“ಕಳೆದುಕೊಂಡ ವಸ್ತುವನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು” ಈ ಮಾತು ಅರ್ಥಪೂರ್ಣ ತತ್ವ ಒಳಗೊಂಡಿದೆ. ಮೈಸೂರು ನಗರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದವರು ಚಿನ್ನಸ್ವಾಮಿ ವಡ್ಡಗೆರೆ. ರಾಜಕಾರಣದಲ್ಲಿಯೂ ಈಸಿ, ಜೈಯಿಸಲು ಹೊರಟವರು. ಅದು ಬೇಡವೆಂದು ಕುಟುಂಬದ ಪಾರಂಪಾರಿಕ ವೃತ್ತಿ ಕೃಷಿ ಆರಂಭಿಸಿದರು. ವಾಣಿಜ್ಯ ಬೆಳೆ ಬೆಳೆಯಲು ಹೋಗಿ ಕೈಸುಟ್ಟುಕೊಂಡರು. ಇದು ಅವರಿಗೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಆಘಾತವನ್ನೂ ನೀಡಿತು.

=====================

ಚಿನ್ನಸ್ವಾಮಿ ವಡ್ಡಗೆರೆ, ಕೃಷಿಕರು, ಪುಸ್ತಕದ ಲೇಖಕರು

“ಕೃಷಿಪ್ರವಾಸದ ಪರಿಣಾಮ ನನ್ನ ಕೃಷಿ ಹಾದಿ ತಪ್ಪಿದ್ದು ಎಲ್ಲಿ ಎನ್ನುವುದು ಗೊತ್ತಾಯಿತು. ನನ್ನ ಜಮೀನಿಗೆ ಹೋಗಿ ನಿಂತರೆ ಎಲ್ಲೆಲ್ಲಿ ಅನಗತ್ಯವಾಗಿ ಹಣ ಕಳೆದುಕೊಂಡೆ ಎನ್ನುವುದು ಕಾಣತೊಡಗಿತು. ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳದೇ ಅರಿಶಿನ, ಪಪ್ಪಾಯದಂತಹ ವಾಣಿಜ್ಯ ಬೆಳೆಗಳಿಗೆ ಜೋತುಬಿದ್ದು, ಬೇಸಾಯದ ಗುಣಧರ್ಮ ಅರಿಯದೆ ಅಪಾರ ರಾಸಾಯನಿಕ ಗೊಬ್ಬರ ಸುರಿದೆ. ಅರೆಕಾಲಿಕ ಕೃಷಿಕನಾಗಿ ಬೇರೆಯವರನ್ನೂ ನಂಬಿ, ಕೃಷಿಯಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳದೇ ಬೀಜ, ಗೊಬ್ಬರ, ಮಣ್ಣು, ನೀರಿನ ಬಗ್ಗೆ ತಿಳಿವಳಿಕೆ ಇಲ್ಲದೇ ಇರುವುದೇ ನನ್ನ ಕೃಷಿ ಸೋಲಿಗೆ ಕಾರಣವಾಗಿತ್ತು. ನನ್ನ ಜಮೀನಿನಲ್ಲಿ ಕೃಷಿ ಸೋತಿರಲಿಲ್ಲ. ನಾನು ಸೋತಿದ್ದೆ”

=====================

ಈ ಸಂದರ್ಭದಲ್ಲಿ ಅವರಿಗೆ ಕೃಷಿಯಲ್ಲಿ ಎಡವಿದ್ದು ಎಲ್ಲಿ ಎಂಬ ಚಿಂತೆ ಬಾಧಿಸತೊಡಗಿತು. “ಕಳೆದುಕೊಂಡ ವಸ್ತುವನ್ನು ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು” ಪಡೆಯಬೇಕು ಎಂಬ ನಿರ್ಧಾರ ಮಾಡಿದರು. ಈ ಯತ್ನದಲ್ಲಿ ಅವರು ಕೃಷಿ ಯಶೋಗಾಥೆಗಳನ್ನು ಅರಸಿ ಅರಸಿ ಹೊರಟರು. ಕೃಷಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದವರನ್ನು ಕಂಡು ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮೂಡತೊಡಗಿತು. ಮತ್ತೆ ಕೃಷಿ ಆರಂಭಿಸಿದರು. ಆದರೆ ಈ ಬಾರಿ ಸಂಪೂರ್ಣ ಯೋಜನಾಬದ್ಧವಾಗಿ ಹೆಜ್ಜೆಗಳನ್ನು ಹಾಕತೊಡಗಿದರು. ಸೋಲಲಿಲ್ಲ.

ಕೃಷಿ – ತೋಟಗಾರಿಕೆ- ಅರಣ್ಯ ಮಾದರಿ ಕೃಷಿಯಲ್ಲಿ ಯಶಸ್ಸು ಕಂಡವರ ಅನುಭವಗಳು ಇತರ ರೈತರಿಗೂ ದಕ್ಕಬೇಕು ಎಂದು ಹಂಬಲಿಸಿದರು. ಇದರ ಪರಿಣಾಮ ಅಪರೂಪದ ಸಾಧಕರ ಅನುಭವಗಳು ಅಕ್ಷರ ರೂಪ ಪಡೆಯತೊಡಗಿದವು. ಸ್ಥಳೀಯ ದಿನಪತ್ರಿಕೆಯಲ್ಲಿ ವಾರಕ್ಕೊಮ್ಮೆ ಅಂಕಣ ಬರೆಹಗಳಾಗಿ ಪ್ರಕಟವಾಗತೊಡಗಿದವು. ಅವುಗಳನ್ನು ಓದಿ, ಸ್ಥಳಗಳಿಗೆ ಭೇಟಿ ನೀಡಿ ಕೃಷಿಯಲ್ಲಿ ಮತ್ತೆ ಗೆಲ್ಲುವ ಆತ್ಮವಿಶ್ವಾಸ ಪಡೆದವರು ಆನೇಕರು.

ಈ ಲೇಖನಗಳೆಲ್ಲ ಪುಸ್ತಕರೂಪದಲ್ಲಿ ಬರಲಿ; ಇದರಿಂದ ಆಸಕ್ತರಿಗೆ ಅಪಾರ ಪ್ರಯೋಜನವಾಗುತ್ತದೆ ಎಂದು ಸಲಹಗಳು ಬಂದವು. ಹಿಂದೆ ಬರೆದ ಲೇಖನಗಳನ್ನು ಮತ್ತೆ ಓದಿ, ಇನ್ನಷ್ಟೂ ಮಾಹಿತಿಗಳನ್ನು ಅದಕ್ಕೆ ಸೇರಿಸಿದರು. ಅದರ ಪ್ರತಿಫಲವಾಗಿ “ಬಂಗಾರದ ಮನುಷ್ಯರು” ಬೆಳಕಿನ ಬೇಸಾಯದ ಕಥಾನಕ ಕೃತಿ ಪ್ರಕಟಿತವಾಗಿದೆ. ಇದರಲ್ಲಿ ಮೂರು ಭಾಗಗಳಿವೆ. 1. ಒಣಭೂಮಿ ಬೇಸಾಯ 2. ತೋಟಗಾರಿಕೆ ಮತ್ತು ಕಾಡುಕೃಷಿ 3. ರೇಷ್ಮೆ ಮತ್ತು ಹೈನುಗಾರಿಕೆ.

=====================

  • ಪ್ರತಿ ವಿಭಾಗದಲ್ಲಿಯೂ ಸಾಕಷ್ಟು ಲೇಖನಗಳಿವೆ. ಆಯಾ ವಿಭಾಗದಲ್ಲಿ ವಿಜಯ ಸಾಧಿಸಿದ ರೈತರು ತಮ್ಮ ಕಷ್ಟ, ಪಡೆದ ಯಶಸ್ಸಿನ ವಿವರಗಳನ್ನು ಸಂಪೂರ್ಣವಾಗಿ ಹಂಚಿಕೊಂಡಿದ್ದಾರೆ. ಅವರು ನಡೆದ ಹಾದಿ ಸ್ಫೂರ್ತಿದಾಯಕ. ಈಗಾಗಲೇ ಕೃಷಿ ಮಾಡುತ್ತಿರುವವರಿಗೂ, ಹೊಸದಾಗಿ ಮಾಡಬೇಕೆಂದು ಹೊರಡುವವರಿಗೂ ಬೆಳಕಿನ ದೀವಿಗೆ. ಇದನ್ನು ಹಿಡಿದು ಖಂಡಿತ ಗುರಿ ಮುಟ್ಟಬಹುದು.

=====================

“ಬಂಗಾರದ ಮನುಷ್ಯರು” ಕೃತಿಯಲ್ಲಿ ಮೂರು ವಿಭಾಗಗಳಿರುವುದರಿಂದ ಆಯಾ ವಿಭಾಗದಲ್ಲಿ ಆಸಕ್ತಿ ಇರುವವರು ಸಂಬಂಧಿಸಿದ ಲೇಖನಗಳನ್ನು ಅಧ್ಯಯನ ಮಾಡಬಹುದು. ಯಶಸ್ಸು ಸಾಧಿಸಿದ ಕೃಷಿಕರನ್ನು ಅವರಿರುವ ಸ್ಥಳದಲ್ಲಿಯೇ ಹೋಗಿ ಭೇಟಿ ಮಾಡಬಹುದು. ಅವರ ಕೃಷಿ – ತೋಟಗಾರಿಕೆ – ಜಾನುವಾರು ಸಾಕಣೆ ಕ್ಷೇತ್ರಗಳನ್ನು ಕಣ್ಣಾರೆ ಕಾಣಬಹುದು. ಇದರ ಅನುಕೂಲಕ್ಕಾಗಿ ಯಶೋಗಾಥೆಗಳ ಜೊತೆಗೆ ಆಯಾ ಕೃಷಿಕರ ವಿಳಾಸ ದೊರವಾಣಿ ವಿವರಗಳನ್ನೂ ನೀಡಲಾಗಿದೆ.

  • ಪುಸ್ತಕಗಳನ್ನು ಅಂಚೆಮೂಲಕವೂ ತರಿಸಿಕೊಳ್ಳಬಹುದು: ಪುಸ್ತಕದ ಹೆಸರು: ಬಂಗಾರದ ಮನುಷ್ಯರು, ಲೇಖಕರು: ಚಿನ್ನಸ್ವಾಮಿ ವಡ್ಡಗರೆ, ಪ್ರಕಾಶಕರು: ಅಭಿರುಚಿ ಪ್ರಕಾಶನ, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು – 9 ಮೊಬೈಲ್ ನಂಬರ್: 9980560013

LEAVE A REPLY

Please enter your comment!
Please enter your name here