400 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್, ವಿಜಯಪುರ ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜೆ.ಎಸ್.ಎಸ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿರುವ *“ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ”ಗೊಳಿಸಿ ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಹಂತ 3 ರ ಯೋಜನೆಯನ್ನು ಕಾರ್ಯಗತಗೊಳಿಸಲು ಅನುವಾಗುವಂತೆ ನ್ಯಾಯಾಲಯದಿಂದ ಆದೇಶ ಬರಲಿದೆ ಎಂಬ ವಿಶ್ವಾಸವಿದೆ. ಅಧಿಸೂಚನೆ ನಂತರ ಕೃಷ್ಣಾ ಮೇಲ್ದಂಡೆ ಹಂತ 3 ರ ಯೋಜನೆಯಿಂದ ಮುಳುಗಡೆಯಾಗಲಿರುವ ಗ್ರಾಮಗಳ ಜನರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಗಳನ್ನು ಮಾರ್ಚ್ ತಿಂಗಳೊಳಗೆ 10,000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ದ್ರಾಕ್ಷಿ ಬೆಳೆಯ ಅಭಿವೃದ್ಧಿ ಹಾಗೂ ಸಂಸ್ಕರಣೆಗಾಗಿ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ 35 ಕೋಟಿ ರೂ.ಗಳನ್ನು ನೀಡಲಾಗಿದೆ. ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ಶೀತಲ ಸಂಗ್ರಹಾಗಾರದ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.