ಐಡಿಎಫ್ ರಚಿಸುವ ರೈತಗುಂಪು/ರೈತಕಂಪನಿಗಳ ಸದಸ್ಯರು, ಷೇರುದಾರರು ರೂಪೇ ಕಾರ್ಡ್ ಹೊಂದಿರುವ ವ್ಯವಸ್ಥೆ

ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸುವ ಹಾಗೂ ಕೃಷಿ ಅವಲಂಬಿತರಾಗಿ ಬದುಕು ನಡೆಸುತ್ತಿರುವ ರೈತರ ಬಾಳಿನಲ್ಲಿ ಆಶಾಕಿರಣ ಮೂಡಿಸುವ ಕಾರ್ಯವನ್ನು “ಇನಿಶಿಯೇಟಿವ್ಸ್ ಫಾರ್ ಡೆವಲಪ್ಮೆಂಟ್ ಪೌಂಢೇಷನ್” (ಐಡಿಎಫ್) ಸಂಸ್ಥೆ ಮಾಡುತ್ತಿದೆ. ಸುಸ್ಥಿರಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಕಾರ್ಯಗಳಿಗೆ ರೈತ ಸಮುದಾಯಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ. ಸಾರ್ವಜನಿಕ ರಂಗದಲ್ಲಿಯೂ ಕೂಡ ತನ್ನ ಬದ್ಧತೆಯಿಂದಾಗಿ ವಿಶ್ವಾಸಾರ್ಹತೆ ಪಡೆದುಕೊಂಡಿದೆ.

ಪಾಠಶಾಲೆ: ಐಡಿಎಫ್ ಇದು ಬರಿ ಸಂಸ್ಥೆಯಲ್ಲ; ಇದೊಂದು ಸುಸ್ಥಿರಕೃಷಿ ಅಭಿವೃದ್ಧಿ ಪಾಠಶಾಲೆ. ಅಪಾರ ಸಂಖ್ಯೆಯ ಕೃಷಿಕರಿಗೆ ಕೃಷಿಜ್ಯೋತಿಯಾಗಿದೆ ಎಂದರೆ ಬಹುಶಃ ಅತಿಶಯೋಕ್ತಿ ಆಗಲಾರದು. ಇದು ಸಂಸ್ಥೆಯ ಸಹಾಯ – ಸಹಕಾರ ಸಹಕಾರ ಪಡೆದ ಅನುಭವಿ ರೈತರ ಮಾತುಗಳು ಸಹ ಆಗಿದೆ. 2001ರಲ್ಲಿ ಐಡಿಎಫ್ ಆರಂಭ. ಇದರಲ್ಲಿರುವ ಹಿರಿಯ ಮಾರ್ಗದರ್ಶಕರು, ಕಾರ್ಯಕರ್ತರೆಲ್ಲರೂ ಕೃಷಿತಜ್ಞರು, ಕೃಷಿ  ಚಟುವಟಿಕೆಯಲ್ಲಿರುವ ಅನುಭವಿಗಳು. ಕೃಷಿ ಸೇವಾಕ್ಷೇತ್ರದಲ್ಲಿ ಆಸಕ್ತಿ ಇರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಗಳು ಇಂಥ ಅನನ್ಯ ಸಂಸ್ಥೆಗೆ ಬುನಾದಿ ಹಾಕಿದರು ಎಂಬುದು ಗಮಾನರ್ಹ. 2001ರಲ್ಲಿಯೇ  ರಲ್ಲಿ ಎನ್.ಜಿ.ಓ. ಆಗಿ ನೋಂದಣಿ.  ಗ್ರಾಮೀಣ ಭಾಗದ ಜನರು ಮತ್ತು ರೈತರ ಬದುಕನ್ನು ಸುಸ್ಥಿರಗೊಳಿಸಲು ಇದು ಸೇವೆ ಸಲ್ಲಿಸುತ್ತಿದೆ.

ಐಡಿಎಫ್ ಆಯೋಜಿಸುವ ಕ್ಷೇತ್ರ ಪಾಠಶಾಲೆ ಮಾದರಿಗಳಲ್ಲೊಂದು

ತಲಾದಾಯ ಹೆಚ್ಚಳ: ಗ್ರಾಮೀಣ ಭಾಗದಲ್ಲಿ ಕೃಷಿಯೂ ಸೇರಿದಂತೆ ಬೇರೆಬೇರೆ ವೃತ್ತಿಗಳಿವೆ. ಇವುಗಳನ್ನು ಸುಸ್ಥಿರವಾಗಿ ನಡೆಸುವುದರ ಮೂಲಕ ತಲಾದಾಯ ಹೆಚ್ಚಳಗೊಳ್ಳುವ ನಿಟ್ಟಿನಲ್ಲಿಯೂ ಸಂಸ್ಥೆ ಶ್ರಮಿಸುತ್ತಿದೆ. ಇವೆಲ್ಲವನ್ನೂ ಒಟ್ಟಂದದಲ್ಲಿ ಸುಸ್ಥಿರ ಮಾದರಿಗೆ ತರಬೇಕೆನ್ನುವುದು ಹಾಕಿಕೊಂಡಿರುವ ಗುರಿ. ಈ ನಿಟ್ಟಿನಲ್ಲಿ ಆಯ್ದ ಗ್ರಾಮೀಣ ಪ್ರದೇಶಗಳಲ್ಲಿನ “ಪ್ಯಾಕೇಜ್ ಆಫ್ ಪ್ರಾಕ್ಟೀಸ್” ಮಾದರಿಗಳನ್ನು ಹೆಚ್ಚೆಚ್ಚು ವೈಜ್ಞಾನಿಕಗೊಳಿಸುವ ಮತ್ತು ಸ್ಥಳೀಯ ಪರಿಮಿತಿಗಳಿಗೆ ಒಗ್ಗಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ.

ವಿಭಿನ್ನ ಮಾದರಿ: ಬೆಳೆಪದ್ಧತಿಯೇ ಬೇರೆ; ಸಮಗ್ರಕೃಷಿಯೇ ಬೇರೆ: ಬೆಳೆಪದ್ಧತಿ ಅಥವಾ ಬೆಳೆ ಬೆಳೆಯುವುದಕ್ಕಷ್ಟೇ ಗಮನಹರಿಸಿದರೆ ಅದು ಸೀಮಿತ ದೃಷ್ಟಿಕೋನ. ಆದರೇ ಇದನ್ನೇ ಕೃಷಿ ಎಂದು ಭಾವಿಸಬಾರದು. ಹೀಗೆಂದರೆ ಬಹುತೇಕರಿಗೆ ಆಶ್ಚರ್ಯವಾಗಬಹುದು. “ಅರೇ ಬೆಳೆ ಬೆಳೆಯುವುದು ಕೃಷಿಯಲ್ಲವೇ” ? ಎಂಬ ಪ್ರಶ್ನೆಯೂ ಎದುರಾಗುತ್ತದೆ. ಇಂಥ ಪ್ರಶ್ನೆಗಳಿಗೆ ಐಡಿಎಫ್ ನೀಡುವ ಉತ್ತರ ಮತ್ತು ಆ ನಿಟ್ಟಿನಲ್ಲಿ ಅದು ತೊಡಗಿಸಿಕೊಂಡಿರುವ, ಮಾಡುತ್ತಿರುವ ಕಾರ್ಯಗಳೂ ವಿಶಿಷ್ಟ. ವಿನೂತನ.

ದೃಷ್ಟಿಕೋನದಲ್ಲಿ ಬದಲಾವಣೆ: “ಕೃಷಿ ಎನ್ನುವುದು ಸಮಗ್ರಕೃಷಿಯ ದೃಷ್ಟಿಕೋನ ಹೊಂದಿದಾಗ ಮಾತ್ರ ಕೃಷಿ ಎಂದು ಕರೆಸಿಕೊಳ್ಳಲು ಅರ್ಹ” ಎಂಬುದನ್ನು ಐಡಿಎಫ್ ಪ್ರತಿಪಾದಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಸ್ವಾಭಾವಿಕ ಸಂಪನ್ಮೂಲಗಳನ್ನು ಕಾಳಜಿಯಿಂದ ಸಮರ್ಪಕವಾಗಿ ನಿರ್ವಹಣೆ ಮಾಡುವುದು, ಪೂರಕ ಉಪಕಸುಬುಗಳನ್ನು ಅವಲಂಬಿಸುವುದು ಇತ್ಯಾದಿ. ಇವೆಲ್ಲದರಿಂದಾಗಿ ಕೃಷಿಕರ ಸಂಕಷ್ಟಗಳು ಕಡಿಮೆಯಾಗುತ್ತವೆ; ಕ್ರಮೇಣ ನಿವಾರಣೆಯಾಗುತ್ತವೆ. ಮುಖ್ಯವಾಗಿ ಆದಾಯದ ಮೂಲಗಳು  ಹೆಚ್ಚಳಗೊಳ್ಳುತ್ತವೆ ಎಂದು ಐಡಿಎಫ್ ಹೇಳುತ್ತದೆ. ಈ ಮಾರ್ಗದಲ್ಲಿ ನಡೆದು ಸುಸ್ಥಿರ ಬದುಕು ಕಟ್ಟಿಕೊಂಡ ಅನೇಕ ರೈತರ ಉದಾಹರಣೆಗಳನ್ನು ನಮ್ಮ ಮುಂದಿರಿಸುತ್ತದೆ.

ಸಮಗ್ರಕೃಷಿಯ ದೃಷ್ಟಿಕೋನ, ಅನೇಕ ಸಂದರ್ಭಗಳಲ್ಲಿ ನೆರವಾಗುತ್ತಿರುತ್ತದೆ. ಕೃಷಿ ಸದಾ ಒಂದೇ ರೀತಿ ನಡೆಯುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಅತಿವೃಷ್ಟಿ; ಕೆಲವೊಮ್ಮೆ ಅನಾವೃಷ್ಟಿ. ಇಂಥ ಸಂದರ್ಭದಲ್ಲಿಯೂ ದೈನಂದಿನ ಜೀವನ ಏರುಪೇರಾಗದಂತೆ ನಡೆಸಿಕೊಂಡು ಹೋಗುವುದು ಸಾಧ್ಯವಾಗುತ್ತದೆ. ಆದ್ದರಿಂದ ಇಂಥ ಸಮಗ್ರಕೃಷಿ ದೃಷ್ಟಿಕೋನವನ್ನು ರೈತರು ಅಳವಡಿಸಿಕೊಳ್ಳುವಂತೆ ಮಾಡಲು ಐಡಿಎಫ್ ಶ್ರಮಿಸುತ್ತಿದೆ.

ಯೋಜನಾಬದ್ಧತೆ: ಮುಖ್ಯವಾಗಿ ಮಣ್ಣಿನ ಫಲವತ್ತೆ ವೃದ್ಧಿಸುವುದು, ಲಭ್ಯವಿರುವ ನೀರಿನ ಪ್ರಮಾಣವನ್ನೇ ಯೋಜನಾಬದ್ಧವಾಗಿ ಬಳಸುವುದು, ಅಂತರ್ಜಲ ಹೆಚ್ಚಿಸುವುದು, ಸ್ಥಳೀಯ ಮಣ್ಣು, ನೀರು ಗುಣಮಟ್ಟ ಅವಲಂಬಿಸಿ ವೈವಿಧ್ಯಮಯ ಬೆಳೆಗಳ ಸಂಯೋಜನೆ ಮಾಡುವುದು. ತುಂಡುಭೂಮಿಯೂ ವ್ಯರ್ಥವಾಗದಂತೆ ಬೆಳೆ ಸಂಯೋಜಿಸುವ ಕ್ರಮ, ಈ ಬೆಳೆಗಳ ಲಣ್ಯತೆಗೆ ತಕ್ಕಂತೆ ಉಪಕಸುಬುಗಳನ್ನು ಕೈಗೊಳ್ಳುವಂತೆ ಮಾಡುವುದು, ಅನುಕೂಲಗಳಿಗೆ ತಕ್ಕಂತೆ ಹಸು, ಕುರಿ, ಆಡು,ಕೋಳಿ ಸಾಕಣೆಗಳನ್ನು ಆರಂಭಿಸುವಂತೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ.

ಐಡಿಎಫ್ ಆಯೋಜಿಸುವ ಸುಸ್ಥಿರಕೃಷಿ ಮಾದರಿಗಳ ವಿಡಿಯೋ ಪ್ರಾತ್ಯಕ್ಷಿಕೆ ತರಗತಿ

ಸಮಗ್ರಕೃಷಿಯ ಸಬಲತೆ: ಕೃಷಿಕರಲ್ಲಿ ಸಮಗ್ರಕೃಷಿ ಉಂಟು ಮಾಡುವ ಆರ್ಥಿಕ ಸಬಲತೆ ಬಗ್ಗೆ ಐಡಿ‍ಎಫ್ ಬಳಿ ಸಾಕಷ್ಟು ಉದಾಹರಣೆಗಳಲ್ಲಿವೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಈ ಹಿಂದೆ ಐಡಿಎಫ್ ಕೆಲಸ ಮಾಡುತ್ತಿತ್ತು.  ಇಲ್ಲಿನ ಹಲವಾರು ರೈತರ ಮನೆಗಳು, ಜಮೀನುಗಳ ಆವರಣಗಳಲ್ಲಿ ಕ್ಷೇತ್ರಬೆಳೆಗಳು,  ತೋಟಗಾರಿಕೆ ಬೆಳೆಗಳ ಜೊತೆ  ಹುಣಸೆಮರಗಳಿವೆ. ಅವೆಲ್ಲ ಮಳೆಯಾಶ್ರಿತದಲ್ಲಿ ಬೆಳೆದು ನಿಂತು ಫಸಲು ನೀಡುತ್ತಿರುವ ಮರಗಳು.

ಆದಾಯಗಳಿಕೆ: ಈ ಹುಣಸೇಮರಗಳು ಬರಗಾಲದಲ್ಲಿಯೂ  ಫಸಲು ನೀಡುವುದನ್ನೇನೂ ನಿಲ್ಲಿಸುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಹುಣಸೇ ಅವರಿಗೆ ಆರ್ಥಿಕ ಸಹಾಯ ಒದಗುವಂತೆ  ಮಾಡುತ್ತಿವೆ. ಇದರಿಂದ ಅತಿಸಣ್ಣ ರೈತರಿಗೂ ವಾರ್ಷಿಕ ಕನಿಷ್ಟ 45 ಸಾವಿರ ರೂ. ದೊರೆಯುತ್ತದೆ. ರೈತರಿಗೆ ಇಂಥ ಸಮಗ್ರದೃಷ್ಟಿಕೋನ ಇರಬೇಕೆಂದು ಐಡಿಫ್  ಪ್ರತಿಪಾದಿಸುತ್ತದೆ.

ಬೆಳೆಗಳಿಗೆ ಅವಶ್ಯವಿರುವ ಪೋಷಕಾಂಶಗಳನ್ನು ರೈತರೇ ತಯಾರಿಸಲು ಆದ್ಯತೆ

ಜೀವಂತ ಮಾದರಿಗಳು: ಐಡಿಫ್, ಸಣ್ಣ ಮತ್ತು ಅತೀ ಸಣ್ಣರೈತರ ಕೃಷಿ ಸುಸ್ಥಿರವಾಗಿರಲು ಕೆಲಸ ಮಾಡುತ್ತಿದೆ. ಈ ವಲಯದ ರೈತರು ಎದುರಿಸುತ್ತಿರುವ ಸವಾಲುಗಳು ಅನೇಕ. ಬಹಳಷ್ಟು ಸಂದರ್ಭಗಳಲ್ಲಿ ಅವರಿಗೆ ಬ್ಯಾಂಕುಗಳಿಂದ ಸಾಲ ಸಿಗುವುದಿಲ್ಲ. ಖಾಸಗಿಯವರಿಂದ ಸಾಲ ಪಡೆದರೆ ಬಡ್ಡಿ ಪ್ರಮಾಣ ಅಧಿಕ. ಇದರಿಂದ ಮತ್ತಷ್ಟೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಸಂದರ್ಭದಲ್ಲಿ ಐಡಿಎಫ್ ಪ್ರತಿಪಾದಿಸುವ, ಜೊತೆಗೆ ನೀಡುವ ಸಮಗ್ರಕೃಷಿ ದೃಷ್ಟಿಕೋನದ ಜೀವಂತ ಮಾದರಿಗಳು ಸಹಾಯವಾಗುತ್ತವೆ.

ತಾಂತ್ರಿಕ ಮಾರ್ಗದರ್ಶನ: ಮುಖ್ಯವಾಗಿ ಕೃಷಿಯಲ್ಲಿನ ಸವಾಲು ಮತ್ತು  ಸಮಸ್ಯೆಗಳನ್ನು ಎದುರಿಸಿ ಆದಾಯ ಹೆಚ್ಚಿಸಿಕೊಳ್ಳಲು ಐ.ಡಿ.ಎಫ್. ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ತಾಂತ್ರಿಕ ಬಳಕೆ ಅಂಶಗಳ ಬಗ್ಗೆಯೂ ತಿಳಿಸಲಾಗುತ್ತದೆ. ಇದೂ ಸೇರಿದಂತೆ ಸಣ್ಣ ಮತ್ತು ಅತಿಸಣ್ಣ ರೈತರು ಯಾವ ರೀತಿ ತಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದೆಂಬ ಪ್ರೇರಣೆ, ಕೌಶಲ್ಯ ಹೆಚ್ಚಿಸುವಿಕೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ, ಹೆಚ್ಚು ಲಾಭ ಪಡೆಯುವುದು ಹೇಗೆ ಎಂಬುದನ್ನೂ ತಿಳಿಸಲಾಗುತ್ತದೆ.

ವೈಜ್ಞಾನಿಕ ಮಾದರಿಯಲ್ಲಿ ಬೆಳೆಗೆ ಒಳಸುರಿ ಪೂರೈಸುತ್ತಿರುವ ರೈತರು

ಪಾರಂಪಾರಿಕ ಮತ್ತು ವೈಜ್ಞಾನಿಕ ವಿಧಾನಗಳು: ಉದಾಹರಣೆಗೆ ಕಡಿಮೆ ಖರ್ಚಿನಲ್ಲಿ ಹೇಗೆ ಅಧಿಕ ಹಾಲು ಉತ್ಪಾದನೆ ಮಾಡುವಿಕೆ; ಕಬ್ಬಿಗೆ ತಗಲುವ ಬಿಳಿಉಣ್ಣೆಯನ್ನು ಹುಳಿ ಮಜ್ಜಿಗೆ ಬಳಸಿ ನೈಸರ್ಗಿಕವಾಗಿಯೇ ಹೊಗಲಾಡಿಸುವ ವಿಧಾನ; ಈ ರೀತಿ ಹಲವಾರು ಅಂಶಗಳನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ಮಣ್ಣಿನ ಫಲವತ್ತತೆ ಮತ್ತು  ತೇವಾಂಶ ರಕ್ಷಣೆಯ ಬಗ್ಗೆಯೂ ಐಡಿಎಫ್ ತಿಳಿಹೇಳುತ್ತದೆ. ಈ ನಿಟ್ಟಿನಲ್ಲಿ ಮಾಹಿತಿ – ತಂತ್ರಜ್ಞಾನ; ಸಾರ್ವಜನಿಕ ವಲಯಗಳಿಂದ ಸಾಲಸೌಲಭ್ಯವನ್ನು  ಒದಗಿಸಲಾಗುತ್ತದೆ. ಇವೆಲ್ಲದರ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.

ರೈತರೊಂದಿಗೆ ಸಂವಾದ

ಅಧ್ಯಯನ ಪ್ರವಾಸ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬೇರೆಬೇರೆ ಮಾದರಿಗಳನ್ನು ತಿಳಿಸುವ ನಿಟ್ಟಿನಲ್ಲಿ ಆಡಿಯೋ – ವಿಡಿಯೋ ಬಳಸಲಾಗುತ್ತಿದೆ. ಅಧ್ಯಯನ ಪ್ರವಾಸಗಳನ್ನು ಏರ್ಪಡಿಸಲಾಗುತ್ತಿದೆ. ಇದು ಕೇವಲ ಪ್ರವಾಸ ಅಗಿರುವುದಿಲ್ಲ. ಹೋದ ಸ್ಥಳಗಳಲ್ಲಿ ಎರಡು ದಿನ ಇದ್ದು ಅಲ್ಲಿಯ ಅಂಶಗಳನ್ನು ಕಲಿಸುವ ಕಾರ್ಯ ಮಾಡಲಾಗುತ್ತಿದೆ. ಹೀಗೆ ಆದಾಗ ಸಾಕಷ್ಟು  ಪ್ರಯೋಜನಕಾರಿ ಅಂಶಗಳನ್ನು ರೈತರು ಕಲಿತು ಉತ್ಸಾಹದಿಂದ ಅಳವಡಿಸಿಕೊಳ್ಳುತ್ತಾರೆ. ಈ ದಿಶೆಯಲ್ಲಿ ಮಹಿಳಾ ಮತ್ತು ಪುರುಷರ ಪ್ರತ್ಯೇಕ ಗುಂಪುಗಳನ್ನು ರಚಿಸಲಾಗಿದೆ.

ಐಡಿಎಫ್ ರಚಿಸುವ ರೈತಗುಂಪು/ರೈತಕಂಪನಿಗಳ ಸದಸ್ಯರು, ಷೇರುದಾರರು ರೂಪೇ ಕಾರ್ಡ್ ಹೊಂದಿರುವ ವ್ಯವಸ್ಥೆ

ಸಾಲಸೌಲಭ್ಯ: ಆಸಕ್ತ; ಅರ್ಹರೈತರಿಗೆ ೩೦ ಸಾವಿರದಿಂದ ೭೦ ಸಾವಿರದವರೆಗೆ ಸಾರ್ವಜನಿಕ ಬ್ಯಾಂಕುಗಳಿಂದ ಸಾಲ  ನೀಡಿಸಲಾಗುತ್ತದೆ ಎಟಿಎಂ ರೂಪೇ ಕಾರ್ಡ್ ಮೂಲಕ ಕೆಸಿಸಿ ಕ್ರೆಡಿಟ್ ಬಿಸಿನೆಸ್ ಫೆಸಿಲೇಟರ್ಸ್ ಮೂಲಕ ನೀಡಲಾಗುತ್ತದೆ. ಐಡಿಎಫ್ ರಚಿಸಿರುವ ರೈತ ಉತ್ಪಾದಕ ಗುಂಪು/ ಸಂಘಗಳಲ್ಲಿ ೫೫ ಸಾವಿರ ರೈತರು ಸದಸ್ಯರಾಗಿದ್ದಾರೆ. ಪ್ರಸ್ತುತ 14 ಕಂಪನಿಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಒಟ್ಟು 21 ಸಾವಿರ ರೈತರು ಷೇರುದಾರರಾಗಿದ್ದಾರೆ. ಈ ಕಂಪನಿಗಳಲ್ಲಿ ಷೇರುದಾರರಾಗಲು ಕೃಷಿಕರಿಗಷ್ಟೇ ಅವಕಾಶ. ಇವರ ಮೂಲಕವೇ ಕಂಪನಿಯ ವಹಿವಾಟು ನಡೆಯುತ್ತದೆ. ಇದಕ್ಕೆ ಬೇಕಾದ ಎಲ್ಲ ತಾಂತ್ರಿಕ ಮಾರ್ಗದರ್ಶನವನ್ನೂ ಐಡಿಎಫ್ ನೀಡುತ್ತದೆ.

ಜೈವಿಕ – ಸಾವಯವ ಒಳಸುರಿ: ರೈತಗುಂಪುಗಳಿಗೆ/ರೈತ ಕಂಪನಿಗಳಿಗೆ ರಾಸಾಯನಿಕ ರಹಿತ ಜೈವಿಕ – ಸಾವಯವ ಒಳಸುರಿಗಳನ್ನಷ್ಟೇ ಪೂರೈಸಲಾಗುತ್ತದೆ. ಐಡಿಎಫ್ ತಜ್ಞರು ಇಂಥ ಒಳಸುರಿಗಳ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಉತ್ತಮ ಗುಣಮಟ್ಟದೆಂದು ಖಾತರಿಯಾದರೆ ಮಾತ್ರ ಖರೀದಿಸಲು ಶಿಫಾರಸು ಮಾಡುತ್ತಾರೆ. ಈ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಹೀಗೆ ಐಡಿಎಫ್, ಪ್ರತಿಯೊಂದು ಹಂತದಲ್ಲಿಯೂ ರೈತರ ಆರ್ಥಿಕ ಸಬಲತೆಗಾಗಿ ಶ್ರಮಿಸುತ್ತಿದೆ.

ನೇರ ಮಾರಾಟ: ವಿವಿಧೆಡೆ ಮಾದರಿ ಕಾರ್ಯ: ಪ್ರಸ್ತುತ ಐಡಿಎಫ್,  ನಾಗಮಂಗಲ, ಕುಣಿಗಲ್, ಗುಬ್ಬಿ, ತುಮಕೂರು, ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ ಮತ್ತು ಧಾರವಾಡ ತಾಲ್ಲೂಕುಗಳಲ್ಲಿ ಐಡಿಎಫ್ ಕೆಲಸ ಮಾಡುತ್ತಿದೆ. ಇಲ್ಲೆಲ್ಲ ರೈತರ ಗುಂಪು/ಕಂಪನಿ  ಉತ್ಪಾದಿಸಿದ ಉತ್ಪನ್ನಗಳನ್ನು ಅವರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಇದರ ಮೂಲಕ ಮಾರಾಟದಿಂದ ಬರುವ ಗರಿಷ್ಠ ಲಾಭ ನೇರ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಹಲವೊಮ್ಮೆ ವಿಶೇಷ ಮಾರುಕಟ್ಟೆಗಳಲ್ಲಿ ರೈತ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನೂ ಐಡಿಎಫ್ ಮಾಡುತ್ತಿದೆ. ಇಂಥ ಸಂದರ್ಭಗಳಲ್ಲಿ ಜೈವಿಕ – ಸಾವಯವ ಚಳವಳಿ ಬಗ್ಗೆ ಆಸಕ್ತಿ ಇರುವ ಗ್ರಾಹಕರಿಂದ ಅಪಾರ ಉತ್ತೇಜನ ದೊರೆಯುತ್ತಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಐಡಿಎಫ್ ಕಚೇರಿ, ದೂರವಾಣಿ: 080 – 2656 8892 

LEAVE A REPLY

Please enter your comment!
Please enter your name here