ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ  ಗೋಡಂಬಿ ಕೃಷಿಯನ್ನು ಮಾಡಲಾಗುತ್ತಿದೆ. ರಾಜ್ಯದ ಒಟ್ಟು ಗೋಡಂಬಿ ಉತ್ಪಾದನೆಯಲ್ಲಿ ಶೇಕಡಾ ತೊಂಭತ್ತರಷ್ಟು ದಕ್ಷಿಣ ಕನ್ನಡ  ಮತ್ತು  ಉಡುಪಿ ಜಿಲ್ಲೆಗಳಲ್ಲಿ  ಬೆಳೆಯುತ್ತಾರೆ.  ಇತ್ತೀಚಿನ ವರ್ಷಗಳಲ್ಲಿ ಕೋಲಾರದಲ್ಲೂ ರೈತರು ಗೋಡಂಬಿ ಕೃಷಿಯತ್ತ  ಗಮನ ಹರಿಸಿದ್ದಾರೆ,

ಪೋರ್ಚುಗೀಸ್ ಬಾಷೆಯಲ್ಲಿ ಕಾಜೂ ಎಂದು ಕರೆಯಲ್ಪಡುವ   ಗೇರುಗಿಡ, ಆನಕಾರ್ಡಿಯೇಸಿಯೇ ಸಸ್ಯ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸುಮಾರು 60  ಉಪವರ್ಗಗಳಿಗೆ ಸೇರಿದ  400 ಪ್ರಭೇದಗಳಿವೆ.  ಇದು ಗಿಡ್ಡ ಗಾತ್ರದ,  ಹರಡಿಕೊಂಡು ಬೆಳೆಯುವ ನಿತ್ಯ ಹರಿದ್ವರ್ಣದ  ಮರ. ರೆಂಬೆ ಕೊಂಬೆಗಳು ಅಡ್ಡಾ ದಿಡ್ಡಿಯಾಗಿ ಬೆಳೆಯುವುದು  ಇದರ  ಒಂದು ಲಕ್ಷಣ. ಒಣ ಹವೆಗೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ. ಮೂರನೇಯ ವರ್ಷದಿಂದ ಹೂ ಬಿಟ್ಟು ಹಣ್ಣು ಕೊಡಲಾರಂಭಿಸುತ್ತವೆಯಾದರೂ ಪೂರ್ಣ ಸಾಮರ್ಥ್ಯದ  ಇಳುವರಿ ಸಿಗಬೇಕಾದರೆ 10 ವರ್ಷವಾದರೂ ಆಗಬೇಕು.

ಪೂರಕ ಅಂಶಗಳು: ಗೇರು ಕೃಷಿಗೆ ಬೇಕಾಗುವ ಪ್ರಮುಖ ಅಂಶಗಳೆಂದರೆ ಆಯಾ ಪ್ರದೇಶಕ್ಕೆ ಅನುಗುಣವಾದ ತಳಿ, ಮಣ್ಣು, ಹವಾಗುಣ, ನೀರು, ಗೊಬ್ಬರ  ಮತ್ತು ನಾಟಿ ಸಾಮಾಗ್ರಿಗಳು

1)ಉಳ್ಳಾಲ-1: ಹೆಚ್ಚು ಇಳುವರಿ ಕೊಡುವ ತಳಿ.  ಹಣ್ಣುಗಳು  ಹಳದಿ ಮಿಶ್ರಿತ  ಕೆಂಪು ಬಣ್ಣವನ್ನು ಹೊಂದಿರುತ್ತವೆ. ಬೀಜಗಳು ಮಧ್ಯಮ  ಗಾತ್ರದ್ದಾಗಿರುತ್ತವೆ. ಸುಮಾರು 20kg ಬೀಜಗಳನ್ನು ಒಂದು ಮರದಿಂದ ಪಡೆಯಬಹುದಾಗಿದೆ. ನವೆಂಬರ್  ಮಧ್ಯ ಭಾಗದಿಂದ ಹೂ ಬಿಡಲು ಪ್ರಾರಂಭಿಸಿ ಎಪ್ರೀಲ್ – ಮೇ ತಿಂಗಳವರೆಗೂ ಕೊಯ್ಲಿುಗೆ  ಬರುತ್ತದೆ…. ಇದು ಟೀ ಸೊಳ್ಳೆಯ ಭಾದೆ ನಿರೋಧಕ  ಗುಣವನ್ನು ಹೊಂದಿದೆ……

2)ಉಳ್ಳಾಲ-2: ಕಡಿಮೆ ಅವಧಿಯ ಹಾಗೂ ಬೇಗ ಕೊಯ್ಲಿಗೆ  ಬರುವ  ಈ ತಳಿ. ವಾರ್ಷಿಕ ಸರಾಸರಿ 18.5kg  ಇಳುವರಿ ಕೊಡುತ್ತದೆ ಹಣ್ಣುಗಳು ಕೆಂಪು ಬಣ್ಣದಾಗಿದ್ದು,  ಬೀಜದ ಗಾತ್ರವು  ಚಿಕ್ಕದಾಗಿರುತ್ತದೆ. ಇದು ಫೆಬ್ರವರಿ -ಮಾರ್ಚ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.

3) ಉಳ್ಳಾಲ-3:ಬೇಗನೆ ಕೊಯ್ಲಿಗೆ ಬರುವ ತಳಿ. ಸರಾಸರಿ 14.5kg ಇಳುವರಿ ಕೊಡುತ್ತದೆ. ಬೀಜಗಳು ಉತ್ತಮ ಗಾತ್ರ ಹೊಂದಿದ್ದು ಜನವರಿಯಿಂದ ಮಾರ್ಚ್ ತಿಂಗಳಲ್ಲಿ ಕೊಯ್ಲು ಮುಗಿಯುತ್ತದೆ.

4)  ಉಳ್ಳಾಲ-4: ಈ ತಳಿಯ ಬೀಜಗಳು ಸಾಧಾರಣ ಉತ್ತಮ ಗಾತ್ರದ್ದಾಗಿರುತ್ತವೆ. ಹಣ್ಣುಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ. ಇದು  ಸರಾಸರಿ 9.5kg ಇಳುವರಿಯನ್ನು ಕೊಡುತ್ತದೆ …ಮತ್ತು ಮಾರ್ಚ್ ಒಳಗೆ  ಇದರ ಕೊಯ್ಲು ಮುಗಿಯುತ್ತದೆ.

5)ಯು.ಎನ್.-50: ಈ ತಳಿ ಕೆಂಪು ಮಿಶ್ರಿತ ಹಳದಿ ಹಣ್ಣುಗಳನ್ನು ನೀಡುತ್ತದೆ.  ಇದರ ಒಂದು ಬೀಜದ ಸರಾಸರಿ ತೂಕ, ಸುಮಾರು 9 ಗ್ರಾಮ್. ವಾರ್ಷಿಕ 10.5kg ಇಳುವರಿಯನ್ನು ಕೊಡುತ್ತದೆ.

6)ಚಿಂತಾಮಣಿ-1: ತಡವಾಗಿ ಹೂ ಬಿಡುವ ಈ ತಳಿಯು ಹಳದಿ ಬಣ್ಣದ ಹಣ್ಣುಗಳನ್ನು ನೀಡುತ್ತದೆ. ಉತ್ತಮ ಗಾತ್ರದ ಬೀಜಗಳನ್ನು  ನೀಡುತ್ತದೆ.  ಪ್ರತಿ ಮರವು ಸುಮಾರು 7.50kgಯಷ್ಟು  ಇಳುವರಿಯನ್ನು ಕೊಡುತ್ತದೆ..

7) ಚಿಂತಾಮಣಿ-2:  ಇದು ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರದಿಂದ ಶಿಫಾರಸ್ಸು ಮಾಡಿರುವ ಅಧಿಕ ಇಳುವರಿ ಕೊಡುವ ತಳಿ. ಒಂದು ಮರದಿಂದ ಸರಾಸರಿ 8 ರಿಂದ 10kgಯಷ್ಟು ಉತ್ತಮ ಗಾತ್ರದ ಬೀಜ ಮತ್ತು ತಿರುಳನ್ನು ಹೊಂದಿರುತ್ತದೆ.

8) ಧನ: ಇದು ಒಂದು ಸಂಕರಣ ತಳಿ…. ಈ ತಳಿಯನ್ನು ಮೈದಾನ ಪ್ರದೇಶಕ್ಕೆ ಸೂಕ್ತವೆಂದು ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗುರುತಿಸಿ ಬೇಸಾಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ತಳಿಯ ಒಂದು ಮರ ಸರಾಸರಿ 9kg  ಬೀಜಗಳನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಬೀಜದ ಗಾತ್ರ 7.9g ಇದ್ದು ತಿರುಳು 2.1gram ತೂಗುತ್ತದೆ.  ಹಣ್ಣುಗಳು  ಮಧ್ಯಮ ಗಾತ್ರವನ್ನು ಹೊಂದಿದ್ದು  ಹಳದಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿರುತ್ತವೆ.

9) ಭಾಸ್ಕರ: ಈ ತಳಿಯನ್ನು ಪುತ್ತೂರಿನ ರಾಷ್ಟೀಯ ಗೇರು ಸಂಶೋಧನಾ ಕೇಂದ್ರದವರು ಕರಾವಳಿ ಪ್ರದೇಶಕ್ಕೆ ಸೂಕ್ತವೆಂದು ಬಿಡುಗಡೆ ಮಾಡಿರುತ್ತಾರೆ. ಈ ತಳಿಯ ಒಂದು ಮರ ಸರಾಸರಿ 10kg  ವಾರ್ಷಿಕ ಇಳುವರಿ  ಕೊಡುತ್ತದೆ. ಟೀ ಸೊಳ್ಳೆಗಳ ಭಾದೆಯನ್ನು ನಿರೋಧಕ ಗುಣವನ್ನು ಹೊಂದಿದೆ.

10) ವೆಂಗುರ್ಲ-4 ಮತ್ತು7: ವೆಂಗುರ್ಲ -4 ಇದು ಪ್ರತಿ ಮರಕ್ಕೆ 17.2kg ಯಷ್ಟು ಬೀಜ ದೊರೆಯುತ್ತದೆ.  ವೆಂಗುರ್ಲ-7  ಈ ತಳಿಯ ಪ್ರತಿ ಮರದಿಂದ 18.8kg ಬೀಜ ದೊರೆಯುತ್ತದೆ.

ಮಣ್ಣಿನ ಗುಣ: ಭಾರತದ ಕರಾವಳಿ ಪ್ರದೇಶಗಳಲ್ಲಿ ಗೇರುಸಸ್ಯಗಳು ಉತ್ತಮವಾಗಿ ಬೆಳೆಯುತ್ತವೆ. ಅದರೆ ಪಶ್ಚಿಮ ಕರಾವಳಿಯಲ್ಲಿ  ಬೆಳೆಯುವ ಮರಗಳು ಪೂರ್ವ ಕರಾವಳಿಯಲ್ಲಿ ಬೆಳೆಯುವ  ಮರಗಳಿಗಿಂತ ಹೆಚ್ಚು ಇಳುವರಿಯನ್ನು ಕೊಡುತ್ತವೆ. ಇದಕ್ಕೆ  ಮುಖ್ಯ ಕಾರಣ ಪಶ್ಚಿಮ ಕರಾವಳಿಯ ಮಣ್ಣಿನ ಗುಣ ಲಕ್ಷಣಗಳು ಮತ್ತು ಅಲ್ಲಿ  ಚದುರಿದಂತೆ ಬೀಳುವ  ಮಳೆ. ತೀರ ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ತೇವಾಂಶವಿರುವ ಪ್ರದೇಶಗಳಲ್ಲಿ ಗೇರುಕೃಷಿಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಫಲವತ್ತತ್ತೆ ಇಲ್ಲದ ಬಂಜರು ಭೂಮಿಯಿಂದ ಹಿಡಿದು ಅತೀ ಹೆಚ್ಚು ಮಳೆ ಬೀಳುವ ಕರಾವಳಿಯಲ್ಲೂ  ಗೇರು ಬೆಳೆಯುತ್ತದೆ. ಆದರೆ  ಇಳುವರಿ ಮಾತ್ರ ಆಯಾಯ ಮಣ್ಣಿನ ಮತ್ತು ಹವಾಗುಣದ ಮೇಲೆ ಅವಲಂಬಿತಿರುತ್ತದೆ. ಗೇರು ಕೃಷಿಗೆ ವಿಶೇಷವಾಗಿ ಆಳವಾದ ಫಲವತ್ತತೆಯಿಂದ ಕೂಡಿದ ನೀರು ಬಸಿದು ಹೋಗುವ  ಮಣ್ಣು ಉತ್ತಮ. ಸ್ವಲ್ಪ ಮಟ್ಟಿಗೆ ಆಮ್ಲೀಯತೆ ಇದ್ದರೆ ಸೂಕ್ತ(6.3 to 7.5ph) ನೀರು ನಿಲ್ಲುವ ಜಾಗ ಗೇರುಕೃಷಿಗೆ ಸೂಕ್ತವಲ್ಲ. ಅಂತಹ ಜಾಗಗಳಲ್ಲಿ ಈ ಕೃಷಿಯನ್ನು ಮಾಡುವುದಿದ್ದರೆ  ನೀರು ಹರಿದು ಹೋಗುವಂತೆ ಬಸಿಗಾಲುವೆಗಳನ್ನು ಮಾಡಬೇಕು. ಮಳೆಪ್ರಾರಂಭದಲ್ಲಿ ಅಥವಾ ಜೂನ್ ತಿಂಗಳುಗಳಲ್ಲಿ ಗೇರು ಸಸಿಗಳನ್ನು ನೆಟ್ಟರೆ  ಒಳ್ಳೆಯದು. ಇದರಿಂದ ಮಳೆಗಾಲದಲ್ಲಿ ಎಳೆಯ ಸಸಿಗಳಿಗೆ ನೀರುಣಿಸುವ ಅವಶ್ಯಕತೆಯಿರುವುದಿಲ್ಲ .ಇದರಿಂದ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಆದರೆ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು.

ಹವಾಗುಣ: ಗೇರುಬೆಳೆಯು, ಉಷ್ಣವಲಯದ ಸಸ್ಯ. ಹೆಚ್ಚು ಆರ್ದ್ರತೆಯಿಂದ ಕೂಡಿದ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇವುಗಳನ್ನು ಸಮುದ್ರಮಟ್ಟದಿಂದದಲ್ಲಿ ಮತ್ತು ಸಮುದ್ರಮಟ್ಟದಿಂದ 3,600  ಮೀಟರುಗಳಷ್ಟು ಎತ್ತರದ ಪ್ರದೇಶಗಳಲ್ಲಿ ಬೆಳೆಸಬಹುದು.  ಸುಮಾರು 32 ಡಿಗ್ರಿ ಸೆಲ್ಸಿಯಸ್ ನಿಂದ 37.7 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆ ಹಾಗೂ ಚಳಿಗಾಲದಲ್ಲಿ 13 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯಿರುವ ಪ್ರದೇಶಗಳಲ್ಲೂ  ಉತ್ತಮವಾಗಿ ಬೆಳೆಯುತ್ತದೆ.

ಹೂ ಬಿಡುವ ಸಮಯದಲ್ಲಿ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ಉಷ್ಣತೆ ಇದ್ದರೆ  ಇಳುವರಿಯ ಮೇಲೆ ದುಷ್ಪರಿಣಾಮವಾಗುವ ಸಂಭವವಿರುತ್ತದೆ. ಮೋಡ ಕವಿದ ವಾತಾವರಣವಿದ್ದರೂ ಒಳ್ಳೆಯದಲ್ಲ. ಇದರಿಂದ ಗೇರುಸಸ್ಯದ ಪರಮ ಶತ್ರುವಾದ ಟೀ ಸೊಳ್ಳೆಯ ಕಾಟ ಹೆಚ್ಚಾಗುತ್ತದೆ. ಹೂವುಗಳು ಉದುರುತ್ತವೆ. ಹೂವು ಬಿಡುವ ಸಮಯದಲ್ಲಿ ತೀರ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದ್ದರೂ ಮರಕ್ಕೆ ಮತ್ತು ಹೂವಿಗೆ ಹಾನಿಯಾಗುತ್ತದೆ.

ಗೇರುಸಸ್ಯಗಳು, ವರ್ಷಕ್ಕೆ ಕನಿಷ್ಠ 50cm  ಮಳೆಯಿಂದ 250cm ಮಳೆ ಬೀಳುವ ಪ್ರದೇಶಗಳಲ್ಲಿಯೂ ಉತ್ತಮ ಫಸಲನ್ನು ನೀಡುವ ಸಾಮರ್ಥ್ಯ ಹೊಂದಿವೆ. ಗೇರು, ಉಷ್ಣವಲಯದ ಕೃಷಿಯಾಗಿದ್ದು, ಹೆಚ್ಚು ನೆರಳು, ಶೀತ ಇರುವ ಪ್ರದೇಶಗಳು ಗೋಡಂಬಿ ಕೃಷಿಗೆ ಸೂಕ್ತವಲ್ಲ.

ನೀರು ಪೂರೈಕೆ: ನಾಟಿ ಮಾಡಿದ ಗೋಡಂಬಿ ಸಸಿಗಳಿಗೆ ನೀರು ಒದಗಿಸುತ್ತಿರಬೇಕು. ಬೇಸಿಗೆಯಲ್ಲಿ ಗಿಡಗಳು ಒಣಗದಂತೆ ವಾರದಲ್ಲಿ ಎರಡು ಸಲ ನೀರು ಕೊಡುವುದು  ಒಳ್ಳೆಯದು. ಹೂಗಳು ಫಲಿತವಾಗಿ ಕಾಯಿಗಳು ಮೂಡುವ ಸಮಯದಲ್ಲಿ ನೀರು ಪೂರೈಸುತ್ತಿದ್ದರೆ  ಬೀಜವು ಚೆನ್ನಾಗಿ  ಬಲಿತು ಉತ್ತಮ ಇಳುವರಿ ದೊರೆಯುತ್ತದೆ.  ನೀರಿನ  ವ್ಯವಸ್ಥೆಯನ್ನು  ಗಿಡ ನೆಡುವ ಮೊದಲೇ ಮಾಡಿಕೊಳ್ಳುವುದು ಒಳಿತು. ಹನಿನೀರಾವರಿ ಅಥವಾ ತುಂತುರು ನೀರಾವರಿ ಉತ್ತಮವಾಗಿದ್ದು ಬೇಸಿಗೆಯ ಸಂದರ್ಭದಲ್ಲಿ ಮಾತ್ರ  ಇದರ ಅವಶ್ಯಕತೆ ಇರುತ್ತದೆ.  ದೊಡ್ಡ ಮರಗಳಿಗೆ ಅಂತಹ ನೀರಿನ ಅವಶ್ಯಕತೆ ಇಲ್ಲದಿದ್ದರೂ ವಾತಾವರಣದ ಮತ್ತು  ಮಣ್ಣಿನ  ಗುಣ ಧರ್ಮಕ್ಕನುಗುಣವಾಗಿ  20 ದಿನಕ್ಕೊಂದು  ಸಲವಾದರೂ ನೀರು ಕೊಡುವುದು ಸೂಕ್ತ.

ಲೇಖಕರು: ಡಾ. ಸುಜಾತ, ಹಿರಿಯ ಕೃಷಿವಿಜ್ಞಾನಿ

10 COMMENTS

    • ಮಲೆನಾಡಿನ ವಾತಾವರಣಕ್ಕೆ ಗೇರು ಅಷ್ಟು ಉತ್ತಮವಾಗಿ ಬೆಳವಣಿಗೆಯಾಗುವುದಿಲ್ಲ.

  1. ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವ ತಳಿ ಸೂಕ್ತ. ಉತ್ತಮವಾದ ತಳಿ ಯಾವುದು ತಿಳಿಸಿ

    • ಚಿಂತಾಮಣಿ ಗೇರುಸಂಶೋಧನಾ ಕೇಂದ್ರದಲ್ಲಿ ಈ ಪ್ರದೇಶಕ್ಕೆ ಅನುಗುಣವಾದ ತಳಿಗಳಿವೆ… ವಿಚಾರಿಸಿ…

  2. Which species plant suitable for tumkur District chikkanaayakanahalli taluk area and where do we get the plants.. Please share us if there is any contact…Thanks & Regards Raghu DM

    • ಚಿಂತಾಮಣಿ ಗೇರು ಸಂಶೋಧನಾ ಕ್ಷೇತ್ರಕ್ಕೆ ಭೇಟಿಕೊಡಿ. ಅಲ್ಲಿ ಸ್ಥಳೀಯ ಪ್ರದೇಶಗಳಿಗೆ ಹೊಂದಾಣಿಕೆಯಾಗುವ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿದ್ದೀರಿ. ಇನ್ನೂ ಹೆಚ್ಚಿನ ಮಾಹಿತಿ ಸಹ ದೊರೆಯುತ್ತದೆ.

  3. 🌱🌳 ಉಳ್ಳಾಳ -7 ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿಗೆ ಈ ತಳಿ ಹೊಂದಿಕೊಳುವುದೇ ಮಾಹಿತಿ ತಿಳಿಸುವುದು.🙏

LEAVE A REPLY

Please enter your comment!
Please enter your name here