ದೇಸೀ ಕೃಷಿ ತಳಿಗಳ ಸಂರಕ್ಷಣೆ ಅತ್ಯಗತ್ಯ

0

ಪ್ರಸ್ತುತ ಪರಿಸ್ಥಿತಿಯಲ್ಲಿ ವಿವಿಧ ಬೆಳೆಗಳ ದೇಸಿಯ ತಳಿಗಳನ್ನು ಸಂರಕ್ಷಣೆ ಮಾಡುವುದು ಅತ್ಯಗತ್ಯ, ರೈತರು ಉತ್ಪಾದನೆ, ಉತ್ಪಾದಕತೆ ಜೊತೆಗೆ ಆರೋಗ್ಯದ ಕಡೆಯೂ ಹೆಚ್ಚು ಗಮನ ನೀಡಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್.‌ ಅಂಗಡಿ ಅಭಿಪ್ರಾಯಪಟ್ಟರು.

ಅವರಿಂದು  ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಕೃಷಿಮೇಳ – 2023ರ ಮೂರನೇ ದಿನದ  ಕಾರ್ಯಕ್ರಮದಲ್ಲಿ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಮತ್ತು ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾವಯವ ಕೃಷಿ, ನೈಸರ್ಗಿಕ ಕೃಷಿಯ ಅಳವಡಿಕೆಯಿಂದ ಹವಾಮಾನ ವೈಪರಿತ್ಯಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ.  ಕೃಷಿ ವಿಶ್ವವಿದ್ಯಾನಿಲಯಗಳು ಮಾರುಕಟ್ಟೆಯ ವಿಷಯಗಳ ಬಗ್ಗೆ ಹೆಚ್ಚು ಸಂಶೋಧನೆಗಳನ್ನು ಕೈಗೊಳ್ಳಬೇಕು. ವಿಸ್ತರಣಾ ಅಧಿಕಾರಿಗಳು ವಿವಿಧ ಬೆಳೆಗಳ ಆಧುನಿಕ ಬೇಸಾಯ ಕ್ರಮಗಳ ಜೊತೆಗೆ ಮಾರುಕಟ್ಟೆ, ಮೌಲ್ಯವರ್ಧನೆ, ಸಂಸ್ಕರಣೆ, ಕಡಿಮೆ ಖರ್ಚಿನ ಬೇಸಾಯ ಕ್ರಮಗಳ ಬಗ್ಗೆ ರೈತರಲ್ಲಿ ವಿವಿಧ ವಿಸ್ತರಣಾ ಪದ್ಧತಿಗಳ ಮೂಲಕ ಅರಿವು ಮೂಡಿಸುವುದು ಅವಶ್ಯಕ ಎಂದು ತಿಳಿಸಿದರು.

ರೈತರು ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಕೃಷಿಯಲ್ಲಿನ ಖರ್ಚುವೆಚ್ಚಗಳತ್ತ ಹೆಚ್ಚು ಗಮನ ವಹಿಸಬೇಕು, ಆಗ ಮಾತ್ರ ಆರ್ಥಿಕವಾಗಿ ಸದೃಢರಾಗಕಲು ಸಾಧ್ಯ. ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೌಶಲ್ಯತೆಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಬೆಳೆಗಳ ರಫ್ತಿನ ಬಗ್ಗೆ ಅರಿವನ್ನು ಹೊಂದುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರಿಗೆ ಅತ್ಯಗತ್ಯವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪಿ.ಜಿ. ಚಂಗಪ್ಪ ಅಭಿಪ್ರಾಯಪಟ್ಟರು.

 ಮುಂದಿನ ದಿನಗಳಲ್ಲಿ ಕೃಷಿ ವಲಯಕ್ಕೆ ಬೇಡಿಕೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ರೈತರು ಹೆಮ್ಮೆಯಿಂದ ಕೃಷಿಯನ್ನು ಕೈಗೊಳ್ಳಬೇಕು. ಆಂತರಾಷ್ಟ್ರೀಯ ಮಟ್ಟದಲ್ಲಿ ರೈತರು ಇತರರೊಂದಿಗೆ ಸ್ಪರ್ಧೆಯನ್ನು ಎದುರಿಸಲು ಸಂಘಟಿತರಾಗುವುದು ಅವಶ್ಯಕ. ಬೆಳೆಗಾರರ ಸಂಘ, ಬೆಳಗಾರರ ಸಂಸ್ಥೆ ಮತ್ತು ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಮಾರಾಟ ಮಾಡಲು ದೃಢವಾದ ಹೆಜ್ಜೆಯಾಕುವುದು ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂದರು.

ಡಾ. ಎಸ್. ವಿ. ಸುರೇಶ, ಕುಲಪತಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ. ಹೆಚ್.ಸಿ. ಪ್ರಕಾಶ, ಡೀನ್ (ಸ್ನಾತಕೋತ್ತರ), ಡಾ. ವೆಂಕಟೇಶ, ಸಂಶೋಧನಾ ನಿರ್ದೇಶಕರು,  ಡಾ. ವಿ.ಎಲ್. ಮಧುಪ್ರಸಾದ್, ವಿಸ್ತರಣಾ ನಿರ್ದೇಶಕರು ಕೃವಿವಿ, ಜಿಕೆವಿಕೆ, ಬೆಂಗಳೂರು ಇವರುಗಳು ಉಪಸ್ಥಿತರಿದ್ದರು.

ಕೃಷಿಮೇಳ – 2023 ಮೂರನೇ ದಿನ (19-11-2023) 5.10 ಲಕ್ಷ ರೈತರು / ಸಾರ್ವಜನಿಕರು ಭಾಗವಹಿಸಿದ್ದರು, 9,350 ಜನ ಕೃಷಿ ವಿಶ್ವವಿದ್ಯಾನಿಲಯದ ರಿಯಾಯಿತಿ ದರದ ಭೋಜನಾಲಯದಲ್ಲಿ ಮಧ್ಯಾಹ್ನದ ಊಟ ಮಾಡಿದ್ದಾರೆ. ಮೇಳದಲ್ಲಿ ಒಟ್ಟು 1.65 ಕೋಟಿಯ ವಹಿವಾಟಾಗಿದೆ.

LEAVE A REPLY

Please enter your comment!
Please enter your name here