ಕಬ್ಬಿನ ಸಿಪ್ಪೆಯಿಂದ ಪರಿಸರಸ್ನೇಹಿ ಗಟ್ಟಿಮುಟ್ಟಾದ ತಟ್ಟೆಗಳು

0

ಸಕ್ಕರೆ ಕಾರ್ಖಾನೆಗಳಲ್ಲಿ, ಬೆಲ್ಲ ತಯಾರಿಸುವ ಆಲೆಮನೆಗಳಲ್ಲಿ ಕಬ್ಬನ್ನು ಅರೆದು ಹಾಲು ಪಡೆದ ಬಳಿಕ ಅಪಾರ ಪ್ರಮಾಣದ ಸಿಪ್ಪೆ ಲಭ್ಯವಾಗುತ್ತದೆ. ಇದನ್ನು ಗ್ರಾಮೀಣ ಭಾಗಗಳಲ್ಲಿ ರಚ್ಚು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು ಉರುವಲಿಗೆ ಬಳಸುತ್ತಾರೆ. ಇದನ್ನು ಸಹ ಇತರ ಕೃಷಿತ್ಯಾಜ್ಯಗಳೊಂದಿಗೆ ಬಳಸಿಕೊಂಡು ಉತ್ತಮ ದರ್ಜೆಯ ಕಾಂಪೋಸ್ಟ್‌ ತಯಾರಿಸಬಹುದು. ಆದರೆ ಹೀಗೆ ಬಳಕೆ ಮಾಡುತ್ತಿರುವವರ ಪ್ರಮಾಣ ಕಡಿಮೆ.

ವೈಶಿಷ್ಟತೆಗಳು

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ತಜ್ಞರ ಮಾರ್ಗದರ್ಶನದಲ್ಲಿ ಪ್ರಸ್ತುತ ತುಮಕೂರು ನಗರದ “ಇಕೋ ಕಾನ್”‌ ಎಂಬ ಸಂಸ್ಥೆಯವರು ಊಟದ ತಟ್ಟೆಗಳನ್ನು ತಯಾರು ಮಾಡುತ್ತಿದ್ದಾರೆ. “ಇದರ ವೈಶಿಷ್ಟತೆಗಳು ಹಲವಾರು ಇವೆ. ಪೇಪರ್‌ ಪ್ಲೇಟುಗಳಂತೆ ಇವು ತೆಳು ಅಲ್ಲ. ಇದರಲ್ಲಿ ಪ್ಲಾಸ್ಟಿಕ್‌ ಕೋಟಿಂಗ್‌ ಇರುವುದಿಲ್ಲ. ನೀರು, ಎಣ್ಣೆಯನ್ನು ಹೀರಿಕೊಂಡು ಮುರಿಯುವುದಿಲ್ಲ. ತಟ್ಟೆಗೆ ಆಹಾರ ಹಾಕಿಕೊಂಡ ನಂತರ ಟೇಬಲ್‌ ಮೇಲೆಯೇ  ಮೇಲೆಯೇ ಇಟ್ಟುಕೊಂಡು ತಿನ್ನಲೇಬೇಕು ಎಂಬ ಸ್ಥಿತಿ ಇಲ್ಲ. ಕೈಯಲ್ಲಿ ಹಿಡಿದೇ ತಿನ್ನಬಹುದು. ಮತ್ತೊಂದು ವಿಶಿಷ್ಟತೆ ಎಂದರೆ ಇದರಲ್ಲಿ ಫಂಗಸ್‌ ಆಗುವುದಿಲ್ಲ” ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಜಯಲಕ್ಷ್ಮಿ ವಿವರಿಸುತ್ತಾರೆ.

ಬೇರೆಬೇರೆ ಅಳತೆಯ, ಮಾದರಿಯ ಊಟದ ತಟ್ಟೆಗಳು, ಕಪ್‌, ಬೌಲ್‌ ಗಳನ್ನು ತಯಾರು ಮಾಡುತ್ತಿದ್ದಾರೆ. ಬೌಲ್‌ ಗಳಲ್ಲಿ ಐಸ್‌ ಕ್ರೀಮ್‌, ಹಣ್ಣಿನ ಜ್ಯೂಸ್‌ ಹಾಕಿ ಬಳಸಬಹುದು. ಈ ಬೌಲ್ಗಳನ್ನು ಫ್ರಿಜ್‌ ನಲ್ಲಿಟ್ಟರೂ ಅವು ಮೆತ್ತಗಾಗದೇ ಇರುವುದು ಗಮನಾರ್ಹ !

ಕಳೆದ ಒಂದು ವರ್ಷದಿಂದ “ಇಕೋಕಾನ್”‌ ಪರಿಸರಸ್ನೇಹಿ ಊಟದ ತಟ್ಟೆಗಳನ್ನು ತಯಾರು ಮಾಡುತ್ತಿದೆ. ಇದಕ್ಕಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನೀಡಿದ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ. ಕೆಲವಾರು ಪ್ರಯತ್ನಗಳ ನಂತರ ಉತ್ತಮ ದರ್ಜೆಯ, ತಾಳಿಕೆ ಬರುವ ಊಟದ ತಟ್ಟೆಗಳನ್ನು ತಯಾರು ಮಾಡುತ್ತಿದ್ದಾರೆ.

ಖಾಸಗಿ, ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ನೀಡಲು ಇವುಗಳನ್ನು ಬಳಸಬಹುದು. ಬೆಲೆಯೂ ಕೈಗೆಟುಕುವ ದರದಲ್ಲಿ ಇದೆ. ಕುಟುಂಬಗಳವರು ಪ್ರವಾಸಗಳಿಗೆ ಹೋದ ಸಂದರ್ಭದಲ್ಲಿ ಕಬ್ಬಿನ ಸಿಪ್ಪೆಯ ಈ ಪ್ಲೇಟುಗಳನ್ನು ಒಮ್ಮೆ ಬಳಸಿದ ನಂತರ ಬೀಸಾಡಬೇಕಾಗಿಲ್ಲ. ತೊಳೆದು ಮತ್ತೆ ಬಳಸಬಹುದು. ವಾಸನೆ ಬರುವುದಿಲ್ಲ.

ಬೇಡಿಕೆ

ಸ್ಥಳೀಯವಾಗಿ ನಿಧಾನವಾಗಿ ಕಬ್ಬಿನ ಸಿಪ್ಪೆಯ ಊಟದ ತಟ್ಟೆಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಆದರೆ ವಿದೇಶಗಳಿಂದ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಮೂರ್ನಾಲ್ಕು ದೇಶಗಳಿಗೆ ತಟ್ಟೆಗಳನ್ನು ರಫ್ತು ಮಾಡಲು ಆರಂಭಿಸಿದ್ದಾರೆ.

ಪರಿಸರಸ್ನೇಹಿ

ಮುಖ್ಯವಾಗಿ ಈ ಊಟದ ತಟ್ಟೆಗಳು ಪರಿಸರಸ್ನೇಹಿ. ಹಾನಿಕಾರಕವಾದ ಯಾವುದೇ ರಾಸಾಯನಿಕ ಬಳಸದ ಕಾರಣ ಬಳಸಿದ ನಂತರ ಇವುಗಳನ್ನು ಬಳಸಿ ಕಾಂಪೋಸ್ಟ್‌ ಗೊಬ್ಬರ ಮಾಡಬಹುದು. ಒಂದುವೇಳೆ ಎಸೆದರೂ ಕೆಲವೇ ದಿನಗಳಲ್ಲಿ ಮಣ್ಣಲ್ಲಿ ಮಣ್ಣಾಗುವ ಗುಣ ಇದಕ್ಕಿದೆ ಎಂದು ಸಂಸ್ಥೆಯವರು ಹೇಳುತ್ತಾರೆ.

ನವೆಂಬರ್‌ ೧೭- ೨೦, ೨೦೨೩ ರಿಂದ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಆಯೋಜಿತವಾಗಿರುವ ಕೃಷಿಮೇಳದಲ್ಲಿ ಇಕೋ ಕಾನ್‌ ಅವರ ಮಳಿಗೆಯು ಇದೆ. ಆಸಕ್ತರು ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ದೂರವಾಣಿ ಸಂಖ್ಯೆ:9916485332

LEAVE A REPLY

Please enter your comment!
Please enter your name here