ಏನಿದು ಗೋವು ಅಪ್ಪುಗೆ ಚಿಕಿತ್ಸೆ?

0
ಲೇಖಕರು: ಡಾ. ಶ್ರೀಧರ್ ಎನ್.ಬಿ. ಹಿರಿಯ ಪಶುವೈದ್ಯರು

ಆಶ್ಚರ್ಯವಾಯಿತೇ? ಗೋವುಗಳನ್ನು ಅಪ್ಪಿಕೊಂಡು ಮುದ್ದಾಡಿದರೆ ರೋಗ ಕಡಿಮೆಯಾಗುತ್ತದೆಯೇ? ಎಂದೆಲ್ಲಾ ಪ್ರಶ್ನೆಗಳು ಮೂಡಿರಬಹುದು. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಮತ್ತು ಪ್ರಪಂಚದಾದ್ಯ೦ತದ ಅನೇಕ ದೇಶಗಳ ಸಂಸ್ಕೃತಿಗಳಲ್ಲಿ, ಪ್ರಾಣಿಗಳು ಮಾನವನ ಉಳಿವು, ಆರೋಗ್ಯ ಮತ್ತು ಚಿಕಿತ್ಸೆಯಲ್ಲಿ ಅವಿನಾಭಾವ ಪಾಲುದಾರರಾಗಿಬಿಟ್ಟಿವೆ. ಅನೇಕಾನೇಕ ಕಾಯಿಲೆಗಳು ಪ್ರತ್ಯಕ್ಷವಾದಂತೆ ಅವುಗಳಿಗೂ ಅನೇಕಾನೇಕ ಚಿಕಿತ್ಸೆಗಳೂ ಸಹ ಹುಟ್ಟಿಕೊಂಡವು. ಆದರೆ ಎಲ್ಲವಕ್ಕೂ ಶೇ 100 ರಷ್ಟು ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಕಾರಣ ಇವೆಲ್ಲವುಗಳಿಗೆಲ್ಲಾ ಬದಲೀ ಚಿಕಿತ್ಸೆಗಳನ್ನು ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಈ “ಗೋ ಅಪುö್ಪಗೆ” ಅಥವಾ “ಗೋ ಆಲಿಂಘನ” ಚಿಕಿತ್ಸೆ.

ಆಂಗ್ಲ ಭಾಷೆಯಲ್ಲಿ “ಕೌ ಕಡ್ಲಿಂಗ್” ಎನ್ನುವ ಶಬ್ಧವನ್ನು ““ಗೋಅಪ್ಪುಗೆ” ಅಥವಾ “ಗೋ ಆಲಿಂಘನ’ ಅಥವಾ “ಹಸು ಮುದ್ದಾಡುವುದು’ ಎಂಬ ಈ ಚಿಕಿತ್ಸಾ ಕಲ್ಪನೆಯನ್ನು “ಗೋಚಿಕಿತ್ಸೆ” ಎಂದು ಸಹ ಕರೆಯಬಹುದು. ಗೋವಿನ ಸನಿಹದಲ್ಲೇ ಒಂದಿಷ್ಟು ದಿನ ಇದ್ದು ಉದ್ವೇಗ, ಖಿನ್ನತೆ ಇತ್ಯಾದಿ ನರಮಾನಸಿಕ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳುವ ಚಿಕಿತ್ಸೆಯಾಗಿದೆ.

ಇತ್ತೀಚೆಗೆ ಮಾನಸಿಕ ತಜ್ಞರು ಸಹ ಉಲ್ಲೇಖಿಸುವಷ್ಟರ ಮಟ್ಟಿಗೆ ಮುಖ್ಯವಾಹಿನಿಗೆ ಬಂದಿದೆ. ನೆದರ್‌ಲ್ಯಾಂಡ್ಸ್ನ ಗ್ರಾಮೀಣ ಪಟ್ಟಣವಾದ ರೆಯುವರ್‌ನಲ್ಲಿ ಹುಟ್ಟಿಕೊಂಡ ಈ ಹೊಸ ಅಭ್ಯಾಸವು ಡಚ್‌ನಲ್ಲಿ “ಹಸು ತಬ್ಬಿಕೊಳ್ಳುವುದು” ಎಂದರ್ಥ “ಕೋ ಕ್ನಫ್ಲೆನ್”, ಇದು ಉತ್ತಮ ಮಾನವ-ಪ್ರಾಣಿಗಳ ನುಂಗುವಿಕೆಯ ಅಂತರ್ಗತ ಗುಣಪಡಿಸುವ ಗುಣಲಕ್ಷಣಗಳ ಮೇಲೆ ಕೇಂದ್ರೀಕೃತವಾಗಿದೆ. ಹಸುವಿನ ಬೆಚ್ಚನೆಯ ದೇಹದ ಉಷ್ಣತೆ, ನಿಧಾನಗತಿಯ ಹೃದಯ ಬಡಿತ ಮತ್ತು ದೊಡ್ಡ ಗಾತ್ರವು ಅವುಗಳನ್ನು ತಬ್ಬಿಕೊಂಡಾಗ ನಂಬಲಾಗದಷ್ಟು ಹಿತವಾದ ಅನುಭವವನ್ನು ನೀಡುತ್ತದೆ ಎಂಬುದು ಮನ:ಶಾಸ್ತ್ರಜ್ಞರ ಅಭಿಪ್ರಾಯ. ಅವುಗಳ ಮೈ ಆನಿಸಿ ಒರಗುವುದು, ಅವುಗಳಿಂದ ನೆಕ್ಕಿಸಿಕೊಳ್ಳುವುದು ಸಹ ಚಿಕಿತ್ಸೆಯ ಒಂದು ಭಾಗವೇ ಆಗಿದ್ದು ದೇಹದಲ್ಲಿ ಎಂಡೊರ್ಫಿನ್, ಆಕ್ಸಿಟೋಸಿನ್ ಇತ್ಯಾದಿಗಳ ಸ್ರಾವಕ್ಕೆ ಕಾರಣವಾಗಿ ಮನಸ್ಸಿಗೆ ನೆಮ್ಮದಿ ಪ್ರೀತಿ ತಂದುಕೊಡುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

ಏನು ಪ್ರಯೋಜನ?

ಸಾಮಾನ್ಯ ಚಿಕಿತ್ಸೆಗೂ ಈ ಗೋ ಅಪ್ಪುಗೆ ಚಿಕಿತ್ಸೆಗೂ ಏನು ವ್ಯತ್ಯಾಸವಿದೆ ಅನ್ನುತ್ತಿರಾ?. ಖಿನ್ನತೆಯಂತ ಅನೇಕ ಮಾನಸಿಕ ಕಾಯಿಲೆಗಳಲ್ಲಿ ಸೆರಟೋನಿನ್ ಅಂಶ ಮೆದುಳಿನಲ್ಲಿ ಕಡಿಮೆಯಾಗುತ್ತದೆ ಎನ್ನುವುದು ಆಗಲೇ ಸಾಬೀತಾಗಿದೆ. ಈ ಸೆರಟೋನಿನ್ ಅಂಶವನ್ನು ಮೆದುಳಿನಲ್ಲಿ ಹೆಚ್ಚಿಸಿದಾಗ ಮಾತ್ರ ಖಿನ್ನತೆಯಿಂದ ಹೊರಬರಬಹುದು. ಇದಕ್ಕೆ ಅನೇಕ ಔಷಧಗಳನ್ನು ಖಿನ್ನತೆ ನಿವಾರಕಗಳನ್ನಾಗಿ ಈಗಾಗಲೇ ಕಂಡು ಹಿಡಿದು ಇದರ ಪ್ರಯೋಗದಿಂದ ಅನೇಕರು ಹೊರಬಂದಿದ್ದಾರೆ ಎನ್ನುವುದು ನಿಜವಾದರೂ ಸಹ ಎಲ್ಲ ಔಷಧಗಳಂತೇ ಇವುಗಳಿಗೂ ಸಹ ಅಡ್ಡ ಪರಿಣಾಮ ಇದ್ದೇ ಇದೆ. ಇವುಗಳ ಪ್ರಮಾಣವನ್ನು ಗೋಅಪ್ಪುಗೆ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು ಅನ್ನುತ್ತದೆ ಸಂಶೋಧನೆ.

ಕಾಯಿಲೆ ತಡೆಗಟ್ಟುವಿಕೆ

ಈ ವರೆಗೂ ಸಹ ಗೋಸಾಕಣೆಯಲ್ಲಿ ಗೋಉತ್ಪನ್ನಗಳಿಂದ ಬರುವ ಆರ್ಥಿಕ ಲಾಭವನ್ನು ಪರಿಗಣಿಸಲಾಗಿದಿಯೆ ವಿನ: ಅದರ ಸಹವಾಸದಿಂದ ಸಿಗುವ ಮಾನಸಿಕ ನೆಮ್ಮದಿ, ಅದನ್ನು ಮೇಯಿಸುವಾಗ ಅಥವಾ ಹಿಂಡಿ ಹಾಕುವಾಗ, ಸಗಣಿ ಬಳಿಯುವಾಗ, ಹಾಲು ಕರೆಯುವಾಗ ಆಗುವ ದೈಹಿಕ ವ್ಯಾಯಾಮದಿಂದ ಅನೇಕ ಕಾಯಿಲೆಗಳಾದ ಮಧುಮೇಹ, ಕೊಲೆಸ್ಟಿರಾಲ್ ಸಮಸ್ಯೆ, ಹೃದಯದ ಸಮಸ್ಯೆ ಇತ್ಯಾದಿಗಳು ಅಪರೋಕ್ಷವಾಗಿ ಹತೋಟಿಯಲ್ಲಿರುವುದನ್ನು ಗಮನಿಸಿರುವವರು ಅದನ್ನು ವೈಜ್ಞಾನಿಕವಾಗಿ ಅಂಕಿ ಅಂಶಗಳ ಮೂಲಕ ದಾಖಲಿಸಿರುವವರು ಬಹಳ ಕಡಿಮೆ. ಭಾರತೀಯರು ಗೋವನ್ನು ಆರಾಧಿಸುವುದರ ಹಿಂದೆಯೂ ಸಹ ಅನೇಕ ಆರೋಗ್ಯಕ್ಕೆ ಪೂರ್ವಕ ಅಂಶಗಳು ಇವೆ ಎಂಬುದು ಇದರಿಂದ ನಿಸ್ಸಂಶಯವಾಗಿ ಸಾಬೀತಾಗುತ್ತದೆ.

“ಗೋಅಪ್ಪುಗೆ” ವಿಧಾನ

ಈ ಪೂರಕ ಚಿಕಿತ್ಸೆಯಲ್ಲಿ ಮಾನಸಿಕ ಒತ್ತಡ, ಖಿನ್ನತೆ ಇತ್ಯಾದಿ ಇರುವವರನ್ನು ಒತ್ತಡದ ತೀವ್ರತೆಯನ್ನು ಅಳೆಯಲು ವಿವಿಧ ಮಾಪಕಗಳಾದ ಉದ್ವೇಗ, ಆತಂಕ, ತುಮುಲ, ದುಗುಡ ಇತ್ಯಾದಿಗಳನ್ನು ಬಳಸಿಕೊಂಡು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಲ್ಲದೇ ಮನಸ್ಸಿನ ಉದ್ವೇಗವನ್ನು ಅಳೆಯಲು ಪರ್ಯಾಯ ಮಾನದಂಡವಾಗಿ 25 ಪ್ರಶ್ನೆಗಳನ್ನು ಹೊಂದಿದ ಪ್ರಶ್ನಾವಳಿಗಳ ಸರಮಾಲೆಯನ್ನು ಅವರಿಗೆಲ್ಲಾ ಒಡ್ಡಲಾಗುತ್ತದೆ.

ಈ ರೀತಿಯ ವಿವಿಧ ರೀತಿಯ ಮಾನಸಿಕ ಸಮಸ್ಯೆಯ ಜನರನ್ನು ಆಕಳುಗಳ ಜೊತೆಯಲ್ಲಿ 15 ದಿನ ಬಿಡಲಾಗುತ್ತದೆ. ಅವರು ಆಕಳುಗಳ ಆರೈಕೆ ಮಾಡುವುದು, ಮೇವು ಹಾಕುವುದು, ಸಗಣಿ ಬಾಚುವುದು, ಹಾಲು ಹಿಂಡುವುದು, ಅವುಗಳಿಗೆ ಒರಗಿಕೊಳ್ಳುವುದು, ಅಪ್ಪಿಕೊಳ್ಳುವುದು, ನೆಕ್ಕಿಸಿಕೊಳ್ಳುವುದು, ಮೈ ಉಜ್ಜುವುದು ಇತ್ಯಾದಿಗಳನ್ನು ಈ 15 ದಿನಗಳ ಕಾಲವೂ ಮಾಡಿ ಗೋವುಗಳಿಗೆ ತುಂಬಾ ಹತ್ತಿರವಾಗಿ ಹೊಂದಿಕೊಳ್ಳಬೇಕಾಗುತ್ತದೆ. ತದ ನಂತರ ಪುನ: ಈ ಎಲ್ಲರ ಜನರ ಮಾನಸಿಕ ಉದ್ವೇಗದ ಮಟ್ಟವನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತದೆ. ಈ ರೀತಿಯ ಅಧ್ಯಯನವೊಂದರಲ್ಲಿ ಅನೇಕ ಜನರಲ್ಲಿ ಮಾನಸಿಕ ಉದ್ವೇಗ ಗಣನೀಯವಾಗಿ ಕಡಿಮೆಯಾಗಿ ಬಹುತೇಕ ಸಹಜ ಸ್ಥಿತಿಗೆ ತಲುಪಿದ್ದರು. ಇನ್ನು ಕೆಲವರಿಗೆ ಈ ಚಿಕಿತ್ಸೆ ಮಾಡಿದಾಗ ಶೇ 70 ರಷ್ಟು ಸುಧಾರಣೆಯಾದಾಗ ಅವರಿಗೆ ಆಧುನಿಕ ಚಿಕಿತ್ಸೆಯ ಜೊತೆಗೆ ಈ “ಗೋಚಿಕಿತ್ಸೆ” ಯನ್ನು ತಿಂಗಳಿಗೊಮ್ಮೆ ಮಾಡಿಸಿಕೊಳ್ಳುವಂತೆ ಸೂಚಿಸಲಾಯಿತು.

ಇದಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಮುಂದೆಯೂ ಸಹ ಸಂಶೋಧನೆಗೆ ವಿಫುಲ ಅವಕಾಶಗಳಿವೆ. ಇದೊಂದು ಪೂರಕ ಚಿಕಿತ್ಸೆಯಾಗಬಹುದೇ ಹೊರತು ಪೂರ್ಣ ಚಿಕಿತ್ಸೆಯಾಗಲಿಕ್ಕಿಲ್ಲ. ಯಾವ್ಯಾವ ಕಾರಣಕ್ಕೋ ಗೋಸಾಕಣೆಗಳನ್ನು ಬಿಟ್ಟವರು ಪುನ: ಗೋ ಸಾಕಲು ಪ್ರಾರಂಭಿಸಬಹುದು. ಗ್ರಾಮೀಣ ಯುವಕರು ಹೈನು-ಪ್ರವಾಸೋಧ್ಯಮವನ್ನು ಕೈಗೊಂಡು ಪ್ರತಿ “ಗೋಅಪ್ಪುಗೆ” ಚಿಕಿತ್ಸೆಗೆ ಇಂತಿಷ್ಟೆ೦ದು ಹಣ ನಿಗದಿ ಪಡಿಸಿ ಆರ್ಥಿಕವಾಗಿಯೂ ಸಹ ಚೇತರಿಸಿಕೊಳ್ಳಬಹುದು. ಆ ದಿನಗಳು ಬೇಗ ಬರಲಿ ಎಂದು ಆಶಿಸೋಣ.

ಡಾ: ಎನ್.ಬಿ.ಶ್ರೀಧರ

ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-೫೭೭೨೦೪

LEAVE A REPLY

Please enter your comment!
Please enter your name here