕ್ಕೆ ಹಬ್ಬಿಸಿದರೆ ರಾಶಿ ರಾಶಿ ಹಣ್ಣು ಬಿಡುತ್ತದೆ. ಹಣ್ಣನ್ನು ಕಟಾವು ಮಾಡುವ ಚಿಂತೆ ಇಲ್ಲ, ಹಣ್ಣುಗಳು ಬೀಳುತ್ತವೆ. ಹಣ್ಣಿನ ಸಿಪ್ಪೆಯಿಂದ ಬಾಳ್ಕ ತಯಾರಿಸಬಹುದು. ಬಳ್ಳಿಯ ಚಿಗುರು, ಎಲೆ ಗಳನ್ನು ಕೆಲವು ಔಷಧಿಗಳಲ್ಲಿ ಬಳಸಲಾಗುತ್ತದೆ. ಮನೆ ಅಂಗಳದಲ್ಲಿ ಇರಲೇ ಬೇಕಾದ ಬಳ್ಳಿ.
ಪ್ಯಾಶನ್ ಫ್ರೂಟ್ ಜಾಮ್
ಇದು ನಾನೇ ಬೆಳೆಸಿದ ಪ್ಯಾಶನ್ ಫ್ರೂಟ್ ಬಳ್ಳಿಯಲ್ಲಿ ಅದ ಹಣ್ಣಿನಿಂದ ತಯಾರಿಸಿದ ಜಾಮ್. ಹುಳಿ ಸಿಹಿ ಮಿಶ್ರಿತ ಹಣ್ಣು ತಿನ್ನಲು ಶರಬತ್ ಮಾಡಿ ಕುಡಿಯಲು ತುಂಬಾ ರುಚಿ. ಹಿಂದೆ ಒಮ್ಮೆ ಮೈಸೂರಿನಲ್ಲಿ ಇದ್ದಾಗ ಇದರ ಜಾಮ್ ಕೊಂಡು ತಿಂದ ನೆನಪು ಇತ್ತು. ಬೆಲ್ಲ ಉಪಯೋಗಿಸಿ ಮಾಡಿದ್ದರು.
ನಮ್ಮ ಬಳ್ಳಿಯಲ್ಲಿ ಹೊಸ ಫಲದಲ್ಲೇ ತುಂಬಾ ಹಣ್ಣು ಸಿಗುತ್ತಿದ್ದು ಶರಬತ್, ಸಾರು , ಮೆಣಸ್ಕಾಯಿ ಮಾಡಿದ ಮೇಲೆ ಜಾಮ್ ಮಾಡಿ ನೋಡಿದ್ದಾಯ್ತು. ಇದರ ರುಚಿಗೆ ಮನ ಸೋಲದವರೆ ಇಲ್ಲ. ಜಾಮ್ ಮಾಡುವುದು ತುಂಬಾ ಸುಲಭ.

ಐದಾರು ಹಣ್ಣಿನ ರಸ ಬೀಜ ಸಹಿತ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿ ಇಟ್ಟುಕೊಳ್ಳಿ. ಒಂದು ಬಾಣಲೆ ತೆಗೆದುಕೊಂಡು ಮೂರು ನಾಲ್ಕು ಅಚ್ಚು ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿದ ಮೇಲೆ ಸೋಸಿ ಕಸ ತೆಗೆದು ಪುನಃ ಬಾಣಲೆಯಲ್ಲಿ ಹಾಕಿ ತೆಗೆದಿರಿಸಿದ ಹಣ್ಣಿನ ರಸ ಹಾಕಿ ಕುದಿಸಿ. ಐದಾರು ನಿಮಿಷ ಕುದಿಸಿ ಸ್ವಲ್ಪ ಗಟ್ಟಿಗುವಾಗ ಸ್ಟೌ ಆರಿಸಿ. ತಣ್ಣಗಾದ ಬಳಿಕ ಗಾಜಿನ ಬಾಟಲಿಗೆ ತುಂಬಿಸಿ ಇಡಿ. ದೋಸೆ, ಚಪಾತಿ ಜೊತೆಗೆ ತಿನ್ನಬಹುದು.