ಯಶೋಗಾಥೆ : ಸಕ್ಕರೆ ನಾಡಿನಲ್ಲಿ ಸಮಗ್ರ ಕೃಷಿ ಚಮತ್ಕಾರ !

0
ಲೇಖಕರು:  ಡಾ: ಕೆ. ಶಿವರಾಮು

ಸಕ್ಕರೆ ನಾಡು ಮಂಡ್ಯದಲ್ಲಿ ಏಕ ಬೆಳೆ ಪದ್ಧತಿಯನ್ನು ಬಹುತೇಕ ರೈತರು ಅನುಸರಿಸುತ್ತಿದ್ದಾರೆ. ಭತ್ತ, ಕಬ್ಬು, ರಾಗಿಯೇ ಪ್ರಮುಖ ಬೆಳೆಗಳು. ಇದಕ್ಕೆ ಅಪವಾದವೆನ್ನುವಂತೆ ಮಂಡ್ಯ ತಾಲ್ಲೂಕಿನ ಮಾರಗೌಡನಹಳ್ಳಿಯ ಶಿವಣ್ಣ ಗೌಡರು ಸಮಗ್ರ ಕೃಷಿಯನ್ನು ಅನುಸರಿಸುತ್ತಿದ್ದಾರೆ. ತಮ್ಮ ೧೦.೫೦ ಏಕರೆ ಜಮೀನನ್ನು ಸಾವಯವ ಮತ್ತು ಸಮಗ್ರ ಕೃಷಿಯ ಪ್ರಯೋಗಶಾಲೆಯನ್ನಾಗಿಸಿ ಕೃಷಿಯಲ್ಲಿ ಸಾರ್ಥಕತೆ ಕಂಡುಕೊAಡಿದ್ದಾರೆೆ.

ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿದ್ದಾರೆ. ಇವರ ಮಗಳು ಇಂಜಿನೀಯರಿಂಗ್ ಮತ್ತು ಇಬ್ಬರು ‌ ಗಂಡು ಮಕ್ಕಳು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ(ಕೃಷಿ)  ಮತ್ತು ಬಿ.ಎಸ್ಸಿ(ಕೃಷಿ) ವ್ಯಾಸಂಗ ಮಾಡುತ್ತಿದ್ದಾರೆ. ಶಿವಣ್ಣ ಗೌಡರು ತಮ್ಮ ಜಮೀನಿನಲ್ಲಿ ಆಹಾರ ಬೆಳೆಗಳಾದ ರಾಗಿ, ತೊಗರಿ, ಭತ್ತ, ಕಬ್ಬು, ಸಿರಿಧಾನ್ಯಗಳಾದ ಬರಗು, ನವಣೆ ಹಾಗೂ ತೋಟಗಾರಿಕಾ ಬೆಳೆಗಳಾದ ತೆಂಗು, ಮಾವು, ಬಾಳೆ, ಪಪ್ಪಾಯ, ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ.

ಇವರು ವಿವಿಧ ಬೆಳೆ ಪದ್ಧತಿಗಳನ್ನು ಅನುಸರಿಸಿ ಬಾಳೆಯಲ್ಲಿ ಅಂತರ ಬೆಳೆಯಾಗಿ ಚೆಂಡು ಹೂ ಮತ್ತು ಸಾಂಬರ್ ಸೌತೆ, ಬಹುಬೆಳೆ ಪದ್ಧತಿಯಡಿ ಬಾಳೆ, ಟೊಮ್ಯಾಟೊ, ಈರುಳ್ಳಿ ಮತ್ತು ಕಲ್ಲಂಗಡಿ. ಮಿಶ್ರ ಬೆಳೆಯಾಗಿ ಉದ್ದು, ಹೆಸರು ಮತ್ತು ಅಲಸಂದೆ, ಅಂತರ ಬೆಳೆಯಾಗಿ ಚೆಂಡು ಹೂ, ಕಲ್ಲಂಗಡಿ ಮತ್ತು ಮೆಣಸಿನಕಾಯಿ, ಬಹು ಬೆಳೆ ಪದ್ಧತಿಯಡಿ ತೆಂಗು, ಬಾಳೆ ಮತ್ತು ಪರಂಗಿಯನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಕಬ್ಬನ್ನು ಆರು ಅಡಿಗಳ ಅಂತರದ ಸಾಲಿನಲ್ಲಿ ನಾಟಿಮಾಡಿದ ನಂತರ ಅಂತರ ಬೆಳೆಗಳಾಗಿ ಕುಂಬಳಕಾಯಿ, ಟೊಮೆಟೊ, ಪಪ್ಪಾಯ, ರಾಜೀರುಳ್ಳಿ, ಸೌತೆಕಾಯಿ, ಕಲ್ಲಂಗಡಿ ಬೆಳೆಯುತ್ತಾರೆ ಅಥವಾ ಚಂಬೆ, ದಯಾಂಚ ಬೆಳೆದು ಮಣ್ಣಿಗೆ ಸೇರಿಸುತ್ತಾರೆ. ಅಲ್ಲದೆ ಕಟಾವಿನ ನಂತರ ಕಬ್ಬಿನ ತರಗಿಗೆ ಬೆಂಕಿ ಹಚ್ಚದೆ ಮಣ್ಣಿಗೆ ಸೇರಿಸುತ್ತಾರೆ. ಇದರಿಂದ ಖರ್ಚು ಕಡಿಮೆಯಾಗಿ ಮಣ್ಣಿನಲ್ಲಿ ಸಾವಯವ ಅಂಶದ ಪ್ರಮಾಣ ಜಾಸ್ತಿಯಾಗಿ ಸೂಕ್ಷಾಣು ಜೀವಿಗಳ ಪ್ರಮಾಣ ಅಧಿಕವಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ.

ಅರಣ್ಯ ಕೃಷಿಗೆ ಒತ್ತು ನೀಡಿ ತೇಗ, ಸಿಲ್ವರ್ ಓಕ್, ಹೆಬ್ಬೇವು, ಶ್ರೀಗಂಧ, ಹುಣಸೆ ಮತ್ತು ಹೊಂಗೆ ಮರಗಳನ್ನು ಜಮೀನಿನ ಸುತ್ತ ಬದುಗಳ ಮೇಲೆ ಬೆಳೆದು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದಲ್ಲದೆ ಪರಿಸರ ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಇವರು ಸಮಗ್ರ ಕೃಷಿಗೆ ಪೂರಕವಾಗುವಂತೆ ಪಶು ಸಂಗೋಪನೆಯನ್ನು ಅಳವಡಿಸಿಕೊಂಡಿದ್ದು, ಹೈನುಗಾರಿಕೆಯಲ್ಲಿ ೫ ಹಸು, ೬ ಕುರಿಗಳು, ೬೦ ನಾಟಿ ಕೋಳಿ, ೫ ಮೇಕೆ ಮತ್ತು ೧ ಎಮ್ಮೆ ಸಾಕಣೆ ಮಡುವುದರೊಂದಿಗೆ ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಮೀನು ಸಾಕಣೆಯನ್ನು ಸಹ ಮಾಡುತ್ತಿದ್ದಾರೆ. ಮೇವಿಗಾಗಿ ನೇಪಿಯರ್ ಹುಲ್ಲು, ಮುಸುಕಿನ ಜೋಳ, ಜೋಳ, ಆಪ್ ಸೆಣಬು, ಅಲಸಂದೆ, ಹೆಸರು ಮತ್ತು ಉದ್ದು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು ಜೊತೆಗೆ ಅರಣ್ಯ ಮರಗಳ ಸೊಪ್ಪನ್ನು ಕೂಡ ಬಳಕೆ ಮಾಡುತ್ತಿದ್ದಾರೆ. ಮುಂದುವರೆದು, ಜೇನು ಸಾಕಣೆಯನ್ನು ಮಾಡುತ್ತಿದ್ದಾರೆ. ಇದರಿಂಧ ವಿವಿಧ ಬೆಳೆಗಳಲ್ಲಿ ಪರಾಗಸ್ಪರ್ಶ ಕ್ರಿಯೆ ವೃದ್ಧಿಸಿ ಇಳುವರಿ ಹೆಚ್ಚಾಗಿರುತ್ತದೆ.

ಶಿವಣ್ಣಗೌಡರವರು ನೀರಿನ ನಿರ್ವಹಣೆಗಾಗಿ ಮಾಗಿ ಉಳುಮೆ, ಇಳಿಜಾರಿಗೆ ಅಡ್ಡವಾಗಿ ಉಳುಮೆ, ಬದುಗಳ ನಿರ್ಮಾಣ, ನೀರು ಕಾಲುವೆಗಳ ನಿರ್ಮಾಣ, ಇಂಗು ಗುಂಡಿ ಹಾಗೂ ಕೃಷಿ ಹೊಂಡವನ್ನು ನಿರ್ಮಿಸಿ ನೀರನ್ನು ಸಂರಕ್ಷಿಸುತ್ತಿದ್ದಾರೆ.  ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ, ರಸಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ನೀರಿನ ಸದ್ಭಳಕೆ ಮಾಡುತ್ತಿದ್ದಾರೆ.  ಕೃಷಿ ಮತ್ತು ಪಶು ಸಂಗೋಪನೆಯ ತ್ಯಾಜ್ಯಗಳನ್ನು ಬಳಸಿ ಎರೆಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರೊಂದಿಗೆ ಜೈವಿಕ ಗೊಬ್ಬರ ಹಸಿರೆಲೆ ಗೊಬ್ಬರ, ಬೇವಿನ ಕಷಾಯ, ಪಂಚಗವ್ಯ ಜೈವಿಕ ಅನಿಲ ಘಟಕದ ಬೊಗ್ಗಡವನ್ನು ಉಪಯೋಗಿಸಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಸಾವಯವ ಕೃಷಿಗೆ ಅದ್ಯತೆಯನ್ನು ನೀಡಿ ಕೃಷಿಯಲ್ಲಿ ಖರ್ಚನ್ನು ಕಡಿತಗೊಳಿಸಿ ಗುಣಮಟ್ಟದ ಇಳುವರಿಯನ್ನು ಪಡೆದು ಅಧಿಕ ಲಾಭಗಳಿಸುತ್ತಿದ್ದಾರೆ.

ಆಹಾರ ಬೆಳೆಗಳಲ್ಲಿ ಬೀಜೋಪಚಾರವನ್ನು ಮಾಡುತ್ತಿದ್ದು ಮಣ್ಣಿನಿಂದ ಬರುವ ರೋಗಗಳ ನಿರ್ವಹಣೆ ಮಾಡುತ್ತಿದ್ದಾರೆ. ಸಮಗ್ರ ಕೀಟ ಮತ್ತು ರೋಗ ನಿರ್ವಹಣೆಗೆ ಜೈವಿಕ ಪದ್ಧತಿಗಳಾದ ಬೇವಿನ ಹಿಂಡಿ, ಬೇವಿನ ಎಣ್ಣೆ, ಬೇವಿನ ಕಷಾಯ, ಪಂಚಗವ್ಯ, ಹುಳಿ ಮಜ್ಜಿಗೆ, ಎರೆಜಲ ಮತ್ತು ಸೂ ಜೀವಾಣುಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.  ಕೃಷಿ ಯಂತ್ರೋಪಕರಣಗಳಾದ ಟಿಲ್ಲರ್, ತೆಂಗಿನ ಮರ ಹತ್ತುವ ಸಾಧನ, ಪವರ್ ಸ್ಟೆçÃಯರ್ ಮತ್ತು ಹಣ್ಣುಕೊಯ್ಲು ಮಾಡುವ ಉಪಕರಣಗÀಳನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಿಕೊಂಡು ಕೂಲಿ ಕಾರ್ಮಿಕರಿಗೆ ತಗಲುವ ವೆಚ್ಚವನ್ನು ಕಡಿತಗೊಳಿಸಿಕೊಂಡಿದ್ದಾರೆ. ಕೊಯ್ಲಿನ ನಂತರ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಗುಡಾಣ ಮತ್ತು ಡÀ್ರಮ್‌ಗಳಲ್ಲಿ ಲಕ್ಕೆಸೊಪ್ಪು ಮತ್ತು ಬೇವಿನ ಸೊಪ್ಪನ್ನು ಬಳಸಿ ಶೇಖರಣೆ ಮಾಡುತ್ತಿದ್ದಾರೆ.

ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿ, ಹಣ್ಣುಗಳನ್ನು ತಮ್ಮ ಮನೆಗೆ ಬಳಕೆ ಮಾಡುವುದರ ಜೊತೆಗೆ ಮಂಡ್ಯ ನಗರದಲ್ಲಿ ಪ್ರತಿ ಭಾನುವಾರ ಇತರೆ ಸಾವಯವ ರೈತರನ್ನು ಒಗ್ಗೂಡಿಸಿ ಸಾವಯವ ಸಂತೆ ಪ್ರಾರಂಭಿಸಲು ಕಾರಣ ಕರ್ತರಾಗಿದ್ದು, ತಮ್ಮ ಜಮೀನಿನಲ್ಲಿ ಬೆಳದ ಸೊಪ್ಪು – ತರಕಾರಿ ಮತ್ತು ಹೂ – ಹಣ್ಣುಗಳನ್ನು ಸಾವಯವ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಒಟ್ಟಾರೆ ರೈತ ಯಾವುದೇ ಆಹಾರ ಬೆಳೆಗಳನ್ನು ಬೆಳೆದರಷ್ಟೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ, ಮಾರಾಟ ಮಾಡಿದಾಗ ಮಾತ್ರ ದುಡಿಮೆಗೆ ತಕ್ಕಂತೆ ಪ್ರತಿ ಫಲ ಪಡೆಯಬಹುದಾಗಿದೆ ಎನ್ನುತ್ತಾರೆ. ಶ್ರೀಯುತರು ಕೃಷಿ ಬೆಳೆಗಳಿಂದ ೩.೧೫ ಲಕ್ಷ, ಜಾನುವಾರುಗಳಿಂದ ೨.೫೦ ಲಕ್ಷ, ಸಮಗ್ರ ಕೃಷಿಯಲ್ಲಿ ತೋಟಗಾರಿಕಾ ಬೆಳೆಗಳಿಂದ ೧.೭೩ ಲಕ್ಷ, ಅರಣ್ಯ ಕೃಷಿಯಿಂದ ೧.೦೩ಲಕ್ಷ, ಮೀನುಗಾರಿಕೆಯಿಂದ ರೂ. ೧೮,೫೦೦ ಮತ್ತು ಜೇನು ಕೃಷಿಯಿಂದÀ ರೂ.೧೯,೦೦೦ ನಿವ್ವಳ ಆದಾಯಗಳಿಸುತ್ತಿದ್ದಾರೆ.

ಇವರ ಸಾಧನೆಗೆ ೨೦೧೧ರಲ್ಲಿ ಆಕಾಶವಾಣಿ, ಮೈಸೂರು ಭಾನುಲಿ ಕೃಷಿಕರ ಬಳಗದಿಂದ ‘ಕೃಷಿರತ್ನ’ ಪ್ರಶಸ್ತಿ, ೨೦೧೫ರಲ್ಲಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಹಾಗೂ ೨೦೧೭ರಲ್ಲಿ ಲಯನ್ಸ್ ಕ್ಲಬ್ ಸಂಸ್ಥೆಯಿAದ ಕೃಷಿ ಪ್ರಶಸ್ತಿ, ೨೦೧೮ರಲ್ಲಿ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಹಾಗೂ ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಮತ್ತು ೨೦೧೯ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೆನರಾ ಬ್ಯಾಂಕ್ ರಾಜ್ಯ ಮಟ್ಟದ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ, ೨೦೨೨ರಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಅಲುಮ್ನಿ ಅಸೋಸಿಯೇಷನ್‌ನಿಂದ ಡಾ: ಜಿ.ಕೆ.ವಿರೇಶ್, ರಾಜ್ಯಮಟ್ಟದ ಸಮಗ್ರ ಕೃಷಿ ಪದ್ಧತಿ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಒಟ್ಟಿನಲ್ಲಿ ರೈತರು ಒಂದೇ ಬೆಳೆಯನ್ನು ಬೆಳೆಯದೇ ಬಹು ಬೆಳೆಗಳನ್ನು ಬೆಳೆಯಬೇಕು, ಸಾವಯವ ಕೃಷಿ, ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು.  ಯಾವಾಗಲೂ ಕೂಲಿಕಾರ್ಮಿಕರನ್ನು ಅವಲಂಬಿಸದೆ ತÀಮ್ಮ ಜಮೀನಿನಲ್ಲಿ ಆಳಿನಂತೆ ದುಡಿದರೆ ಅರಸನಾಗಬಹುದು ಎನ್ನುತ್ತಾರೆ.

ಲೇಖಕರ ಪರಿಚಯ:

ಲೇಖಕ ಡಾ. ಕೆ. ಶಿವರಾಮು ಅವರು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಪ್ರಾಧ್ಯಾಪಕರು, ತರಬೇತಿ ಸಂಯೋಜಕರು ಹಾಗೂ ಹಿರಿಯ ವಾರ್ತಾತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸಹ ಲೇಖಕರಾದ  ಡಾ: ಎಂ.ಎ. ಮೂರ್ತಿ ಅವರು  ಕೃಷಿ ಮಾಹಿತಿ ಘಟಕದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

LEAVE A REPLY

Please enter your comment!
Please enter your name here