ಕಲಿಕಾ ಪ್ರಕ್ರಿಯೆ ಒಂದು ಯೋಜಿತ ಕೆಲಸ.ಇಲ್ಲಿ ಮಕ್ಕಳಿಗೆ ಸ್ವತಂತ್ರವಾಗಿ ನೋಡಿ ಕಲಿಯಲು; ಮಾಡಿ ಕಲಿಯಲು ಅವಕಾಶ ಕಲ್ಪಿಸಬೇಕು ಎನ್ನುವ ಕಲ್ಪನೆ ಖ್ಯಾತ ಶಿಕ್ಷಣ ತಜ್ಞ ರು ಸೊರವ ಅವರದ್ದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ರೀತಿಯ ಪ್ರಯೋಗಗಳು ನಡೆದಿವೆ .ಗಾಂಧೀಜಿ ಅವರ ಮೂಲ ಶಿಕ್ಷಣದಲ್ಲಿ ; ಮಗುವಿನ ಬದುಕಿಗೆ ಹತ್ತಿರವಾಗುವ ಎಲ್ಲ ಅಂಶಗಳು ಇದ್ದವು.ಅಲ್ಲಿ ಮಗು ನೋಡುತ್ತಾ ಸ್ವತಃ ಅನುಭವಿಸಿ ಕಲಿತರೆ ಆ ಜ್ಞಾನ ಶಾಶ್ವತ ನೆಲೆಯೂರುವುದು.
ಈ ನಿಟ್ಟಿನಲ್ಲಿ ಅನೇಕ ಶಿಕ್ಷಕರು ತಮ್ಮದೇ ಆದ ಪ್ರಯೊಗಗಳನ್ನು ಮಾಡಿರುವದನ್ನು ನೋಡಿದ್ದೇವೆ.ನಮ್ಮ ಹಿಂದಿನ ಹಲವರು ನೂಲಿನ ಚರಕ,ಶಾಲೆ ಕೈತೋಟ ಕೃಷಿ,ರೇಷ್ಮೆ ಕೃಷಿ ಇವೆಲ್ಲವನ್ನೂ ನೋಡಿದ್ದಾರೆ.ಅದರಿಂದ ಅವರು ಬದುಕು ರೂಪಿಸಿಕೊಂಡಿದ್ದು ಇದೆ. ಈ ದಿಶೆಯಲ್ಲಿ ನಮ್ಮ ಕಿತ್ತೂರ ಸೋಮವಾರ ಪೇಟ ಉರ್ದು ಶಾಲೆಯ ಶಿಕ್ಷಕರು ಮಕ್ಕಳಿಗೆ “ಸಂತೆಯ ದರ್ಶನ ಮಾಡಿಸಿದ್ದಾರೆ ಇದೊಂದು ವಿನೂತನ ಪ್ರಯತ್ನ ಈ ಕಾರಣಕ್ಕೆ ನಮ್ಮ ನೆಚ್ಚಿನ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಆರ.ಟಿ.ಬಳಿಗಾರ್ ಅವರು ಶಿಕ್ಷಕರನ್ನು ಅಭಿನಂದಿಸಿದ್ದಾರೆ.
ಅಂತಹದ್ದೇನಿದೆ ಸಂತೆಯಲ್ಲಿ?
ಸಂತೆ ನಮ್ಮ ಸಂಸ್ಕ್ರತಿಯ ಸೊಗಡು.ಅದರಲ್ಲೂ ನಮ್ಮ ಕಿತ್ತೂರ ಸಂತೆ ಸುಮಾರು 2 ಕಿ.ಮೀ ಗೂ ಹೆಚ್ಚು ಅಂತರದಲ್ಲಿ ನಡೆಯುತ್ತದೆ.ಈ ಸಂತೆಯಲ್ಲಿ ಖೋದಾನಪೂರದ ತೊಂಡೆಕಾಯಿ.ಮಾಳಮಡ್ಡಿಯ ಬಿಳಿ ಬದನೆ,ಅವರಾದಿ , ರುಚಿಕಟ್ಟಾದ ಬದನೆ,ಸವತೆ,ಸಂಗೋಳ್ಳಿಯ ಸಾವೆ,ಕಲಭಾವಿಯ ತರಕಾರಿ,ಜೋಳ,ರೈತನ ಬಾರಕೋಲು,ಹಗ್ಗ,ಇನ್ನಿತರ ಕೃಷಿ ಉಪಕರಣ,ಬಸ್ಸಾಪೂರದಿಂದ ಅಜ್ಜಿ ಹೊತ್ತು ತಂದ ಬೆಣ್ಣೆ,ಬಡೇಘರಸಾಬ್ನ ಕರಂ ಕುರಂ ಚುರುಮರಿ,ಧಾನ್ಯ ದೊರೆಯುತ್ತವೆ.
ಪೇಟೆಯ ಪಾವು,ಅಚ್ಚೇರ,ಚಟಾಕು,ಅಳತೆ ಮಾನಗಳು,ಶೆಟ್ಟಿಯಂಗಡಿಯ ಅಡುಗೆ ಎಣ್ಣೆ, , ತರಕಾರಿ ಬಜಾರಿನ ಸವಾಲಿನಲ್ಲಿ ಬಳಕೆಯಾಗುವ ಮಣದ ಅಳೆಯ ಲೆಕ್ಕ, ಈರುಳ್ಳಿಯಂಗಡಿಯ ಭಾಗವಾನನ ಕಿ.ಲೋ ತೂಕದ ಕಲ್ಲುಗಳು,ರಸ್ತೆ ಬದಿಯ ಬಟ್ಟೆಯಂಗಡಿಯ ಮೀಟರ್ ಮಾಪನಗಳು,ವಿವಿಧ ಪ್ರದೇಶದ ಆಹಾರ ಬೆಳೆಗಳು,ಅಳ್ನಾವರದಿಂದ ಬಂದ ಹಲಸು,ತಿಗಡೊಳ್ಳಿಯ ಮಾವು,ಪೇರು,ವಿವಿಧ ಜನರು ಏಕತೆಯಿಂದ ಬಂದು ತಾವಾಡುವ ಭಾಷೆ, ಇನ್ನೂ ದನದ ಪೇಟೆಯಲ್ಲಿ ನಡೆಯುವ ವ್ಯವಹಾರ,ಇವೆಲ್ಲವೂ ಮಗುವಿನ ಕಲಿಕೆಗೆ ಯೋಗ್ಯವಾದ ಕಲಿಕೋಪಕರಣಗಳು.ಸಂತೆ ನಮಗೂ ಕೂಡಾ ಕಲಿಕಾ ತಾಣ ನಾನೂ ಸಂತೆಯ ಅಪ್ಪಟ ಅಭಿಮಾನಿ. ವಿವಿಧೂರಗಳಿಗೆ ಹೋದಾಗ ಅಲ್ಲಿಯ ಸಂತೆಯನ್ನು ತಾಳ್ಮೆಯಿಂದ ನೋಡುತ್ತೇನೆ.ಅಲ್ಲಿ ಕಷ್ಟ ಸುಖ ಎರಡು ಮಗ್ಗಲುಗಳ ಪರಿಚಯವಾಗುತ್ತದೆ.
ನಮ್ಮೂರ ಸಂತೆಗಳ ವಿಶೇಷ
ಮುಖ್ಯವಾಗಿ ಸಂತೆಗಳು ಬಯಲು ಸೀಮೆಯಲ್ಲಿ ಪ್ರಮುಖ ಊರು ಪಟ್ಟಣಗಳಲ್ಲಿ ವಾರದಲ್ಲಿ ಒಂದು ದಿನಇರುವದು .ಇಲ್ಲಿ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಗ್ರಾಹಕರು ಒಂದು ರೀತಿಯಲ್ಲಿ ಕೊಡು ಕೊಳ್ಳುವಿಕೆ ನಡೆಯುವ ತಾಣ. ಬಹುತೇಕ ಕೃಷಿಕರು ತಾವು ತಂದ ತರಕಾರಿ,ಬೆಣ್ಣೆ ಮಾರಿ ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡುತ್ತಾರೆ.
ನಿಪ್ಪಾಣಿ,ಹುಕ್ಕೇರಿ, ಚಿಕ್ಕೋಡಿ,ಹೀರೆಬಾಗೇವಾಡಿ,ಎಮ್.ಕೆ.ಹುಬ್ಬಳ್ಳಿ, ಕಿತ್ತೂರ,ಯರಗಟ್ಟಿ, ಮೂಡಲಗಿ, ಸಂತೆಗಳು ಪ್ರಮುಖ ವ್ಯಾಪಾರ ಸ್ಥಳಗಳು, ಇಲ್ಲಿ ಸೂಜಿಯಿಂದ ಹಿಡಿದು ಅಲ್ಮೇರಾದವರೆಗೆ ಎಲ್ಲವೂ ಸಿಗುತ್ತದೆ.,ಪಟ್ಟಣಕುಡಿ ಬೆಲ್ಲ,ಮೂಡಲಗಿ ದನಗಳ ಸಂತೆ, ಯರಗಟ್ಟಿ ಕುರಿ ಸಂತೆ,ಕಿತ್ತೂರ ಧಾನ್ಯ ಹೀಗೆ ಈ ಸಂತೆಗಳ ವಿಶೇಷ ಅನೇಕ.