ಸಿರಿಧಾನ್ಯ ಬೆಳೆದರಷ್ಟೇ ಸಾಲದು; ಮೌಲ್ಯವರ್ಧನೆ ಅಗತ್ಯ

0

ಬೆಂಗಳೂರು (ಜಿಕೆವಿಕೆ-ಕೃಷಿಮೇಳ) ಕೃಷಿಕರು ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ಅವುಗಳನ್ನು ಮೌಲ್ಯವರ್ಧನೆ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಕುಲಪತಿ ಡಾ. ಆರ್.ಸಿ. ಜಗದೀಶ್‌ ಪ್ರತಿಪಾದಿಸಿದರು.

ಅವರಿಂದು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಎರಡನೇ ದಿನದ ಕೃಷಿಮೇಳದ ಸಮಾರಂಭದಲ್ಲಿ ಸಾಧಕ ಕೃಷಿಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಕರ ಆರ್ಥಿಕತೆ ಸದೃಢವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗಳಾಗುವುದು ಅತ್ಯವಶ್ಯಕ ಎಂದರು.

 ಸಮಗ್ರ ಕೃಷಿಯಲ್ಲಿ ಆರಣ್ಯ ಕೃಷಿಗೂ ಒತ್ತು ನೀಡಿ ಸಿರಿಧಾನ್ಯಗಳನ್ನು ಬೆಳೆಸುವುದರ ಜೊತೆಗೆ ಮೌಲ್ಯವರ್ಧನೆ ಕೈಗೊಳ್ಳಬೇಕು.  ಸಮಗ್ರ ಕೃಷಿಯಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಪಶುಸಂಗೋಪನೆ ಇತ್ಯಾದಿ ವಿವಿಧ ಘಟಕಗಳನ್ನು ಸಮಯೋಜಿತವಾಗಿ ವಿವಿಧ ಕಾಲಕ್ಕೆ ಸೂಕ್ತವಾದಂತೆ ಹೊಂದಾಣಿಕೆ ಮಾಡಿಕೊಂಡಾಗ ನಿರಂತರವಾಗಿ ಆದಾಯವನ್ನು ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು.

ನ್ಯಾನೊ ತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ. ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು, ರೈತ ಸ್ನೇಹಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿ ಮತ್ತು ಹೆಚ್ಚಿನ ಸಂಖ್ಯೆ ಸ್ಪಾರ್ಟ್ಆಫ್‌ಗಳನ್ನು ಉತ್ತೇಜಿಸುವುದು ಅಗತ್ಯವಿದೆ ಎಂದರು.

ಕೃಷಿಮೇಳ – 2023ರ ಎರಡನೇ ದಿನದ (18-11-2023ರ ಶನಿವಾರ) ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಮತ್ತು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಹಾಗೂ ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾ. ಆರ್. ದ್ವಾರಕೀನಾಥ್ ಮತ್ತು ಪ್ರೊ. ಬಿ.ವಿ. ವೆಂಕಟರಾವ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಈ ವರ್ಷದ ಕೃಷಿಮೇಳದಲ್ಲಿ ವಿವಿಧ ಕೃಷಿ ತಾಂತ್ರಿಕತೆಗಳ ಅನಾವರಣವಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ  ಆಶಯದಂತೆ ಮುಂದಿನ ದಿನಗಳಲ್ಲಿ ರೈತಪರ ಕೃಷಿ ತಂತ್ರಜ್ಞಾನಗಳನ್ನು ಮತ್ತು ತಳಿಗಳನ್ನು ಅಭಿವೃದ್ದಿಪಡಿಸಲು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಿದೆ ಎಂದು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಕುಲಪತಿ  ಡಾ. ಎಸ್. ವಿ. ಸುರೇಶ್‌  ಹೇಳಿದರು.

 ವರುಣ ದೇವರು ಕೃಪೆ ತೋರಿರುವುದರಿಂದ ಈ ವರ್ಷ ಕೃಷಿಮೇಳಕ್ಕೆ ಯಾವುದೇ ಅಡೆತಡೆಯಾಗಿರುವುದಿಲ್ಲ. ಇನ್ನೂ ಎರಡು ದಿನಗಳ ಕಾಲ ಕೃಷಿ ಮೇಳವಿದೆ. ಹೆಚ್ಚಿನ ಸಂಖ್ಯೆಯ ರೈತರು ಮತ್ತು ಕೃಷಿ ಆಸಕ್ತರು ಭಾಗವಹಿಸಬೇಕೆಂದು ಅವರು  ತಿಳಿಸಿದರು

ಡಾ. ವಿ. ಪಳನಿಮುತ್ತು,ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ, ತಂಜಾವೂರು, ಡಾ. ಎಂ.ಎನ್. ಶೀಲವಂತರ್, ವಿಶ್ರಾಂತ ಕುಲಪತಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು,  ಡಾ. ಕೆ. ನಾರಾಯಣಗೌಡ, ವಿಶ್ರಾಂತ ಕುಲಪತಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ.  ಎನ್.ಬಿ. ಪ್ರಕಾಶ್, ಡೀನ್ (ಕೃಷಿ), ಡಾ. ವೆಂಕಟೇಶ, ಸಂಶೋದನಾ ನಿರ್ದೇಶಕರು ಮತ್ತು ಡಾ. ವಿ.ಎಲ್. ಮಧುಪ್ರಸಾದ್, ವಿಸ್ತರಣಾ ನಿರ್ದೇಶಕರು ಕೃವಿವಿ, ಜಿಕೆವಿಕೆ, ಬೆಂಗಳೂರು ಇವರುಗಳು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here