ಚನ್ನಪ್ಪನ ಕರು ಸಾಲದ ಅರ್ಜಿ ತಂದ ಭೀತಿ !

'ಏನ್ ಮಾಡಿದ್ರೀ ನನ್ನ ಅರ್ಜಿನಾ' ಎಂದು ಜೋರಾಗಿ ಟೇಬಲ್ಲು ಕುಟ್ಟಿದ 30-35 ರ ಪ್ರಾಯದ ಚನ್ನಪ್ಪ. ಎಣ್ಣೆಗೆಂಪು ಬಣ್ಣದ ಅವನು ಕಾಕಿ ಚಡ್ಡಿ ಹಾಕಿ ಮೇಲೊಂದು ಬಿಳಿ ಶರ್ಟು ಧರಿಸಿದ್ದ. ಅವನ ಮುಖ ಭಗಭಗ ಉರಿಯುತ್ತಿತ್ತು. ಕಣ್ಣುಗಳು ಕಿಡಿ ಕಾರುತ್ತಿದ್ದವು. ಅಷ್ಟೊತ್ತಿಗೆ ಆಸ್ಪತ್ರೆಗೆ ಬಂದ ಕಾಂಪೌಂಡ್ರು ತಡೀರಿ ಸಾರ್ ಎಂದು 'ಇಂದ' 'ಗೆ' ಎಂಬ ಆಸ್ಪತ್ರೆಗೆ ಬರುವ ಮತ್ತು ರವಾನೆಯಾಗುವ ಪತ್ರಗಳ ವಹಿ ಹಿಡಿದುಕೊಂಡು ಬಂದ. ನನಗೆ ಖುಷಿಯೋ ಖುಷಿ. ಆ ವಹಿಯನ್ನು ತೆರೆದರೆ ಅದು 1976 ನೆ ಇಸವಿಗೆ ಕೊನೆಗೊಂಡು ಅಲ್ಲಿಂದೀಚೆಗೆ ಬಂದ ಅಥವಾ ಹೋದ ಪತ್ರಗಳ ಸುದ್ದಿಯೇ ಇರಲಿಲ್ಲ.

2
ಸಾಂದರ್ಭಿಕ ಚಿತ್ರ
ಲೇಖಕರು: ಡಾ. ಮಿರ್ಜಾ ಬಷೀರ್

ಅದು 1983. ಪಶುವೈದ್ಯನಾಗಿ ತಿಪಟೂರು ತಾಲ್ಲೂಕು ನೊಣವಿನಕೆರೆ ಪಶು ಚಿಕಿತ್ಸಾಲಯದಲ್ಲಿ ಕೆಲಸಕ್ಕೆ ಸೇರಿದ ಹೊಸತು. ಜಾನುವಾರುಗಳ ಚಿಕಿತ್ಸೆ ಬಿಟ್ಟು ಕಛೇರಿ ವ್ಯವಹಾರ, ಆಡಳಿತ ಏನೂ ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಆಗಲೇ ನನ್ನ ವಯಸ್ಸಿಗಿಂತ ಹೆಚ್ಚು ಸರ್ವೀಸ್ ಆಗಿದ್ದ ಇನ್ಸ್ಪೆಕ್ಟ್ರು, ಕಾಂಪೌಂಡ್ರು, ಸೇವಕ ಇದ್ರು. ಎಲ್ಲ ಘಟಾನುಘಟಿಗಳೇ. ಹಿಂದಿದ್ದ ವೈದ್ಯರು ಕತ್ತರಿ, ಚಾಕು, ಸೂಜಿ ಮುಂತಾದವನ್ನೆಲ್ಲ ಕೊಡದೆ ನನ್ನ ಸಹಿ ಪಡೆದು ಜಾಗ ಖಾಲಿ ಮಾಡಿದ್ದರು. ನಾನೊಂದು ರೀತಿಯ ಆಘಾತದಲ್ಲಿದ್ದೆ.

‘ರೀ ಡಾಕ್ಟ್ರೇ, ನನ್ನ ಸಾಲದ ಅರ್ಜಿ ಏನಾಯ್ತು?’ ಎಂದು ಎದುರು ಬಂದು ಕುಳಿತವನ ಹೆಸರು ಚನ್ನಪ್ಪ. ಆಗ ಮಿಶ್ರತಳಿ ಹೆಣ್ಣುಕರು ಸಾಕಾಣಿಕೆಗೆ ಸಬ್ಸಿಡಿ ಸಾಲ ಕೊಡುತ್ತಿದ್ದರು. ಆ ಯೋಜನೆಯಡಿ ಚನ್ನಪ್ಪ ಆಸ್ಪತ್ರೆಗೆ ಅರ್ಜಿ ಸಲ್ಲಿಸಿದ್ದು, ಅದೇನಾಯ್ತು ಎಂದು ವಿಚಾರಿಸಲು ಬಂದಿದ್ದ. ಆ ಥರದ ಸಾಲದ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಆಸ್ಪತ್ರೆಗೆ ಬಂದಿದ್ದ ಜಾನುವಾರುಗಳ ಚಿಕಿತ್ಸೆ ಮಾಡುತ್ತಿದ್ದೆ. ಕಾಂಪೌಂಡ್ರು ನನ್ನ ಜೊತೆಯಲ್ಲಿದ್ದರು. ಇನ್ಸ್ಪೆಕ್ಟರಿಗೆ ಕೀ ಗೊಂಚಲು ಕೊಟ್ಟು ಚನ್ನಪ್ಪನ ಅರ್ಜಿ ಹುಡುಕಲು ತಿಳಿಸಿದೆ.

ಇನ್ಸ್ಪೆಕ್ಟರ್ ಆಸ್ಪತ್ರೆಯ ಮತ್ತೊಂದು ರೂಮಿಗೆ ಹೋದ ಕೂಡಲೆ ಕಾಂಪೌಂಡ್ರು ಬಂದು ನನ್ನ ಕಿವಿಯಲ್ಲಿ ‘ಸಾರ್ ಇನ್ಸ್ಪೆಕ್ಟ್ರು ತಾನೇ ಡಾಕ್ಟರೆಂದು ಹಳ್ಳಿಗಳಲ್ಲೆಲ್ಲ ತಿರುಗುತ್ತ ಬೇಜಾನ್ ದುಡ್ಡು ಮಾಡ್ತಾವ್ನೆ. ಅವ್ನ ಕಂಟ್ರೋಲ್ ಮಾಡಿ.’ ಎಂದು ಪುರಾಣ ಬಿಚ್ಚಿದ. ಇನ್ಸ್ಪೆಕ್ಟರ್ ಮತ್ತು ಸೇವಕ ಇಬ್ಬರೂ ಮುಂದುವರೆದ ಒಂದೇ ಜಾತಿಗೆ ಸೇರಿದವರಾಗಿದ್ದು ದಲಿತನಾದ ಕಾಂಪೌಂಡ್ರು ಮೇಲೆ ಸದಾ ಕತ್ತಿ ಮಸೆಯುತ್ತಿದ್ದರು. ಎಲ್ಲರೂ ಒಬ್ಬರ ಮೇಲೆ ಒಬ್ಬರು ಪರಸ್ಪರ ಚಾಡಿ ಚುಚ್ಚುತ್ತಿದ್ದರು.

ಇಷ್ಟಾಗೋ ಹೊತ್ತಿಗೆ ಊಟದ ವಿಶ್ರಾಂತಿ ಆಗಿ ನಾನೂ ಅರ್ಜಿ ಹುಡುಕುವ ಕೆಲಸದಲ್ಲಿ ಮುಳುಗಿದೆ. ಸಿಬ್ಬಂದಿಯೆಲ್ಲ ಚಿಕಿತ್ಸೆಗೆ, ಊಟಕ್ಕೆಂದು ನಾಪತ್ತೆಯಾದರು. ಬುಸುಗುಡುತ್ತಿದ್ದ ಚನ್ನಪ್ಪ ಮತ್ತು ನಾನು ಇಬ್ಬರೇ ಉಳಿದೆವು. ಈಗಾಗಲೇ ಹುಡುಕಿದ ಕಡತ, ವಹಿ, ಖಾನೆಗಳು, ಬೀರು, ಔಷಧ ದಾಸ್ತಾನು ರೂಮು ಎಲ್ಲವನ್ನೂ ಮತ್ತೆ ಹುಡುಹುಡುಕಿ ಸಾಕಾಗಿ ಹೋಯ್ತು. ದನಗಳಿಗೆ ಔಷಧಿ ಕಟ್ಟಿ ಕೊಡಲು ಇಟ್ಟಿದ್ದ ರದ್ದಿ ಪೇಪರ್ಗಳನ್ನು ಸಹ ಕಿತ್ತು ಕಿತ್ತು ನೋಡಿದೆ. ಅಲ್ಲಿದ್ದ ಕಡತಗಳ ಹೆಸರಿಗೂ, ಕಡತಗಳಲ್ಲಿ ಹಾಕಿದ್ದ ಹಾಳೆಗಳಿಗೂ ಸಂಬಂಧವೇ ಇರಲಿಲ್ಲ. ‘ಕರು ಸಾಲ’ ಎಂಬ ಕಡತದಲ್ಲಿ ಹಬ್ಬದ ಮುಂಗಡದ ಸಾಲ, ಎಲ್.ಐ.ಸಿ. ಸಾಲ, ಜಿ.ಪಿ.ಎಫ್. ಸಾಲ, ಕೆ.ಇ.ಬಿ. ಬಿಲ್ಲು ರಸೀದಿಗಳು, ವರ್ಗಾವಣಾ ಆದೇಶಗಳು, 1960 ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಹೀಗೆ ಅಸಂಬದ್ಧಗಳು ತುಂಬಿದ್ದವು.

‘ಏನ್ ಮಾಡಿದ್ರೀ ನನ್ನ ಅರ್ಜಿನಾ’ ಎಂದು ಜೋರಾಗಿ ಟೇಬಲ್ಲು ಕುಟ್ಟಿದ 30-35 ರ ಪ್ರಾಯದ ಚನ್ನಪ್ಪ. ಎಣ್ಣೆಗೆಂಪು ಬಣ್ಣದ ಅವನು ಕಾಕಿ ಚಡ್ಡಿ ಹಾಕಿ ಮೇಲೊಂದು ಬಿಳಿ ಶರ್ಟು ಧರಿಸಿದ್ದ. ಅವನ ಮುಖ ಭಗಭಗ ಉರಿಯುತ್ತಿತ್ತು. ಕಣ್ಣುಗಳು ಕಿಡಿ ಕಾರುತ್ತಿದ್ದವು. ಅಷ್ಟೊತ್ತಿಗೆ ಆಸ್ಪತ್ರೆಗೆ ಬಂದ ಕಾಂಪೌಂಡ್ರು ತಡೀರಿ ಸಾರ್ ಎಂದು ‘ಇಂದ’ ‘ಗೆ’ ಎಂಬ ಆಸ್ಪತ್ರೆಗೆ ಬರುವ ಮತ್ತು ರವಾನೆಯಾಗುವ ಪತ್ರಗಳ ವಹಿ ಹಿಡಿದುಕೊಂಡು ಬಂದ. ನನಗೆ ಖುಷಿಯೋ ಖುಷಿ. ಆ ವಹಿಯನ್ನು ತೆರೆದರೆ ಅದು 1976 ನೆ ಇಸವಿಗೆ ಕೊನೆಗೊಂಡು ಅಲ್ಲಿಂದೀಚೆಗೆ ಬಂದ ಅಥವಾ ಹೋದ ಪತ್ರಗಳ ಸುದ್ದಿಯೇ ಇರಲಿಲ್ಲ.

‘ಎಲ್ರೀ ಅರ್ಜಿ ? ಟ್ರಾನ್ಸ್ಫರಾಗಿ ಹೋದ ಡಾಕ್ಟ್ರು ನಿಮಗೆ ಕೊಟ್ಟೋಗಿರ್ತಾರೆ. ನೀವೇ ಕಳೆದಾಕಿರೋದು. ಹುಡುಕ್ರಿ’ ಎಂದು ಚನ್ನಪ್ಪ ಸಿಟ್ಟಿನಿಂದ ಭುಸುಗುಡುತ್ತಾ ಕೂಗಿದ. ಅವನ ಕಾಲಲ್ಲಿ ಮೆಟ್ಟುಗಳು ದಪ್ಪಗಿದ್ದು ನಡೆದಾಡಿದರೆ ಕರಕರ ಶಬ್ದ ಮಾಡುತ್ತಿದ್ದವು. ನನ್ನ ಗಂಟಲು ಒಣಗಿ ಹೋಗಿ ಬಹಳ ಹೊತ್ತಾಗಿತ್ತು. ಮೈಯೆಲ್ಲಾ ಬೆವರು ಕಿತ್ತುಕೊಂಡಿತ್ತು. ಮೊದಲೇ ಭಯಸ್ಥನೂ ಅನನುಭವಿಯೂ ಆಗಿದ್ದ ನಾನು ಅಪರಾಧಿಯಂತೆ ನಿಂತುಕೊಂಡಿದ್ದೆ. ಬೆಂಗಳೂರಿನಲ್ಲಿದ್ದ ಅಪ್ಪ ಅಮ್ಮ, ದಿಕ್ಕಿಗೊಬ್ಬರಂತಿದ್ದ ಅಣ್ಣಂದಿರು, ಅಕ್ಕ ತಂಗಿಯರೆಲ್ಲ ನೆನಪಾದರು. ‘ಥೂ ಯಾಕಾದ್ರೂ ಈ ಕೆಲಸಕ್ಕೆ ಬಂದ್ನೋ’ ಎಂದು ದಿಗ್ಭ್ರಾಂತನಾಗಿದ್ದೆ.
‘ನಾಳೆ ಮಂತ್ರಿ ಲೋನ್ ಪೂಜಾರಿ ಬರ್ತಾ ಇದಾನಿಲ್ಲಿಗೆ. ನಿನಿಗೆ ಪೂಜೆ ಮಾಡಿಸ್ತಿನಿ’ ಎಂದು ಕೂಗಿ ಆಸ್ಪತ್ರೆಯಿಂದ ಮೆಟ್ಟಿಲಿಳಿದು ಚನ್ನಪ್ಪ ಭರಭರ ಹೊರಟು ಹೋದ. ಕಾಂಪೌಂಡ್ರು, ‘ಹೌದು ಸಾರ್. ನಾಳೆ ಮಂತ್ರಿ ಜನಾರ್ಧನ ಪೂಜಾರಿ ನಮ್ಮೂರಿಗೆ ಬರ್ತಿದಾರೆ’ ಅಂದ ನಿರ್ಭಾವುಕವಾಗಿ.
ಆ ದಿನ 6 ಗಂಟೆ ಆದ ಕೂಡಲೆ ತಾಲ್ಲೂಕು ಕೇಂದ್ರ ತಿಪಟೂರು ಆಸ್ಪತ್ರೆಗೆ ವಿಚಾರಿಸೋಣ ಎಂದುಕೊಂಡು ಹೋದೆ. ಆದರೆ ಆಸ್ಪತ್ರೆಯ ಬಾಗಿಲಿಗೆ ಬೀಗ ಜಡಿದಿತ್ತು. ವಿಚಿತ್ರ ಇಕ್ಕಟ್ಟಿನಲ್ಲಿ ಸಿಗಿಹಾಕಿಕೊಂಡಿದ್ದೆ. ಬೆಳಿಗ್ಗೆ ಎದ್ದರೆ ಮಂತ್ರಿ ಪೂಜಾರಿಯಿಂದ ಗ್ರಾಮಸ್ಥರೆಲ್ಲದುರು ನನಗೆ ಕಾದಿರುವ ಅವಮಾನ ನೆನೆಸಿಕೊಂಡು ಬಸ್ಟಾಂಡ್ಗೆ ದೌಡಾಯಿಸಿ ಬೆಂಗಳೂರು ಬಸ್ ಹಿಡಿದು ಮನೆಗೋದೆ.

ಅಪ್ಪ ಅಮ್ಮ ಎಲ್ಲ ನನ್ನ ಇಳಿಬಿದ್ದ ಮುಖ ನೋಡಿ ‘ಯಾಕೆ ಏನಾಯ್ತು?’ ಎಂದರು. ಏನಿಲ್ಲ ಎಂದೆ. ಏನು ಹೇಳುವುದು? ಉಂಡು ಬಿದ್ದುಕೊಂಡೆ. ರಾತ್ರಿಯೆಲ್ಲ ಕೆಟ್ಟ ಕನಸುಗಳು. ಜನಾರ್ಧನ ಪೂಜಾರಿಯವರು ಥರಾವರಿ ಕುಣಿದರು. ಚನ್ನಪ್ಪ ಕೂಗುತ್ತಿದ್ದ. ಪೂಜಾರಿಯವರು ಅತಿ ಕೆಟ್ಟದಾಗಿ ಬೈದು ಸಸ್ಪೆಂಡ್ ಮಾಡಿದರು. ಗ್ರಾಮಸ್ಥರು ಮತ್ತು ನನ್ನ ಆಸ್ಪತ್ರೆ ಸಿಬ್ಬಂಧಿ ನಗುತ್ತಿದ್ದರು.

ಒಂದು ವಾರವಾದರೂ ನಾನು ಆಸ್ಪತ್ರೆಗೆ ಹಿಂದಿರುಗಲೇ ಇಲ್ಲ. ಮನೆಯಲ್ಲಿಯೇ ದಿನವೂ ಹಲವಾರು ದಿನಪತ್ರಿಕೆಗಳನ್ನು ವಿವರವಾಗಿ ಓದುವುದು. ಜನಾರ್ಧನ ಪೂಜಾರಿಯವರು ಎಲ್ಲೆಲ್ಲಿ, ಯಾವ್ಯಾವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಏನು ಭಾಷಣ ಮಾಡಿದ್ದಾರೆ, ನನ್ನ ಸಸ್ಪೆಂಡ್ ಮಾಡಿದ್ದಾರೆಯೇ? ಇತ್ಯಾದಿ ಇತ್ಯಾದಿ ಗಮನಿಸುತ್ತಿದ್ದೆ.

ಯಾವ ಪೇಪರಲ್ಲೂ ಜನಾರ್ಧನ ಪೂಜಾರಿಯವರ ಕಾರ್ಯಕ್ರಮಗಳ ಬಗ್ಗೆ ಮತ್ತು ಚನ್ನಪ್ಪನ ದೂರಿನ ಬಗ್ಗೆ ಒಂದೇ ಒಂದು ಶಬ್ದವಿರಲಿಲ್ಲ. ಆದರೂ ಒಂದು ವಾರ ಮನೆಯಲ್ಲಿಯೇ ಇದ್ದೆ. ಆ ನಂತರ ಅಪ್ಪ ಅಮ್ಮನ ಕಾಟಕ್ಕೆ ವಾಪಸ್ ಹೊರಟೆ. ನೊಣವಿನಕೆರೆಯ ಬಸ್ಟಾಂಡಿನಲ್ಲಿಯೇ ಪಶು ಚಿಕಿತ್ಸಾಲಯವಿರುವುದು. ಎಲ್ಲರ ದೃಷ್ಟಿಯೂ ನನ್ನ ಮೇಲಿರುತ್ತದೆ. ಎಲ್ಲರೂ ನನ್ನ ಬಗ್ಗೆ ಮಾತಾಡುತ್ತಿರುತ್ತಾರೆ, ಪೂಜಾರಿ ಏನೇನು ಬೈದರು, ಚನ್ನಪ್ಪನ ಕುಣಿತ, ಆಸ್ಪತ್ರೆಗೆ ಹೋದ ಕೂಡಲೆ ಕೈಗೆ ಬಂದು ಬೀಳುವ ಸಸ್ಪೆನ್ಷನ್ ಆರ್ಡರ್! ನಾನು ಕುಸಿದು ಬೀಳುವುದೊಂದು ಬಾಕಿ ಅಷ್ಟೆ.

ಆಸ್ಪತ್ರೆಯಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ. ಎಲ್ಲ ಎಂದಿನಂತೆ ಮಾಮೂಲಾಗಿತ್ತು. ಸಿಬ್ಬಂಧಿವರ್ಗದವರು ‘ಯಾಕ್ಸಾರ್ ಹುಷಾರಿದ್ದಂಗೆ ಕಾಣ್ತಾ ಇಲ್ಲ’ ಎಂದರು. ಚನ್ನಪ್ಪನ ಸುದ್ದಿ ಇಲ್ಲ. ಪೂಜಾರಿ ಸುದ್ದಿ ಇಲ್ಲ. ಆದ್ರೆ ನನಗೆ ಸಮಾಧಾನ ಇಲ್ಲ. ‘ಏನಾದ್ರೂ ಪೋಸ್ಟ್ ಇದೆಯೇನ್ರಿ ಅಥವಾ ಮುದ್ದಾಂ ಟಪಾಲು’ ಅಂದೆ. ಸಿಬ್ಬಂಧಿ ‘ಕ್ಯಾಬೀ ನೈ’ ಅಂದ್ರು.

ಮಧ್ಯಾಹ್ನ ಊಟದ ಬಿಡುವಿನಲ್ಲಿ ಮೆಲ್ಲಗೆ ಕಾಂಪೌಂಡ್ರನ್ನ ಕೇಳ್ದೆ. ‘ಪೂಜಾರಿ ಬಂದಿದ್ರೇನ್ರೀ?’ ‘ಇಲ್ಲ ಸಾರ್ ಪೂಜಾರಿನೂ ಇಲ್ಲ, ದೇವ್ರೂ ಇಲ್ಲ. ಅವತ್ತು ಮಿನಿಸ್ಟ್ರು ಮಧ್ಯಾಹ್ನ 3 ಗಂಟೆಗೆ ಬರ್ಬೇಕಾಗಿತ್ತು. ಜನ್ರು ಕಾದೂ ಕಾದೂ ಸಾಕಾದ್ರು. ಸಂಜೆ 6 ಗಂಟೆಯಾದ್ರೂ ಬರಲಿಲ್ಲ. ಅವ್ರು ಬಂದಾಗ ಜನ ಎಲ್ಲ ಖಾಲಿಯಾಗಿದ್ರು. ಮಂತ್ರಿ ಬಂದಾಗ ಇದ್ದ ನಾಲ್ಕು ಜನ ಹಾರ ಹಾಕಿದ್ರು. ಹಾರ ಹಾಕಿಸ್ಕಂಡು ನೆಟ್ಟಗೆ ಹೋಗ್ತಿದ್ರಂತೆ.’ ಎಂದ್ರು. ‘ಚನ್ನಪ್ಪ ಎಲ್ಲಿ?’ ಎಂದೆ. ‘ನಿಮ್ಮತ್ರ ಅವತ್ತು ಜಗಳ ಆಡಿ ಹೋದವನು ಮತ್ತೆ ಇತ್ತ ಬಂದಿಲ್ಲ ಸಾ’ ಅಂದ್ರು ಕಾಂಪೌಂಡ್ರು.

1988 ರತನಕ ನಾನು ನೊಣವಿನಕೆರೆಯಲ್ಲೇ ಇದ್ದೆ. ನಿಧಾನಕ್ಕೆ ಗ್ರಾಮಸ್ಥರ ಪರಿಚಯ ಆಗ್ತಾ ಹೋಯ್ತು. ಅಷ್ಟೇ ಅಲ್ಲ ಆ ಊರು ನನಗೆ ತವರುಮನೆಯಂತಾಯಿತು. ಚನ್ನಪ್ಪ ಮತ್ತು ಮನೆಯವರೆಲ್ಲರ ಪರಿಚಯವೂ ಆಯ್ತು. ಆಮೇಲೆ ಆತನಿಂದ ಇನ್ನೊಂದು ಅರ್ಜಿ ಹಾಕಿಸಿದೆ. ಆದರೆ ಆ ವರ್ಷ ಬಿಡುಗಡೆಯಾದ ಹಣ ಖಾಲಿಯಾಗಿದ್ದರಿಂದ ಚನ್ನಪ್ಪನಿಗೆ ಸಾಲ ಮಂಜೂರಾಗಲಿಲ್ಲ. ಚನ್ನಪ್ಪನ ಹೆಂಡತಿ ‘ಸರ್ಕಾರದ ದುಡ್ಡು ಬ್ಯಾಡ ಬಿಡಿ ಸಾ. ಬಾಯಾಗೆ ಮಣ್ಣಾಕ’ ಎಂದು ಸರ್ಕಾರವನ್ನು ನಾನಾ ರೀತಿ ಬೈದಳು. ಗೆಲುವಿನಿಂದ ಮನೆ ತುಂಬ ಓಡಾಡುತ್ತಿದ್ದ ಆಕೆಯ ಜೀವನೋತ್ಸಾಹವೇ ಮನೆಯ ಸೌಂದರ್ಯವಾಗಿತ್ತು.

1988 ರಲ್ಲಿ ನನಗೆ ಬಳ್ಳಾರಿ ಜಿಲ್ಲೆಯ ಹಂಪಸಾಗರಕ್ಕೆ ವರ್ಗಾವಣೆಯಾಯಿತು. ಅಲ್ಲಿ 1988 ರಿಂದ 1992 ರವರೆಗೆ ಕೆಲಸ ಮಾಡಿದೆ. 1992 ರಿಂದ 1998 ರವರೆಗೆ ನೊಣವಿನಕೆರೆ ಸಮೀಪದ ತಂಡಗದಲ್ಲಿ ಕಾರ್ಯನಿರ್ವಹಿಸಿದೆ. ಈ ಅವಧಿಯಲ್ಲಿ ನಾನು ನೊಣವಿನಕೆರೆಯಲ್ಲಿಯೇ ವಾಸವಿದ್ದೆ. ವಿಶೇಷ ಅಂದರೆ 2010 ರಲ್ಲಿ ನಾನು ನೊಣವಿನಕೆರೆಗೇ ಮತ್ತೊಮ್ಮೆ ವರ್ಗವಾಗಿ ಹೋದೆ. ನಾನು ಸಹಾಯಕ ನಿರ್ದೇಶಕನಾಗಿಯೂ, ಪಶುಚಿಕಿತ್ಸಾಲಯವು ಪಶುಆಸ್ಪತ್ರೆಯಾಗಿಯೂ ಮೇಲ್ದರ್ಜೆಗೇರಿದ್ದೆವು. ಆಗ ಸಿಬ್ಬಂಧಿ ಎಲ್ಲರೂ ಹೊಸಬರಿದ್ದರು. ಹಳಬರೆಲ್ಲ ನಿವೃತ್ತಿಯಾಗಿದ್ದರು ಅಥವಾ ಸತ್ತೇಹೋಗಿದ್ದರು. ಪ್ರತಿದಿನವೂ ಬೆಳಿಗ್ಗೆ 6 ಗಂಟೆಗೆ ವಾಕಿಂಗ್ ಹೋಗುವುದು ನನ್ನ ರೂಢಿ. ಮನೆಯಿಂದ ಹೊರಟವನು ಪಕ್ಕದ ರಂಗನಹಳ್ಳಿಗೆ ಹೋಗಿ ವಾಪಸ್ ಬರುತ್ತಿದ್ದೆ. ಆರು ಕಿ.ಮೀ. ನಡಿಗೆ ಆಗುತ್ತಿತ್ತು. ಮಾರ್ಗಮಧ್ಯದಲ್ಲಿ ಸಿಗುವ ಮಠದ ಪಾಳ್ಯದಲ್ಲಿ ಯಾವುದಾದರೂ ಮನೆಯಲ್ಲಿ ತಿಂಡಿ ಕಾಫಿ ಆಗುತ್ತಿತ್ತು. ವಿಪರೀತ ಪ್ರೀತಿ ವಿಶ್ವಾಸದ ಜನ.

ಒಂದು ದಿನ ವಾಕಿಂಗ್ ಹೋಗುವಾಗ ಒಬ್ಬ ಹಣ್ಣು ಹಣ್ಣು ಮುದುಕ ಕೋಲೂರುತ್ತ ನಿಧಾನಕ್ಕೆ ರಸ್ತೆಯಲ್ಲಿ ಬರುತ್ತಿದ್ದ. ಅವನ ಬಟ್ಟೆಗಳೆಲ್ಲ ಹಳತಾಗಿ ಹರಿದು ಜೂಲು ಜೂಲಾಗಿದ್ದವು. ಕಾಲಲ್ಲಿ ಗೋಣಿದಾರದಿಂದ ಕಟ್ಟಿಕೊಂಡ ಹವಾಯಿ ಚಪ್ಪಲಿ, ಕನ್ನಡಕದ ಒಂದು ಹಿಡಿ ಮುರಿದು ಹೋಗಿದ್ದರಿಂದ ದಾರದಿಂದ ಕಿವಿಗೆ ಸುತ್ತಿಕೊಂಡಿದ್ದ. ಬಾಗಿಕೊಂಡು ನಡೆಯಲಾರದೆ ಕೋಲೂರಿ ನಡೆಯುತ್ತಿದ್ದ. ಯಾರಾದರೂ ಮುಟ್ಟಿದರೆ ಸಾಕು ಪಲ್ಟಿ ಹೊಡೆದು ಬೀಳುವಂತಿದ್ದ. ಅವನೆದುರು ನಿಂತೆ.
ಸುಮಾರು ಹೊತ್ತು ದಿಟ್ಟಿಸಿದ ನಂತರ ಆಘಾತವಾಯ್ತು. ಅವನಾರು ಗೊತ್ತೇ? ಚನ್ನಪ್ಪ. ಒಂದು ಕಾಲಕ್ಕೆ ನನ್ನನ್ನು ಭಯಭೀತನನ್ನಾಗಿ ಮಾಡಿ ಒಂದು ವಾರ ಮನೆಗೆ ಓಡಿಹೋಗುವಂತೆ ಮಾಡಿದ್ದ ಆತ ಜೀರ್ಣಾವಸ್ಥೆಯಲ್ಲಿದ್ದ. ನನ್ನ ಪರಿಚಯವನ್ನು ಪರಿಪರಿಯಾಗಿ ಹೇಳಿ ನೋಡಿದೆ. ಉಹುಂ. ಏನು ಮಾಡಿದರೂ ಅವನಿಗೆ ಗೊತ್ತಾಗಲಿಲ್ಲ. ಚನ್ನಪ್ಪ ಈ ಲೋಕದವನೆನ್ನಿಸಲಿಲ್ಲ. ಜೇಬಿನಿಂದ ನೂರು ರೂಪಾಯಿ ನೋಟು ತೆಗೆದುಕೊಟ್ಟೆ. ನಡುಗುವ ಕೈಯ್ಯಲ್ಲಿ ಇಸಿದುಕೊಂಡ. ಅವನು ಎರಡೂ ಕೈಯ್ಯಲ್ಲಿ ಮಾಡಿದ ನಮಸ್ಕಾರದಲ್ಲಿ ವಿನಯವಿತ್ತು. ಕೃತಜ್ಞತೆಯಿತ್ತು ಮತ್ತು ಅದು ನಡುಗುತ್ತಿತ್ತು. ಏನು ದುರಾದೃಷ್ಟವೋ ಏನೋ? ಕುಟುಂಬದ ಎಲ್ಲರೂ ತೀರಿಕೊಂಡು ಚನ್ನಪ್ಪ ಒಬ್ಬಂಟಿಯಾಗಿದ್ದ. ಕಣ್ತುಂಬಿಕೊಂಡು ಮುನ್ನಡೆದೆ.

2 COMMENTS

  1. ತಮ್ಮವೄತ್ತಿ ಜೀವನದ ಅನುಭವವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ಸಾರ್ ನಿಮ್ಮ ನಿರೂಪಣಾ ಶೈಲಿ ತುಂಬಾ ಕುತೂಹಲಕಾರಿಯಾಗಿದೆ ಧನ್ಯವಾದಗಳು

LEAVE A REPLY

Please enter your comment!
Please enter your name here