ಲೇಖಕರು: ಕುಮಾರ ರೈತ

ಹೈನುರಾಸುಗಳ ನಿರ್ವಹಣೆ ಮಾಡುವುದು ಸರಳವಾದ ವಿಷಯವಲ್ಲ. ಹಸುಗಳನ್ನು ಸಾಕಣೆ ಮಾಡುವವರು ಆ ಕುರಿತ ತಮ್ಮ ಅನುಭವ ಹೇಳುವಾಗ ಇದು ಕಷ್ಟದ ಕೆಲಸ ಎಂಬುದು ಗಮನಕ್ಕೆ ಬರುತ್ತದೆ. ಮುಖ್ಯವಾಗಿ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ನಡೆಸಿದಾಗ ತೊಂದರೆಗಳು ಕಡಿಮೆ. ಇದಕ್ಕೆ ಕಾರಣಗಳು ಹಲವಾರು.

ಬೃಹತ್ ಪ್ರಮಾಣದಲ್ಲಿ ಹೈನುಗಾರಿಕೆ ಘಟಕ ಮಾಡುವಾಗ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಕೊಟ್ಟಿಗೆ ನಿರ್ಮಾಣ ಬಹು ಪ್ರಮುಖ. ಹಸುಗಳನ್ನು ಕಟ್ಟಿರುವ ತಾಣದಲ್ಲಿ ಗಾಳಿ-ಬೆಳಕಿಗೆ ಕೊರತೆಯಾದರೆ ಅದರಿಂದ ಉಂಟಾಗುವ ತೊಂದರೆಗಳು ಅನೇಕ. ಆದ್ದರಿಂದ ಈ ವಿಚಾರಕ್ಕೆ ಆದ್ಯತೆ ನೀಡಬೇಕು. ಗಾಳಿ-ಬೆಳಕಷ್ಟೆ ಅಲ್ಲದೇ ಗಂಜಲ ಅಲ್ಲಿಯೇ ನಿಲ್ಲುವಂತಿರಬಾರದು. ಅದು ಸರಾಗವಾಗಿ ಹರಿದು ಹೋಗುವಂತಿರಬೇಕು. ಸಗಣಿಯನ್ನು ಸಲೀಸಾಗಿ ಎತ್ತಿ ಹೊರ ಹಾಕುವುದಕ್ಕೆ ಸಾಧ್ಯವಾಗುವಂತೆ ಸಾಕಷ್ಟು ಸ್ಥಳವಕಾಶ ಕಲ್ಪಿಸಿರಬೇಕು. ಹಾಲು ಕರೆಯಲು ಉಪಯೋಗಿಸುವ ಉಪಕರಣಗಳ ಸ್ವಚ್ಛತೆ ಕಡೆ ಗಮನ ನೀಡಬೇಕು. ಇಷ್ಟೆಲ್ಲ ಅಂಶಗಳನ್ನು ಜೊತೆಗೆ ಅತ್ಯಂತ ಮಾದರಿಯಾಗಿ ಹೈನುಗಾರಿಕೆ ನಡೆಯುತ್ತಿರುವ “ಸಿದ್ಧಿಕ್ ಹೈನು ಘಟಕ”ದ ಪರಿಚಯ ನಿಮ್ಮ ಮುಂದೆ…

ಕಾಸರಗೋಡು ಜಿಲ್ಲೆ ಪೆರ್ಲ ಗ್ರಾಮದಲ್ಲಿದೆ ಸಿದ್ದಿಕ್ ಡೈರಿ ಫಾರಂ. ಇಲ್ಲಿನ ನಿವಾಸಿ ಅಬೂಬಕರ್ ಸಿದ್ಧಿಕ್ ಖಂಡಿಗೆ ಈ ಘಟಕದ ಮಾಲೀಕರು ಮತ್ತು ನಿರ್ವಹಣೆಗಾರರು. ವೈಜ್ಞಾನಿಕ ಮಾದರಿಯಲ್ಲಿ ಇದರ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಆದ್ದರಿಂದ ಈ ಹೈನು ಘಟಕ ವಿಶಿಷ್ಟವಾಗಿ ಕಾಣುತ್ತದೆ. ಇದು ಹೊಸದಾಗಿ ಹೈನುಗಾರಿಕೆ ಮಾಡಲು ಹೊರಟವರಿಗೂ ಕಲಿಕಾ ಕೇಂದ್ರದ ಮಾದರಿಯಲ್ಲಿದೆ. ಇಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಹೈನು ಸಾಕಣೆ ಮಾಡಲು ಹೊರಟಾಗ ಮೊದಲು ಕೊಟ್ಟಿಗೆಯತ್ತ ಗಮನ ನೀಡಬೇಕು. ಇದು ಸಮರ್ಪಕವಾಗಿರದಿದ್ದರೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಮೊದಲನೇಯದಾಗಿ ಗಾಳಿ-ಬೆಳಕು ಧಾರಳವಾಗಿರಬೇಕು. ಇಲ್ಲದಿದ್ದರೆ ಕೊಟ್ಟಿಗೆ ರೋಗಗಳ ಬೀಡಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕೊಟ್ಟಿಗೆಯನ್ನು ಅರೆ ತೆರವು ಮಾದರಿ ನಿರ್ಮಿಸಲಾಗಿದೆ. ಈ ಮಾದರಿಯಲ್ಲಿ ಗಾಳಿ ರಭಸವಾಗಿ ನುಗ್ಗುವುದಿಲ್ಲ. ಪ್ರಖರವಾದ ಬಿಸಿಲು ಸಹ ಒಳಗೆ ಬೀಳುವುದಿಲ್ಲ.

ಕೊಟ್ಟಿಗೆ ನಿರ್ಮಿಸುವಾಗ ನೆಲಹಾಸು ಸಮತಟ್ಟಾಗಿರಬಾರದು, ತೀರಾ ಇಳಿಜಾರಾಗಿಯೂ ಇರಬಾರದು. ಹೀಗೆ ಇದ್ದರೆ ಹಸುಗಳು ಜಾರಿ ಬೀಳುವ ಸಾಧ್ಯತೆ ಅಧಿಕ. ಬಿದ್ದ ಗಂಜಲ ಸಲೀಸಾಗಿ ಚರಂಡಿಗೆ ಸೇರಿ ಹೊರ ಹರಿದು ಹೋಗುವಂತಿರಬೇಕು. ಕೊಟ್ಟಿಗೆ ಇಕ್ಕಟಾಗಿದ್ದರೆ ಸಗಣಿಯನ್ನು ಎತ್ತಿ ಹೊರ ಹಾಕಲು ಅಡಚಣೆಯುಂಟಾಗುತ್ತದೆ. ಆದ್ದರಿಂದ ಸಲೀಸಾಗಿ ಓಡಾಡುವಷ್ಟು ವಿಶಾಲವಾಗಿರಬೇಕು. ಕೊಟ್ಟಿಗೆ ಇಕ್ಕಟಾಗಿರುವುದು ಹಸುಗಳ ದೃಷ್ಟಿಯಿಂದಲೂ ಸೂಕ್ತವಲ್ಲ. ಒಂದು ಹಸುಗಳ ನಡುವೆ ಸ್ಥಳಾವಕಾಶ ಇರಬೇಕು ಎಂದು ಅಬೂಬಕರ್ ಸಿದ್ಧಿಕ್ ಖಂಡಿಗೆ ವಿವರಿಸುತ್ತಾರೆ.

ಪ್ರತಿದಿನ ಕೊಟ್ಟಿಗೆಯನ್ನು ಸ್ಚಚ್ಛಗೊಳಿಸುವುದು ಅಗತ್ಯ. ಹೀಗೆ ಮಾಡದಿದ್ದರೆ ಕೊಟ್ಟಿಗೆ ಹಾನಿಕಾರಕ ಬ್ಯಾಕ್ಟೀರಿಯಾಗಳ ಗೂಡಾಗುತ್ತದೆ. ಸ್ಚಚ್ಚಗೊಳಿಸುವ ಸಲುವಾಗಿ ರಭಸವಾಗಿ ನೀರು ಚಿಮ್ಮುವ ಜೆಟ್ ಗಳನ್ನು ಬಳಸಬಹುದು. ಇದು ನೀರು ಚಿಮ್ಮುವ ವೇಗವನ್ನು ಅವಶ್ಯಕತೆಗೆ ತಕ್ಕಂತೆ ನಿಯಂತ್ರಿಸುವಂತೆ ಇರಬೇಕು. ಹೀಗೆ ಇದ್ದಾಗ ಏಕಕಾಲದಲ್ಲಿ ಕೊಟ್ಟಿಗೆ ಸ್ವಚ್ಚಗೊಳಿಸುವುದು ಮತ್ತು ಹಸುಗಳ ಮೈ ತೊಳೆಯುವುದು ಸಾಧ್ಯವಾಗುತ್ತದೆ. ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ಹಸುಗಳ ಮೈ ತೊಳೆಯದಿದ್ದರೆ ಬ್ಯಾಕ್ಟೀರಿಯಾಗಳಿಂದ ಅವುಗಳ ಚರ್ಮಕ್ಕೆ ಹಾನಿಯುಂಟಾಗುತ್ತದೆ.ಹಾಲು ಕಲುಷಿತವಾಗುವ ಸಾಧ್ಯತೆ ಇರುತ್ತದೆ.

ನೆಲಮಟ್ಟದಲ್ಲಿಯೇ ಮೇವು ಹಾಕುವುದರಿಂದ ಪೋಲಾಗುವ ಪ್ರಮಾಣ ಹೆಚ್ಚು. ಹಸುಗಳು ಕಾಲಿನಿಂದ ಎಳೆದು ಹಾಕುತ್ತವೆ. ಇದಲ್ಲದೇ ನೀರು ಬಿದ್ದು ಸೇವಿಸಲು ಸಾಧ್ಯವಾಗದಂತೆ ಆಗುತ್ತದೆ. ಆದ್ದರಿಂದ ಹಸುಗಳು ನಿಂತಾಗ ಅವುಗಳು ಸಲೀಸಾಗಿ ಮೇಯುವಷ್ಟು ಎತ್ತರದಲ್ಲಿ ಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಕತ್ತರಿಸಿದ ಮೇವನ್ನು ನೀಡಲಾಗುತ್ತದೆ.ಹಸುಗಳು  ಇದನ್ನು ತೃಪ್ತಿಕರವಾಗಿ ಮೇಯ್ದ ನಂತರ ಆರಾಮವಾಗಿ ಮೆಲುಕು ಹಾಕುತ್ತವೆ. ಮೇವು ಖಾಲಿಯಾದ ನಂತರ ಇದೇ ಗೊಂತಿಗೆ ನೀರು ಪೂರೈಸಲಾಗುತ್ತದೆ

ಹಾಲು ಕರೆಯುವ ಮುನ್ನ ಅದು ಕಲುಷಿತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಯಂತ್ರಗಳನ್ನು ಬಳಸಿ ಹಾಲು ಕರೆಯಲಾಗುತ್ತದೆ. ಇದಕ್ಕೂ ಮುನ್ನ ಅವುಗಳನ್ನು ಮತ್ತು ಹಾಲು ಸಂಗ್ರಹಿಸುವ ಕ್ಯಾನುಗಳನ್ನು ತೊಳೆದು ಸ್ವಚ್ಛಗೊಳಿಸಲಾಗುತ್ತದೆ. ಹಸುವಿನ ಕೆಚ್ಚಲನ್ನು ತೊಳೆದ ನಂತರವೇ ಅದರ ತೊಟ್ಟುಗಳಿಗೆ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇಂಥ ಪದ್ಧತಿ ಅನುಸರಿಸಿದಾಗ ಪಾರದರ್ಶಕ ಪೈಪುಗಳತ್ತ ಗಮನ ನೀಡುವುದು ಅಗತ್ಯ.

ಇಷ್ಟೆಲ್ಲ ಮುಂಜಾಗ್ರತೆ ವಹಿಸಿ ನಿರ್ವಹಣೆ ಮಾಡುತ್ತಿರುವ ಈ ಹೈನುಘಟಕವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಮಾಡಲು ತೊಡಗುವ ಮುನ್ನ ಅಬೂಬಕರ್ ಸಿದ್ಧಿಕ್ ಖಂಡಿಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅನುಭವಸ್ಥ ಹೈನುಗಾರರು ನಿರ್ವಹಣೆ ಮಾಡುತ್ತಿರುವ ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಈ ಕುರಿತ ವಿವರಗಳಿರುವ ಕೃಷಿ ಪತ್ರಿಕೆ, ಪುಸ್ತಕಗಳನ್ನು ಓದಿದ್ದಾರೆ. ಸಮಗ್ರವಾದ ವಿಷಯಗಳನ್ನು ಅರಿತುಕೊಂಡ ಬಳಿಕವೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರಾಯೋಗಿಕ ಅನುಭವದ ಕೊರತೆ ಇದ್ದ ಕಾರಣ ಆರಂಭದ ದಿನಗಳು ಆರಾಮದಾಯಕವಾಗಿರಲಿಲ್ಲ. ನಿರ್ವಹಣೆಯಲ್ಲಿ ಸಾಕಷ್ಟು ತೊಂದರೆಗಳು ಬಂದವು. ವಿಶೇಷವಾಗಿ ಹಸುಗಳಿಗೆ ರೋಗಗಳು ಕಾಡಿದ್ದವು. ಇವುಗಳ ಚಿಕಿತ್ಸೆಗಾಗಿ ಸಾಕಷ್ಟು ಹಣವೂ ಖರ್ಚಾಗಿತ್ತು. ಇಷ್ಟೆಲ್ಲ ಎಡರು-ತೊಡರುಗಳು ಬಂದರೂ ಸಿದ್ಧಿಕ್ ಅವರು ಹೈನುಘಟಕದ ನಿರ್ವಹಣೆಯಿಂದ ಹಿಂದೆ ಸರಿಯಲಿಲ್ಲ. ಎಲ್ಲವೂ ಅನುಭವವೇ ಎಂದುಕೊಂಡು ಮುಂದೆ ಸಾಗಿದರು.

ಆರಂಭದಲ್ಲಿ ಈ ಹೈನು ಘಟಕದ ಕೊಟ್ಟಿಗೆಯನ್ನು ಸ್ಥಳೀಯವಾಗಿಯೇ ಲಭ್ಯ ಇರುವ ಪರಿಕರಗಳನ್ನು ಬಳಸಿ ನಿರ್ಮಾಣ ಮಾಡಲಾಗಿತ್ತು. ತದ ನಂತರ ಈ ಬಗ್ಗೆ ಸಾಕಷ್ಟು ತಿಳಿದುಕೊಂಡು ವೈಜ್ಞಾನಿಕ ಮಾದರಿ ಘಟಕಕ್ಕೆ ಅವಶ್ಯಕವಾಗಿ ಇರಬೇಕಾದ ಮಾದರಿಯಲ್ಲಿ ಕೊಟ್ಟಿಗೆಯನ್ನು ಪುನರ್ ರೂಪಿಸಿದರು. ಇದಕ್ಕೆ ಮುನ್ನ ತಜ್ಞರೊಡನೆ ಸಾಕಷ್ಟು ಚರ್ಚಿಸಿದ್ದರು. ಅಂತರ್ಜಾಲದಲ್ಲಿಯೂ ಸಂಬಂಧಿತ ವಿಷಯಗಳನ್ನು ಸಂಗ್ರಹಿಸಿದ್ದರು

ಡೈರಿ ಘಟಕದಲ್ಲಿ ಅಬೂಬಕರ್ ಸಿದ್ಧಿಕ್ ಖಂಡಿಗೆ

ವೈಜ್ಞಾನಿಕ ಮಾದರಿಯಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಿದ ನಂತರ ಅದರ ಸಕಾರಾತ್ಮಕ ಅಂಶಗಳು ತಿಳಿಯತೊಡಗಿದವು. ಈ ಪ್ರಮಾಣದ ಬದಲಾವಣೆಗೆ ಸ್ವತಃ ಅಬೂಬಕರ್ ಆಶ್ಚರ್ಯಪಟ್ಟಿದ್ದರು. ಹಸು ಮತ್ತು ಕರುಗಳ ಆರೋಗ್ಯದಲ್ಲಿ ಸುಧಾರಣೆಯಾಯಿತು. ಇವುಗಳನ್ನು ಬಾಧಿಸುವ ರೋಗಗಳು ನಿವಾರಣೆಯಾದವು. ಮುಖ್ಯವಾಗಿ ಕ್ಷೀರೋತ್ಪಾದನೆ ಪ್ರಮಾಣ ಹೆಚ್ಚಾಯಿತು.

ನಾಳೆ: ಕರುಗಳ ಪೋಷಣೆಯಲ್ಲಿ ಗಮನಿಸಬೇಕಾದ ಅಂಶಗಳು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 94470 25034

LEAVE A REPLY

Please enter your comment!
Please enter your name here