ಲೇಖಕರು: ಶ್ರೀನಿವಾಸಮೂರ್ತಿ, ಕೃಷಿಕರು, ಶೃಂಗೇರಿ

ಭತ್ತದ ಗದ್ದೆಗಳಲ್ಲಿ ಇಲಿಗಳ ಹಾವಳಿ ವಿಪರೀತವಾಗಿದೆ. ಇವುಗಳು ಕೊಯ್ಲಿಗೆ ಸಿದ್ದವಾದ ಪೈರುಗಳನ್ನು ನಾಜೂಕಾಗಿ ಕತ್ತರಿಸಿ ಬಿಲಗಳ ಒಳಗೆ ಒತ್ತರಿಸಿ ಇಟ್ಟುಕೊಳ್ಳುತ್ತವೆ. ಒಂದೊ ಎರಡೋ ಇಲಿ ಆದರೆ ನಷ್ಟ ನಗಣ್ಯ ಎನ್ನಬಹುದು. ಆದರೆ ಒಂದು ಸೀಮಿತ ಪ್ರದೇಶದಲ್ಲಿ ಇವುಗಳ ಸಂಖ್ಯೆ ನೂರಾರು, ಸಾವಿರಾರು ಆದರೆ ಭತ್ತದ ಬೆಳೆಗಾರರು ಬದುಕುವುದಾದರೂ ಹೇಗೆ ? ಮೊದಲು ಕೆರೆಹಾವುಗಳು ಹೆಚ್ಚಾಗಿದ್ದವು. ಇವುಗಳು ಇಲಿಗಳನ್ನು ನಿಯಂತ್ರಿಸುತ್ತಿದ್ದವು. ಆದರೆ ಇತ್ತೀಚಿನ 20 ವರ್ಷಗಳಲ್ಲಿ ಇವುಗಳು ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆಯಾಗಿವೆ. ಇದರಿಂದ ಬೆಳೆನಷ್ಟವೂ ಹೆಚ್ಚುತ್ತಿದೆ. ಇಂಥ ಸಮಸ್ಯೆ ಬಗ್ಗೆ ಮಲೆನಾಡಿನ ಕೃಷಿಕರಾದ ಶ್ರೀನಿವಾಸಮೂರ್ತಿ ಅವರು ಮಾಡಿರುವ ವಿಶ್ಲೇಷಣೆ ನಿಮ್ಮ ಮುಂದಿದೆ
– ಪ್ರಧಾನ ಸಂಪಾದಕರು
“ಈ ಕ್ಯಾರಿಹಾಂವ್ ಎಲ್ಲ ಎಲ್ಲೋದ್ವು ಮಾರ್ರೇ? ಒಂದೂ ಕಾಣೂಕಿಲ್ಲಾ ” ಎಂದರು ನೆರಮನೆಯವರೊಬ್ಬರು. ಯೋಚಿಸಹತ್ತಿದೆ. ಹೌದು, ಇತ್ತೀಚೆಗೆ ಇಲಿ ಹೆಗ್ಗಣಗಳ ಕಾಟ ವಿಪರೀತ ಆಗಿದೆ. ಕಾಡು ಹೆಗ್ಗಣಗಳು ಬಂದು ಹುಲ್ಲು ಬಣವೆಯಲ್ಲಿ ಗೂಡು ಹಾಕುತ್ತಿವೆ. ಹುಲ್ಲು ಪಿಂಡಿಗಳನ್ನೆಲ್ಲಾ ಕತ್ತರಿಸಿ ಹಾಕಿವೆ. ಅವನ್ನೆಲ್ಲ ಹಿಡಿದು, ತಿಂದು ಹತೋಟಿ ಮಾಡುತ್ತಿದ್ದ ಕೇರೆ ಹಾವುಗಳು ಕಾಣೆಯಾಗಿವೆ.
ಮನೆಯ ಸುತ್ತ ಮುತ್ತ, ಗದ್ದೆ ತೋಟಗಳಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಿರುಪದ್ರವಿ, ವಿಷರಹಿತ ರೈತಮಿತ್ರ ಹಾವುಗಳು ಈಗ ಕಾಣೆಯಾಗಿದ್ದಾದರೂ ಹೇಗೆ!? ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ನಡೆಯುತ್ತಿರುವ ಎರಡು ವಿದ್ಯಮಾನಗಳು ಇಲ್ಲಿ ಗಮನಾರ್ಹ.ಅವೆಂದರೆ ಅಧಿಕವಾಗುತ್ತಿರುವ ಕಾಳಿಂಗಗಳ ಸಂತತಿ. ಹಾಗೂ ರಸ್ತೆಗಳ ಅಗಲೀಕರಣ.
ಕಾಳಿಂಗ ಸರ್ಪಗಳು ಹಿಂದಿನಿಂದಲೂ ಇದ್ದವು. ಆದರೆ ಅಪರೂಪಕ್ಕೊಮ್ಮೆ ತೋಟದಲ್ಲೋ ಕಾಡಿನಲ್ಲೋ ಕಾಣಿಸಿಕೊಳ್ಳುತ್ತಿದ್ದ ಅವು ಹತ್ತಾರು ಚದರ ಕಿಲೋಮೀಟರ್ ವ್ಯಾಪ್ತಿಯ ವಲಯದಲ್ಲಿ ಒಂದರಂತೆ ಓಡಾಡಿಕೊಂಡು ಬದುಕುತ್ತಿದ್ದವು. ಇತ್ತೀಚೆಗೆ ಅವುಗಳ ಸಂಖ್ಯೆ ಅಸಹಜವಾಗಿ ವೃದ್ಧಿಸಿ ವಲಯಗಳೂ ಇಬ್ಭಾಗವಾಗಿ ಕಿರಿದಾಗತೊಡಗಿದವು. ಅವುಗಳ ಆಹಾರ ಕ್ರಮದಲ್ಲಿ ಪ್ರಥಮ ಆದ್ಯತೆಯಾದ ಕೇರೆ ಹಾವುಗಳು ಬಲಿಯಾಗತೊಡಗಿದವು.
ಅತ್ತ ಶೃಂಗೇರಿ ಪಟ್ಟಣ ಬೆಳೆಯತೊಡಗಿದಂತೆ ಅದರ ಹೊರವಲಯದಲ್ಲಿ ಕಾಣಿಸಿಕೊಂಡ ಕಾಳಿಂಗಗಳನ್ನು ಹಿಡಿದು ತಂದು ಒಂದಿಷ್ಟು ಕಾಡು ಉಳಿಸಿಕೊಂಡಿದ್ದ ನಮ್ಮ ಗ್ರಾಮಕ್ಕೆ ಬಿಡಲಾಯಿತು. ಮೂರು ವರ್ಷಗಳ ಹಿಂದೆ ನಮ್ಮ ಗ್ರಾಮದ ಕಾಡಿನಲ್ಲಿ ಹಾಯ್ದುಹೋದ ಘಾಟಿ ರಸ್ತೆಯ ತಿರುವುಗಳನ್ನು ತಿದ್ದಿ ಅಗಲಗೊಳಿಸಲಾಯಿತು.ರಸ್ತೆ ಒಂದಿಷ್ಟು ನೇರವೂ ವಿಶಾಲವೂ ಆದಮೇಮೆ ಮೇಲೆ ವಾಹನಗಳೂ ವೇಗ ಹೆಚ್ಚಿಸಿಕೊಂಡವು. ಅಗಲವಾದ ಹಾಗೂ ನುಣುಪಾದ ರಸ್ತೆಯನ್ನು ತೆವಳಿ ದಾಟುವ ಭರದಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುವ ಜೀವಿಗಳಲ್ಲಿ ಕೇರೆ ಹಾವುಗಳೇ ಸಂಖ್ಯೆಯೇ ಅಧಿಕ . ಪ್ರತಿ ವರ್ಷವೂ ಪ್ರವಾಸಿ ವಾಹನಗಳ ಓಡಾಟ ಹೆಚ್ಚುತ್ತಲೇ ಇದೆ.


ಒಟ್ಟಾರೆ ಈ ಪೇಟೆ ಪಟ್ಟಣ ರಸ್ತೆ ಹೆದ್ದಾರಿ ವಿಸ್ತರಣೆ, ಸಂಶೋಧನೆ, ಪ್ರವಾಸ, ಮೋಜು ಮಸ್ತಿ ಮುಂತಾದ ಅಭಿವೃದ್ಧಿ ಎನ್ನಲಾಗುವ ಮಿತಿಮೀರಿದ ನಾಗರಿಕ ಚಟುವಟಿಕೆಗಳು ನಿಸರ್ಗದ ಸಮತೋಲನಗಳನ್ನು ಬುಡಮೇಲು ಮಾಡುತ್ತಿವೆ. ಅದರ ದುಷ್ಪರಿಣಾಮಗಳನ್ನು ಗ್ರಾಮಸ್ಥ ರೈತರು ಎದುರಿಸಬೇಕಾಗಿದೆ.
“ನವಿಲುಗಳು, ಕಾಳಿಂಗ ಸರ್ಪಗಳ ಸಂಖ್ಯೆ ಹೆಚ್ಚಾಗಿವೆ. ಕೇರೆಹಾವು ಕಣ್ಮರೆಯಾಗಿವೆ. ಇದರ ಫಲವಾಗಿ ಗುಡ್ಡದ ಇಲಿಗಳು ವಿಪರೀತವಾಗಿ ಭತ್ತದ ಗದ್ದೆಗಳು ನಾಶವಾಗುತ್ತಿವೆ” ಎಂದು ಮಲೆನಾಡು ಭಾಗದ ಪರಿಚಿತ ಕೃಷಿಕರು ತಮ್ಮ ಅಭಿಪ್ರಾಯ ಹೇಳುತ್ತಿರುತ್ತಾರೆ. ಇನ್ನೂ ಕೆಲವರು” ನವಿಲುಗಳ ಸಂಖ್ಯೆಯೇ ತೀರಾ ಹೆಚ್ಚಿದೆ, ಇದರಿಂದಾಗಿಯೇ ಕೇರೆಹಾವುಗಳ ಸಂಖ್ಯೆ ಕಡಿಮೆಯಾಗಿರಬಹುದು” ಎನ್ನುತ್ತಾರೆ.
“ಮಲೆನಾಡಿನ ಬಹುತೇಕ ದಟ್ಟಾರಣ್ಯಗಳು ಮುಳುಗಡೆಯಾಗಿರುವ ಕಾರಣ ಕಾಳಿಂಗಗಳ ಸಹಜ ವಾಸಸ್ಥಳ ಕೊರತೆಯಾಗಿ ಅವು ಜನವಸತಿ ಪ್ರದೇಶಗಳತ್ತ ವಲಸೆ ಬಂದವು. ನಂತರ ಸಂತತಿ ವೃದ್ದಿಸಿತು. ಈ ಅಸಮತೋಲನ ಸೃಷ್ಟಿಸಿದವರು ನಾವುಗಳೇ ಅಲ್ಲವೆ? ಜೀವ ವೈವಿದ್ಯತೆಗೆ ಕುತ್ತು ತಂದಲ್ಲಿ ಆಗುವ ಅಸಮತೋಲನದ ಒಂದು ನೈಜ ಉದಾಹರಣೆ ಇದು” ಎಂದು ಕೆಲವರು ಹೇಳುತ್ತಾರೆ. ಇವೆಲ್ಲವೂ ನಿಜ. ನಿಸರ್ಗದಲ್ಲಿ ಮನುಷ್ಯರ ಅನಗತ್ಯ ಹಸ್ತಕ್ಷೇಪದಿಂದಾಗಿ ಜೀವವೈವಿಧ್ಯ, ಜೈವಿಕ ಸಮತೋಲನ ಹಾಳಾಗಿದೆ. ಇವೆಲ್ಲದರ ನೇರ ಪರಿಣಾಮ ಕೃಷಿಯ ಮೇಲೆ ಉಂಟಾಗುತ್ತಿದೆ. ಕೃಷಿಕರ ಸಂಕಟಗಳು ಹೆಚ್ಚಾಗುತ್ತಲೇ ಇವೆ. ಆದರೆ ಶಾಶ್ವತ ಪರಿಹಾರಗಳು ಮರಿಚೀಕೆಯೇನೊ ಎನಿಸುತ್ತಿದೆ. ಇದಕ್ಕೆ ಪರಿಹಾರ ನಿಸರ್ಗದಿಂದಲೇ ದೊರಕಬೇಕು. ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದಿದ್ದರೆ ಅದೇ ಪರಿಹಾರವನ್ನು ಒದಗಿಸಿಕೊಡುತ್ತದೆ ಎಂದನಿಸಿದೆ.

LEAVE A REPLY

Please enter your comment!
Please enter your name here