ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಎಲ್ಲರಿಗೂ ತಿಳಿದ ವಿಚಾರವೇ ಆಗಿದ್ದರೂ, ಸಾವಯವ ಗೊಬ್ಬರದ ಕೊರತೆ ಬಹಳಷ್ಟು ಕಂಡುಬರುತ್ತದೆ. ಸಾವಯವ ಗೊಬ್ಬರ ಕೇವಲ ಮಣ್ಣಿನ ಫಲವತ್ತತೆಗೆ ಮಾತ್ರ ಮುಖ್ಯವಲ್ಲದೇ, ಮಣ್ಣಿನ ಭೌತಿಕ ಹಾಗು ಜೈವಿಕ ಗುಣಗಳನ್ನು ಉತ್ತಮಗೊಳಿಸುವ ಮೂಲಕ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಸಾವಯವ ಗೊಬ್ಬರಗಳ ಕಡಿಮೆಬಳಕೆಯಿಂದ ಬೆಳೆಯ ಇಳುವರಿ ಹಾಗು ಗುಣಮಟ್ಟದಲ್ಲಿ ಬಹಳಷ್ಟು ಏರು ಪೇರು ಕಂಡುಬಂದಿದೆದೆ. ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿAದ ಸಾಮಾನ್ಯವಾಗಿ ಬಳಸುವ ಕೊಟ್ಟಿಗೆ/ ದನದಗೊಬ್ಬರದ ಪ್ರಮಾಣರೈತರಲ್ಲಿ ಬಹಳಷ್ಟು ಕಡಿಮೆಯಾಗಿದೆ.
ಕೊಟ್ಟಿಗೆ ಗೊಬ್ಬರದ ಕೊರತೆಗೆ ಪರ್ಯಾಯವಾಗಿ ಬೆಳೆಗೆ ಅವಶ್ಯವಿರುವ ಸಾವಯವ ಗೊಬ್ಬರವನ್ನು ಹುಡುಕುವುದು ಅವಶ್ಯವಾಗಿದೆ. ಕೊಟ್ಟಿಗೆ ಗೊಬ್ಬರಕ್ಕೆ ಸಮನಾದ ಹಸಿರೆಲೆ ಗೊಬ್ಬರವನ್ನು ಎಲ್ಲ ರೈತರು ತಮ್ಮ ಕೃಷಿ ಹಾಗೂ ಕೃಷಿಯೇತರ ಪ್ರದೇಶಗಳಲ್ಲಿ ಬೆಳೆದು ಬಳಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಉಳಿಸಿಕೊಳ್ಳಬಹುದು. ಇದಕ್ಕೆ ಲಭ್ಯವಿರುವ ಹಗೂ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ತಂತ್ರಜ್ಞಾನವನ್ನುಈ ಕಿರು ಲೇಖನದಲ್ಲಿ ಪರಿಚಯಿಸಲಾಗಿದೆ.
ಸಾಮಾನ್ಯವಾಗಿ, ದ್ವಿದಳ ಧಾನ್ಯಗಳ ಗುಂಪಿಗೆ ಸೇರಿರುವ ಎಲ್ಲ ಜಾತಿಯ ಗಿಡಗಳು ‘ಹಸಿರೆಲೆ ಗೊಬ್ಬರ’ವಾಗಿ ಬಳಸಲು ಸೂಕ್ತವಾಗಿರುತ್ತವೆ. ಕಡಿಮೆ ಸಮಯದಲ್ಲಿ ಅಂದರೆ 40-50 ದಿನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಎಲೆ ಪದಾರ್ಥಗಳನ್ನು (ಬಯೋಮಾಸ್) ಉತ್ಪಾದಿಸುವ, ವಾತವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸುವ, ಹಾಗೂ ಮಣ್ಣಿನಲ್ಲಿ ಬೇಗನೆ ಕೊಳೆಯುವಂತಹ ಸಸ್ಯಗಳು ಹಸಿರೆಲೆಗೊಬ್ಬರಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ.
ಹಸಿರೆಲೆ ಗಿಡಗಳನ್ನು ಮಣ್ಣಿಗೆ ಬೆರೆಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಧ್ಯಮ ಹಾಗೂ ಲಘು ಪೋಷಕಾಂಶಗಳನ್ನು ಸೇರಿಸಬಹುದು. ಈ ಪದ್ದತಿಯಲ್ಲಿ ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳು ಮಣ್ಣಿಗೆ ಸೇರಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಬೇಕಿರುವ ಪೋಷಕಾಂಶಗಳನ್ನು ಬೆಳೆಗಳ ತಳಿಗಳಿಗೆ ಅನುಗುಣವಾಗಿ, ಸೂಕ್ತವಾದ ರಾಸಾಯನಿಕ ಅಥವಾ ಇನ್ನಾವುದೇ ಗೊಬ್ಬರ ರೂಪದಲ್ಲಿಇಂದಿನ ಕೃಷಿಯಲ್ಲಿ ಬಳಸುವುದು ಅವಶ್ಯವಾಗಿರುತ್ತದೆ.
ಈ ಹಸಿರು ಗೊಬ್ಬರ ಗಿಡಗಳನ್ನು ಸ್ಥಳದಲ್ಲೇ ಅಥವಾ ಬೇರೆ ಪ್ರದೇಶಗಳಲ್ಲಿ ಬೆಳೆದಿರುವ/ ಬೆಳೆದು ಅವಶ್ಯವಿರುವ ಜಮೀನಿಗೆ ಸೇರಿಸಬಹುದು. ಈ ಪದ್ಧತಿಯಲ್ಲಿ ಹಸಿರು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಪದ್ಧತಿಯನ್ನು ಮುಂದೆ ತಿಳಿಸಿರುವಂತೆ ಅಳವಡಿಸಿಕೊಂಡು, ಪೋಷಕಾಂಶಗಳನ್ನು ಹಾಗು ಸಾವಯವ ವಸ್ತುಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಗಳಿಗೆ ಒದಗಿಸಿ, ಮಣ್ಣಿನ ಉತ್ಪಾದನಾ ಸಾಮರ್ಥ್ಯವನ್ನು ನಿರಂತರವಾಗಿ ಮುಂದುವರೆಸಿ ಹೆಚ್ಚಿನ ಲಾಭ ಪಡೆಯಬಹುದು.
ಹಸಿರು ಗೊಬ್ಬರ: ಜಾನುವಾರುಗಳ ಸಂಖ್ಯೆ ಅಥವಾ ಗಿಡಮರಗಳ ಸಂಖ್ಯೆ ಕಡಿಮೆ ಇದ್ದುಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರ ಹೆಚ್ಚು ಉತ್ಪಾದಿಸಲು ಸಾಧ್ಯವಿಲ್ಲದ ರೈತರಿಗೆ, ಈ ಹಸಿರು ಗೊಬ್ಬರ ಪದ್ಧತಿಯು ಹೆಚ್ಚು ಸಹಕಾರಿಯಾಗಿದೆ.
ವಾರ್ಷಿಕ ಹಸಿರೆಲೆ ಗಿಡಗಳಾದ ಡಯಂಚ, ಸನ್‌ಹೆಂಪ್, ಅಲಸಂದೆ, ತೊಗರಿ, ಸೋಯಾ ಅವರೆ, ಉದ್ದು, ಹೆಸರು, ಹುರುಳಿ,ಅವರೆ, ನೆಲಗಡಲೆ, ಕುದುರೆ ಮಸಾಲೆ ಇತ್ಯಾದಿಗಳನ್ನು ಸ್ಥಳದಲ್ಲೇ ಬೆಳೆದು ಹೂ ಬಿಡುವುದಕ್ಕೆ ಮುಂಚಿತವಾಗಿ ಉಳುಮೆ ಮಾಡಬೇಕು. ಮೃದು ಹಾಗು ಕಡಿಮೆ ನಾರು ಹೊಂದಿರುವ ಮೇಲಿನ ಗಿಡಗಳು ಬೇಗನೆ ಕೊಳೆತು ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುತ್ತವೆ.
ಈ ಪದ್ಧತಿಯನ್ನು ಬೆಳೆ ಇಲ್ಲದ ಸಮಯವಾದ ಮೊದಲ ಮುಂಗಾರು ಅಥವಾ ಕೊನೆಯ ಹಿಂಗಾರು ಕಾಲದಲ್ಲಿ ಬೆಳೆಯುವುದರಿಂದ ನಿಸರ್ಗ ವಸ್ತುಗಳಾದ ನೀರು, ಪೋಷಕಾಂಶ ಹಾಗೂ ಬೆಳಕನ್ನು ಉತ್ತಮವಾಗಿ ಬಳಸಿಕೊಳ್ಳಬಹುದು.ಇವುಗಳನ್ನು ಬೆಳೆಯಲು ಪ್ರತಿ ಎಕರೆಗೆ ಸುಮಾರು 10-15 ಕೆ.ಜಿ. ಬೀಜ ಬೇಕಾಗುತ್ತದೆ. ಮನೆಯಲ್ಲೇ ಬಳಸುವ ದ್ವಿದಳ ಧಾನ್ಯಗಳ ಬೀಜಗಳನ್ನು ಕೂಡ ಬಳಸಿ ಕಡಿಮೆ ಖರ್ಚಿನಲ್ಲಿ ಈ ಪದ್ಧತಿಯನ್ನು ಅಳವಡಿಸಬಹುದು. ಈ ಪದ್ದತಿಯಲ್ಲಿ ಕಳೆಯ ಪ್ರಮಾಣ ಕಡಿಮೆಯಾಗುವ ಮೂಲಕ ಹೆಚ್ಚಿನ ಲಾಭಗಳಿಸಬಹುದು.
ಹಸಿರೆಲೆ ಗೊಬ್ಬರ: ಖುಷ್ಕಿ ಬೇಸಾಯ ಪದ್ಧತಿಯಲ್ಲಿ ಹಸಿರು ಗೊಬ್ಬರ ಒದಗಿಸುವ ಬೆಳೆಯನ್ನು ಬೆಳೆದು ಉಪಯೋಗಿಸುವುದುಕಷ್ಟಕರ. ಪರ್ಯಾಯವಾಗಿ ಹಸಿರೆಲೆ ಒದಗಿಸುವ ಸಸ್ಯಗಳಾದ ಕಕ್ಕೆಸೊಪ್ಪು, ತಂಗಡಿ, ಯೂಪಟೋರಿಯಂ, ಗ್ಲಿರಿಸಿಡಿಯಾ, ಉಗನಿ, ಹೊಂಗೆ, ಅಂಜು, ನೀರುಸೊಪ್ಪು, ಹೊಲಿಗೆ ಸೊಪ್ಪು, ಬೇವಿನ ಸೊಪ್ಪು, ಲಾಂಟಾನ, ಎಕ್ಕ, ಸರ್ವೆ, ಮುಂತಾದ ಹಸಿರೆಲೆ ಗೊಬ್ಬರ ಗಿಡಗಳನ್ನು ಬದು ಹಾಗು ಬೇಲಿ ಅಂಚಿನಲ್ಲಿ, ಬಂಜರು ಭೂಮಿಯಲ್ಲಿ, ರಸ್ತೆ ಪಕ್ಕ ಮತ್ತು ಇತರೆ ಸ್ಥಳಗಳಲ್ಲಿ ಬೆಳೆಯಬಹುದು. ಬೆಳೆದ ಸಸ್ಯಗಳ ಸೊಪ್ಪನ್ನು ಕಟಾವು ಮಾಡಿ ಅವಶ್ಯವಿರುವ ಭೂಮಿಗೆ ತಂದು ಸೇರಿಸುವುದರಿಂದ ಬೆಳೆಗೆ ಪೋಷಕಾಂಶಗಳನ್ನು ಒದಗಿಸುವುದಲ್ಲದೆ, ಭೂಮಿಯ ಫಲವತ್ತತೆಯನ್ನುಕಾಪಾಡಿಕೊಂಡು ಬರಲು ನೆರವಾಗುತ್ತದೆ.
ವಿವಿಧ ಹಸಿರೆಲೆ ಗೊಬ್ಬರ ಗಿಡಗಳ ಉತ್ಪಾದಕತೆ ಹಾಗೂ ಅವುಗಳಲ್ಲಿನ ಮುಖ್ಯ ಪೋಷಕಾಂಶಗಳನ್ನು ಕೋಷ್ಟಕ 1 ರಲ್ಲಿ ಕೊಡಲಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 2-8 ಟನ್ ಗಳ ಎಲೆ ಪದಾರ್ಥಗಳನ್ನು ಬೆಳೆದು 8-30 ಕೆ.ಜಿ. ಸಾರಜನಕವನ್ನು, 5-20 ಕೆ.ಜಿ. ರಂಜಕವನ್ನು ಹಾಗೂ 1-30 ಕೆ.ಜಿ. ಪೊಟ್ಯಾಷ್ ಅನ್ನು ಸೇರಿಸಲು ಸಾಧ್ಯವಾಗುತ್ತದೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಕೆಳಪದರದಲ್ಲಿನ ಪೋಷಕಾಂಶಗಳನ್ನು ಈ ಗಿಡಗಳ ಮೂಲಕ ಪುನ: ಬಳಸಬಹುದಾಗಿದೆ.
ಹಸಿರು ಗೊಬ್ಬರದ ಬೆಳೆಗಳನ್ನು ಬೆಳೆದು ಸರಿಯಾದ ಸಮಯ ಮತ್ತು ತೇವಾಂಶದಲ್ಲಿ ಭೂಮಿಗೆ ಸೇರಿಸಿದಾಗ ಸಾವಯವ ಪದಾರ್ಥ ಹಾಗೂ ಕಡಿಮೆ ವೆಚ್ಚದಲ್ಲಿ ಒದಗಿಸಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲ್ಲ ಹಸಿರು ಗೊಬ್ಬರ ಸಸ್ಯಗಳು ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಾಣುಗಳ ಸಹಾಯದಿಂದ ಸಂಗ್ರಹಿಸಿ ಬೇರುಗಳಲ್ಲಿ ಸೇರಿಸುತ್ತವೆ. ಈ ರೀತಿಯಲ್ಲಿ ಕೃಷಿ ಮಣ್ಣಿಗೆ ಸಾರಜನಕವನ್ನು ಕೂಡ ಕಡಿಮೆ ಖರ್ಚಿನಲ್ಲಿ ಸೇರಿಸಬಹುದು.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯು ಮೇ-ಜೂನ್ ತಿಂಗಳಿನಲ್ಲಿ ಬರುವ ಸಾಧ್ಯತೆ ಹೆಚ್ಚು ಇರುವುದರಿಂದ, ಜುಲೈ-ಆಗಸ್ಟ್ ತಿಂಗಳಲ್ಲಿ ಬಿತ್ತನೆ / ನಾಟಿ ಮಾಡುವ ರೈತರು ಎರಡು ತಿಂಗಳಲ್ಲಿ ಬೆಳೆಯುವ ಹಸಿರೆಲೆ ಗಿಡಗಳನ್ನು ಮುಂಗಾರು ಬೆಳೆಗಿಂತ ಮುಂಚಿತವಾಗಿ ಬೆಳೆಸಬಹುದು. ಬೆಳೆ ಕಟಾವು ಮಾಡಿದ ನಂತರವೂ ಹಸಿರೆಲೆ ಬೆಳೆಯನ್ನು ಉಳಿಕೆ ತೇವಾಂಶವನ್ನು ಬಳಸಿಕೊಂಡು ಕೂಡ ಬೆಳೆಯಬಹುದು. ರೈತರು ತೆಂಗು ಮತ್ತು ಹಣ್ಣು ಬೆಳೆಗಳ ತೋಟಗಳ ಮಧ್ಯದಲ್ಲಿ ಕೂಡ ರೈತರು ಹಸಿರೆಲೆ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆದು ನೇರವಾಗಿ ಭೂಮಿಗೆಅಥವಾಕಾಂಪೋಷ್ಟ್ ಮೂಲಕ ಬಳಸಬಹುದು.
ಒಟ್ಟಿನಲ್ಲಿ, ಹಸಿರೆಲೆಗಿಡಗಳನ್ನು ಕೇವಲ ಎಲೆ ಪದಾರ್ಥಕ್ಕಾಗಿ ಮಾತ್ರ ಬೆಳೆಯುತ್ತಿದ್ದೇನೆ ಎಂದು ಮನಸ್ಸು ಮಾಡಿದಲ್ಲಿ, ರೈತರು ಹೆಚ್ಚು ಲಾಭವನ್ನು ಸುಲಭವಾಗಿ ಪಡೆಯಬಹುದು.
ಲೇಖಕರು: ಗಂಗಾಧರ. ಎಂ. ಅರ್ಕಾಚಾರಿ ಎಂ.ಎಸ್ಸಿ. (ಕೃಷಿ) ಸಸ್ಯ ರೋಗ ಶಾಸ್ತಜ್ಞ, ಸಂಯೋಜಕ ಗೋ ಕೃಷಿ ಸಂಶೋಧನಾ ಉಪಖಂಡ ಶ್ರೀರಾಮಚಂದ್ರಾಪುರ ಮಠ, ಐಶ್ವರ್ಯ ಅ ಅಂಗಡಿ, ಚಂದನಾ ಹೆಚ್.ಎಸ್ ಎಂ.ಎಸ್ಸಿ (ಕೃಷಿ) ಸಸ್ಯ ತಳಿ ಅಭಿವೃದ್ಧಿ ಮತ್ತು ಅನುವಂಶಿಕ ವಿಭಾಗ, ಭಾರತೀಯ ಕೃಷಿ ಸಂಶೋಧನಾ ಕೇಂದ್ರ ನವದೆಹಲಿ.