ಕತ್ತೆ ಹಾಲು ಅಮೃತಕ್ಕೆ ಸಮಾನ. ಇದನ್ನು ಕುಡಿದರೆ ಅನೇಕ ರೋಗಗಳು ಮಾಯ ಎಂಬಿತ್ಯಾದಿ ಪ್ರತೀತಿಗಳಿವೆ. ಇದನ್ನು ಒಂದು ವಾಣಿಜ್ಯ ಮಾರುಕಟ್ಟೆಯ ರೀತಿಯಲ್ಲಿ ಪರಿವರ್ತಿಸುವ ಬಗ್ಗೆ ಒಂದಿಷ್ಟು ಜನ ಚಿಂತನೆಯನ್ನೂ ಸಹ ನಡೆಸಿದ್ದಾರೆ. ಕೆಲವೊಂದು ಮಾಧ್ಯಮಗಳಂತೂ ಕತ್ತೆ ಹಾಲನ್ನು ಸರ್ವಶ್ರೇಷ್ಟ ಪ್ರಾಣಿಜನ್ಯ ವಸ್ತು ಎಂದು ವೈಭವೀಕರಿಸಿ ಅನೇಕ ಲೇಖನಗಳನ್ನು ಪ್ರಕಟಿಸುತ್ತಿವೆ.
ರಕ್ತದೊತ್ತಡ, ಮಧುಮೇಹ, ಅರ್ಭುಧ, ಮೂಲವ್ಯಾಧಿ, ಮೂತ್ರಕೋಶದ ಕಲ್ಲು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಂಜೀವಿನಿ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಇದೊಂದು ಅವೈಜ್ಞಾನಿಕ ವೈಭವೀಕರಣ ಅಷ್ಟೇ. ಜನ ನಂಬುತ್ತಾರೆ ಎಂದು ಗೋಮೂತ್ರ, ದೇಶಿ ಆಕಳ ಹಾಲು ಭಾರಿ ಔಷಧಿ, ಅನೇಕ ಕಾಯಿಲೆಗಳಿಗೆ ರಾಮಬಾಣ ಎಂದು ನಂಬಿಸಲಾಗಿತ್ತೋ ಹಾಗೇಯೇ ಇದೂ ಒಂದು ಅರ್ಧ ಮರ್ಧ ಅಧ್ಯಯನದ ಸುಳ್ಳು ಸುದ್ಧಿ.
ವೈಜ್ಞಾನಿಕ ಅಂಕಿ ಅಂಶಗಳನ್ನು ಗಮನಿಸಿದರೆ ಖಚಿತವಾಗುವ ವಿಷಯವೆಂದರೆ ಮನುಷ್ಯರ ಹಾಲಿಗೆ ಸಮನಾಗಿ ಕತ್ತೆ ಹಾಲು ನಿಲ್ಲಬಲ್ಲದು ಅಷ್ಟೆ. ಇದೊಂದು ಸಸ್ತನಿ ಪ್ರಾಣಿಯ ಹಾಲು. ಅಸಲಿಗೆ ಇದರಲ್ಲಿ ಹೇಳಿಕೊಳ್ಳುವಂತ ಔಷಧಿಯ ಗುಣವೇ ಇಲ್ಲ. ಚಿಕ್ಕ ಮಕ್ಕಳಿಗೆ ತಾಯಿಯ ಎದೆಹಾಲು ಸಿಗದ ಸಂದರ್ಭಗಳು ಅನೇಕ. ಆಗ ಕತ್ತೆ ಹಾಲು ಕುಡಿಸಬಹುದು.
ಕರುಳು ಸಂಬ0ಧಿ ಕಾಯಿಲೆಗಳಿಗೆ, ಶ್ವಾಸಕೋಶದ ತೊಂದರೆಗಳಿಗೆ, ಪಿತ್ತಜನಕಾಂಗದ ತೊಂದರೆಗಳಿಗೆ ಕತ್ತೆ ಹಾಲನ್ನು ಬಳಸಬಹುದು ಎಂಬ ಪ್ರತೀತಿಗಳಿದ್ದು ಈ ಕುರಿತು ವೈಜ್ಞಾನಿಕ ಅಧ್ಯಯನದ ಅವಶ್ಯಕತೆ ಇದೆ. ಆಕಳ ಹಾಲನ್ನು ಕುಡಿದಾಗ ಅಲರ್ಜಿಯಾಗುವ ಜನರ ಒಂದು ದೊಡ್ಡ ಸಮೂಹವೇ ಇದೆ. ಅವರಿಗೆ ಕತ್ತೆ ಹಾಲು ಪರ್ಯಾಯವಾಗಬಹುದು ಅಷ್ಟೆ.
ಸಾಮಾನ್ಯವಾಗಿ ಕತ್ತೆಗಳು 7-8 ತಿಂಗಳು ಮಾತ್ರ ಹಾಲು ಕೊಡುತ್ತವೆ. ಅದೂ ಒಂದೊಂದು ಕತ್ತೆ 250 ಎಂಎಲ್ ನಷ್ಟು ಮಾತ್ರ ಹಾಲು ನೀಡುತ್ತದೆ. ಆ ಸಮಯ ಮುಗಿಯಿತು ಎಂದರೆ ಕೆಲವೊಮ್ಮೆ 2-3 ವರ್ಷ ಕಾಯಬೇಕು. ಮತ್ತೆ ಮರಿ ಹಾಕಿದ ಬಳಿಕವಷ್ಟೇ ಕತ್ತೆ ಹಾಲು ಕೊಡುತ್ತದೆ.
ಕತ್ತೆಯ ಹಾಲು ಇತರ ಪ್ರಾಣಿಗಳ ಹಾಲಿಗಿಂತ ಸ್ವಲ್ಪ ಭಿನ್ನ. ಇದು ಕಡಿಮೆ ಕೊಬ್ಬು, ಹೆಚ್ಚಿನ ಖನಿಜಾಂಶ ಹೊಂದಿದೆ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಕತ್ತೆಹಾಲಿನಲ್ಲಿನ ಪೌಷ್ಟಿಕಾಂಶಗಳು ಮನುಷ್ಯರ ಹಾಲಿನ ಪೌಷ್ಟಿಕಾಂಶಗಳಿಗೆ ಸಮ. ಆಕಳ ಹಾಲಿಗೆ ಹೋಲಿಸಿದರೆ ಹೆಚ್ಚಿನ ಪ್ರೊಟೀನ್ ಮತ್ತು ಅವಶ್ಯಕ ಅಮೈನೋ ಆಮ್ಲಗಳು ಇದರಲ್ಲಿ ಇವೆ.
ಕತ್ತೆಯ ಹಾಲಿನಲ್ಲಿ ಶೇ ಒಟ್ಟು ಘನ ಪದಾರ್ಥಗಳು 8.8-11.7 (ಆಕಳ ಹಾಲು 12.5-13), ಕೊಬ್ಬಿನಂಶ 0.3-1.8 (ಆಕಳ ಹಾಲು 3.5-3.9), ಲ್ಯಾಕ್ಟೋಸ್ 5.8-7.4(ಆಕಳ ಹಾಲು 4.4-4.9), ಪ್ರೊಟೀನ್ 1.5-1.8 (ಆಕಳ ಹಾಲು 3.5-3.😎, ಕೇಸಿನ್ 0.64-1.03 (ಆಕಳ ಹಾಲು 2.46-2.😎, ಆಮ್ಲ/ಕ್ಷಾರತೆ 7.0-7.2 (ಆಕಳ ಹಾಲು 6.6-6.😎 ಇರುತ್ತದೆ. ಕಾರಣ ಕೊಬ್ಬಿನಂಶ,ಪ್ರೊಟೀನ್, ಕೇಸಿನ್ ಇವು ಕತ್ತೆಯ ಹಾಲಿನಲ್ಲಿ ಗಣನೀಯವಾಗಿ ಕಡಿಮೆ ಇರುತ್ತವೆ.
ಕತ್ತೆಗಳು ಎಂದೂ ಲೀಟರ್ ಗಟ್ಟಲೆ ಹಾಲು ಕೊಡಲ್ಲ. ಒಂದೊAದು ಕತ್ತೆ ಕೇವಲ 250 ಎಂಎಲ್ನಷ್ಟು ಮಾತ್ರ ಹಾಲು ಕೊಡುತ್ತದೆ. ಇದರಲ್ಲಿ ಔಷಧಿ ಗುಣಗಳು ಸಾಕಷ್ಟಿವೆ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕತ್ತೆ ಹಾಲನ್ನು ಖರೀದಿಸುತ್ತಾರೆ. ಇದೀಗ ನಗರ ಪ್ರದೇಶದಲ್ಲಿಯೂ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆಂಧ್ರಪ್ರದೇಶದಲ್ಲಿಯಂತೂ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ.
ಒಂದು ಲೀಟರ್ ಕತ್ತೆ ಹಾಲಿನ ಬೆಲೆ ಸುಮಾರು ರೂ.5000ಕ್ಕೆ ಮಾರಾಟ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ಕತ್ತೆ ಹಾಲನ್ನು ಆಕಳ ಹಾಲಂತೆ ಪ್ಯಾಕೆಟ್ ಮಾಡಿ ಮಾರುವ ಯೋಚನೆಯೂ ಇದೆಯಂತೆ..ಅದುದರಿ0ದ ಕತ್ತೆ ಸಾಕುವುದೇ ಉತ್ತಮವೇನೋ ಅನಿಸಬಹುದು.
ಅನೇಕ ದೇಶಗಳಲ್ಲಿ ಕತ್ತೆ ಹಾಲನ್ನು ಐಸ್ ಕ್ರೀಮ್, ತುಪ್ಪ, ಬೆಣ್ಣೆ ಇತ್ಯಾದಿ ರೂಪದಲ್ಲಿಯೂ ಮಾರುತ್ತಾರೆ.
ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ವಡ್ಡಿರಾಜುಲ ಸಮುದಾಯಕ್ಕೆ ಸೇರಿದವರು ಅಮರಾವತಿ ಸುತ್ತಮುತ್ತ ಗ್ರಾಮಗಳಲ್ಲಿ ಸುತ್ತುತ್ತಾ 50 ಮಿಲಿ ಲೀಟರ್ ಹಾಲನ್ನು ರೂ.50ಕ್ಕೆ ಮಾರುತ್ತಿದ್ದಾರೆ. ಕತ್ತೆಗಳನ್ನು ತಮ್ಮ ಜತೆ ಕರೆದೊಯ್ದು ಸ್ಥಳದಲ್ಲೇ ಹಾಲನ್ನು ಕರೆದು ಕೊಡುತ್ತಿದ್ದಾರೆ. ಸುಮಾರು 40 ಕತ್ತೆಗಳನ್ನು ಅಮರಾವತಿ ಹೊರವಲಯದಲ್ಲಿ ಬಿಟ್ಟು ಮುಂಜಾನೆ ಗ್ರಾಮಗಳಲ್ಲಿ ಕರೆದೊಯ್ಯುತ್ತಾರೆ.
ಕತ್ತೆಯ ಹಾಲಿನಲ್ಲಿ ಉತ್ತಮ ಪೋಷಕಾಂಶಗಳಿರುವುದು ನಿಜವಾದರೂ ಕೇವಲ ಒಂದು ದಿನ ಕತ್ತೆ ಹಾಲು ಕುಡಿದು ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವುದು ಅತಿರಂಜಿತ ಮತ್ತು ವಿಜ್ಞಾನದ ಬೆಂಬಲವಿರದ ಮಾತು. ಇದೆಲ್ಲಾ ಗೊತ್ತಿದ್ದೂ ಸಹ ಬಡ ಕತ್ತೆ ಸಾಕಣೆ ಮಾಡುವಂತವರು ಮಾರಿಕೊಳ್ಳಲಿ ಎಂದು ಕೆಲವರು ಸುಮ್ಮನಿರುತ್ತಾರೆ. ಆದರೆ ಕತ್ತೆ ಹಾಲನ್ನೇ ಉಧ್ಯಮವಾಗಿ ಮಾಡಿಕೊಂಡು ಕತ್ತೆಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿ ಕತ್ತೆ ಫಾರಂ ಸ್ಥಾಪಿಸಿ ನಂತರ ಮಾರುಕಟ್ಟೆಯಿಲ್ಲದೇ ಒದ್ದಾಡಬಾರದೆಂಬುದು ಸದಿಚ್ಚೆ.
ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆ ನಡೆಯುವುದು ಅವಶ್ಯವಾದರೂ ಸಹ ಮುಂಜಾನೆಯ “ಕತ್ತೆ ಹಾಲಮ್ಮ.. ಕತ್ತೆ ಹಾಲು” ಎಂಬ ಉದ್ಘೋಷ ಕೇಳುತ್ತಲೇ ಇರುತ್ತದೆ. ಪಾಪ.. ಬಡವರು ಕತ್ತೆ ಹಾಲು ಮಾರಿಕೊಂಡು ಒಂದೆರಡು ಕಾಸು ಗಳಿಸಲಿ ಅಲ್ಲವೇ!!? ಹಾಗೆಂದು ಇದೊಂದನ್ನು ಉಧ್ಯಮವೆಂದು ಮಾಡಬಯಸುವವರು ಮಾರುಕಟ್ಟೆಯನ್ನು ಸರಿಯಾಗಿ ಅವಲೋಕಿಸಿಕೊಳ್ಳಿ !!
ಲೇಖಕರು: ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತç ಮತ್ತು ವಿಷಶಾಸ್ತç ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204