ಮಾರುಕಟ್ಟೆಗೆ ಆವಕವಾಗುವ ಟೊಮೆಟೊ ಗಣನೀಯವಾಗಿ ಇಳಿಕೆ ಕಂಡಿದೆ. ಇದರಿಂದಲೇ ಇದರ ಬೆಲೆ ತೀವ್ರ ಏರಿಕೆ ಕಂಡಿದೆ. ಸಕಾಲದಲ್ಲಿ ಮಳೆ ಕೊರತೆ, ವೈರಸ್ ಬಾಧೆ ಇತ್ಯಾದಿ ಕಾರಣಗಳು ಕೊರತೆಗೆ ಕಾರಣವಾಗಿವೆ.
ಇವೆಲ್ಲದರ ಪರಿಣಾಮ ಆಹಾರ ತಯಾರಿಕೆಯ ಬೆಲೆಯೂ ಏರಿದೆ. ಹೋಟೆಲ್ ಗಳಿರಲಿ, ಮನೆಯಲ್ಲಿ ತಯಾರು ಮಾಡುವ ಆಹಾರದ ಬೆಲೆಯೂ ಹೆಚ್ಚಳವಾಗಿದೆ. ಸಮೀಕ್ಷೆಯೊಂದರ ಪ್ರಕಾರ ಹೋಟೆಲಿನ ಉತ್ತರ ಭಾರತೀಯ ಶೈಲಿಯ “ಥಾಲಿ” ಒಂದರ ಬೆಲೆ ಶೇಕಡ 34ರಷ್ಟು ಏರಿಕೆ ಕಂಡಿದೆ.
ಮನೆಗಳಲ್ಲಿ ಟೊಮೆಟೊ ಬಳಸಿ ಮಾಡುವ ಖಾದ್ಯಗಳಿಂದಾಗಿ ಇದರ ತಯಾರಿಕಾ ವೆಚ್ಚವೂ ಕಳೆದ ಎರಡು ತಿಂಗಳಿನಿಂದಲೂ ಹೆಚ್ಚಾಗುತ್ತಿದೆ. ಟೊಮೆಟೊ ಜೊತೆಗೆ ಇತರ ತರಕಾರಿಗಳ ಬೆಲೆಯೂ ಕಳೆದ ಎರಡು ವಾರಗಳಿಂದ ಏರಿಕೆ ಕಂಡಿರುವುದು ಇದಕ್ಕೆ ಕಾರಣವಾಗಿದೆ.
“ಟೊಮೆಟೊ ಬೆಲೆಯಲ್ಲಿ ಆಗಿರುವ ಏರಿಕೆಯು ಆಗಸ್ಟ್ ಅಂತ್ಯದ ಮೊದಲು ಇಳಿಯುವ ನಿರೀಕ್ಷೆಯಿಲ್ಲ, ಇದರ ಜೊತೆಗೆ ದೈನಂದಿನ ಬಳಕೆಯ ಇತರ ತರಕಾರಿ ಬೆಲೆಗಳು ಕಳೆದ ಎರಡು ವಾರಗಳಲ್ಲಿ ಏರಿಕೆಯಾಗಿದೆ” ಎಂದು ಹೇಳಲಾಗಿದೆ.
ಸಸ್ಯಹಾರಿ ಥಾಲಿ ಬೆಲೆಯಷ್ಟೇ ಅಲ್ಲ ; ಮಾಂಸಹಾರಿ ಥಾಲಿ ಬೆಲೆಯೂ ಹೆಚ್ಚಾಗಿದೆ. ಬಹಳಷ್ಟು ಮಂದಿ ಟೊಮ್ಯಾಟೋ ಬಳಸಿ ಇದನ್ನು ತಯಾರಿಸುತ್ತಾರೆ. ಟೊಮೆಟೊ ಸೇರಿಸದಿದ್ದರೆ ರುಚಿ ಇರುವುದಿಲ್ಲ ಎಂಬುದೇ ಇವರ ಅಭಿಪ್ರಾಯ. ಬೆಲೆ ಎಷ್ಟೇ ಏರಿದರೂ ಕಡಿಮೆ ಪ್ರಮಾಣದಲ್ಲಿಯಾದರೂ ಟೊಮೆಟೊ ಬಳಸುವುದು ಅಭ್ಯಾಸವಾಗಿರುತ್ತದೆ.
ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಗಳು ಕ್ರಮವಾಗಿ ಶೇಕಡಾ 16 ಮತ್ತು ಶೇಕಡಾ 9 ರಷ್ಟು ಏರಿಕೆಯಾಗಿದೆ. ಇದು ಕೂಡ ಆಹಾರದ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಮೆಣಸಿನಕಾಯಿ ಮತ್ತು ಜೀರಿಗೆ ಕೂಡ ದುಬಾರಿಯಾಗಿದ್ದರೂ, ಕಡಿಮೆ ಪ್ರಮಾಣದಲ್ಲಿ ಇವುಗಳ ಬಳಕೆ ಮಾಡಲಾಗುತ್ತದೆ ಎಂಬುದು ಗಮನಾರ್ಹ.