ಮುಂಬೈ ಶಿವರಾತ್ರಿ ಉಪವಾಸಕ್ಕೆ ಗೋಕರ್ಣ ಗೆಣಸು

0
ಚಿತ್ರ – ಲೇಖನ: ಶಿವಾನಂದ ಕಳವೆ, ಕೃಷಿ, ಅರಣ್ಯ ತಜ್ಞರು

ಗೋಕರ್ಣ ಕಡಲ ತೀರದಲ್ಲಿ ಹಾಲಕ್ಕಿ ಒಕ್ಕಲಿಗರು ಸಿಹಿ ಗೆಣಸು ಕೀಳಲು ಶುರು ಮಾಡಿದರೆಂದರೆ ಶಿವರಾತ್ರಿ ಹಬ್ಬ ಬಂತೆಂದು ಅರ್ಥ. ಉತ್ತರ ಕನ್ನಡ ಜಿಲ್ಲೆ ಬ್ರಿಟಿಷ್ ಆಡಳಿತದಲ್ಲಿದ್ದ (ಕೆನರಾ ಜಿಲ್ಲೆ) ಕಾಲಕ್ಕೆ ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಸೇರಿತ್ತು. ವ್ಯವಹಾರ ಮುಂಬೈ ಜೊತೆಗೆ ಇದ್ದಿದ್ದು ಸಹಜ.

ಆಡಳಿತ, ವಾಣಿಜ್ಯ ವ್ಯವಹಾರ ಕಾರಣಕ್ಕೆ ಮುಂಬೈ ಸೇರಿದ ಇಲ್ಲಿನ ಕನ್ನಡಿಗರಿಗೆ ತಮ್ಮ ಪರಂಪರೆಯ ಆಹಾರ ಪ್ರೀತಿ. ಹೀಗಾಗಿ ಶಿವರಾತ್ರಿ ಬಂತೆಂದರೆ ಉಪವಾಸಕ್ಕೆ ಕರಾವಳಿಯ ಕುಮಟಾದ ಗೋಕರ್ಣ, ಕಾರವಾರದ ಕಡವಾಡ ಸೀಮೆಯ ಗೆಣಸು ಬೇಕೇ ಬೇಕು.

ತಿಂಗಳು ಇಟ್ಟರೂ ಕೆಡದೇ ಇರುವ ಗೆಣಸಿನ ಗುಣ ದೂರದ ಹಡಗು ಪಯಣಕ್ಕೆ ಅನುಕೂಲವಾಯಿತು.ಉತ್ತಮ ಗ್ರಾಹಕರು ಸಿಕ್ಕಿದ್ದರಿಂದ ಇಲ್ಲಿ ಬೆಳೆದು ಮಾರುವ ಅವಕಾಶ ದೊರೆಯಿತು. ಶತಮಾನಗಳ ನಂತರ ಇಂದಿಗೂ ಅದೇ ಬಳಕೆ ಉಳಿದಿದ್ದು ಕೃಷಿ ವಿಶೇಷ. ಅಚ್ಚರಿಯೆಂದರೆ ಅದೇ ಸಿಹಿ ರುಚಿಯ ಹಳೆಯ ಬಿಳಿ, ಕೆಂಪು ಜಾತಿಯ ಗೆಣಸು ತಳಿಯ ಬಳ್ಳಿಯಲ್ಲಿ ಇಂದಿಗೂ ಕೃಷಿ ಜೀವನವಿದೆ. ಇದು ಹಾಲಕ್ಕಿಗರ ಗೆಣಸು ತಳಿ ಸಂರಕ್ಷಣೆ ನೆಲೆಯಾಗಿದೆ.

ಗೋಕರ್ಣ ಹಾಲಕ್ಕಿ ಮಹಿಳೆಯರಂತೂ ಬೇಸಿಗೆ ದಿನಗಳಲ್ಲಿ ದಿನಕ್ಕೆ ಸರಿಯಾಗಿ ಎರಡು ತಾಸು ಕೂಡಾ ನಿದ್ದೆ ಮಾಡುವುದಿಲ್ಲ! ತರಕಾರಿ ಬೆಳೆಗೆ ಜೀವ ಸವೆಸುವರು.ಕೃಷಿ ದುಡಿಮೆ, ಮಾರುಕಟ್ಟೆಗೆ ದುಡಿಯುತ್ತಾರೆ. ಮಧ್ಯ ರಾತ್ರಿ ತಲೆ ಮೇಲೆ ಬುಟ್ಟಿ ಹೊತ್ತು ಸಂತೆಗೆ ಹೋಗುತ್ತಾರೆ. ಮರಳಿ ಮನೆ ತಲುಪಿ ಮುಂಜಾನೆ ಇಬ್ಬನಿಯ ಜೊತೆ ಬಿದ್ದ ಉಪ್ಪು ನೀರು ಗಿಡ. ಬಳ್ಳಿಗಳ ಎಲೆಯ ಮೇಲೆ ಬಿಸಿಲಿಗೆ ಒಣಗದಂತೆ ನಾಲ್ಕೈದು ಗಂಟೆಗೆ ನೀರುಣಿಸುತ್ತಾರೆ.

ಉಪ್ಪು ನೀರು ಬಿದ್ದರೆ ಗಿಡ ಬಳ್ಳಿ ಸೊರಗುತ್ತಿವೆ. ಮತ್ತೇ ತರಕಾರಿ ಕೊಯ್ದು ಸಂತೆಯ ತಯಾರಿ ಶುರು.

ನಮ್ಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಬ್ಬ, ಜಾತ್ರೆಗೆ ವಿವಿಧ ತಳಿಯ ಗಡ್ಡೆ, ಹೂ, ಸೊಪ್ಪು ಬೆಳೆಯುವ ದೊಡ್ದ ಪರಂಪರೆಯೇ ಇದೆ. ಗೋಕರ್ಣ ಶಿವರಾತ್ರಿ ಸಿಹಿ ಗೆಣಸು ಅಂಥ ಒಂದು ಉದಾಹರಣೆ. ಸರಕಾರ ಇಂಥ ತಳಿ ಸಂರಕ್ಷಣೆ ಕೆಲಸ ಮರೆತಿದೆ, ಆದರೆ ಅತ್ಯಂತ ಶ್ರದ್ದೆಯಿಂದ ಇದು ಕೃಷಿಕರ ಕಾಳಜಿಯಿಂದ ನಾಡಿನಲ್ಲಿ ನಡೆದಿದೆ.

ಇಂದು ಕೃಷಿ ತಳಿ, ಕಲೆ ವಿಶೇಷಗಳ ಬೌಗೋಳಿಕ ಗುರುತಿಸುವಿಕೆಯನ್ನು ಜಗತ್ತು ಮುನ್ನೆಲೆಗೆ ತಂದಿದೆ. ತೋಟಗಾರಿಕೆ ಜಿಲ್ಲೆಯ ಮೂಲ ಐತಿಹಾಸಿಕ ದಾಖಲೆ ಸಂಗ್ರಹಿಸಿ ಬಡ ಕೃಷಿಕರ ಬದುಕು ಬದಲಿಸುವ ಪ್ರಯತ್ನಗಳು ಬೇಕು. ಫಲ ಪುಷ್ಪ ಮೇಳಗಳೆಂಬ ಸರಕಾರೀ ಮಾಮೂಲಿ ಜಾತ್ರೆಯ ಲಕ್ಷಾಂತರ ಹಣ ಖರ್ಚಿನ ಬದಲು ಮೂಲೆ ಮೂಲೆಯ ಇಂಥ ಬಡ ಕೃಷಿಕರ ಪ್ರಯತ್ನ ಗುರುತಿಸಿ ಪ್ರೋತ್ಸಾಹಿಸುವ ಸುಸ್ಥಿರ ಕಾಳಜಿ ಬೇಕು.

ಆಡಳಿತ ವ್ಯವಸ್ಥೆಯ ವಿಚಿತ್ರವೆಂದರೆ ಒಂದೇ ಖುರ್ಚಿಗೆ ಅಂಟಿಕೊಂಡು ದಶಕಗಳಿಂದ ಜಡ್ಡು ಗಟ್ಟಿದ ಸರಕಾರಿ ಪೊಳ್ಳು ತಳಿಗಳೇ ತುಂಬಿವೆ. ಇವರಿಗೆಲ್ಲ ಶತಮಾನಗಳ ಕೃಷಿ ಮಾನ್ಯತೆಯ ಘನತೆ ಸ್ವಲ್ಪವಾದರೂ ಅರ್ಥವಾಗಬೇಕಲ್ಲ!

LEAVE A REPLY

Please enter your comment!
Please enter your name here