ಪುರಾತನ ಹಲಸು ತಾಯಿಮರಗಳಿಗೆ ಪುನರುಜ್ಜೀವನ ಬೇಕಿದೆ

0

ಹಲಸಿನ ಮರಗಳು ಸುಸ್ಥಿರ ಕೃಷಿ ಬದುಕಿಗೆ ಸಹಾಯಕ. ನೆರೆಯ ಕೇರಳ ರಾಜ್ಯದಲ್ಲಿ ಹಲಸಿನ ಹಣ್ಣುಗಳನ್ನು ಅವುಗಳ ರುಚಿಗೆ ತಕ್ಕಂತೆ ವಿಂಗಡಿಸಿ ಬೇರೆಬೇರೆ ತಿನಿಸುಗಳಾಗಿ ಮೌಲ್ಯವರ್ಧನೆ ಮಾಡುತ್ತಿದ್ದಾರೆ. ಉದಾಹರಣೆಗೆ ಹೆಚ್ಚು ಸಿಹಿ ಇರುವ ಹಲಸಿನ ಹಣ್ಣುಗಳನ್ನು ಪೇಢಾ, ಬರ್ಫಿ ಮತ್ತಿತರ ಸಿಹಿ ತಿನಿಸುಗಳಾಗಿ ತಯಾರು ಮಾಡುತ್ತಾರೆ. ಹೆಚ್ಚು ರುಚಿಯಿಲ್ಲದ ತಳಿಗಳ ಹಲಸನ್ನು ಬಳಸಿ ಖಾರದ ತಿನಿಸುಗಳನ್ನು ಮಾಡುತ್ತಾರೆ. ಇದರಿಂದ ಹಣ್ಣಿನ ಬೆಳೆಗಾರರಿಗೂ ಲಾಭ. ತಿನಿಸು ತಯಾರಕರಿಗೂ ಲಾಭ. ಅಲ್ಲಿ ಸಾಕಷ್ಟು ಮಂದಿ ರೈತರು ಈ ಎರಡು ಕಾರ್ಯಗಳನ್ನೂ ತಾವೇ ಮಾಡುತ್ತಾ ಉತ್ತಮ ಪ್ರಮಾಣದ ಆದಾಯ ಗಳಿಸುತ್ತಿದ್ದಾರೆ.

ಪ್ರಸ್ತುತ ಕೃಷಿತಜ್ಞ ಎಲ್.ಸಿ. ಚನ್ನರಾಜ್ ಅವರು ಕಗ್ಗುಂಡಿ, ಹೆಗ್ಗಡದೇವನಕೋಟೆಯ ಮತ್ತು ಸುತ್ತಮುತ್ತಲೂ ಇರುವ ಹಲಸಿನ ತಾಯಿಮರಗಳ ಬಗ್ಗೆ ವಿಶೇಷ ಮಾಹಿತಿ ನೀಡಿದ್ದಾರೆ. ಇಂಥ ತಳಿಗಳನ್ನು ಉಳಿಸಿ, ಬೆಳೆಸಿ ಅವುಗಳ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಿದರೆ ಕೃಷಿಕರಿಗೆ ಸಾಕಷ್ಟು ಲಾಭವಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಗ್ಗುಂಡಿ ಮತ್ತು ಹೆಗ್ಗಡದೇವನಕೋಟೆಯ ಅಣ್ಣೂರು, ಹೊಸಹಳ್ಳಿಯಲ್ಲಿರುವ 300- 400 ವರ್ಷ ವಯಸ್ಸಿನ ತಾಯಿಮರಗಳ ವಿಶೇಷ ಗುಣಗಳ ಬಗ್ಗೆ ಫಾರೆಸ್ಟ್ ಡಿಪಾರ್ಟ್ಮೆಂಟಿನವರು ಮಾಹಿತಿ ನೀಡಿದ್ದರು.

ಪಿರಿಯಾಪಟ್ಟಣದ ಕಗ್ಗುಂಡಿ ಮತ್ತು ಹೆಗ್ಗಡದೇವನಕೋಟೆಯ ಅಣ್ಣೂರು, ಹೊಸಹಳ್ಳಿಗೆ ಹೋದಾಗ ಪುರಾತ ಹಲಸಿನಮರಗಳ ದರ್ಶನವಾಯಿತು. 1974-75ರ ಸುಮಾರಿಗೆ ಕಗ್ಗುಂಡಿ ಗ್ರಾಮದಲ್ಲಿ ಬರೋಬ್ಬರಿ 2, 311 ಹಲಸಿನಮರಗಳಿದ್ದವು. ಇವು ಒಂದೇ ಊರಿನಲ್ಲಿ ಇರುವ ಹಲಸಿನ ಮರಗಳ ಸಂಖ್ಯೆ. ಈ ಎಲ್ಲಾ ಮರಗಳ ವಯಸ್ಸು ಹೆಚ್ಚು ಕಮ್ಮಿ 300- 400 ವರ್ಷಗಳು, ಒಂದೊಂದು ಮರದ ಹಣ್ಣುಗಳಿಗೂ ಒಂದೊಂದು ವಿಶೇಷ ರುಚಿ ಮತ್ತು ಬಣ್ಣ, ಕೆಲವು ಮರಗಳು ಮುಂಗಾರಿನಲ್ಲಿ ಹಣ್ಣು ಬಿಟ್ಟರೆ, ಇನ್ನು ಕೆಲವು ಹಿಂಗಾರಿನಲ್ಲಿ ಹಣ್ಣು ಬಿಡುತ್ತಿದ್ದವು.

ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನಕೋಟೆಯ ಗ್ರಾಮಗಳಿಗೆ ಹೊಗೆಸೊಪ್ಪು ಪ್ರವೇಶದಿಂದ ಪುರಾತನ ಹಲಸಿನ ಮರಗಳ ಮಾರಣಹೋಮ ಪ್ರಾರಂಭವಾಯಿತು. ಹಲಸಿನ ಮರದ ಸೌದೆ ಹೊಗೆಸೊಪ್ಪು ಬೇಯಿಸಲು ಆಗುತ್ತಿರಲಿಲ್ಲ. ಹೀಗಾಗಿ ಹಲವರು ಇರುವ ಹಲಸಿಮರಗಳನ್ನು ಕಡಿದು ಮಾರಿದ ದುಡ್ಡಿನಿಂದ ಹೊಗೆಸೊಪ್ಪು ಬೇಯಿಸಲು ಸೌದೆ ಕೊಂಡರು.

ಇನ್ನು ಕೆಲ ರೈತರು ಹೊಗೆಸೊಪ್ಪಿನ ಬೆಳೆಗೆ ನೆರಳಾಗುತ್ತವೆ ಎಂದು ಕತ್ತರಿಸಿದರು. ಇನ್ನು ಕೆಲವರು ಬೇಸಿಗೆಯಲ್ಲಿ ಮೇವಿನ ಅಭಾವದಿಂದ ಮೇಕೆ ಕುರಿಗಳಿಗೆ ಮರದ ಕೊಂಬೆಗಳನ್ನು ಕತ್ತರಿಸಿದರು. ಇದರಿಂದ ಮರಗಳು ಸೊರಗಿ ಹೋದವು. ಕೇರಳದಲ್ಲಿ ಮನೆ, ದೇವಸ್ಥಾನ, ಕಟ್ಟಲು ಮತ್ತು ಪಿಠೋಪಕರಣಗಳಿಗೆ ಹಲಸಿನ ಮರ ಬಳಸುವುದು ಹೆಚ್ಚು.

ಈ ಕಾರಣಗಳಿಂದ ಇಲ್ಲಿನ ರೈತರು ತಮ್ಮ ಆರ್ಥಿಕ ಸಂಕಷ್ಟಗಳಿಗಾಗಿ ಕಡಿಮೆ ಬೆಲೆಗೆ ಹಲಸಿನ ಮರಗಳನ್ನು ಅಲ್ಲಿಗೆ ಮಾರಿಬಿಟ್ಟರು. ಈ ಎಲ್ಲ ಕಾರಣಗಳಿಂದ ಪುರಾತನ ಹಲಸಿನ ಮರಗಳು ಕಾಣೆಯಾದವು. ಈಗ ಉಳಿದುಕೊಂಡಿದ್ದು 143 ಮರಗಳು ಮಾತ್ರ . ಅವೂ ಅರೈಕೆಯಿಲ್ಲದ ಸೊರಗುತ್ತಿವೆ. ನೀರಿನ ಕೊರತೆಯಿಂದ ಬಾಡುತ್ತಿವೆ.

ಈ ಪುರಾತನ ಹಲಸಿನಮರಗಳ ಕಣ್ಮರೆಗೆ ಆರ್ಥಿಕ ಕಾರಣಗಳಿವೆ, ವಿಶೇಷ ರುಚಿಯಿರುವ ಭೌಗೋಳಿಕ ಗುರುತಿನ ಹೆಸರಿರುವ ಹಲಸಿನ ಹಣ್ಣುಗಳಿಗೆ ಮಾರುಕಟ್ಟೆ ಮಾಡಿ ಹಣ ಸಂಪಾದಿಸುವ ವ್ಯಾಪಾರಿ ಬುದ್ದಿಯ ಅಕ್ಕ-ಪಕ್ಕದ ಗ್ರಾಮದವರಿಗೆ ಹಣ್ಣುಗಳನ್ನು ಕೊಟ್ಟರೆ ಹೊರತು ನಾಲ್ಕುಕಾಸು ಸಂಪಾದನೆ ಮಾಡುವ ವಿಚಾರ ಬರಲಿಲ್ಲ.

ಈ ಪುರಾತನ ಹಲಸಿನ ಮರಗಳು ತಾತ ಮುತ್ತಾತರ ನೆನಪುಗಳ ಸಾಂಸ್ಕೃತಿಕ ರಾಯಭಾರಿಗಳಾಗಿದ್ದವೇ ವಿನಹ ರೈತರ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ನೀಡಲಿಲ್ಲ. ಕಳೆದ ಕೆಲವು ವರ್ಷಗಳಿಂದ ಮಳೆ ಕಡಿಮೆಯಾದ್ದರಿಂದ ಹಣ್ಣುಗಳ ಗಾತ್ರದಲ್ಲಿ, ರುಚಿಯಲ್ಲಿ ವ್ಯತ್ಯಾಸಗಳಾಗಿವೆ. ರಂಬೆ ಕೊಂಬೆಗಳಲ್ಲಿ ಸಾವಿರಾರು ಹಣ್ಣುಗಳನ್ನು ಬಿಡುತ್ತಿದ್ದ ಮರಗಳು ಈಗ ಬೆರಳೆಣಿಕೆಯಷ್ಟು ಹಣ್ಣುಗಳನ್ನು ಬಿಡುತ್ತಿವೆ. ಹಲವು ತಲೆಮಾರಿನ ಹಲಸಿನ ಮರಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ರೈತರಿರುವ ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚನೆಗೊಂಡರೆ ಪುರಾತನ ಹಲಸು ಪನರುಜ್ಜೀವನ ಸಾಧ್ಯವಾಗುತ್ತದೆ.

  • ಎಲ್.ಸಿ. ಚನ್ನರಾಜ್

LEAVE A REPLY

Please enter your comment!
Please enter your name here