ಲೇಖನದ ಚಿತ್ರಗಳು: ಶಿವಶಂಕರ್ ಬಣಗಾರ್
ವಿಜಯನಗರ ಜಿಲ್ಲೆ ಅಪ್ಪಟ ಬಯಲು ಸೀಮೆ. ಆದರೂ ಅಲ್ಲಲ್ಲಿ ನೂರಾರು ಹೆಕ್ಟೇರ್ ಕಾಯ್ದಿಟ್ಟ [ಕುರುಚಲು] ಅರಣ್ಯಗಳವೂ ಇವೆ. ದುರಾದೃಷ್ಠವಶಾತ್ ಅವೆಲ್ಲ ಕಡಿದಿಟ್ಟ ಅರಣ್ಯಗಳಾಗುತ್ತಿವೆ. ಫಲವಾಗಿ ಕಾದ ಕಾವಲಿಯಂತಹ ತಾರ್ ರಸ್ತೆಗಳು, ನೆತ್ತಿ ಸುಡುವಷ್ಟು ರಣ ಬಿಸಿಲಿಗೆ ಬೆವರುತ್ತಾ, ಬಿಸಿಗಾಳಿ ಉಸಿರಾಡುತ್ತಾ, ನಿಟ್ಟುಸಿರು ಬಿಡುತ್ತಾ ಪ್ರಯಾಣಿಸಬೇಕಾದ ಕರ್ಮ ಇಲ್ಲಿಗೆ ಬರುವವರದ್ದು. ಆದರೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು-ಅಡವಿ ಆನಂದ ದೇವನಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಕಟ್ಟು, ದಟ್ಟ ಹಾಗೂ ದಷ್ಟಪುಷ್ಟವಾಗಿ ಬೆಳೆದ ಸಾಲು ಮರಗಳು ಆಕರ್ಷಿಸಿ, ಬೆರಗುಗೊಳಿಸುತ್ತವೆ.
ಈಗ ಇದ್ದ ಕಾಡನ್ನೇ ಉಳಿಸಿಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಅಡವಿ ಆನಂದ ದೇವನಹಳ್ಳಿ, ಕಡಲಬಾಳು ಮತ್ತು ಅಂಕಸಮುದ್ರ ಗ್ರಾಮಸ್ಥರು ಕಷ್ಟಪಟ್ಟು ಬರೋಬ್ಬರಿ 2000 ಬೇವಿನ ಸಸಿ ನೆಟ್ಟು, ಹಸಿರು ಕೋಟೆಯ ಕಟ್ಟಿ, ಕಿಂಚಿತ್ತೂ ಮುಕ್ಕಾಗದಂತೆ ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಜತನ ಮಾಡುತ್ತಿದ್ದಾರೆ. ಇವರೆಲ್ಲರ ಇಚ್ಛಾಶಕ್ತಿ, ನಿರಂತರ ಶ್ರಮ, ಬದ್ಧತೆ, ಪರಿಸರ ಪ್ರೀತಿ.. ಫಲದಿಂದ ಈಗ ಬರೋಬ್ಬರಿ ಆರು ಕಿ.ಮೀ ಹಾದಿ ಹಸಿರನ್ನೇ ಉಸಿರಾಡುತ್ತಿದೆ!.
ಬಿಸಿಲ ದಾರಿಯಲ್ಲಿ ‘ಹಸಿರು’ ಅರಳಿದ ಬಗೆ..
ಅದು 1997-98 ನೇ ಇಸ್ವಿ. ಜೆ.ಬಿ.ಐ.ಸಿ [ಜಪಾನ್] ಸ್ಕೀಮ್‌ನಲ್ಲಿ ಅರಣ್ಯ ಇಲಾಖೆ ರಸ್ತೆಬದಿ ನೆಡುತೋಪಿಗೆ ಈ ರಸ್ತೆಯನ್ನು ಆಯ್ಕೆ ಮಾಡಿತು. ವಿಶೇಷವಾಗಿ ಅಡವಿ ಆನಂದ ದೇವನಹಳ್ಳಿಯ ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದರು. ಇಲಾಖೆ ಈ ಮೂರು ಹಳ್ಳಿಗಳಲ್ಲಿ ಸರಣಿ ಸಭೆಗಳನ್ನು ನಡೆಸಿತು. ಫಲವಾಗಿ ಅಡವಿ ಆನಂದ ದೇವನಹಳ್ಳಿಯಲ್ಲಿ ‘ಬಸವೇಶ್ವರ ಗ್ರಾಮ ಅರಣ್ಯ ಸಮಿತಿ’ ಅಸ್ತಿತ್ವಕ್ಕೆ ಬಂದು ದಿ. ಕೆ. ಯಮುನಪ್ಪ ಕಲ್ಲಪ್ಪನವರ್ ಅಧ್ಯಕ್ಷರಾದರು. ಅವರೊಟ್ಟಿಗೆ ಗ್ರಾಮದ ಹಟ್ಟಿ ಅಡಿವೆಪ್ಪ, ದಿ. ಬೋಳಿ ಹುಲುಗಪ್ಪ, ದಿ.ಕಲ್ಲಮ್ಮನವರ ದೊಡ್ಡ ಬಸಪ್ಪ ಮುಂದಾಳತ್ವದಲ್ಲಿ ನೂರಾರು ಜನರ ಸಹಭಾಗಿತ್ವದಿಂದ ನೆಡುತೋಪಿನ ಕೆಲಸ ಭರದಿಂದ ಸಾಗಿತು.
ಉದ್ಯೋಗ ನೀಡಿತು..!
ಆಗ ಇಲ್ಲಿ ಕೃಷಿ, ಕೃಷಿ ಕಾರ್ಮಿಕರಿಗೆ ಕೆಲಸದ ಅವಶ್ಯಕತೆ ಇತ್ತು. ಮಾಲ್ವಿ ಜಲಾಶಯ ಬರಿದಾಗಿದ್ದಕ್ಕೆ ನೀರಾವರಿ ಕೃಷಿಗೆ ಕುತ್ತು ಬಂದಿತ್ತು. ಕಾಲ ಕಾಲಕ್ಕೆ ಮಳೆ ‘ಬರ’ ದಿದ್ದಕ್ಕೆ ಕಂಗಾಲದ ರೈತರು ಗುಳೆ ಹೋಗಬೇಕಿತ್ತು. ಇಂತಹ ವಿಷಮ ದಿನಗಳಲ್ಲಿ ಈ ಯೋಜನೆ ಪ್ರತಿ ದಿನ 80-100 ಜನರಿಗೆ ವರ್ಷವಿಡಿ, ಸತತ ಮೂರು ವರ್ಷ ಕೆಲಸ ಕೊಟ್ಟಿತು!.
ಫಲ ನೀಡಿದ ಹಸಿರು ಪಾಠ
‘ ಆಗಷ್ಟೆ ಒಂದಿಷ್ಟು ಜನರಲ್ಲಿ ಮರಗಿಡಗಳನ್ನು ಬೆಳೆಸುವ ಕನಸು ಟಿಸಿಲೊಡೆದಿತ್ತು. ಅಂದಿನ ಡಿ.ಎಫ್.ಓ ವಿಜಯ ಶರ್ಮ, ಹಗರಿ ಬೋಮ್ಮನಹಳ್ಳಿ ಆರ್.ಎಫ್.ಓ ಡಿ.ಎಸ್ ಮಲ್ಲಿಕಾರ್ಜುನ್, ಫಾರೆಸ್ಟರ್ ದಿ.ಅಲ್ಲಾಭಕ್ಷಿ ಸಸಿಗಳನ್ನು ಒದಗಿಸಿದರೆ, ಅಂದು ಏತ ನಿರಾವರಿ ಯೋಜನೆಯ ಅಪರೇಟರ್ ಆಗಿದ್ದ ವಿಠಲಮೂರ್ತಿ ನಮ್ಮ ಆಸಕ್ತಿಗೆ ನೀರೆರೆದು ಪೋಷಿಸಿದರು. ‘ಮನೆಗೊಂದು ಗಿಡ ಊರಿಗೊಂದು ವನ..’ ಎಂಬ ಯೋಜನೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿತು. ಈಗ ನಮ್ಮೂರು ಮರಗಾಡು ಅಗಿದೆ…’ ನೆನಪಿನ ಸುರುಳಿ ಬಿಚ್ಚಿಡುತ್ತಾರೆ ಅಡವಿ ಆನಂದ ದೇವನಹಳ್ಳಿಯ ಹಟ್ಟಿ ಅಡಿವೆಪ್ಪ. ಜನರ ಆ ಪರಿಸರ ಪ್ರೀತಿ, ಹುಮ್ಮಸ್ಸನ್ನು ಅರಣ್ಯ ಇಲಾಖೆ ಈ ರಸ್ತೆಬದಿ ನೆಡುತೋಪಿಗೂ ವಿಸ್ತರಿಸಿತು.
ಸಣ್ಣ ರೈತರ ದೊಡ್ಡ ಗುಣ..
‘ ಸ್ವಾಮಿ, ಇರೋದೇ ನಮ್ಮದು ಅರ್ಧ ಎಕರೆ. ಮೇರೆಯಲ್ಲಿ ಗಿಡ ನೆಟ್ಟರೆ ಹೊಲಕ್ಕೆ ನೆರಳಾಗಿ ಬೆಳೆ ಕೈಗೆ ಹತ್ತಲ್ಲ ಅನ್ನುತ್ತಾ ಹಚ್ಚಿದ ಗಿಡಗಳನ್ನು ಕಿತ್ತೆಸುವುದು, ಬೆಂಕಿ ಹಾಕುವುದು ಕಂಡಿದ್ದೇವೆ. ಸಸಿ ನೆಡಲು ತೀವ್ರ ಪ್ರತಿರೋಧಿಸಿದ್ದಕ್ಕೆ ಬರಿಗೈಯಲ್ಲಿ ಮರಳಿದ್ದೂ ಇದೆ. ಆದರೆ ಇಲ್ಲಿ ಮಾತ್ರ ಅತಿ ಸಣ್ಣ ಭೂ ಹಿಡುವಳಿದಾರರು ಗಿಡ ನೆಡಲಿಕ್ಕೆ ಸ್ವಯಂ ಪ್ರೇರಿತರಾಗಿ ಸಹಕರಿಸಿದರು. ಈ ಯೋಜನೆ ಸಂಪೂರ್ಣ ಯಶಸ್ಸು ಅವರಿಗೇ ಸಲ್ಲುತ್ತದೆ…’ ಹೀಗೆ ರೈತರ ತ್ಯಾಗ ಮತ್ತು ಮರಗಳ ಮೇಲಿನ ಮಮಕಾರವ ಗುಣಗಾನ ಮಾಡುತ್ತಾ ಅರಣ್ಯ ವೀಕ್ಷಕರಾಗಿದ್ದ ಕೆ.ಎಂ ಮಲ್ಲಿಕಾರ್ಜುನ ಭಾವುಕರಾದರು.
ಎಲ್ಲರೂ ಹಸಿರು ಸೇನಾನಿಗಳೇ..!
ರೈತರು, ದಾರಿಹೋಕರು, ವಿದ್ಯಾರ್ಥಿಗಳು, ಗ್ರಾಮಸ್ಥರು.. ಎಲ್ಲರೂ ಹಸಿರ ಸೇನಾನಿಗಳೇ. ಕುರಿಗಾಹಿಗಳು, ದನಕಾಯುವರು ಕೊಡಲಿ ಹಿಡಿದು ಓಡಾಡಿದರೆ ಎಚ್ಚರಿಸುತ್ತಾರೆ. ಬಗ್ಗದಿದ್ದರೆ ಅರಣ್ಯ ಸಿಬ್ಬಂದಿಗೆ ಅರೆ ಕ್ಷಣದಲ್ಲಿ ಸುದ್ದಿ ಮುಟ್ಟಿಸುತ್ತಾರೆ. ಸಿಬ್ಬಂಧಿಯೂ ಮಿಂಚಿನಂತೆ ಬಂದು ಪಾಠ ಕಲಿಸುತ್ತಾರೆ. ಈ ಕಾರಣಕ್ಕೆ ಯಾರೂ ಮರಗಿಡಗಳಿಗೆ ಕೊಡಲಿಪೆಟ್ಟು ನೀಡುವ ದುಸ್ಸಾಹಸ ಮಡುತ್ತಿಲ್ಲ. ‘ ನಮ್ಮ ಸರ್ವಿಸ್‌ನಲ್ಲಿ ಸುಮಾರು 20-25 ನೆಡು ತೋಪುಗಳಲ್ಲಿ ಕೆಲಸ ಮಾಡಿದ್ದೇವೆ. ಇಲ್ಲಿನ ಜನರ ಹಸಿರು ಪ್ರೀತಿ, ಕಾಳಜಿ ನಮ್ಮನ್ನು ಮೂಕನನ್ನಾಗಿಸಿದೆ. ಬೇರೆಡೆಯ ನೆಡು ತೋಪುಗಳಿಂದ ತೃಪ್ತಿ ಮಾತ್ರ ಸಿಕ್ಕರೆ ಇಲ್ಲಿ ಸಂತೃಪ್ತಿ ಸಿಕ್ಕಿದೆ…’ ಎಂದು ಅ‘ಮರ’ ಕತೆಯ ನಿರೂಪಿಸುತ್ತಾ ಹೋಗುತ್ತಾರೆ ಅಂದು ನೆಡುತೋಪಿನ ಸಂರಕ್ಷಣೆಯ ಹೊಣೆ ಹೊತ್ತಿದ್ದ ಕ್ಷೇಮಾಭಿವೃದ್ಧಿ ನೌಕರರಾದ ಎಸ್. ಜಿಲಾನ್ ಮತ್ತು ಕೆ.ಮಾಬುಸಾಬ್. ‘ ರೈತರೀಗ ತ್ರಿಪಟ್ಟ ಹೊಂದಿದ್ದು, ಅನುಮತಿ ಪಡೆದು ಮರಗಳನ್ನು ಕಡಿಯಬಹುದು. ಆದರೆ ಯಾರೂ ಕೊಡಲಿ ಪೆಟ್ಟು ಕೊಟ್ಟಿಲ್ಲ. ಬೇರೆಯವರೂ ಕೊಡಲು ಬಿಟ್ಟಿಲ್ಲ..’ ಎಂದರು ನಿವೃತ್ತ ಅರಣ್ಯ ರಕ್ಷಕ ಕಡಲಬಾಳು ಭಾಷಸಾಬ್.
ತೋಪು ಪ್ರೇರಣೆಯೂ ಆಯ್ತು..!
‘ನಾನು ಓದುವಾಗ್ಗೆ ಊರಿಗೆ ಫಾರೆಸ್ಟರ್‌ನವರ್ರು ಬರ್‍ತಿದ್ರು. ಮರಗಿಡಗಳ ಬೆಳೆಸುವ ಬಗ್ಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ರು. ಸಸಿಗಳನ್ನು ನೀಡಿ ಬೆಳೆಸಲಿಕ್ಕೆ ಉತ್ತೇಜಿಸುತ್ತಿದ್ರು. ಇದರಿಂದ ನಮ್ಮೂರು ಹಸಿರುಮಯ ಆಯ್ತು. ಇದು ನನ್ನ ತುಂಬಾ ಇಂಪ್ರೆಸ್ ಮಾಡಿ ನನ್ನಲ್ಲಿ ಫಾರೆಸ್ಟ್ ಆಫೀಸರ್ ಆಗಬೇಕು ಎನ್ನುವ ಕನಸನ್ನೂ ಭಿತ್ತಿತ್ತು. ಈಗ ಆಗಿದ್ದೇನೆ ಕೂಡ. ಇದಕ್ಕೆಲ್ಲ ಕಾರಣ ನಮ್ಮೂರು, ನಮ್ಮೂರಿನ ರಸ್ತೆ ಹಸಿರೀಕರಣ ಆಗಿದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ..’ ಎನ್ನುತ್ತಾರೆ ಮೂಲತಃ ಅಡವಿ ಆನಂದ ದೇವನಹಳ್ಳಿಯ ಹಾಲಿ ರಾಣೆಬೆನ್ನೂರಿನ ವಲಯ ಅರಣ್ಯಾಧಿಕಾರಿ ಕಿರಣ ಕುಮಾರ್ ಕಲ್ಲಮ್ಮನವರ್. ‘ ತಾಲ್ಲೂಕಿನ ಸಕ್ರಹಳ್ಳಿ-ಸೊನ್ನ ರಸ್ತೆ, ರಾರಾಳ ತಾಂಡ-ಹಂಪಾಪಟ್ಟಣ ರಸ್ತೆ, ನೆಲ್ಲುಕುದುರಿ-ಕೋಗಳಿ ರಸ್ತೆ… ರಸ್ತೆಬದಿ ನೆಡುತೋಪುಗಳು ಹಾಳಾಗದೇ ಹಚ್ಚಹಸಿರು ಆಗಿರುವುದಕ್ಕೆ ಈ ನೆಡುತೋಪು ಮತ್ತು ಇದನ್ನು ಉಳಿಸಿಕೊಂಡ ಜನರೇ ಪ್ರೇರಣೆ ಎನ್ನುತ್ತಾರೆ ಡಿ.ಆರ್.ಎಫ್.ಓ ಅಡವಿಹಳ್ಳಿ ಕರಿಬಸಪ್ಪ.
ಹಸಿರಿನಿಂದ ಬದುಕು ಹಸನು
ಕಾಡು ಕೃಷಿಕರು ಬಿಟ್ಟರೆ ಬಹುತೇಕ ರೈತರು ವಾಸ್ತವವಾಗಿ ಮರಗಳ ಅಪ್ಪಟ ವಿರೋಧಿಗಳೇ..! ಆದರೆ ಮರಗಳಿಂದ ದೀರ್ಘಾವಧಿ ಮತ್ತು ನಿರಂತರ ಲಾಭಗಳಿವೆ ಎಂದು ಅನ್ಯ ರೈತರಿಗೆ ನಿತ್ಯ ಸತ್ಯದರ್ಶನ ಮಾಡಿಸುತ್ತಿದೆ ಈ ನೆಡುತೋಪು!. ‘ ಮೊದಲೆಲ್ಲ ನಮ್ಮ ಹೊಲಗಳಲ್ಲಿ ನೆರಳಿಗಾಗಿ ಹಪಾಹಪಿಸುತ್ತಿದ್ದೆವು. ಈಗ ಮನೆಗಿಂತ ಹೆಚ್ಚು ಹೊತ್ತು ಹೊಲಗಳಲ್ಲೇ ಕಳೆಯುತ್ತಿದ್ದೇವೆ. ಕಾಲ ಕಾಲಕ್ಕೆ ಮಳೆ, ಬೆಳೆ ನೋಡುತ್ತಿದೇವೆ. ಅಂತರ್ಜಲ ಹೆಚ್ಚಿದೆ. ಬೋರ್‌ವೆಲ್‌ಗಳು ರಿಚಾರ್ಜ್ ಆಗಿವೆ…’ ಎನ್ನುತ್ತಾರೆ ಕೃಷಿಕ ಒಂಟೇರ್ ಬಸವರಾಜ್. ಇನ್ನು ಸೀಜನ್‌ನಲ್ಲಿ ಬೇವಿನ ಮರದ ಬೀಜಗಳನ್ನು ಸಂಗ್ರಹಿಸಿ ಹತ್ತಾರು ಕುಟುಂಬಗಳು ಬದುಕು ಕಟ್ಟಿಕೊಳ್ಳುತ್ತಿದ್ದರೆ, ನೆಲ ಸೇರಿದ ಬೀಜಗಳು ಭೂಮಿಗೆ ಕಸುವು ತುಂಬಿ ಮಣ್ಣಿನ ಫಲವತ್ತತೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತಿದೆ.
🙏The article is impressive and should be model for elsewhere in India. Congrats for the entire forest and village team for the green initiative and friendly environment. If opportunity comes, we will definitely visit. Good luck. 💐