ಎತ್ತರದ ಬೇಲಿಯನ್ನೂ ಹಾರಿ ತೋಟಕ್ಕೆ ನುಗ್ಗುವ ತುಡುಗು ದನಗಳಿಗೆ ಕುಂಟುಹಗ್ಗ ( ಮುಂಗಾಲಿಗೂ ಕುತ್ತಿಗೆಗೂ ಸೇರಿಸಿ ಕತ್ತನ್ನು ಹೆಚ್ಚು ಎತ್ತರಿಸಲಾಗದಂತೆ ಕಟ್ಟುವುದು) ಹಾಕಿ ಮೇಯಲು ಬಿಡುವ ಕ್ರಮ ಮಲೆನಾಡಿನಲ್ಲಿದೆ. ಎತ್ತರದ ಬೇಲಿ ಜಿಗಿಯುವ ಸಾಮರ್ಥ್ಯ ಕಳೆದುಕೊಂಡ ಅವು ಬೇಲಿಗಂಟಾ ಸಾಗುತ್ತಾ ಕಡಿಮೆ ಎತ್ತರದ ಹಾಗೂ ದುರ್ಬಲ ಭಾಗವನ್ನು ಹುಡುಕಿ ಜಿಗಿದುಬಿಡುತ್ತವೆ !
ಈ ಬಾರಿಯ ಮುಂಗಾರಿನ ಕತೆಯೂ ಇದೇ ಆಗಿದೆ.ಚಂಡಮಾರುತದ ಕತ್ತೆ ಒದೆತಕ್ಕೆ ದುರ್ಬಲಗೊಂಡು ಕೇರಳ, ಕರ್ನಾಟಕ ಭಾಗದ ಎತ್ತರದ ಘಟ್ಟ ಹಾಯ್ದು ಒಳನಾಡು ಪ್ರವೇಶಿಸಲಾರದ ಅದು ಕರಾವಳಿ ಗುಂಟಾ ಹಾಯ್ದು ಮಹಾರಾಷ್ಟ್ರ,ಗುಜರಾತ್ ತೀರದ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಒಳನುಗ್ಗಿ ಅವಧಿಗೆ ಮುನ್ನವೇ ಉತ್ತರ ಭಾರತ ಪ್ರವೇಶಿಸುತ್ತಿರುವುದು ವರದಿಯಾಗಿದೆ.
ಅರಬ್ಬಿ ಸಮುದ್ರ ಹಾಗೂ ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಸುರಿಯಬಹುದಾದರೂ ಮಲೆನಾಡಿನಲ್ಲಿ ಬರೀ ಅದರ ಎರಚುಹನಿಗಳಷ್ಷೇ. ಉಳಿದ ಕಂತುಗಳು ಶಕ್ತಿ ಪಡೆದು ಘಟ್ಟ ಏರುವ ಸಂಭವ ಕಡಿಮೆಯೇನೋ. ಈ ಬಗ್ಗೆ ಹವಾಮಾನ ಇಲಾಖೆಯ ಸೂಕ್ತ ಮಾಹಿತಿಯೂ ಇಲ್ಲ!
2018 ರ ಏಪ್ರಿಲ್ ನಲ್ಲಿ ಬೀಸಿದ್ದ ಓಕಿ ಎಂಬ ಅಸಹಜ ಚಂಡಮಾರುತವೂ ಹೀಗೇ, ಆದರೆ ತದ್ವಿರುದ್ಧ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲೂ ಹವಾಮಾನ ಇಲಾಖೆ ಸೂಕ್ತ ಮುನ್ಸೂಚನೆ ನೀಡಲಾರದೆ ಹೋಗಿತ್ತು. ಚಂಡಮಾರುತ ನಿರ್ಮಿಸಿ ಹೋಗಿದ್ದ ನಿಮ್ನತೆಗಳಲ್ಲಿ ವೇಗವಾಗಿ ಸಾಗಿ ಅಧಿಕ ಶಕ್ತಿ ಗಳಿಸಿದ್ದ ಮುಂಗಾರು ಮೋಡಗಳ ಸೈನ್ಯ ವೇಗವಾಗಿ ಒಳನುಗ್ಗಿ ಕೇರಳ, ಕೊಡಗು ಭಾಗದಲ್ಲಿ ಅನಾಹುತಗಳನ್ನೇ ಸೃಷ್ಟಿಸಿತ್ತು.
ಈ ಎಲ್ಲಾ ವಿದ್ಯಮಾನಗಳನ್ನೂ ಗಮನಿಸುವಾಗ ಈ ವರ್ಷ ದಕ್ಷಿಣ ಭಾರತ ಮಳೆಯ ತೀವ್ರ ಕೊರತೆ ಎದುರಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಜಲ ತುರ್ತುಪರಿಸ್ಥಿತಿ ಘೋಷಿಸುವುದು ಅಗತ್ಯವೇನೋ.