ರಾಜ್ಯದ ಕೃಷಿಮೇಳಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿಮೇಳ ತನ್ನದೇ ಆದ ವೈಶಿಷ್ಟತೆ, ಮಹತ್ವ ಹೊಂದಿದೆ. ಕೃಷಿಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಸಮಗ್ರ ಬೆಳವಣಿಗೆಗಳನ್ನು ಪರಿಚಯಿಸುತ್ತದೆ. ಕೃಷಿಕರಾದವರಿಗೆ ಮತ್ತಷ್ಟು ನಿಖರ ಸುಸ್ಥಿರ ಕೃಷಿ ಮಾಡುವ ಹುಮ್ಮಸ್ಸು ನೀಡಿದರೆ ಕೃಷಿಕರಲ್ಲದವರಿಗೆ ತಾವೂ ಕೃಷಿಕಾರ್ಯ ಮಾಡಬೇಕು ಎಂಬ ಉತ್ಸಾಹ ಮೂಡಿಸುತ್ತದೆ. 2019ರ ಅಕ್ಟೋಬರ್ 24 ರಿಂದ 27ರವರೆಗೆ ನಡೆಯಲಿರುವ ಬೃಹತ್ ಕೃಷಿಮೇಳದ ಚಾಲನಾಶಕ್ತಿಯಾಗಿರುವ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರು “ಅಗ್ರಿಕಲ್ವರ್ ಇಂಡಿಯಾ” ದೊಂದಿಗೆ ಮೇಳದ ಆಶಯಗಳ ಬಗ್ಗೆ ಮಾತನಾಡಿದ್ದಾರೆ.

ಅಗ್ರಿಕಲ್ಚರ್ ಇಂಡಿಯಾ: ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಈ ಬಾರಿ ಕೃಷಿಮೇಳದ ಘೋಷವಾಕ್ಯ ಸುಸ್ಥಿರ ಅಭಿವೃದ್ಧಿಗಾಗಿ ನಿಖರಕೃಷಿ. ಇದರ ಪರಿಕಲ್ಪನೆಯೇನು, ಇದೇ ಶೀರ್ಷಿಕೆ ಇಡಲು ಕಾರಣವೇನು
ಕುಲಪತಿ: ಪ್ರತಿವರ್ಷ ಕೃಷಿಮೇಳದ ಸಂದರ್ಭದಲ್ಲಿ ಕೃಷಿಕ್ಷೇತ್ರದ ಹೊಸಹೊಸ ತಂತ್ರಜ್ಞಾನ,ವೈವಿಧ್ಯತೆ, ಹೊಸಹೊಸ ತಳಿಗಳು ಇಂಥವುಗಳನ್ನು ಅಭಿವೃದ್ಧಿಪಡಿಸಿರುವುದರ ಪರಿಚಯ ಆಗುತ್ತದೆ. ಇದು ನೇರವಾಗಿ ಬೃಹತ್ ರೈತಸಮುದಾಯವನ್ನು ತಲುಪುವ ವೇದಿಕೆಯಾಗಿಯೂ ಪರಿಣಮಿಸುತ್ತದೆ. ಇದು ನೋಡಿತಿಳಿ ಎಂಬ ಮಾತಿಗೂ ಅನ್ವರ್ಥಕವಾಗಿರುತ್ತದೆ. ತಮ್ಮತಮ್ಮ ಹೊಲ-ಗದ್ದೆ-ತೋಟಗಳಲ್ಲಿಯೂ ಇಲ್ಲಿ ಕಂಡು ಬಂದ ತಾಂತ್ರಿಕತೆಗಳಲ್ಲಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಂಡು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಬೆಳೆ ಇಳುವರಿ, ಆದಾಯ ಹೆಚ್ಚಾಗಲು ಸಹಕಾರಿಯಾಗುತ್ತದೆ.

ಡಾ.ಎಸ್. ರಾಜೇಂದ್ರಪ್ರಸಾದ್, ಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಸುಸ್ಥಿರ ಅಭಿವೃದ್ಧಿಗಾಗಿ ನಿಖರಕೃಷಿ:
ಕೃಷಿಮೇಳ -2019ರ ಘೋಷವಾಕ್ಯ ಸುಸ್ಥಿರ ಅಭಿವೃದ್ಧಿಗಾಗಿ ನಿಖರಕೃಷಿ. ಇದು ಆಯಾ ಕೃಷಿಕ್ಷೇತ್ರದ ಸಣ್ಣಸಣ್ಣ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಿರ್ವಹಿಸುವ ರೀತಿಯಾಗಿರುತ್ತದೆ. ಈ ಬಗೆಯ ಕೃಷಿಯಲ್ಲಿ ಅಂದಾಜು ಬದಲು ನಿಖರತೆ ಇರುತ್ತದೆ. ಎಷ್ಟು ಪ್ರಮಾಣದ ನೀರು, ಗೊಬ್ಬರ/ರಸಗೊಬ್ಬರ ಪೂರೈಸಬೇಕು ಎಂಬುದು ನಿಖರವಾಗಿರುತ್ತದೆ. ಯಾವ ಋತುಮಾನ, ಸಮಯಕ್ಕ ತಕ್ಕ ಹಾಗೆ ಯಾವರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾಹಿತಿಯೂ ನಿಖರವಾಗಿರುತ್ತದೆ. ಇದರಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಂದರ್ಭದಲ್ಲಿ ಕೃಷಿಪರಿಕರಗಳ ಸಮರ್ಥ ಬಳಕೆ ಆಗುತ್ತದೆ.
ಇಸ್ರೇಲ್ ಕೃಷಿ ತಂತ್ರಜ್ಞಾನ:
ಭಾರತದಲ್ಲಿಯೂ ಇಸ್ರೇಲ್ ಕೃಷಿ ತಂತ್ರಜ್ಞಾನ ಜನಪ್ರಿಯವಾಗುತ್ತಿದೆ. ಈ ಬಾರಿಯ ಕೃಷಿಮೇಳದಲ್ಲಿ ಈ ವಿಷಯಕ್ಕೂ ಮಹತ್ವ ನೀಡಲಾಗಿದೆ. ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಗಳಲ್ಲಿ ಆಗಿರುವ ಹೊಸಹೊಸ ತಾಂತ್ರಿಕ ಬೆಳವಣಿಗೆಗಳ ಪರಿಚಯವೂ ಆಗುತ್ತದೆ. ಕೃಷಿವಿಶ್ವವಿದ್ಯಾಲಯದ ತಾಕು (ಜಮೀನು)ಗಳಲ್ಲಿ ಇದರ ಪ್ರಾತ್ಯಕ್ಷಿಕೆಗಳು ಇರುತ್ತವೆ. ಖಾಸಗಿ ಕಂಪನಿಗಳವರು ಕೂಡ ಪ್ರಾತ್ಯಕ್ಷಿಕೆಗಳನ್ನು ನೀಡಲು ಅವಕಾಶ ನೀಡಲಾಗಿದೆ. ಕೃಷಿಕರು ತಮಗೆ ಸೂಕ್ತವೆನ್ನಿಸಿದ ತಂತ್ರಜ್ಞಾನ ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಇರುತ್ತದೆ. ವಿಶೇಷವಾಗಿ ಇವೆಲ್ಲ ಸೆನ್ಸಾರ್ ಆಧಾರಿತ ತಂತ್ರಜ್ಞಾನಗಳಾಗಿರುತ್ತವೆ.


ಒಣಬೇಸಾಯ ತಾಂತ್ರಿಕತೆ:
ಈ ಬಾರಿಯ ಕೃಷಿಮೇಳದಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಾಡುವ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂಥ ಪ್ರದೇಶಗಳಲ್ಲಿ ಎಷ್ಟೆಲ್ಲ ವೈವಿಧ್ಯಮಯ ಬೆಳೆಗಳನ್ನು ಬೆಳೆಯಬಹುದು, ಮಳೆ ತಡವಾಗಿ ಬಂದಲ್ಲಿ ಅಥವಾ ಕಡಿಮೆಯಾದಲ್ಲಿ ಯಾವ ಬೆಳೆ ಸೂಕ್ತ, ಯಾವ ತಳಿಗಳು ಹೆಚ್ಚು ಸೂಕ್ತವಾಗುತ್ತವೆ ಎಂಬೆಲ್ಲ ಅಂಶಗಳನ್ನು ತಿಳಿಸಲಾಗುತ್ತದೆ. ಇವುಗಳ ಪ್ರಾತ್ಯಕ್ಷಿಕೆಗಳು ಸಹ ಇರುತ್ತವೆ.
ಏಳುನೂರಕ್ಕೂ ಅಧಿಕ ಮಳಿಗೆಗಳು:
ಕೃಷಿಮೇಳದಲ್ಲಿ ಏಳುನೂರಕ್ಕೂ ಹೆಚ್ಚಿನ ಸಂಖ್ಯೆಯ ಮಳಿಗೆಗಳಿರುತ್ತವೆ. ಇಲ್ಲಿ ಕೃಷಿಯ ಬೇರೆಬೇರೆ ಕ್ಷೇತ್ರಗಳಲ್ಲಿ ಆಗಿರುವ ಎಲ್ಲ ಬೆಳವಣಿಗೆಗಳ ಸಮಗ್ರ ವಿವರಗಳೂ ಇರುತ್ತವೆ. ಕೃಷಿಯಲ್ಲಿ ಯಂತ್ರೋಪಕರಣಗಳ ಅವಶ್ಯಕತೆ ಹೆಚ್ಚಾಗಿದೆ. ಇತ್ತೀಚೆಗೆ ಬಂದಿರುವ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಇಲ್ಲಿರುತ್ತದೆ. ಇದೊಂದೇ ವಿಭಾಗದಲ್ಲಿ 180 ಮಳಿಗೆಗಳಿರುತ್ತವೆ. ಸಣ್ಣ ಮತ್ತು ಅತಿಸಣ್ಣ ರೈತರಿಗೂ ಅನುಕೂಲವಾಗುವಂಥ ತಾಂತ್ರಿಕತೆಗಳ ವಿವರಗಳು ಸಹ ಇಲ್ಲಿರುತ್ತವೆ. ಕಳೆದ ಬಾರಿಯ ಕೃಷಿಮೇಳದಲ್ಲಿ ಕೃಷಿ ಪರಿಕರಗಳು – ಯಂತ್ರೋಪಕರಣಗಳ ವಿಭಾಗದಲ್ಲಿ ಭಾರಿ ವಹಿವಾಟು ಸಹ ನಡೆದಿರುವುದು ಗಮನಾರ್ಹ. ಇದರಿಂದ ರೈತರು ಹೊಸಹೊಸ ತಾಂತ್ರಿಕತೆಗಳ ಅಳವಡಿಕೆಗೆ ಹೆಚ್ಚೆಚ್ಚು ಒತ್ತು – ಮಹತ್ವ ನೀಡುತ್ತಿರುವುದು ಅರಿವಾಗುತ್ತದೆ. ಈ ಬಾರಿಯ ಮತ್ತೊಂದು ವಿಶೇಷತೆ ಏನೆಂದರೆ ವಿದೇಶಗಳ ಸಂಸ್ಥೆಗಳು ಈ ವಿಭಾಗದಲ್ಲಿ ಭಾಗವಹಿಸಿವೆ.
ಅಗ್ರಿಕಲ್ವರ್ ಇಂಡಿಯಾ: ರಾಜ್ಯದಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚು. ಇವರ ಪ್ರಗತಿಯ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಳಿಸಿ
ಕುಲಪತಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಣ್ಣ ಮತ್ತು ಅತಿಸಣ್ಣ, ಮಧ್ಯಮ ಪ್ರಮಾಣದ ರೈತರ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದೆ. ಇವರಿಗಾಗಿ ಸಮಗ್ರ ಕೃಷಿಪದ್ಧತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪದ್ಧತಿಯ ಅಂಶವೇನೆಂದರೆ ಒಂದು ಬೆಳೆಯಲ್ಲಿ ನಷ್ಟ ಅಥವಾ ಕಡಿಮೆ ಲಾಭ ಬಂದರೆ ಬೇರೆ ಬೆಳೆಗಳಲ್ಲಿನ ಮಾರಾಟದ ಮೂಲಕ ಅದನ್ನು ಸರಿದೂಗಿಸಿಕೊಳ್ಳಬಹುದು. ಕೃಷಿಯ ಜೊತೆಗೆ ಉಪಕಸುಬುಗಳಾಗಿ ಹೈನುಗಾರಿಕೆ, ಕುರಿ – ಕೋಳಿ – ಮೀನು – ಮೊಲ ಸಾಕಣಿಕೆಗಳನ್ನು ಮಾಡಬಹುದು. ಮೇಳದಲ್ಲಿ ಪಶು ಸಂಗೋಪನೆಯ ವಿಭಾಗವೇ ಪ್ರತ್ಯೇಕವಾಗಿರುತ್ತದೆ. ಇದರಲ್ಲಿಯೂ 90ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ. ಈ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದವರ ಅನುಭವಗಳ ಮಾರ್ಗದರ್ಶನವೂ ಇರುತ್ತದೆ. ವಿಶ್ವವಿದ್ಯಾಲಯದ ಪಶು ಸಂಗೋಪನೆ ವಿಭಾಗದ ತಜ್ಞರ ಸಲಹೆ – ಮಾರ್ಗದರ್ಶನವೂ ದೊರೆಯುತ್ತದೆ.
ಸಾವಯವ ಕೃಷಿ:
ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗಗಳಾಗಿವೆ. ಈ ಕ್ಷೇತ್ರದಲ್ಲಿ ಸಂಶೋಧನೆ ಅಭಿವೃದ್ಧಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸುಸಜ್ಜಿತ ವಿಭಾಗವೇ ಇದೆ. ಸಾವಯವ ಕೃಷಿಗಾಗಿಯೇ ಮೀಸಲಾದ ತಾಕುಗಳಿವೆ. ಇಲ್ಲಿಯೂ ನಿರಂತರವಾಗಿ ಪ್ರಾಯೋಗಿಕತೆ ನಡೆಯುತ್ತಿರುತ್ತದೆ. ಬೇರೆಬೇರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿಕರು ಅವುಗಳನ್ನೆಲ್ಲ ನೋಡಬಹುದು. ಕೃಷಿಕರಲ್ಲಿ – ಗ್ರಾಹಕರಲ್ಲಿ ವಿಶೇಷವಾಗಿ ಸಿರಿಧಾನ್ಯಗಳ ಬಗ್ಗೆ ಒಲವು ಹೆಚ್ಚಿದೆ. ಹೆಚ್ಚಾಗುತ್ತಿದೆ. ಈ ಬೆಳೆಗಳನ್ನು ಅತಿಕಡಿಮೆ ನೀರಿನಲ್ಲಿಯೂ ಬೆಳೆಯಬಹುದು. ಈ ಕ್ಷೇತ್ರದ ಬಗ್ಗೆಯೂ ಕೃಷಿವಿಶ್ವವಿದ್ಯಾಲಯ ಹೆಚ್ಚು ಗಮನ ನೀಡಿದೆ. ಈ ಬೆಳೆಗಳ ಪ್ರಾತ್ಯಕ್ಷಿಕೆಗಳಿರುತ್ತವೆ. ಈ ಬೆಳೆಗಳ ಮೌಲ್ಯವರ್ಧನೆ ಅಂದರೆ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಕೂಡ ಮೇಳದಲ್ಲಿ ಇಡಲಾಗಿರುತ್ತದೆ

ಅಗ್ರಿಕಲ್ಚರ್ ಇಂಡಿಯಾ: ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕ ಋತುಮಾನದ ಚಕ್ರ ಬದಲಾವಣೆಯಾಗಿದೆ. ಇದಕ್ಕನುಗುಣವಾಗಿ ಕೃಷಿ ವಿಶ್ವವಿದ್ಯಾಲಯ ಕೈಗೊಂಡಿರುವ ಕಾರ್ಯಗಳ ಬಗ್ಗೆ ತಿಳಿಸಿಕೊಡಿ
ಕುಲಪತಿ: ಈ ದಿಶೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಗೆ ಬರುವ ಜಿಲ್ಲೆಗಳು – ತಾಲ್ಲೂಕುಗಳಿಗೆ ಬೆಳೆ ಯೋಜನೆಗಳನ್ನು ನೀಡಿದೆ. ಇದರ ಅನ್ವಯ ಮಳೆಯ ಪ್ರಮಾಣ ಹೆಚ್ಚು – ಕಡಿಮೆಯಾದಲ್ಲಿ, ತಡವಾಗಿ ಆರಂಭವಾದಲ್ಲಿ ಅವುಗಳಿಗೆ ಅನುಗುಣವಾಗಿ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬಹುದು ಎಂದು ತಿಳಿಸಲಾಗಿದೆ . ಹವಾಮಾನದ ವೈಪರಿತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕತೆ ಅಭಿವೃದ್ಧಿಪಡಿಸಲಾಗಿದೆ.
ಅಗ್ರಿಕಲ್ಚರ್ ಇಂಡಿಯಾ: ಕೃಷಿಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ದಿಶೆಯಲ್ಲಿ ಕೃಷಿಕಾರ್ಯಗಳಲ್ಲಿ ತೊಡಕು ಉಂಟಾದಂತೆ ನೋಡಿಕೊಳ್ಳುವಲ್ಲಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗ ಕೈಗೊಂಡಿರುವ ಕ್ರಮಗಳೇನು
ಕುಲಪತಿ: ಕೃಷಿಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಬೆಂಗಳೂರು ಕೃಷಿವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ ಇತರ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಿತ್ತನೆಯಿಂದ ಆರಂಭಿಸಿ ಕಟಾವು ತನಕದ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಕೃಷಿ ಯಂತ್ರೋಪಕರಣಗಳ ಪರಿಚಯ

ಅಗ್ರಿಕಲ್ಚರ್ ಇಂಡಿಯಾ: ಕೃಷಿ ವಿಶ್ವವಿದ್ಯಾಲಯ ನೂತನವಾಗಿ ಅಭಿವೃದ್ಧಿಪಡಿಸಿರುವ ಬೆಳೆತಳಿಗಳು ಯಾವುವು. ಕೃಷಿಮೇಳದ ಸಂದರ್ಭದಲ್ಲಿ ಯಾವ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ.
ಕುಲಪತಿ: ಬೆಂಗಳೂರು ಕೃಷಿವಿಶ್ವವಿದ್ಯಾಲಯ ಪ್ರತಿವರ್ಷವೂ ಹೊಸಹೊಸ ಬೆಳೆತಳಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಎರಡು ವಲಯಗಳು ಬರುತ್ತವೆ. ವಲಯ – 5 ಮತ್ತು 6. ಈ ಪ್ರದೇಶಗಳಿಗೆ ಸೂಕ್ತವಾದ ತಳಿಗಳನ್ನೇ ಅಭಿವೃದ್ಧಿಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. 2018 -19 ನೇ ಸಾಲಿನಲ್ಲಿ ಏಳು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಭತ್ತದಲ್ಲಿ ಗಂಗಾವತಿ ಸೋನಾ, ಅಲಸಂದೆಯಲ್ಲಿ ಎರಡು ತಳಿಗಳು, ಕಬ್ಬುಬೆಳೆಯಲ್ಲಿ ಎರಡು ತಳಿಗಳು, ಹಲಸುವಿನಲ್ಲಿಯೂ ಲಾಲ್ ಬಾಗ್ ಮಧುರ ಎಂಬ ತಳಿ ಬಿಡುಗಡೆ ಮಾಡಲಾಗುತ್ತಿದೆ.
ವಿಶೇಷ ಆಕರ್ಷಣೆ
ಮಳೆನೀರು ಕೊಯ್ಲು ಮತ್ತು ಇದರಿಂದ ಶೇಖರಣೆಯಾದ ನೀರನ್ನು ಬಳಸಿಕೊಂಡು ತರಕಾರಿಗಳು, ಹೂವುಗಳನ್ನು ಲಾಭದಾಯಕವಾಗಿ ಹೇಗೆ ಬೆಳೆಯಬಹುದು ಎಂಬ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಇದನ್ನು ಪ್ರಿಶಿಷನ್ ಫಾರ್ಮಿಂಗ್ ಎನ್ನಲಾಗುತ್ತದೆ. ಇದು ಈ ಬಾರಿಯ ಕೃಷಿಮೇಳದ ವಿಶೇಷ ಆಕರ್ಷಣೆಯಾಗಿರಲಿದೆ. ಆಸಕ್ತ ರೈತರಿಗೆ ಅದರಲ್ಲಿ ತರಬೇತಿಯನ್ನು ನೀಡಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿಯೂ ಕೈತೋಟ, ತಾರಸಿ ತೋಟ ಮಾಡುವ ಒಲವು ಹೆಚ್ಚಾಗುತ್ತಿದೆ, ಅವರಿಗೂ ಅನುಕೂಲಕರವಾದ ಮಾಹಿತಿ – ಸಲಹೆಸೂಚನೆಗಳು ದೊರೆಯುತ್ತವೆ.


ಸದುಪಯೋಗ ಪಡಿಸಿಕೊಳ್ಳಿ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಮಸ್ತ ಸಿಬ್ಬಂದಿ ವಿಶೇಷ ಕಾಳಜಿ – ಪರಿಶ್ರಮದಿಂದ ಕೃಷಿಮೇಳ ಆಯೋಜಿಸುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗಳು, ಕರ್ನಾಟಕ ಹಾಲು ಮಹಾಮಂಡಳ ಸಹಕಾರ ನೀಡಿವೆ. ಕೃಷಿಕರಿಗೆ – ಹೊಸದಾಗಿ ಕೃಷಿ ಆರಂಭಿಸಬೇಕು ಎನ್ನುವವರಿಗೆ ಮೇಳ ಅನುಕೂಲವಾಗಬೇಕು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಹೊಸಹೊಸ ಕೃಷಿತಾಂತ್ರಿಕತೆಗಳ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080 – 2341 8883

To read interesting articles related to agriculture, visit www.agricultureindia.in and www.kumararaitha.com

2 COMMENTS

    • ಮೊದಲು ಬೆಂಗಳೂರು ಹೊರ ವಲಯದಲ್ಲಿದ್ದ ಕೃಷಿ ವಿಶ್ವವಿದ್ಯಾಲಯ ಈಗ ನಗರದೊಳಗೆ ಇದೆ. ಆದ್ದರಿಂದ ನೀವು ಹೇಳಿದ ಅಂಶಗಳೂ ಇವೆ. ಆದರೆ ಮೇಳ ಕೃಷಿಮಾಹಿತಿ ಒದಗಿಸುವುದರ ಜೊತೆಗೆ ಒಂದಷ್ಟು ಜಾತ್ರೆಯ ಸ್ವರೂಪ ಹೊಂದಿರುತ್ತದೆ.

LEAVE A REPLY

Please enter your comment!
Please enter your name here