ಕೃಷಿ ಪಾಠ ಮಾಡುವ ಮತ್ತು ಕೇಳುವ ಮುನ್ನ !

0
ಲೇಖಕರು: ಪ್ರಶಾಂತ್‌ ಜಯರಾಮ್

ವಿವಿಧ ರೀತಿಯ ಕೃಷಿ ಹೆಸರೇಳಿಕೊಂಡು ಕೃಷಿ ಕಾರ್ಯಕ್ರಮಗಳನ್ನು ಮಾಡುವುದು ಇತ್ತೀಚಿಗೆ ಒಂದು ಫ್ಯಾಷನ್ ಆಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಕೃಷಿ ಮಾಡಿ ಎಂದು ಉಪದೇಶ ನೀಡುವ ಬಹುತೇಕರು ಬೇರೆ ಕಡೆ ಜೀತಕ್ಕಿರುತ್ತಾರೆ ಅಥವಾ ಅವರು ಅಥವಾ ಅವರ ಮಕ್ಕಳು ಕೃಷಿ ಮಾಡಲು ಹಳ್ಳಿಗೆ ಹೋಗುವುದಿಲ್ಲ, ಇರುವ ಸ್ವಂತ ಭೂಮಿಯನ್ನು ಬೇರೆಯವರಿಗೆ ಗುತ್ತಿಗೆ ನೀಡಿ ಕೃಷಿ ಜೀವನ, ನೆಮ್ಮದಿ ಮತ್ತು ಆದಾಯದ ಬಗ್ಗೆ ಪಾಠ ಮಾಡುತ್ತಿರುತ್ತಾರೆ ಅಥವಾ ಪತ್ರಿಕೆಗಳಿಗೆ ಲೇಖನ ಬರೆಯುತ್ತಿರುತ್ತಾರೆ!

ಯಾರು ಕೃಷಿಯನ್ನು ಅನುಭವಿಸದೇ,ಕೃಷಿ ಆದಾಯದಲ್ಲಿ ಬದುಕುತ್ತಿಲ್ಲವೋ ಅವರುಗಳು ಕೃಷಿ ಬಗ್ಗೆ ಆಡುವ ಮಾತು ಅವರ ಪೊಳ್ಳುತನವನ್ನು ತೋರಿಸುತ್ತದೆ,ಇಂತಹವರು ಕೃಷಿ ಬಗ್ಗೆ ಮಾತನಾಡದೇ ಇರುವುದು ಮತ್ತು ಹೊಸದಾಗಿ ಕೃಷಿಗೆ ಬರುವವರು ಇಂತಹವರ ಮಾತನ್ನು ಕೇಳದೆ ಇರುವುದು ಒಳ್ಳೆಯದು.ಅವರಿಗೆ ಕೃಷಿ ಮತ್ತು ಕೃಷಿಕರ ಬಗ್ಗೆ ನೈಜ ಸ್ಥಿತಿ ತಿಳಿದಿರುವುದಿಲ್ಲ ಮತ್ತು ಅದು ಅವರ ಸ್ವಾನುಭವಾಗಿರುವುದಿಲ್ಲ.

ಕೃಷಿ ಕಾರ್ಯಕ್ರಮ ನೆಪದಲ್ಲಿ ವಸ್ತು ಮತ್ತು ವ್ಯಕ್ತಿ ಆಧಾರಿತ ಪ್ರಚಾರ ಮುಖ್ಯವಾಗಿ ನೆಡೆಯುತ್ತಿದೆ, Product and Personal ಪ್ರಮೋಷನ್ ಮುಖ್ಯವಾಗಿರುವ ಕೃಷಿ ಕಾರ್ಯಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲ.ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಅನೈತಿಕ ಮತ್ತು ಶೋಷಿತ ವ್ಯವಸ್ಥೆಯೊಂದಿಗೆ ಶಾಮೀಲಾಗಿ ಕೃಷಿ ಕಾರ್ಯಕ್ರಮಗಳನ್ನು ನೆಡೆಸುತ್ತಿರುವುದು ಎಷ್ಟು ಸರಿ?

ಎರಡನೇ ಆದಾಯವಿದ್ದು ತೋಟ ಕಟ್ಟಿರುವ ನಿವೃತ್ತ ಅಧಿಕಾರಿಗಳು, ಉದ್ಯಮಿಗಳು, ಸಾಫ್ಟ್ ವೇರ್ ಇವರ ಬಗ್ಗೆ ಲೇಖನ ಬರೆದು ಕೃಷಿ ಆದಾಯವನ್ನು ವೈಭವಿಕರಿಸುವುದು ಬೇಡ.ಬೇರೆ ಆದಾಯವಿಲ್ಲದೇ ಕನಿಷ್ಠ ಐದು ವರ್ಷವಾದರೂ ಕೃಷಿ ಮಾಡಿ, ಕೃಷಿ ಆದಾಯದಲ್ಲಿ ಬದುಕು ಕಟ್ಟಿಕೊಂಡಿರುವ ಕೃಷಿಕರ ಅನುಭವಗಳು ಲೇಖನಗಳಾಗಲಿ.

ಗೋವಾಧಾರಿತ ಕೃಷಿಯ ಹೆಸರಿನಲ್ಲಿ ಕೃಷಿಯೊಂದಿಗೆ ಧರ್ಮ ಮತ್ತು ರಾಜಕೀಯ ಬೆರೆಸುವ ಕೆಲಸಗಳು ನೆಡೆಯುತ್ತಿದೆ,ಸ್ವಂತ ತಂದೆ ತಾಯಿ ಸೇವೆ ಮಾಡದವರು ಕೂಡ ಗೋಸೇವೆ ಹೆಸರಿನಲ್ಲಿ ತಮ್ಮ ಸ್ವಂತ ಹಿತಾಸಕ್ತಿಗಾಗಿ ಶ್ರಮಿಸುತ್ತಿದ್ದಾರೆ!

ಕೃಷಿ ಬಗ್ಗೆ ಸ್ವಾನುಭಾವ ಇರುವ ಕೃಷಿಕರೇ ಮಾತನಾಡಬೇಕು,ಬೇರೆ ಆದಾಯದ ಮೂಲವಿಲ್ಲದೇ ಕೃಷಿ ಆದಾಯದಲ್ಲಿ ಸ್ವಾಲಂಬಿ ಜೀವನ ನೆಡೆಸುತ್ತಿರುವ ಕೃಷಿಕರ ತೋಟದಲ್ಲಿ ಕೃಷಿಯ ಎಲ್ಲಾ ಆಯಾಮಗಳನ್ನು ಪ್ರಾಯೋಗಿಕವಾಗಿ ಕಲಿಯಲು ಸಾಧ್ಯ.

ಕೃಷಿ ಕಾರ್ಯಕ್ರಮ ಮಾಡುವವರು, ಕೃಷಿ ಪದವಿ ಪಡೆದವರು ಕೃಷಿಕರಾಗುವುದಿಲ್ಲ. ಅವರಿಗೆ ಕೃಷಿ ಅನುಭವ ಇಲ್ಲ, ಮಣ್ಣಿನ ವಾಸನೆಯೇ ಗೊತ್ತಿಲ್ಲ ಎಂದ ಮೇಲೆ ಅವರು ಕೃಷಿಕರಾಗಲು ಹೇಗೆ ತಾನೇ ಸಾಧ್ಯ?ಕೃಷಿ ಕಾರ್ಯಕ್ರಮ/ತರಬೇತಿ ಮಾಡುವ ಮುನ್ನ ಬೇರೆಡೆ ಇರುವ ಜೀತವನ್ನು ಬಿಟ್ಟು ಕನಿಷ್ಠ ಐದು ವರ್ಷ ಕೃಷಿ ಮಾಡಿ,ಕೃಷಿ ಆದಾಯದಲ್ಲಿ ಜೀವನ ನೆಡಸಿ ಆನಂತರ ಅವರು ರೈತರಿಗೆ ಸಲಹೆ ನೀಡುವುದು ಸೂಕ್ತ.

ಕೃಷಿ ಕಾರ್ಯಕ್ರಮಕ್ಕೆ ಹೋಗುವವರು ಕೂಡ ಕೃಷಿ ಬಗ್ಗೆ ಹೇಳುವವರ ಹಿನ್ನಲೆ ತಿಳಿದುಕೊಳ್ಳಿ ಮತ್ತು ಈ ಮೂರು ಪ್ರಶ್ನೆಗಳನ್ನು ಅವಶ್ಯವಾಗಿ ಕೇಳಿ ತಿಳಿದುಕೊಳ್ಳಿ ‘ಕೃಷಿ ಮಾಡುತ್ತಿದ್ದಾರಾ ಅಥವಾ ಬರೀ ಕೃಷಿ ಪಾಠ ಮಾಡುತ್ತಿದ್ದಾರಾ?”, “ಎಷ್ಟು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ?”,”ಬೇರೆ ಆದಾಯವಿಲ್ಲದೇ ಬರೀ ಕೃಷಿ ಆದಾಯದಲ್ಲಿ ಬದುಕುತ್ತಿದ್ದಾರಾ?”ಈ ಪ್ರಶ್ನೆಗೆ ಖಚಿತ ಉತ್ತರ ಬಂದ ನಂತರ ಕಾರ್ಯಕ್ರಮದಲ್ಲಿ ಕೃಷಿ ಪಾಠ ಕೇಳುವುದು ಬಿಡುವುದು ನಿಮ್ಮ ಇಚ್ಛೆ!

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
93424 34530

LEAVE A REPLY

Please enter your comment!
Please enter your name here