ಕಾಡಲ್ಲ ಬದಲಾಗಿ ಕಾಡು ಕೃಷಿಯ ಉಡುಗೊರೆ !

0
ಚಿತ್ರ-ಲೇಖನ : ಸ್ವರೂಪಾನಂದ ಎಂ. ಕೊಟ್ಟೂರು

ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ದಟ್ಟ ಹಸಿರು. ಮುಗಿಲೆತ್ತರಕ್ಕೆ ಬೆಳೆದ ಮರಗಿಡಗಳು. ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ ಕಲರವ. ಅಕ್ಷರಶಃ ಇದು ದೇಹಕ್ಕೆ ತಂಪು, ಕಿವಿಗೆ ಇಂಪು ನೀಡುವ, ಹೂವಿನ ಕಂಪು ಪಸರಿಸುವ  ತಾಣ..!. ಈ ವರ್ಣನೆ ನಿಮ್ಮಲ್ಲಿ ಕಾಡಿನ ಕಲ್ಪನೆ ತಂದಿತಾ..? ಅರೆ ನಿಲ್ಲಿ, ಇದು ಹುಟ್ಟು ಕಾಡಲ್ಲ ಬದಲಾಗಿ ಕಾಡು ಕೃಷಿಯ ಉಡುಗರೆ!.

ರಾಯಚೂರು ಜಿಲ್ಲೆಯ ಭತ್ತದ ನಾಡು ಮಸ್ಕಿ ತಾಲ್ಲೂಕಿನ ಗೌಡನಬಾವಿಯ ಎಂ.ಬಿ.ಎ ಪದವೀಧರ ಶಿವರಾಜ್ ನಾಯಕ ಇವರ ಸತತ ನಾಲ್ಕು ವರ್ಷಗಳ ಪರಿಶ್ರಮದ ಫಲವಿದು. ಐದು ವರ್ಷಗಳ ಹಿಂದೆ ತಮ್ಮ ಪದವಿಗೆ ತಕ್ಕ ಉದ್ಯೋಗದಲ್ಲಿದ್ದರು. ಆದರೆ ಆ ಯಾಂತ್ರಿಕ ಮತ್ತು ಒತ್ತಡ ಜೀವನ ಹಿಡಿಸಲಿಲ್ಲ.  ಕೃಷಿ ಮಾಡುವ ಸಂಕಲ್ಪ ತೊಟ್ಟು ಊರಿಗೆ ಮರಳಿದರು.

ಒಂದು ಎಕರೆಯಲ್ಲಿ ಆರಂಭ…

  ಇವರದ್ದು ಒಟ್ಟು ಎಂಟು ಎಕರೆ ಕೃಷಿ ಭೂಮಿ. ಆದರೆ ಹಿರಿಯರು ಇವರ ಒತ್ತಾಸೆಗೆ ಮಣಿದು ಆರಂಭದಲ್ಲಿ ಕೊಟ್ಟಿದ್ದು ಮಾತ್ರ ಒಂದು ಎಕರೆಯಷ್ಟೆ. ಶಿವರಾಜ್‌ರ ದೂರದೃಷ್ಟಿ, ಆಸಕ್ತಿ ಮತ್ತು ಬದ್ಧತೆ ನೋಡಿ ಇಡೀ ಎಂಟು ಎಕರೆಯನ್ನು ಇವರ ಕೈಗಿಟ್ಟು ಮನೆಯವರು ನಿಶ್ಚಿಂತೆಯಿಂದ ಇದ್ದಾರೆ!. ಇಂಚಿಂಚು ಜಾಗವನ್ನು ಅಚ್ಚುಕಟ್ಟಾಗಿ ಸದ್ಭಳಕೆ ಮಾಡಿ ಶಿವರಾಜ್ ಕೃಷಿಯಲ್ಲಿ ಯಶಸ್ಸಿನ ಬೆನ್ನೇರಿ ಹೊರಟಿದ್ದಾರೆ.

ಸಾಂಪ್ರದಾಯಿಕ ಬೆಳೆಗೆ ಇತಿಶ್ರೀ..

   ಹತ್ತಿ, ಮೆಣೆಸಿನಕಾಯಿ.. ಹೀಗೆ ಸಾಂಪ್ರದಾಯಿಕ ಮತ್ತು ಅಲ್ಪಾವಧಿ ಬೆಳೆ ಬೆಳೆವುದನ್ನು ಮೊದಲು ನಿಲ್ಲಿಸಿದರು. ಆ ಜಾಗದಲ್ಲಿ ದೀರ್ಘಾವಧಿ ಮತ್ತು ಅದರ ನಡುವೆ ನಿರಂತರ ಆದಾಯ ನೀಡುವ ಬೆಳೆ ಬೆಳೆಯಲು  ನಿರ್ಧರಿಸಿದರು. ಎರಡು ಬೋರ್‌ವೆಲ್‌ಗಳ ಲಭ್ಯ ನೀರಿನಲ್ಲಿ ಕೃಷಿ ಮಾಡುವ ಬಗ್ಗೆ ಪಕ್ಕಾ ಪ್ಲಾನ್ ಮಾಡಿದರು. ಪ್ರಾರಂಭದಲ್ಲಿ ಇಲ್ಲಿನ ಹವಾಗುಣಕ್ಕೆ ಸೂಕ್ತವಾದ ಬಾಲಾಜಿ ತಳಿಯ ೧೧೦ ನಿಂಬೆ ಗಿಡಗಳನ್ನು ೨೦x೨೦ ಅಳತೆಯಲ್ಲಿ ಹಾಕಿ, ಇದರ ನಡುವೆ ೩೫೦ ರಕ್ತ ಚಂದನ ತುಂಬಿಸಿದರು. ನಡುವೆ ಕಾಯಿ-ಪಲ್ಲೆ ಬೆಳೆದರು. ಹೀಗೆ ಹಂತಹಂತವಾಗಿ ಸಾಂಪ್ರದಾಯಿಕ ಬೆಳೆಯಿಂದ ತೋಟಗಾರಿಕೆ, ಅರಣ್ಯ ಕೃಷಿಯತ್ತ ನಡೆದರು.

ಸಬ್ಸಿಡಿಯಲ್ಲೇ ಕೃಷಿ..

  ಇವರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಗರಿಷ್ಟಮಟ್ಟದಲ್ಲಿ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಮೂರು ಎಕರೆಯಲ್ಲಿ ಹಾಕಿರುವ ೮೦೦ ಹೆಬ್ಬೇವು, ೩೦೦ ನುಗ್ಗೆ ಹಾಗೂ ತಲಾ ೨ ೧/೨ ಎಕರೆಗೆ ತುಂಬಿಸಿರುವ ಪಪ್ಪಾಯಿ ಮತ್ತು ಬಾಳೆ [ಜಿ೯ ತಳಿ] ಗೆ ಹಾಗೂ ಎಂಟೂ ಎಕರೆಗೆ ಅಳವಡಿಸಿರುವ ಹನಿ ನಿರಾವರಿಗೆ ಸರಕಾರದಿಂದ ಸಬ್ಸಿಡಿ ಸಿಕ್ಕಿದೆ. ಇದರೊಟ್ಟಿಗೆ ಸ್ವಂತ ಖರ್ಚಿನಲ್ಲಿ ೩೦೦ ಶ್ರೀಗಂಧ, ೫೦ ಜಂಬು ನೇರಳೆ ಹಾಕಿದ್ದಾರೆ.

ನೇರ ಮಾರುಕಟ್ಟೆ..

 ತೋಟದ ಸುತ್ತಾಮುತ್ತಾ ಸುಮಾರು ೨೫-೩೦ ಕಿ.ಮೀ ವ್ಯಾಪ್ತಿಯಲ್ಲಿ ಇತರರು ಬೆಳೆಯದ ಹಾಗೂ ಈ ಭಾಗದಲ್ಲಿ ಸದಾ ಬೇಡಿಕೆ ಇರುವ ಬೆಳೆಗಳನ್ನೇ ಬೆಳೆದಿದ್ದಾರೆ. ಕಾರಣ ಗ್ರಾಹಕರು ಮತ್ತು ವ್ಯಾಪಾರಸ್ಥರು ನೇರವಾಗಿ ಇವರ ತೋಟಕ್ಕೆ ಬಂದು ಮಾಲು ಖರೀದಿಸುತ್ತಾರೆ. ಇನ್ನು ಇವರ ತೋಟ ಜವಳಗೇರ-ಬಳಗನೂರು ಮುಖ್ಯ ರಸ್ತೆಯಲ್ಲಿದ್ದು ಪ್ರಯಾಣಿಕರೇ ಗ್ರಾಹಕರು, ಪ್ರಚಾರಕರೂ ಆಗಿದ್ದಾರೆ. ಇನ್ನು ಲಾಕ್‌ಡೌನ್ ವೇಳೆಯಲ್ಲಿ ಸ್ವತಃ ಗೂಡ್ಸ್ ಆಟೋದಲ್ಲಿ ಕಾಯಿ-ಪಲ್ಲೆ, ಹಣ್ಣುಗಳನ್ನು ಹೊಯ್ದು ಹಳ್ಳಿ-ಹಳ್ಳಿಗೆ ಮಾರಿ ನಷ್ಟದಿಂದ ಪಾರಾಗಿದ್ದಾರೆ.

ಪ್ರಯೋಗಶೀಲರು..

ಇವರು ಸದಾ ನವನವೀನ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಗೋಡಂಬಿ ಬೆಳೆಯಲಿಕ್ಕೆ ಮುಂದಾಗಿ ೫೦ ಗಿಡಗಳನ್ನು ನೆಟ್ಟರು. ಆದರೆ ಇಲ್ಲಿನ ಹವಮಾನ, ಮಣ್ಣಿಗೆ ಹೊಂದಿಕೊಳ್ಳಲಿಲ್ಲ. ಈಗ ವೀಳ್ಯದೆಲೆ ತೋಟ ಮಾಡುವ ಬಗ್ಗೆ ಚಿಂತನೆ ನಡೆಸಿ, ಇದಕ್ಕಾಗಿ ಪ್ರಾಯೋಗಿಕವಾಗಿ ಒಂದಿಷ್ಟು ವೀಳ್ಯದೆಲೆ ಬಳ್ಳಿಗಳನ್ನು ನಾಟಿ ಮಾಡಿದ್ದಾರೆ. ಜತೆಗೆ ಲವಂಗ, ಏಲಕ್ಕಿ ಸಹ ಹಾಕಿದ್ದೂ ಮುಂದೆ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಆಸೆ ಇಟ್ಟುಕೊಂಡಿದ್ದಾರೆ.

ಲೇಬರ್ ಲೆಸ್ ಕೃಷಿ..

ಎಂಟು ಎಕರೆ ಕೃಷಿ ನಿರ್ವಹಣೆ ಬಹುತೇಕ ಲೇಬರ್‌ಲೆಸ್..! ತೋಟಕ್ಕೆಲ್ಲ ಹನಿ ನಿರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ತರಗೆಲೆ ಇಡಿ ತೋಟಕ್ಕೆ ಮುಚ್ಚಿಗೆ, ಗೊಬ್ಬರ ಆಗಿದೆ. ಇದರಿಂದ ತೋಟ ಗೊಬ್ಬರ ಬೇಡಲ್ಲ. ಕಳೆ ಅಂತೂ ಮೊದಲೇ ಬರಲ್ಲ. ಇನ್ನು ತೋಟದ ಸುತ್ತಾ ಸೋಲಾರ್ ತಂತಿ ಬೇಲಿ ಇದ್ದು, ತೋಟ ಕಾಯುವ ತಾಪತ್ರಯ ಇಲ್ಲ. ರಸಗೊಬ್ಬರ, ಕೀಟ, ಕ್ರಿಮಿನಾಶಕ…ಇತ್ಯಾದಿಗಳನ್ನು ಅಗತ್ಯಬಿದ್ದಾಗ ಅದರಲ್ಲೂ ಕನಿಷ್ಟ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಕೀಟ ನಿಯಂತ್ರಣಕ್ಕೆ ದಾಳಿಂಬೆಗೆ ಮಧ್ಯದಲ್ಲಿ ಸೋಲಾರ್ ಟ್ರಾಪ್ ಅಳವಡಿಸಿದ್ದು, ಇದಕ್ಕೆ ತಾಜಾ ನಿದರ್ಶನ.

ಅಂತರ್ಜಲ ನೇರ ಉಣಿಸಲ್ಲ..!

 ಬೋರ್‌ವೆಲ್ ನೀರನ್ನು ಮೊದಲಿಗೆ ೫೦x೪೦x೩೦ ಅಳತೆಯಲ್ಲಿ ನಿರ್ಮಿಸಿರುವ ಹೊಂಡಕ್ಕೆ ಬಿಡುತ್ತಾರೆ. ತದನಂತರ ಅಲ್ಲಿಂದ ನೀರನ್ನು ಮೇಲೆತ್ತಿ ಬೆಳೆಗೆ ಕೊಡುತ್ತಾರೆ!. ` ಭೂಮಿಯ ಆಳದಿಂದ ಒತ್ತಾಯಪೂರ್ವಕವಾಗಿ ನೀರನ್ನು ಮೇಲೆ ತಂದಿರುತ್ತೇವೆ. ಸಹಜವಾಗಿ ಈ ನೀರು ಬಿಸಿ ಆಗಿರುತ್ತದೆ. ಅಲ್ಲದೆ ಇದು ಅಷ್ಟೊಂದು ಯೋಗ್ಯವೂ ಆಗಿರುವುದಿಲ್ಲ. ಬೆಳೆಗೆ ನೇರವಾಗಿ ಕೊಟ್ಟರೆ ಮಣ್ಣಿನ ಸತ್ವ ನಿಧಾನವಾಗಿ ಕಡಿಮೆ ಆಗುತ್ತೆ. ಹಾಗಾಗಿ ನೀರನ್ನು ಗುಂಡಿಗೆ ಬಿಟ್ಟು ಮೂರು ದಿನ ಕಾಯುತ್ತೇನೆ. ಆಗ ಆ ನೀರಿನಲ್ಲಿ ಬೇಡವಾದ ಉಪ್ಪಿನ ಅಂಶ ತಳಕ್ಕೆ ಸೇರುತ್ತದೆ; ಇಲ್ಲವೇ ಆವಿ ಆಗುತ್ತದೆ. ಈ ಪ್ರಕ್ರಿಯಿಂದ ನೀರು ಭಾಗಶಃ ಶುದ್ಧವಾಗುತ್ತದೆ. ಹಾಗಾಗಿ ಈ ಪದ್ಧತಿ ಅನುಸರಿಸುವೆ.. ’ ಎನ್ನುತ್ತಾರೆ ಶಿವರಾಜ್.

ನೆರಳಲ್ಲೂ ಲಾಭ..

ಇವರು ತೋಟದ ಬದುವಿನ ಸುತ್ತಾ ಇರುವ ತೆಂಗಿನ ಮರದ ನೆರಳಿನಲ್ಲಿ ಕನಕಾಂಬರ ಬೆಳೆದಿದ್ದಾರೆ. ವಾರದಲ್ಲಿ ಸರಾಸರಿ ೧೦ ಕೆ.ಜಿ ಹೂವು, ಕೆ.ಜಿ ಗೆ ೨೦೦ ರೂ ಸಿಗುತ್ತದೆ. ಇದರೊಟ್ಟಿಗೆ ಒಂದು ಗಜ ನಿಂಬೆ ಗಿಡ ಇದ್ದು, ವರ್ಷದಲ್ಲಿ ೩೦೦೦ ಸಾವಿರ ಕಾಯಿ ಸಿಗಲಿದ್ದು, ಒಂದು ನಿಂಬೆಗೆ ೨೦೦-೨೫೦ ರೂಗೆ ಮಾರುತ್ತಾರೆ!.   ಇದರೊಟ್ಟಿಗೆ ೧೦೦ ಪೇರಲೆ, ೧೦ ಸಪೋಟ ಹಣ್ಣಿನ ಗಿಡಗಳಿವೆ. ಇವುಗಳಿಂದ ಸರಾಸರಿ ತಿಂಗಳಿಗೆ ೧೨-೧೫ ಸಾವಿರ ಆದಾಯ ಗಳಿಸುತ್ತಿದ್ದಾರೆ. ಈ ಮುಂಚೆ ಇಷ್ಟೇ ಜಮೀನಿನಲ್ಲಿ ಸಾವಿರ ಲೆಕ್ಕದಲ್ಲಿ ಲಾಭ ಕಾಣುತ್ತಿದ್ದ ಈ ಕೃಷಿ ಕುಟುಂಬ ಈಗ ವರ್ಷದಲ್ಲಿ ಸರಾಸರಿ ೮ ಲಕ್ಷ ರೂಗಳ ಆದಾಯ ನೋಡುತ್ತಿದ್ದಾರೆ. ಅದೂ ಕಡಿಮೆ ಖರ್ಚು ಮತ್ತು ಶ್ರಮದಲ್ಲಿ ಎನ್ನುವುದು ಗಮನಾರ್ಹ. ಇವರ ಸಾಧನೆ ಗುರುತಿಸಿ ರಾಯಚೂರು ಕೃಷಿ ವಿ.ವಿ ಪ್ರಗತಿ ಪರ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.

ಸಂಪರ್ಕ ಸಂಖ್ಯೆ ೯೮೮೬೦೦೦೪೨೦

LEAVE A REPLY

Please enter your comment!
Please enter your name here