ಕೃಷಿ ಇತಿಹಾಸ – ಅನುಭವ ಮತ್ತು ಮಾರ್ಗದರ್ಶನ

0
ಲೇಖಕರು: ಮಂಜುನಾಥ ಹೊಳಲು

ಕೃಷಿಯ ಇತಿಹಾಸದಲ್ಲಿ ಆಗಿರುವ ಅನುಭವಗಳು ಪಾಠವಾಗಬೇಕು. ಬಂಗಾಳ ಕ್ಷಾಮ, ಐರನ್ ದೇಶದ ಕ್ಷಾಮ, ಬ್ರೇಜೀಲ್ ದೇಶದಲ್ಲಿ ನಿಂಬೆ ಗಿಡಕ್ಕೆ ತಾಗಿದ ಕ್ಯಾಕಂರ್, ತೆಂಗಿನ ಬೆಳೆಗೆ ಅಂಟಿದ ನುಶಿಪೀಡೆಗಳಿಂದ ಕಲಿಯಬೇಕಾದ ಪಾಠ ಅಪಾರ.

ಜೀವಸಾರವಿರುವುದು ಚರದಲ್ಲಿ, ಸ್ಥಿರದಲ್ಲಲ್ಲ;
ನಿರಂತರತೆಯಲ್ಲಿ, ಜಡದಲ್ಲಲ್ಲ

ನೀತಿಕತೆ – ಆರ್ಥಿಕತೆ

ಆಧುನಿಕ ಕೃಷಿ ವಿಜ್ಞಾನ ಹಾಗು ಅರ್ಥಶಾಸ್ತ ಈ ಮೇಲಿನ ಸಾಲುಗಳ ಗಾಂಭೀರ್ಯತೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ನಮ್ಮ ಪಾರಂಪರಿಕ ಕೃಷಿಯು ‘ನೀತಿಕತೆ’ ಹಾಗು ‘ಆರ್ಥಿಕತೆ’ ತತ್ವದ ಅಡಿಯಲ್ಲಿ ಲೀನವಾಗಿತ್ತು. ಎರಡು ತತ್ವಗಳಿಗೂ ಸಮಾನ ಅವಕಾಶ ನೀಡಲಾಗಿತ್ತು. ತದನಂತರದ ಜಾಗತೀಕರಣ ವವ್ಯಸ್ಥೆಯಲ್ಲಿ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿಲಾಯಿತು. ಇದರಿಂದಾಗಿ ಕೃಷಿ ಅವನಿತಿ ಹೊಂದಲು ಕಾರಣವಾಯಿತು.

ಸಸ್ಯದ ಬೂದಿ

ಆಧುನಿಕ ವೈಜ್ಞಾನಿಕ ಅಥವಾ ರಾಸಾಯನಿಕ ಕೃಷಿಗೆ ನಾಂದಿ ಹಾಡಿದ್ದು ಬ್ಯಾರನ್ ಜಸ್ಟಸ್ ವಾನ್ ಲೀಬಿಗ್‌ನ ಕೃತಿ. ಗಿಡವನ್ನು ಜೀವಂತವಾಗಿರುವಾಗಲೇ ಸುಟ್ಟು ಅದರ ಬೂದಿಯಲ್ಲಿ ಇರಬಹುದಾದ ಅದರ ಜೀವನ ರಹಸ್ಯಗಳನ್ನು ಅರಿಯಲು ಆತ ಯತ್ನಿಸಿದ. ಅದರ ಫಲವಾಗಿ, 1840ರಲ್ಲಿ ಪ್ರಕಟವಾದ ಆತನ ಪ್ರಬಂಧ ‘ಕೃಷಿ ಮತ್ತು ಭೌತಿಕಶಾಸ್ತಕ್ಕೆ ಅನ್ವಯಿಸಿದ ರಸಾಯನಶಾಸ್ತದಲ್ಲಿ, ಜೀವಂತ ಸಸ್ಯಗಳಿಗೆ ಬೇಕಾದ ಎಲ್ಲ ಖನಿಜ,ಲವಣಗಳೂ ಅವುಗಳ ಬೂದಿಯಲ್ಲಿವೆಯೆಂದು ಪ್ರತಿಪಾದಿಸಿದ. ಈ ರಾಸಾಯನಿಕ ಲವಣಗಳನ್ನು ಮಣ್ಣಿಗೆ ಸೇರಿಸುವುದರಿಂದ ಸಸ್ಯಗಳನ್ನು ಹುಲುಸಾಗಿ ಉತ್ತಮವಾಗಿ ಬೆಳೆಸುವುದು ಸಾಧ್ಯವೆಂದು ಆತ ಘೋಷಿಸಿದ.

ಸಮಗ್ರ ರಸಗೊಬ್ಬರ

1972ರಲ್ಲಿ ಫ್ರಾನ್ಸ್ ದೇಶದ ಆಧುನಿಕ ವಿಜ್ಞಾನಿ ಲೂಯಿ ಕರ್ವ್ರಾನ್ ಎಂಬುವರು ಪಠ್ಯಪುಸ್ತಕದಿಂದ ಕಲಿಯುವ ಶಾಸ್ತಿಯ ಕೃಷಿ ವಿಜ್ಞಾನ ಢೋಂಗಿಯಾಗಿದ್ದು, ಸಸ್ಯದಲ್ಲಿ ಸಾರಜನಕ, ಪೊಟ್ಯಾಷಿಯಂ ಮತ್ತು ರಂಜಕವನ್ನು ಬಿಟ್ಟರೆ ಬೇರಾವ ಧಾತುವೇ ಇಲ್ಲವೇನೋ ಎಂಬಂತೆ ಅದು ಸಮಗ್ರ ರಸಗೊಬ್ಬರದ (NPK) ಬಳಕೆಯನ್ನು ಶಿಫಾರಸು ಮಾಡುತ್ತದೆ ಎಂದಿದ್ದರು.

ಚೀನಾ ಪ್ರವಾಸಿಗರು ಕಂಡ ಕೃಷಿ

ಕ್ರಿ.ಶ 5ನೇ ಶತಮಾನದಲ್ಲಿ ಚೀನೀ ಪ್ರವಾಸಿಯಾದ ಫಾಹಿಯೆನ್ ಹಾಗು 7ನೇ ಶತಮಾನದ ಮತ್ತೊಬ್ಬ ಚೀನೀ ಪ್ರವಾಸಿಯಾದ ಹ್ಯುಯೆನ್ ತ್ಸಾಂಗ್ ನೀಡಿರುವ ವಿವರಗಳಲ್ಲಿ ಭಾರತದ ಕೃಷಿ ಸುಭಿಕ್ಷತೆ, ಸಮೃದ್ಧಿಯ ವರ್ಣನೆಗಳು ಲಭ್ಯವಿದೆ. ತದನಂತರ ಬ್ರಿಟಿಷ್ ಅಧಿಕಾರಿಗಳಾದ ಎ. ವಾಕರ್ (1820) ಮತ್ತು ಡಾ. ಜೆ.ಎ ವೋಲ್ಕರ್ (1893) ವರದಿಗಳಲ್ಲಿ ಭತ್ತ ಇಳುವರಿ ದಾಖಲಾಗಿದೆ. ತಂಜಾವೂರಿನಲ್ಲಿ ಹೆಕ್ಟೇರಿಗೆ 12-18 ಟನ್, ಕೊಯಮತ್ತೂರಿನಲ್ಲಿ 13 ಟನ್, ದಕ್ಷಿಣ ಆರ್ಕಾಟಿನಲ್ಲಿ 14.5 ಟನ್ ಭತ್ತದ ಇಳುವರಿ ಬಂದಿತ್ತೆಂದು ವರದಿ ಮಾಡಿದ್ದಾರೆ.

ಬರ್ನಾರ್ಡ್ ನಡೆಸಿದ ಸರ್ವೇ

18ನೇ ಶತಮಾನದಲ್ಲಿ (1770ರ ಸುಮಾರಿಗೆ) ಬ್ರಿಟಿಷ್ ಇಂಜಿನಿಯರಾದ ಥಾಮಸ್ ಬರ್ನಾರ್ಡ್ ಮದ್ರಾಸಿನ ಚೆಂಗಲ್ಪಟ್ಟು ಜಿಲ್ಲೆಯ 800 ಹಳ್ಳಿಗಳಲ್ಲಿ ಒಂದು ಸರ್ವೇ ನಡೆಸಿದ. ಅದರ ಪ್ರಕಾರ ತರೀಭೂಮಿಯ ಸರಾಸರಿಯ ಇಳುವರಿ ಹೆಕ್ಟೇರಿಗೆ 3600 ಕೆಜಿಯಾದರೆ, ಖುಷ್ಕಿ ಬೇಸಾಯದ ಸರಾಸರಿ ಇಳುವರಿ 1600 ಕೆಜಿಯಾಗಿತ್ತು. (ಆದರೆ ಇಂದಿನ ಆಧುನಿಕ ಕೃಷಿಯ ಪದ್ಧತಿ ಮೂಲಕ ಸರಾಸರಿ 3177 ಕೆಜಿ ಇದೆ)

ಜೀವವೈವಿಧ್ಯ ಅಗತ್ಯತೆ

ಕೇವಲ ಕೀಟ ಹಾಗು ರೋಗಾಣುವಿನ ಜೀವನಚಕ್ರ ಅರ್ಥ ಮಾಡಿಕೊಂಡು ಸಸ್ಯ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ದುರಂತವೇ ಸರಿ. ರೋಗ/ಕೀಟ ಬಾಧೆಯನ್ನು ಸಮತೋಲನ ಕಾಪಾಡಲು ಜೀವವೈವಿಧ್ಯತೆ ಹಾಗು ಮಣ್ಣಿನ ಸೂಕ್ಷಜೀವಿಗಳು ಬಹುಮುಖ್ಯ. ಸಸ್ಯದ ರೋಗನಿರೋಧಕ ಶಕ್ತಿಯು ಹವಾಮಾನ, ಜೀವವೈವಿಧ್ಯತೆ ಹಾಗು ಮಣ್ಣಿನಲ್ಲಿರುವ ಅಣುಜೀವಿಗಳು. ಮಣ್ಣಿನ ಜೀವಶಕ್ತಿ ಹಾಗು ಸುತ್ತಮುತ್ತಲಿನ ಜೀವಜಗತ್ತಿನ ಸಮತೋಲನ ಹಾಗು ರೈತನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.

ಸಸ್ಯಗಳ ಸಾಮರ್ಥ್ಯ

ಜೀವಂತ ಮಣ್ಣಿನಲ್ಲಿ ಬೆಳೆಯುವ ಜೀವಂತ ಸಸ್ಯಗಳು ಅಧಿಕ ಪ್ರಮಾಣದಲ್ಲಿ ಲಭ್ಯವಿರುವ ಧಾತುಗಳಿಂದ ಅಭಾವವಿರುವ ಧಾತುಗಳನ್ನು ಸೃಷ್ಟಿಸಿಕೊಳ್ಳುವ ಸಾಮಥ್ಯವನ್ನು ಹೊಂದಿರುತ್ತವೆ ಎಂದು 1873ರಲ್ಲಿ ಆಲ್ಬೆಷ್ಟ್ ವಾನ್ ಹರ್ಜೀಲ್, 1958ರಲ್ಲಿ ಪಿಯೆ ಬರಾಂಗರ್, 1962ರಲ್ಲಿ ಲೂಯಿ ಕರ್ವಾನ್ ಸಾಧಿಸಿ ತೋರಿಸಿದ್ದಾರೆ. ಈ ರೀತಿಯ ಧಾತುಗಳ ಸಮತೋಲನ ಬದಲಾವಣೆಗೆ ಮಣ್ಣಿನಲ್ಲಿರುವ ಅಸಂಖ್ಯಾತ ಅಣುಜೀವಿಗಳು ಹಾಗೂ ಪಂಚಭೂತಗಳಲ್ಲಿ ಒಂದಾದ ಆಕಾಶದಲ್ಲಿ ಆಗುವ ಮಿಂಚು. ಈ ರೀತಿಯ ಸಮತೋಲನ ಪರಿವರ್ತನೆಗೆ ಇಂತಿಷ್ಟೆ ಸಮಯವೇನು ಇಲ್ಲ ಹಾಗು ಪರಿವರ್ತನೆ ವೇಗ, ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ.

ಸೇವನೆಗೆ ಯೋಗ್ಯವಲ್ಲ !

ನವದೆಹಲಿಯ ಭಾರತೀಯ ವೈದ್ಯಕೀಯ ಅನುಸಂಧಾನ ಪರಿಷತ್ತು ಪ್ರಕಾರ ಭಾರತದಲ್ಲಿ ಸಿಗುವ ಶೇಕಡಾ 51ರಷ್ಟು ಆಹಾರ ಪದಾರ್ಥಗಳು ರಾಸಾಯನಿಕ ಅಂಶದಿಂದ ಕೂಡಿವೆ. ಅದರಲ್ಲಿ ಶೇಕಡಾ 20ರಷ್ಟು ಆಹಾರ ಪದಾರ್ಥಗಳು ತಿನ್ನಲಿಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿದೆ. ಬೆಂಗಳೂರಿನ ಜೈವಿಕ ಕೇಂದ್ರ, ಹುಳಿಮಾವು ಪ್ರಕಾರ, ಬೆಂಗಳೂರಿನಲ್ಲಿ ಸಿಗುವ ಸೊಪ್ಪಿನ ತರಕಾರಿಗಳಲ್ಲಿ ಹೆಚ್ಚಿನ ಆಧುನಿಕ ರಾಸಾಯನಿಕ ಅಂಶ ಕಂಡು ಬಂದಿದೆ, ಒಟ್ಟಾರೆ ಶೇಕಡಾ 80ರಷ್ಟು ಸೊಪ್ಪಿನ ತರಕಾರಿಗಳು ತಿನ್ನಲಿಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿಕೊಂಡಿದೆ. ಬಹುತೇಕವಾಗಿ ನಾವು ತಿನ್ನುವ ಆಹಾರ ವಿಷಮಯವಾಗಿದೆ. ವಿಷಚಕ್ರದಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ಸಾವಯವ ಪದಾರ್ಥಗಳ ಬಳಕೆ ಮತ್ತು ಉತ್ಪಾದಕರಿಗೆ ವಿಶೇಷ ಪ್ರೋತ್ಸಾಹ ಅವಶ್ಯಕ.

ಕೃಷಿಭೂಮಿ ಮೇಲೆ ದೌರ್ಜನ್ಯ

ಆಹಾರ ಉತ್ಪಾದನೆ ಹೆಸರಲ್ಲಿ ಕೃಷಿ ಭೂಮಿಯ ಮೇಲೆ ದೌರ್ಜನ್ಯ ಎಸಗಲು ನಮ್ಮ ಕೃಷಿ ನೀತಿಗಳು ಪರವಾನಿಗಿ ನೀಡಿವೆ. ತಿನ್ನುವ ಆಹಾರ ವಿಷವಾಗುತ್ತಿದೆ ಹಾಗು ಇಂದು ಕೃಷಿ ಯಾರಿಗೂ ಬೇಡವಾದ ಕ್ಷೇತ್ರವಾಗಿದೆ. ನಮ್ಮ ಹಿರಿಯರು ಸಹಜ ಕೃಷಿಯ ಪ್ರೇಮಿಗಳಾಗಿದ್ದರು. ಅವರು ಕೃಷಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಇಂದು ಕೃಷಿ ವಿಷ ಕಕ್ಕುವ ಕಾರ್ಖಾನೆ ಆಗಿಬಿಟ್ಟಿದೆ. ಬೇಕಾಬಿಟ್ಟಿ ರೀತಿಯಲ್ಲಿ ಕಾರ್ಕೋಟಕ ರಾಸಾಯನಿಕಗಳನ್ನು ಬಳಸುವ ನಮ್ಮ ಆಧುನಿಕ ಕೃಷಿ ವಿಧಾನಗಳು ಕೇವಲ ಬಹುರಾಷ್ಟೀಯ ಕೃಷಿ ಕಂಪನಿಗಳಿಗೆ ಆದಾಯ ತಂದ್ದೊಡಿವೆ. ಇತ್ತ ಕೃಷಿ ಸಮುದಾಯ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ಅಭದ್ರತೆಯಿಂದ ಜೀವನ ನಡೆಸುತಿದ್ದಾನೆ. ಆತ್ಮಹತ್ಯೆಗಳು ವರ್ಷದಿಂದ ವರ್ಷಕ್ಕೆ ಆರೋಹಣ ರೀತಿಯಲ್ಲಿ ಏರಿಕೆ ಕಂಡಿದೆ.

ಗಾಂಧಿ ಮತ್ತು ನೆಹರು ನೀತಿಗಳು

ಗ್ರಾಮಸ್ವರಾಜ್ಯ ಅಥವಾ ಗ್ರಾಮ ಸ್ವಾವಲಂಬನೆ ಪರಿಕಲ್ಪನೆಯನ್ನು ನಾಶ ಮಾಡುವ ಯಾವುದೇ ಬಗೆಯ ತಂತ್ರಜ್ಞಾನಗಳನ್ನು ದೂರವಿಡಿ ಎಂದು ಸ್ವತಂತ್ರ ಭಾರತದ ಜನತೆಯನ್ನು ಹಾಗೂ ಜನನಾಯಕರನ್ನು ಮಹಾತ್ಮ ಗಾಂಧೀಜಿ ಸದಾ ತಾಕೀತು ಮಾಡುತ್ತಿದ್ದರು. ಇದಕ್ಕೆ ವಿರುದ್ಧವಾಗಿ  ಸ್ವತಂತ್ರ ಭಾರತದ ಏಳ್ಗೆ ಹಾಗು ಅಭಿವೃದ್ಧಿ ಕೇವಲ ಆಧುನಿಕ ತಂತ್ರಜ್ಞಾನಗಳು ಅಥವಾ ಕೈಗಾರೀಕರಣದಿಂದ ಮಾತ್ರ ಸಾಧ್ಯ ಎಂದು ಜವಾಹರ್‌ ಲಾಲ್ ದೃಢವಾಗಿ ನಂಬಿದ್ದರು.  ಕೊನೆಗೆ ಜಯ ಲಭಿಸಿದ್ದು ನೆಹರು ಪಾಳಯಕ್ಕೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಸುಸ್ಥಿರಕೃಷಿ ಪದ್ಧತಿಗಳ ಅನಿವಾರ್ಯತೆ ಒಂದು ಕಡೆಯಾದರೆ; ರಾಸಾಯನಿಕ ಕೃಷಿಯ ಅವಶ್ಯಕತೆ ಅನಿವಾರ್ಯ ಎಂದು ಹೇಳುವ ಮತ್ತೂಂದು ವರ್ಗ. ಆದರೆ ಈಗ ಜಯ ಬೇಕಾಗಿರುವುದು ಮೊದಲ ವರ್ಗದವರಿಗೆ. ಇಲ್ಲವಾದರೆ, ಮಾನವನ ಕುಲ ವಿನಾಶಕ್ಕೆ ಮತ್ತಷ್ಟು ಹತ್ತಿರವಾದಂತೆ.

ಹವಾಮಾನ ಬದಲಾವಣೆ ಹಾಗೂ ಮಾನಸಿಕ ರೋಗಗಳು

ಹವಾಮಾನ ಬದಲಾವಣೆಯ ಘೋರ ಪರಿಣಾಮಗಳ ಕುರಿತು ಮೊದಲ ಬಾರಿ ಕೇಳುವವರಿಗೆ ಗೋಕುಲಾಷ್ಟಮಿಗೂ ಇಮಾಮಾಸಾಬ್‌ಗೂ ಏನು ಸಂಬಂಧ? ಎಂಬ ಅನಿಸಿಕೆ ಬರಬಹುದು. ಆದರೆ, ಹವಾಮಾನ ಬದಲಾವಣೆಯಿಂದ ಉಂಟಾಗುವ ಪ್ರವಾಹಗಳು, ಕ್ಷಾಮ ಮತ್ತು ಇತರೆ ನೈಸರ್ಗಿಕ ವಿಕೋಪಗಳು ಜನರಲ್ಲಿ ಮಾನಸಿಕ ರೋಗಗಳನ್ನು ಉಂಟು ಮಾಡುತ್ತವೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಮಾನಸಿಕ ರೋಗಿಗಳಿಗೂ ಹಾಗು ಹವಾಮಾನ ಬದಲಾಣೆಗೂ ಇರುವ ಸಂಬಂಧ ಕುರಿತ ಅಂಶವನ್ನು ವರದಿಯಲ್ಲಿ ತಿಳಿಸಲಾಗಿದೆ. ಚಂಡ ಮಾರುತದಿಂದ ನಲುಗಿದ ಒರಿಸ್ಸಾ ಮತ್ತು ಪ್ರವಾಹಗಳಿಂದ ಮುಳುಗಿದ್ದ ಇಂಗ್ಲೆಂಡ್ ಪರಿಸ್ಥಿತಿ ಜನರನ್ನು ತೀವ್ರವಾಗಿ ಕಾಡಿದೆ.

ಕೃಷಿಗೆ ತೊಂದರೆ

ಬರಪೀಡಿತ ಪ್ರದೇಶಗಳಲ್ಲಿನ ರೈತರು ತೀವ್ರ ಹಣಕಾಸು ಮುಗ್ಗಟ್ಟು ಮತ್ತು ಸಾಲದ ಹೊರೆಯಿಂದ ಹೆಚ್ಚು ಮಾನಸಿಕ ವ್ಯಾಧಿ ಮತ್ತು ಒತ್ತಡಕ್ಕೆ ಒಳಗಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಸೂಕ್ತ ಯೋಜನೆಯಂತೆ ಬೆಳೆ ಬೆಳೆಯಲು ಆಗದಿರುವುದು, ಬೆಳೆ ನಾಶ, ಫಸಲು ಸಂಗ್ರಹಣೆ ಮಾಡದಿರುವುದು, ಪಶುಪಾಲನೆ ಅಭಿವೃದ್ಧಿ ಇವೆಲ್ಲವೂ ತೊಂದರೆಗೆ ಸಿಲುಕಿವೆ. ಇದು ಇತರೆ ವ್ಯಾಪಾರ-ವ್ಯವಹಾರಗಳಿಗೆ ಪೆಟ್ಟು ನೀಡುತ್ತದೆ.

ಈಗಾಗಲೇ ಸರ್ಕಾರದ ಜಾಗತೀಕರಣದ ಮತ್ತು ಉದಾರೀಕರಣದ ನೀತಿಗಳು ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳುತ್ತಿರುವ ಜೊತೆಗೆ ಹವಾಮಾನ ಬದಲಾವಣೆಯ ಪೆಡಂಭೂತವು ಸೇರಿಕೊಂಡಲ್ಲಿ ರೈತರ ಬದುಕು ಸಮಾಧಿಯೇ ಸರಿ.

ಆಧುನಿಕ ಕೃಷಿಪದ್ಧತಿ ಮೂಡಿಸಿದ ಆತಂಕ

ಈಗಿನ ವ್ಯವಸಾಯದ ಪದ್ಧತಿಗಳನ್ನು ನೋಡಿದಾಗ ಗಾಬರಿಮೂಡುತ್ತದೆ. ಅತಿಯಾದ ರಾಸಾಯನಿಕ ಬಳಕೆ, ಅತಿಯಾದ ನೀರಿನ ಹಾಗು ಯಾಂತ್ರಿಕರಣ ಬಳಕೆಯಿಂದ ಪರಿಸರದಲ್ಲಿ ತಾಪಮಾನ ಅಧಿಕವಾಗುತ್ತದೆ. ಹವಾಮಾನ ಬದಲಾವಣೆಯಲ್ಲಿ ರಾಸಾಯನಿಕಯುಕ್ತ ಕೃಷಿಯ ಕೊಡುಗೆ ಸಾಕಷ್ಟಿದೆ. ಹಾಗಾದರೆ ನಮಗೆ ಬೇರೆ ಮಾರ್ಗವಿಲ್ಲವೆ? ದಾರಿಯಿದೆ ಆದರೆ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಇಂಗಾಲ ಅವಶ್ಯಕ ಆದರೆ ಹೆಚ್ಚಾದರೂ ಕಷ್ಟ

ಪರಿಸರದಲ್ಲಿ ಇಂಗಾಲ ಬಹು ಅವಶ್ಯ. ಪ್ರತಿಯೊಂದು ಪ್ರಾಣಿ ಮತ್ತು ಸಸ್ಯಗಳ ಬೆಳವಣಿಗೆಗೆ ಇಂಗಾಲ ಬೇಕೆ ಬೇಕು. ಆದರೆ ಪರಿಸರದಲ್ಲಿ ಇಂಗಾಲ ಅಗತ್ಯಕ್ಕಿಂತ ಹೆಚ್ಚು ಇದ್ದರೆ ಇಡೀ ಮನುಕುಲವೇ ನಾಶವಾದಿತು. ಇಂಗಾಲ ಅನೇಕ ಮೂಲಗಳಿಂದ ವಾತಾವರಣಕ್ಕೆ ಸೇರುತ್ತದೆ. ಅವುಗಳಲ್ಲಿ ಕೃಷಿಯೂ ಸಹ. ಪ್ರಪಂಚದಾದ್ಯಂತ ಭೂಮಿಯ ತಾಪಾಮಾನ ಹೆಚ್ಚಾಗುತ್ತಿರುವುದರಿಂದ ಹವಾಮಾನ ಬದಲಾಗುತ್ತಿದೆ. ಹವಾಮಾನದ ಬದಲಾವಣೆಯ ದುಷ್ಪರಿಣಾಮಗಳ ಹಲವಾರು ಮುಖಗಳು ತೀವ್ರಗತಿಯಲ್ಲಿ ನಮಗೆ ಗೋಚರವಾಗುತ್ತಿವೆ. ಭೂಮಿಯ ತಾಪಮಾನ ಇದೇ ಮಟ್ಟದಲ್ಲಿ ಏರಿಕೆಯಾದಲ್ಲಿ ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಉಷ್ಣಾಂಶ ನಾಲ್ಕು ಡಿಗ್ರಿಯಷ್ಟು ಹೆಚ್ಚಾಗುತ್ತದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಉಷ್ಟಾಂಶ ಇನ್ನೆರಡು ಡಿಗ್ರಿಯಷ್ಟು ಹೆಚ್ಚಾದರೂ ಮನುಷ್ಯರು ಬದುಕುವುದು ಕೂಡ ದುಸ್ತರ.

ವಿಷಾನಿಲಗಳು

ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗಿರುವ ಕೈಗಾರಿಕೆಗಳು ಬಿಡುಗಡೆ ಮಾಡುತ್ತಿರುವ ವಿಷಾನಿಲಗಳನ್ನು ಕಡಿತ ಮಾಡಬೇಕೆಂದು ವಿಶ್ವಾದ್ಯಂತ ಸಂಘ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಂದ ಎಚ್ಚರಿಕೆ ಕರೆ ಬಂದಿದೆ. ಆದರೂ ಮನಬಂದಂತೆ ವಿಷಾನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಅಧಿಕ ಪರಿಸರ ಮಾಲಿನ್ಯದಿಂದ ಪರಿಸರದಲ್ಲಿ ಬದಲಾವಣೆಗಳನ್ನು ಕಾಣಬಹುದು. ಈ ಬದಲಾಣೆಗಳು ಕೃಷಿ ಇಳುವರಿಯಲ್ಲಿ ಸಾಕಷ್ಟು ಕಿರಿ-ಕಿರಿ ಮಾಡಿವೆ. ನಗರೀಕರಣ-ಕೈಗಾರಿಕಾಕರಣ-ಉದಾರಿಕರಣದಿಂದ ಜೀವ ವೈವಿಧ್ಯತೆಗೆ ಮತ್ತು ಹವಮಾನಕ್ಕೆ ತುಂಬಾ ಪೆಟ್ಟು ಬಿದ್ದಿದೆ.

ಮಳೆಯ ಕೊರತೆ

ಈ ಅಂಶಗಳು ಕಳೆದ ಹಲವು ದಶಕಗಳಿಂದಲೂ ಕೃಷಿ ಉತ್ಪಾದನೆ ಮತ್ತು ಕೃಷಿಕರನ್ನು ಕಾಡುತ್ತಲೇ ಇವೆ. ನಿಸರ್ಗದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಸಂಪೂರ್ಣ ಅರಿವಿದೆ. ನೂರಾರು ವರ್ಷಗಳಿಂದ ಕೃಷಿಕರು ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಮಳೆಯ ಕೊರತೆ ಇದೇ ಮೊದಲಲ್ಲ. ಹಿಂದೆ ಇಂತಹ ಸಂದರ್ಭ ಎದುರಾದಾಗ, ಅದನ್ನು ನಿರ್ವಹಿಸಲು ಕೃಷಿಕರು ಮಾನಸಿಕವಾಗಿಯೂ ಸಿದ್ಧರಾಗಿಯೇ ಇದ್ದರು. ಮುಂದೆಯೂ ಸಹ ಅಂತಹ ಸಂದರ್ಭ ಬಂದಲ್ಲಿ, ಅದನ್ನದುರಿಸಲು ಮಾನಸಿಕವಾಗಿ ಸಿದ್ಧರಿದ್ದಾರೆ.

ತಲಾದಾಯದ ಸುಧಾರಣೆ ಎಲ್ಲಿ ?

ಭಾರತದ ಕೃಷಿರಂಗದಲ್ಲಿ ಉತ್ಪಾದನೆ ಮತ್ತು ತಲಾ ಅದಾಯವನ್ನು ಹೆಚ್ಚಿಸುವಂತಹ ಸುಧಾರಣಾ ಕ್ರಮಗಳಾವುವು ಎಂಬುದೇ ಇಂದು ನಮ್ಮ ದೇಶವನ್ನು ಕಾಡುತ್ತಿರುವ ಭಯಂಕರ ಸಮಸ್ಯೆಯೆನಿಸಿದೆ. ಜೊತೆಗೆ ಧಾನ್ಯಗಳ ಉತ್ಪಾದನೆಯಲ್ಲೂ ಸಹ ಬೆಳವಣಿಗೆ ಸಾಧಿಸುವುದು ಮೂಲ ಆದ್ಯತೆಯಾಗಿದೆ. ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲು ಒಂದು ಸಮಾನಾಂತರ ಮಾರಾಟ ವ್ಯವಸ್ಥೆ ಅತ್ಯಗತ್ಯವಾಗಿ ಬೇಕಾಗಿದೆ. ಆದರೆ ನಮ್ಮ ದೇಶ ದೊಡ್ಡದಾಗಿರುವುದರಿಂದ, ವಿಶೇಷತೆ – ವಿಭಿನ್ನತೆಯಿಂದ ಕೂಡಿರುವ ಎಲ್ಲಾ ಪ್ರದೇಶಗಳಿಗೂ ಸಲ್ಲುವಂತಹ ಅಖಂಡ ಭಾರತೀಯ ನೀತಿಯೊಂದನ್ನು ರೂಪಿಸುವುದು ಕಷ್ಟಸಾಧ್ಯ. ಹಾಗೆಯೇ ಕೃಷಿ – ಪ್ರಾಕೃತಿಕ ಪರಿಸ್ಥಿತಿಯನ್ನು ಕಡೆಗಣಿಸುವಂತಿಲ್ಲ. ಕೋಟ್ಯಾಂತರ ಜನರ ಆಹಾರ ಭದ್ರತೆ ಮೂಲ ಆದ್ಯತೆಯಾಗಬೇಕಿದೆ. ಆದ್ದರಿಂದ ಯಾವದೇ ನೀತಿಯೂ ಸಹ ಇದನ್ನು ಕೇವಲವಾಗಿ ಪರಿಗಣಿಸುವಂತಿಲ್ಲ.

ವಿದೇಶದ ಆಹಾರಧಾನ್ಯ ಬೇಡ

ಇಂತಹ ಪರಿಸ್ಥಿತಿಯಲ್ಲಿ ವಿದೇಶಗಳಿಂದ ಕಡಿಮೆ ಬೆಲೆಯಲ್ಲಿ ಗೋಧಿಯನ್ನು ಆಮದು ಮಾಡಿಕೊಳ್ಳುವುದು ನಮ್ಮ ದೀರ್ಘಕಾಲಿಕ ದೃಷ್ಟಿಕೋನವಾಗಬಾರದು. ಬದಲಿಗೆ ವಿದೇಶಗಳನ್ನು ಅವಲಂಬಿಸಿ ಆಮದಾಗಿಸಿಕೊಳ್ಳುತ್ತಿರುವ ಆಹಾರ ಧಾನ್ಯಗಳನ್ನು ಪರಿಪೂರ್ಣವಾಗಿ ತಿರಸ್ಕರಿಸಬೇಕು. ಇಲ್ಲವಾದಲ್ಲಿ ದೀರ್ಘಕಾಲಿಕ ಯೋಜನೆಯಡಿ ನಮ್ಮ ದೇಶವನ್ನು ಪ್ರಗತಿಯತ್ತ ಸಾಗಿಸಬೇಕಾದ ಕಾರ್ಯದ ಬದಲಿಗೆ ಅವಲಂಬನೆಯನ್ನು ವ್ಯಾಪಕವಾಗಿಸುವಂತಹ ಘಟನೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ, ರೈತರಿಗೆ ಉತ್ಪಾದನಾ ವಿಧಾನ, ಉತ್ಪಾದನಾ ವೆಚ್ಚದಲ್ಲಿ ಹಿಡಿತ, ಗುಣಮಟ್ಟದ ನಿರ್ವಹಣೆ ಮತ್ತು ಖಚಿತವಾಗಿರುವ ಆದಾಯಗಳೇ ಪ್ರಮುಖವಾಗುತ್ತವೆ. ಮೇಲ್ಕಂಡ ಅಗತ್ಯತೆಗಳನ್ನು ಪಡೆಯುವಲ್ಲಿ ನೆರವಾಗುವ ಹಾಗೂ ಸುಸ್ಥಿರ ಮಾರುಕಟ್ಟೆ ಹೊಂದಿರುವ ಸಾವಯವ ಕೃಷಿ ಪದ್ಧತಿಯನ್ನು ಇಂದು ಪ್ರೋತ್ಸಾಹಿಸಬೇಕಿದೆ.

LEAVE A REPLY

Please enter your comment!
Please enter your name here