ನಮ್ಮ ಮಲೆನಾಡಿನಲ್ಲಿ ಅಪ್ಪೆ ಕೊಡ್ಲು,ಮಾವಿನ ಹೊಳೆ,ಮಾವಿನ ಜಡ್ಡಿ ಹೀಗೆ ಮಾವಿನ ಹೆಸರಿನಿಂದ ಶುರುವಾಗುವ ಸ್ಥಳ ಎಲ್ಲೆಡೆ ಇವೆ. ಹೊಳೆ ದಂಡೆಯ ಮೇಲಿರುವ ಅಪ್ಪೆ ಮರಗಳು ಹಣ್ಣಾಗಿ ನೀರಿಗೆ ಬಿದ್ದರೆ ನೀರೆಲ್ಲ ಹುಳಿ! ಈಜಲು ಹಳ್ಳಕ್ಕೆ ಇಳಿದು ನೀರಲ್ಲಿ ಕಾಲು ಹಾಕಿದ ಹೊಸತರಲ್ಲಿ ಯಾವುದೋ ಜಲಚರವೆಂದು ಕೊಳೆತು ಮುಳುಗಿದ ಅಪ್ಪೆ ಹಣ್ಣು ಕಾಲಿಗೆ ತಾಗಿ ಹೆದರಿಸುತ್ತಿತ್ತು.
ಬೇಸಿಗೆಯಲ್ಲಿ ಹೊಳೆಗೆ ಒಂದು ಒಗ್ಗರಣೆ ಹಾಕಿದರೆ ಅಪ್ಪೇಹುಳಿ ಆಗ್ತದೆ ಎಂದು ರಾಶಿ ಹಣ್ಣು ನೋಡಿ ನಗುತ್ತಿದ್ದೆವು.
ಈಗ ಉಪ್ಪಿನ ಕಾಯಿ ಬೇಡಿಕೆ ಹೆಚ್ಚಿ ಮರದ ಟೊಂಗೆ ಕಡಿದು ಮಿಡಿ ಕೊಯ್ದ ಕಾರಣಕ್ಕೆ ಮರಗಳು ನಾಶವಾಗಿದ್ದು ತಾಜಾ ಸ್ಥಿತಿ ಒಂದೊಂದು ಮರಗಳು ನೂರಾರು ಸಾವಿರಾರು ಹಣ್ಣು ಬಿದ್ದು ಹೀಗೆ ಮಳೆ ಪ್ರವಾಹದಲ್ಲಿ ತೇಲಿ ಇನ್ನೆಲ್ಲಿಯೋ ಸಸಿಯಾಗುತ್ತವೆ. ಹೊಳೆ ದಂಡೆಗೆ ನಾವು ನುಗ್ಗಿ ಕೃಷಿ ವಿಸ್ತರಿಸಿ ಮರ ನಾಶ ಮಾಡಿದ್ದೇವೆ. ಹೀಗಾಗಿ ನೈಸರ್ಗಿಕ ಬೀಜ ಪ್ರಸರಣ ಕಡಿಮೆ ಆಗಿದೆ. ಇಲ್ಲಿ ಬಿದ್ದ ಪ್ರತಿಯೊಂದು ಗಿಡವಾಗಿ ಬೆಳೆದರೆ ಭಿನ್ನ ಭಿನ್ನ ತಳಿ ಅಭಿವೃದ್ಧಿ!
ಇಂದು ಅರಣ್ಯ ನರ್ಸರಿಗಳಲ್ಲಿ ಮಾವಿನ ಸಸಿ ಬೆಳೆಸಲಾಗುತ್ತಿದೆ.ಆದರೆ ದೊಡ್ಡ ಪ್ರಮಾಣದಲ್ಲಿ ಒರಟೆ ಬೇಕೆಂದು ಜ್ಯೂಸ್ ಅಂಗಡಿ, ಫ್ಯಾಕ್ಟರಿ ಮೂಲಕ ಅವರು ತರಿಸುವರು. ಅವು ಬಹುತೇಕ ಸಿಹಿ ಮಾವು, ಹೀಗಾಗಿ ಹುಳಿ ಅಪ್ಪೆ ಅಪ್ಪಟ ಬಳಕೆದಾರರ ಮಧ್ಯೆ ಅನಾಥವಾಗಿದೆ.
ಈಗ ನಾವು ಒಂದು ಕೆಲಸ ಮಾಡಬಹುದು. ಜೀರಿಗೆ, ಅಪ್ಪೆ ಮರಗಳ ಕೆಳಗಡೆ ಹಣ್ಣು ಹೆಕ್ಕಿ. ಬೆಟ್ಟ,ಕಾಡು ಪ್ರದೇಶಗಳಲ್ಲಿ ಎಸೆಯಬಹುದು.ನೂರಕ್ಕೆ ಹತ್ತು ಮರವಾದರೂ ಈ ಭೂಮಿ ನಮ್ಮನ್ನು ನೆನಪಿಡುತ್ತದೆ.ಉಪ್ಪಿನ ಕಾಯಿ ಚಪ್ಪರಿಸಿ ತಿಂದದ್ದಕ್ಕೆ ಋಣ ತೀರಿಸುವ ಕಾರ್ಯವಾಗುತ್ತದೆ ಅಲ್ಲವೇ? ನಾನು ಕೆಲವು ವರ್ಷಗಳಿಂದ ಈ ಕಾರ್ಯ ಮಾಡ್ತಾ ಇದ್ದೇನೆ. ಹೀಗಾಗಿ ನಮ್ಮ ಸೊಪ್ಪಿನ ಬೆಟ್ಟದಲ್ಲಿ ಹಲವು ಬೆಳೆದು ಇನ್ನೇನು ಫಲ ಕೊಡುವ ಹಂತ ತಲುಪಿವೆ.