ಅಮ್ಮ ಎರಡು ತಿಂಗಳ ಹಿಂದೆ ಬಂದು ಒಂದು ವಾರ ಮನೆಯಲ್ಲೇ ಉಳಿದಿದ್ದರು. ಅವರು ಬಂದ ಮೇಲೆ ಮನೆಯವರಿಗೆಲ್ಲಾ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿತು. ಹೊಟ್ಟೆಯಲ್ಲಿ ತೊಂದರೆ, ಆ್ಯಂಟಿ ಭಯಾಟಿಕ್ಕುಗಳು, ಸ್ಕ್ಯಾನಿಂಗು, ಟಾನಿಕ್ಕು ಇತ್ಯಾದಿ ಇತ್ಯಾದಿ ನನ್ನ ಮಗಳಿಗೂ ಅದೇ ರೀತಿಯ ಕಷ್ಟ, ನನ್ನ ಹೆಂಡತಿಗೂ ಹೆಚ್ಚು ಕಡಿಮೆ ಅದೇ ಥರದ ಆರೋಗ್ಯದ ಸಮಸ್ಯೆಗಳು.
ಅಮ್ಮ ತಂದಿದ್ದ ಆಹಾರದಲ್ಲಿ ಏನಾದರೂ ಇತ್ತೇ ಎಂಬ ಸಹಜ ಅನುಮಾನ ಎಲ್ಲರಿಗೂ ಬರಬಹುದು. ಹೌದು, ಅಮ್ಮ ತಂದಿದ್ದ ಆಹಾರದಲ್ಲಿ ವಿಷ ಇತ್ತು. ಯಾವ ವಿಷವೆಂದು ತಿಳಿದರೆ ಇನ್ನೂ ಆಶ್ಚರ್ಯವಾಗುತ್ತದೆ. ಇದನ್ನು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ನೀವಲ್ಲ, ನಾನೇ ನಂಬಲು ಸಾಧ್ಯವಿಲ್ಲ. ಅಮ್ಮ ವಿಷ ಉಣಿಸಿದರೂ ಅದು ಅಮೃತವಾಗುತ್ತದೆ ಅನ್ನುವಷ್ಟು ತಾಯಿಯನ್ನು ಬಲವಾಗಿ ನಂಬುತ್ತೇನೆ. ಥೇಟ್, ರವಿಚಂದ್ರನ್ ಯಾವುದೋ ಸಿನಿಮಾದಲ್ಲಿ ನೋಡಿದ್ದೀರಲ್ಲ ಆಥರ. ಈ ವಿಷಯವನ್ನು ನನ್ನ ಮಡದಿಯೊಡನೆ ನಾನು ಚರ್ಚಿಸಲಿಲ್ಲ. ಅದೇನೆಂದು ತಿಳಿಯಲು ಹುಡುಕುತ್ತಿದ್ದೆ.
ಒಂದಿಷ್ಟು ದಿನದ ಹಿಂದೆ ಬೆಳಿಗ್ಗೆ ಬೆಳಿಗ್ಗೆ ನೆನೆಸಿಟ್ಟಿದ್ದ ಹೆಸರುಕಾಳು ಬಟ್ಟಲಿನಲ್ಲಿ ಹೆಚ್ಚು ನೊರೆ ನೊರೆ ಇದ್ದುದ ಕಂಡೆ. ನನ್ನ ಮನೆಯಾಕೆ ಅತ್ತ ನೋಡಿ ಹೆಸರುಕಾಳಿನಲ್ಲಿ ಏಕೆ ಅಷ್ಟೊಂದು ನೊರೆ ಇದೆ ಎಂದಳು. ‘ಸಹಜವಾಗಿ ಅಷ್ಟು ನೊರೆ ಇರುತ್ತದೆ’ ಎಂದು ಸುಮ್ಮನಾದೆ. ನನ್ನ ಮಗಳು ಶಾಲೆಗೆ ಹೋಗುವ ಸಮಯ ತಿಂಡಿ ರಡಿ ಇಲ್ಲಾಂದರೆ ಹಾಲು ಕೊಟ್ಟು ಕಳಿಸಿ, ತಿಂಡಿಯನ್ನು ಶಾಲೆಗೆ ತಡವಾಗಿ ತಲುಪಿಸುತ್ತೇನೆ. ಅವಳಿಗೆ 9.30ಕ್ಕೆ ಒಂದು ಬ್ರೇಕ್ ಇರುತ್ತದೆ. ಹಾಲು ಇಲ್ಲಾಂದರೆ ತೆಂಗಿನಕಾಯಿ ಹಾಲನ್ನೇ ತಯಾರಿಸಿ ಕೊಡುತ್ತೇನೆ.
ಮೊನ್ನೆ ತೆಂಗಿನಕಾಯಿ ಹಾಲು ತಯಾರಿಸುವಾಗ ನೆನೆಸಿದ ಹೆಸರುಕಾಳು ಹಾಕಿ ಹಾಲು ತಯಾರಿಸಿದೆ. ನನ್ನ ಮಗಳೇಕೊ ಆ ಹಾಲು ಕುಡಿಯಲಿಲ್ಲ. ಹೆಸರುಕಾಳಿನ ಹಸಿ ವಾಸನೆ ಇಷ್ಟವಾಗದೆ ಇರಬಹುದು. ಅವಳಿಗೆ ಬೇರೆ ವ್ಯವಸ್ಥೆ ಮಾಡಿ ಅದು ವೇಸ್ಟ್ ಆಗಬಾರದೆಂದು ನಾನೇ ಕುಡಿದುಬಿಟ್ಟೆ. ಇಡೀದಿನ ತಲೆಯಲ್ಲಿ ಒಂದು ರೀತಿಯಲ್ಲಿ ಅನಾರೋಗ್ಯದ ನಿದ್ದೆಯ ಗುಂಗು, ತಲೆಯಲ್ಲಿ ಏನೋ ಸರಿ ಇಲ್ಲ ಇತ್ಯಾದಿ ಇತ್ಯಾದಿ. ಮನೆಯಲ್ಲಿ ಕೆಲಸವನ್ನೂ ಮಾಡದೆ ಮಲಗಿ ಬಿಟ್ಟೆ. ಹೀಗೆ ಮಲಗಿದ್ದಾಗ ಹೆಸರುಕಾಳಿನಲ್ಲಿ ಹೆಚ್ಚು ನೊರೆ ಬಂದಿರುವ ಬಗ್ಗೆ ಹೆಂಡತಿ ಹೇಳಿದ್ದು ನೆನಪಾಯಿತು. ಅದೇನೋ ಥಟ್ ಅಂತ ನನ್ನ ಹಿಂದಿನ ನೆನಪೊಂದಕ್ಕೆ ಅದು ಕನೆಕ್ಟ್ ಆಯಿತು.
ಹೀಗೆ ಆರು ವರ್ಷದ ಹಿಂದೆ ನನ್ನ ಮಗಳು ಹೊಟ್ಟೆಯ ಒಳಗಿದ್ದ ಸಮಯ, ಒಂದು ದಿನ ಉಪ್ಪಿಟ್ಟು ತಯಾರಿಸಿದ್ದೆ. ಅದು ಹಾರಕದ ಉಪ್ಪಿಟ್ಟು. ಹಾರಕದ ಉಪ್ಪಿಟ್ಟು ತಿಂದು ನಾನು ಯಾರನ್ನೋ ಭೇಟಿಯಾಗಲು ಹೋಗಿದ್ದೆ. ಆ ದಿನ ಕಣ್ಣೆಲ್ಲಾ ಮಂಜಾಗುತ್ತಿದೆ, ಕಣ್ಣೆದುರಿಗೆ ನಡೆಯುತ್ತಿರುವುದನ್ನು ಗುರುತಿಸಲು ನೆನಪಿಟ್ಟುಕೊಳ್ಳಲು ಆಗುತ್ತಿಲ್ಲ. ನನಗೇನೋ ಆಗಿದೆ ಎಂದು ಸ್ಪಷ್ಟವಾಯ್ತು.
ವರ್ಷಾ ಎಂಬ ಹುಡುಗಿ ನನ್ನೆದುರು ಬಂದಳು, ಇವಳನ್ನು ಎಲ್ಲೋ ನೋಡಿದ ನೆನೆಪು ಯಾರೆಂದು ಗೊತ್ತಾಗುತ್ತಿಲ್ಲ. ಅವಳನ್ನು ಮಾತನಾಡಿಸಲು ಆಗುತ್ತಿಲ್ಲ. ಕೊನೆಗೆ ಅದೇಕೊ ನೀರು ಕುಡಿಯುವ ಆಲೋಚನೆ ಬಂದು, ನೀರು ಕುಡಿಯೋಣ ಎಂದು ಎರಡು ಲೀಟರ್ ನೀರು ಕುಡಿದೆ. ಚೆನ್ನಾಗಿ ನಿದ್ದೆ ಬಂದು ಸರಿ ಹೋಯ್ತು. ಇತ್ತ ಮನೆಗೆ ಬಂದರೆ ನನ್ನ ಹೆಂಡತಿಯೂ ಶಾಲೆಯಲ್ಲಿ ಪಾಠ ಮಾಡಲು ಆಗದೆ ತಲೆ ಸುತ್ತಿ ಮನೆಗೆ ಬಂದಿದ್ದಳು. ಆಗ ದೋಷ ಇದ್ದದ್ದು ಹಾರಕದ ಉಪ್ಪಿಟ್ಟಿನಲ್ಲಿ ಎಂದು ಗೊತ್ತಾಯ್ತು.
ಈ ಮೇಲಿನ ಘಟನೆಯಲ್ಲಿ ನೀರು ಕುಡಿದದ್ದು ನೆನಪಾಗಿ ಎದ್ದು ಚೆನ್ನಾಗಿ ನೀರು ಕುಡಿದೆನು. ಆಗ ಸ್ಪಲ್ಪ ನಿರಾಳವಾಯ್ತು. ಹೌದು. ಆ ಹೆಸರುಕಾಳು ಅಮ್ಮ ಊರಿನಿಂದ ತಂದಿದ್ದರು. ಅದರಲ್ಲಿ ಸ್ಲೋ ಪಾಯಿಸನ್ ಇತ್ತು. ಆ ಸ್ಲೋ ಪಾಯಿಸನ್ ಇನ್ಯಾವುದೂ ಅಲ್ಲ ಅಫ್ಲಾಟಾಕ್ಸಿನ್.
ಈ ಆಪ್ಲಾಟಾಕ್ಸಿನ್ ಅಮ್ಮನ ಕೈಗೆ ಹೇಗೆ ಬಂತು ಎಂದು ಯೋಚಿಸುತ್ತಾ ಇರಬಹುದು. ಅಫ್ಲಾಟಾಕ್ಸಿನ ಎಂಬ ವಿಷ ತಯಾರಾಗುವುದು ಹೀಗೆ. ಮಣ್ಣಿನಲ್ಲಿ ಇರುವ ಒಂದಿಷ್ಟು ಶಿಲೀಂಧ್ರಗಳು (ಫಂಗಸ್) ಈ ವಿಷವನ್ನು ಉತ್ಪಾದಿಸುತ್ತವೆ. ಆಹಾರ ಧಾನ್ಯಗಳನ್ನು ಸಂಗ್ರಹಿಸುವಾಗ ಇರುವ ದೋಷದಿಂದಲೂ ಈ ವಿಷ ರೂಪುಗೊಳ್ಳುತ್ತದೆ. ಈ ವರ್ಷ ಹೆಸರುಕಾಳು ಕೋಯ್ಲು ಸಂದರ್ಭದಲ್ಲಿ ಸಿಕ್ಕಾಪಟ್ಟೆ ಮಳೆ ಇತ್ತು. ಮಳೆ ಇದ್ದ ಕಾರಣದಿಂದ ಹೆಸರುಗಿಡ ಕಿತ್ತು ಒಂದೆಡೆ ಕಿತ್ತು ಗುಡ್ಡೆ ಹಾಕಿದರು.
ಕೆಲವರು ಹೆಸರುಕಾಯಿ ಬಿಡಿಸಿ ಒಂದೆಡೆ ಗುಡ್ಡೆ ಹಾಕಿದರು. ಗುಡ್ಡೆ ಹಾಕಿದಾಗ ಹೆಚ್ಚು ಉಷ್ಣಾಂಶ ಉಂಟಾಗುತ್ತದೆ. ಈ ಉಷ್ಣಾಂಶದ ಜೊತೆ ತೇವವೂ ಇತ್ತು. ಒಣಗಿಸಲು ಬಿಸಿಲು ಸಿಗಲಿಲ್ಲ. ಈ ಸಮಯದಲ್ಲಿ ಶಿಲೀಂಧ್ರಗಳು ಬೆಳೆದು ಈ ವಿಷವನ್ನು ಉತ್ಪತ್ತಿ ಮಾಡುತ್ತವೆ. ಈ ವಿಷದಲ್ಲಿ ಅನೇಕ ಬಗೆಗಳಿವೆ. ಕೆಲವು ತರದ ವಿಷಗಳು ಮಾರಣಾಂತಿಕವಾಗಿವೆ. ಈ ಹಿಂದೆ ಹಾರಕದ ಅಕ್ಕಿಯ ಉಪ್ಪಿಟ್ಟು ತಿಂದ ಘಟನೆಯಲ್ಲಿ ಕಂಡು ಬರುವ ವಿಷ ನೋಡಿ. ಅದು ಮಾರಣಾಂತಿಕ ವಿಷ.
ಈ ವಿಷದಿಂದ ಸಾವೂ ಸಂಭವಿಸಬಹುದು. ಹಾರಕದ ಅಕ್ಕಿಯ ಸುತ್ತ ಏಳು ಸುತ್ತು ಹೊಟ್ಟು ಇರುತ್ತದ ಎಂದು ಹೇಳುತ್ತಾರೆ. ಈ ಹಾರಕವನ್ನು ಕೊಯ್ದು ಇಬ್ಬನಿಗೆ ಬಿಟ್ಟರೆ ಅಥವಾ ಕೋಯ್ಲು ಮಾಡಿಟ್ಟುರುವಾಗ ಮಳೆ ಬಂದರೆ ಅಲ್ಲಿ ಈ ಫಂಗಸ್ (ಶಿಲೀಂಧ್ರ) ಬೆಳೆದು ವಿಷವನ್ನು ಉತ್ಪತ್ತಿ ಮಾಡುತ್ತದೆ. ಇಂತಹ ವಿಷ ಮೆದುಳಿನ ಮೇಲೆ ಪರಿಣಾಮ ಬೀರಬಲ್ಲುದು. ಅದಕ್ಕಾಗಿ ಹಾರಕವನ್ನು ನಮ್ಮಲ್ಲಿ ‘ಹುಚ್ಚಾರ್ಕ’ ಎಂದೂ ಕರೆಯುತ್ತಾರೆ. ಹಾರಕದ ಕೋಯ್ಲು ಮತ್ತು ಸಂಸ್ಕರಣೆಯಲ್ಲಿ ಎಚ್ಚರ ಅತೀ ಮುಖ್ಯ.
ಈ ವರ್ಷ ಕೋಯ್ಲುಗಳ ಸಂದರ್ಭದಲ್ಲಿ ಎಲ್ಲಾ ಕಡೆ ಮಳೆ ಇರುವುದರಿಂದ ತುಂಬಾ ಕಡೆ ಕಾಳುಗಳು ಮಳೆಗೆ ಸಿಕ್ಕಿ ಒಣಗಿಸಲು ಸಾಧ್ಯವಾಗದೆ ಈ ಅಪ್ಲಾಟಾಕ್ಸಿನ್ ಎಂಬ ವಿಷ ಕಾಳುಗಳಲ್ಲಿ ಇದೆ. ಇಂತಹ ವಿಷಯುಕ್ತ ಕಾಳುಗಳನ್ನು ಹಸು ಕೋಳಿಗಳಿಗೆ ಅಥವಾ ಇನ್ನಿತರ ಪ್ರಾಣಿಗಳಿಗೆ ನೀವು ನೀಡಿದರೆ, ಆ ಪ್ರಾಣಿಯ ಉತ್ಪನ್ನದಲ್ಲಿ ಅಪ್ಲಾಟಾಕ್ಸಿನ್ ಇರುತ್ತದೆ. ಉದಾಹರಣೆಗೆ ಹಸುವಿನ ಹಾಲು ಮತ್ತು ಮೊಟ್ಟೆ ಇತ್ಯಾದಿ. ಹಾಗಾಗಿ ಅಪ್ಲಾಟಾಕ್ಸಿನ್ ಇರುವ ಕಾಳನ್ನು ನೆಲದಲ್ಲಿ ಹೂಳಬೇಕು ಬಿಟ್ಟರೆ ತಿನ್ನಲು ಬಳಸಲೇಬಾರದು.
ಈ ಅಪ್ಲಾಟಾಕ್ಸಿನ್ ಎಂಬ ವಿಷದಿಂದ ಕರುಳಿನ ಕ್ಯಾನ್ಸರ್ ಸಂಭವಿಸಬಹುದು. ಮಕ್ಕಳಲ್ಲಿ ಬೆಳವಣಿಗೆಯ ತೊಂದರೆ ಕೊಳ್ಳಬಹುದು ಇನ್ನೂ ಅನೇಕ ರೀತಿಯ ಆರೋಗ್ಯದ ತೊಂದರೆ ಉಂಟಾಗಬಹುದು. ತಿಂದಾಗ ತಕ್ಷಣ, ವಾಂತಿ, ಭೇಧಿಯಾಗಬಹುದು, ತಲೆ ಸುತ್ತಬಹುದು ಇತ್ಯಾದಿ ತೊಂದರೆಯಾಗಬಹುದು. ಕಾಳುಗಳನ್ನು ಕೋಯ್ಲುಮಾಡುವಾಗ ಹುಷಾರಾಗಿ ಒಣಗಿಸುವುದು ಮತ್ತು ಶೇಖರಣೆ ಮಾಡುವುದು ಅತೀಮುಖ್ಯ.
ನಾವು ವಾರದಲ್ಲಿ ಎರಡು ಮೂರು ದಿನ ಹೆಸರುಕಾಳು ತಿನ್ನುತ್ತೇವೆ. ಅಮ್ಮ ನೀಡಿದ್ದ ಹೆಸರುಕಾಳು ತಿನ್ನಲು ಶುರು ಮಾಡಿದ ಮೇಲೆ ಆರೋಗ್ಯದ ತೊಂದರೆ ಶುರುವಾಗಲು ಕಾರಣ ಈ ಅಪ್ಲಾಟಾಕ್ಸಿನ್. ಅದನ್ನು ತಿನ್ನುವುದನ್ನು ನಿಲ್ಲಿಸಿದ ಮೇಲೆ ಆ ತೊಂದರೆಗಳು ಮರುಕಳಿಸಲಿಲ್ಲ. ಅಮ್ಮನಿಗೆ ಫೋನ್ ಮಾಡಿ ನೀವೂ ಆ ಹೆಸರುಕಾಳು ತಿನ್ನಬೇಡಿ ಅದರಲ್ಲಿ ವಿಷವಿದೆ ಎಂದು ತಿಳಿಸಿದೆ.
ಈ ವರ್ಷ ಅನೇಕರ ಮನೆಯಲ್ಲಿ ಹೆಸರುಕಾಳು ಇತ್ಯಾದಿ ಕಾಳುಗಳು ಮಳೆಯಲ್ಲಿ ನೆನೆದಿವೆ. ಆರೋಗ್ಯದ ತೊಂದರೆ ಕಂಡು ಬಂದರೆ ಈ ಅಫ್ಲಾಟಾಕ್ಸಿನ್ ಕಾರಣವಿರಬಹುದು ಯೋಚಿಸಿರಿ.
Aflatoxins are very dangerous and in fact carcinogenic. Thanks for writing about this…