ಕೊರೊನಾ ಕಾಲದ ಪ್ರವಾಸ; ಮಹತ್ವದ ಕೃಷಿ ನಿರ್ಧಾರಗಳಿಗೆ ಅವಕಾಶ

ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿತು. ಕರ್ನಾಟಕ ಸರ್ಕಾರ ರಾಜ್ಯದಲ್ಲಿಯೂ ಕಟ್ಟುನಿಟ್ಟಾಗಿ ಅದನ್ನು ಜಾರಿ ಮಾಡಿತು. ಜನ ಸಂಚಾರ – ವಾಹನ ಸಂಚಾರ – ಸರಕು ಸಾಗಣೆ – ಕೈಗಾರಿಗಳು – ಕಚೇರಿಗಳು – ವಾಣಿಜ್ಯ ಚಟುವಟಿಕೆ ಸ್ಥಗಿತವಾದವು. ಇದು ಕೃಷಿ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರದಂತೆ ಗಮನ ವಹಿಸಲೇಬೇಕಿತ್ತು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕೊರೊನಾ ಭೀತಿ ಇದ್ದರೂ ಅಂಜದೇ ರಾಜ್ಯದ್ಯಂತ 30 ದಿನಗಳಲ್ಲಿ 30 ಜಿಲ್ಲೆಗಳಲ್ಲಿ ಖುದ್ದಾಗಿ ಕೃಷಿ ಪ್ರಗತಿ ಪರಿಶೀಲನೆ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ಸಂದರ್ಭದಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ತಿಳಿಸಿದ್ದಾರೆ.

2
ಬಿ.ಸಿ. ಪಾಟೀಲ್, ಕೃಷಿ ಸಚಿವರು

ಬೇಸಿಗೆ ಮಳೆ ಆರಂಭವಾಗಿತ್ತು. ಮುಂಗಾರು ಮಳೆ ಹಂಗಾಮಿಗೆ ಸಿದ್ಧತೆಗಳು ಆರಂಭವಾಗಬೇಕಿತ್ತು. ಆದರೆ ಎಲ್ಲೆಡೆ ಲಾಕ್ ಡೌನ್. ಇದರಿಂದ ಕೃಷಿಕರು ಚಿಂತಿತರಾಗಿದ್ದರು. ಕೃಷಿ ಚಟುವಟಿಕೆಗೆ ಅಡ್ಡಿಯಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಮುಂದೆ ಸಕಾಲದಲ್ಲಿ ಅಗತ್ಯವಾಗಿರುವ ಬಿತ್ತನೆಬೀಜಗಳು – ಗೊಬ್ಬರ ಮತ್ತು ಇನ್ನಿತರ ಅವಶ್ಯಕ ಪರಿಕರಗಳು ದೊರೆಯದು ಎಂಬ ಭಾವನೆ ಎಲ್ಲೆಡೆ ಹರಡುತ್ತಿತ್ತು. ಜನ ಸಂಚಾರ – ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವುದು ಹೇಗೆ ಎಂಬ ಭೀತಿ ಅವರನ್ನು ಆವರಿಸಿತ್ತು. ಅವೆಲ್ಲವನ್ನೂ ನಿವಾರಿಸಿ ರಾಜ್ಯದಲ್ಲಿ ನಿರಾತಂಕವಾಗಿ ಕೃಷಿ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಕೊರೊನಾ ಆತಂಕ ತೊರೆದು ರಾಜ್ಯದ್ಯಂತ ಕೃಷಿ ಪ್ರಗತಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.
ರೈತರ ಕೆಲಸ ಮಾಡುತ್ತಿರುವ ಹೆಮ್ಮೆ-ಆತ್ಮತೃಪ್ತಿ:
ಮುಲತಃ ನಾನು ಕೃಷಿ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕೆಲಸಕ್ಕೆ ಸೇರುವ ತನಕವೂ ಹೊಲದಲ್ಲಿ ದುಡಿದಿದ್ದೇನೆ. ಇದರಿಂದ ನನಗೆ ಕೃಷಿಕರ ಕಷ್ಟಸುಖಗಳು ಗೊತ್ತಿವೆ. ಇದರಿಂದಾಗಿಯೇ ಸಚಿವನಾಗುವ ಸದಾವಕಾಶ ದೊರೆತಾಗ ಕೃಷಿ ಇಲಾಖೆ ನೀಡಬೇಕೆಂದು ಕೋರಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮನವಿಗೆ ಸ್ಪಂದಿಸಿದರು. ದೇಶಾದ್ಯಂತ ಲಾಕ್ಡೌನ್ ಘೋಷಣೆಯಾದಾಗ ಕೃಷಿ ಚಟುವಟಿಕೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು, ಹಾಗೇನಾದರೂ ಆದರೆ ಮುಂದಿನ ಮೂರು ತಿಂಗಳ ನಂತರ ಆಹಾರ ಧಾನ್ಯಗಳಿಗೆ ಕೊರತೆಯಾಗುತ್ತದೆ. ಬೆಂಗಳೂರಿನಲ್ಲಿ ಕುಳಿತುಕೊಂಡು ಆದೇಶಗಳನ್ನು ಮಾಡಿದರೆ ಸಾಕಾಗುವುದಿಲ್ಲ. ಆದ್ದರಿಂದ ಕೃಷಿಕರಲ್ಲಿ ಆತ್ಮಸ್ಥೈರ್ಯ ತುಂಬಲು, ಸರ್ಕಾರ ನಿಮ್ಮೊಂದಿಗಿದೆ ಎಂದು ತಿಳಿಸಲು ರಾಜ್ಯದ್ಯಂತ ಪ್ರವಾಸ ಮಾಡುವ ನಿರ್ಧಾರ ತೆಗೆದುಕೊಂಡೆ.


ಇವೆಲ್ಲದರ ಜೊತೆಗೆ ಕೃಷಿ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು – ಸಿಬ್ಬಂದಿಯಲ್ಲಿಯೂ ಆತ್ಮಸ್ಥೈರ್ಯ ತುಂಬದಂತೆ ನೋಡಿಕೊಳ್ಳುವ ಅಗತ್ಯವಿತ್ತು. ಇಲಾಖೆಯ ಚುಕ್ಕಾಣಿ ಹಿಡಿದ ಸಚಿವವರ ಕ್ರಿಯಾಶೀಲತೆ ಅವರ ಮೇಲೆಯೂ ಪರಿಣಾಮ ಬೀರುತ್ತದೆ. ಅದಲ್ಲದೇ ಸೋಂಕು ಕುರಿತು ಅವರಿಗೂ  ಸಹಜವಾಗಿ ಆತಂಕಇರುತ್ತದೆ. ಸದಾ ಕೃಷಿಕ್ಷೇತ್ರದಲ್ಲಿ ಇದ್, ದು ರೈತರಿಗೆ ನೆರವಾಗುವ ಅವರ ಜೊತೆ ಮೂಲಕ ನಿರಂತರ ಸಂಪರ್ಕದಲ್ಲಿರುವುದು ಅತ್ಯಗತ್ಯವಾಗಿತ್ತು.

ರಾಜ್ಯದ್ಯಂತ ಪ್ರವಾಸ ಹೊರಡುವ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದೆ. ಅವರ ಮಾರ್ಗದರ್ಶನವನ್ನು ಪಡೆದೆ. “ರಾಜ್ಯದ ಕೃಷಿ ಚಟುವಟಿಕೆ ಮೇಲೆ ಕೊರೊನಾ ಕರಿನೆರಳು ಬೀಳದಂತೆ ನೋಡಿಕೊಳ್ಳಿ. ನೀವು ನೀಡುವ ವರದಿಗಳನ್ನು ಆಧರಿಸಿ ಕೃಷಿಕರಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ತ್ವರಿತ ನಿರ್ಧಾರ ಕೈಗೊಳೋಣ “ ಎಂದು ಭರವಸೆ ನೀಡಿದರು.

ಎಲ್ಲೆಡೆ ಒಂದೇ ಸಮಸ್ಯೆ ಇರುವುದಿಲ್ಲ:
ಬೆಂಗಳೂರಿನಲ್ಲಿ ಕುಳಿತು ನೋಡಿದರೆ ರಾಜ್ಯದ ಎಲ್ಲ ಕಡೆ ಒಂದೇ ರೀತಿ ಕೃಷಿ ಸಮಸ್ಯೆಗಳು ಇವೆ ಎಂದು ಅನಿಸುತ್ತದೆ. ಆದರೆ ಪ್ರವಾಸ ಮಾಡಿದಾಗ, ನೇರವಾಗಿ ರೈತರೊಂದಿಗೆ ಮಾತನಾಡಿದಾಗ ಪ್ರತಿ ನೂರು ಕಿಲೋಮೀಟರಿಗೆ ಸಮಸ್ಯೆಗಳು ಭೀನ್ನವಾಗಿರುವುದು ತಿಳಿಯುತ್ತದೆ. ಅವುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನ – ಮಂಥನ ನಡೆಸಲು ಸಾಧ್ಯವಾಗುತ್ತದೆ. ಹಣ್ಣು ಮತ್ತು ತರಕಾರಿಗಳು ಬೇಗ ಕೊಳೆತು ಹೋಗುವುದರಿಂದ ಸಕಾಲದಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಇಲ್ಲವೇ ಕೋಲ್ಡ್ ಸ್ಟೋರೆಜಿನಲ್ಲಿ ಇಡಬೇಕು. ಇವೆಲ್ಲದರ ಜೊತೆಗೆ ಮೌಲ್ಯವರ್ಧನೆ ಮಾಡಬೇಕು. ಹಿಂದೆಯೂ ಸಮಸ್ಯೆಗಳಾಗಿವೆ. ಆದರೆ ಸಂಚಾರಕ್ಕೆ ಆಸ್ಪದವೇ ಆಗದಂಥ ಸಮಸ್ಯೆ ಬಂದಿರಲಿಲ್ಲ. ಆದ್ದರಿಂದ ಇಂಥ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ತಗೆದುಕೊಳ್ಳಲು ನಿರ್ಧರಿಸಲಾಯಿತು.
ಅಗ್ರಿ ವಾರ್ ರೂಮ್:
ಲಾಕ್ಡೌನ್ ತೀರಾ ಸಾದಾರಣ ಸಂದರ್ಭದಲ್ಲ. ಬಹುದೊಡ್ಡ ಸಮಸ್ಯೆ ತಲೆದೋರಿದಾಗ ತೆಗೆದುಕೊಳ್ಳುವ ನಿರ್ಧಾರ. ಇಂಥ ಸಂದರ್ಭದಲ್ಲಿ ವಿಭಿನ್ನವಾಗಿ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಆದ್ದರಿಂದ ಮೊದಲಿಗೆ ಬೆಂಗಳೂರಿನಲ್ಲಿ ಕೃಷಿ ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಪರಿಕರಗಳನ್ನು ಸಕಾಲದಲ್ಲಿ ರೈತರಿಗೆ ದೊರೆಯುವಂತೆ ಮಾಡಲು ಹಾಗೂ ವಿವಿಧ ಅಗತ್ಯ ವಸ್ತುಗಳ ಸಮರ್ಪಕ ವ್ಯವಸ್ಥೆಗಾಗಿ ಬೆಳಿಗ್ಗೆ ,8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಕೃಷಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ “ಅಗ್ರಿ ವಾರ್ ರೂಮ್” ತೆರೆಯಲು ಸೂಚಿಸಲಾಯಿತು.
ರೈತರು ಬೆಳೆದ ಬೆಳೆಗಳ ದಾಸ್ತಾನು, ಮಾರಾಟ ಸರಬರಾಜಿಗೆ ತೊಂದರೆಯುಂಟಾದಲ್ಲಿ 080-22212818 ಹಾಗೂ 080-22210237 ಈ ಸಹಾಯವಾಣಿ ಸಂಖ್ಯೆಗೆ ಕರೆಮಾಡಬಹುದು. ಈ ಸಹಾಯವಾಣಿ ಕೇವಲ ಕೃಷಿ ಇಲಾಖೆಯಷ್ಟೇ ಅಲ್ಲದೇ ತೋಟಗಾರಿಕೆ, ಸಹಕಾರ ಇಲಾಖೆಯ ದೂರುಗಳಿಗೂ ಸಹಾಯವಾಣಿಯಾಗಿದೆ. ಅಗ್ರಿ ವಾರ್ ರೂಮ್ ಕುರಿತು ಸಿಕ್ಕಿಂ, ಆಂದ್ರಪ್ರದೇಶ ರಾಜ್ಯಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಇನ್ನಿತರ ರಾಜ್ಯಗಳಿಗೂ ನಮ್ಮ ಅಗ್ರಿ ವಾರ್ ರೂಮ್ ಮಾದರಿಯಾಗಿರುವುದು ಗಮನಾರ್ಹ.


ಮಾರುಕಟ್ಟೆಗಳು ಸ್ಥಗಿತವಾಗದಂತೆ ಗಮನ:
ಕೃಷಿ ಉತ್ಪನ್ನಗಳಿಗೆ ಬೆಂಗಳೂರು, ಜಿಲ್ಲಾ ಕೇಂದ್ರಗಳು ಬಹುದೊಡ್ಡ ಮಾರುಕಟ್ಡೆಗಳು. ಇಲ್ಲಿಗೆ ಹಣ್ಣು – ತರಕಾರಿ, ಧಾನ್ಯಗಳು ಮತ್ತು ಹಾಲು ನಿರಂತರವಾಗಿ ಸರಬರಾಜು ಆಗುತ್ತಿರಬೇಕು. ಇವುಗಳಿಗೆ ಎಲ್ಲಿಯೂ ಅಡ್ಡಿಯಾಗಬಾರದೆಂದು ನಾನು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕೆ ಸಚಿವ ನಾರಾಯಣಗೌಡ ಸಭೆ ನಡೆಸಿ ಯಾವಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದೆವು. ಇದರ ಜೊತೆಗೆ ಕೇರಳ (ಆರಂಭದಲ್ಲಿ) ಹೊರತುಪಡಿಸಿ ಎಲ್ಲಾ ಅಂತರರಾಜ್ಯ ಗಡಿಗಳಲ್ಲಿಯೂ ಅಗತ್ಯ ವಸ್ತುಗಳ ಸಾಗಾಣಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಯಿತು. ಹಾಪ್ ಕಾಮ್ಸ್ ಮುಖಾಂತರ ಎಲ್ಲಾ ಜಿಲ್ಲೆಗಳಿಗೆ ಹೂವು, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಲು ಯಾವಯಾವ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಗ್ರೀನ್ ಪಾಸ್ ವಿತರಣೆಗೆ ಸೂಚನೆ:

ರೈತರ ಕೃಷಿ ಪರಿಕರಗಳ ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಮಳಿಗೆಗಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ “ಗ್ರೀನ್ ಪಾಸ್” ಗಳನ್ನು ಒದಗಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದೆ. ಬೇರೆಬೇರೆ ಸ್ಥಳಗಳಿಂದ ಬಿತ್ತನೆಬೀಜಗಳು, ಗೊಬ್ಬರಗಳು, ಕ್ರಿಮಿನಾಶಕ ತರಲು ಮಾರಾಟ ಮಾಡಲು ಕೃಷಿಗೆ ಪೂರಕವಾಗಿ ಜೇಬಿನಲ್ಲಿಡಲು ಚಿಕ್ಕ ಪಾಸ್ ಹಾಗೂ ವಾಹನಗಳಿಗೆ ಅಂಟಿಸಲು ಗ್ರೀನ್ ಪಾಸ್ ಸಹಾಯಕ. ಪಾಸ್ಗಳನ್ನು ನೀಡುವ ಅಧಿಕಾರವನ್ನು ತಾಲೂಕು ಕೃಷಿ ಸಹಾಯಕ ನಿರ್ದೇಶಕರುಗಳಿಗೆ ನೀಡಲಾಯಿತು.
ಕೆಲವೊಂದು ಕಡೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆದ ಫಸಲುಗಳ ಕೊಯ್ಲಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಸಾಗಣೆಗೆ ತೊಂದರೆಯಾಗುತ್ತಿರುವುದನ್ನು ನಿವಾರಿಸಲು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರುಗಳು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಲು ಹಾಗೂ ಅಂತರ್ರಾಜ್ಯ ಸಾಗಣೆ ವ್ಯವಸ್ಥೆಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ಸೂಚನೆ ನೀಡಿದೆ.
ರಾಜ್ಯದಲ್ಲಿ 122 ಖಾಸಗಿ, 6 ಎಪಿಎಂಸಿ,8 ಕಾಪೆಕ್ ಒಡೆತನದ ಸೇರಿದಂತೆ ಒಟ್ಟು 136 ಶಿಥಿಲೀಕರಣ ಘಟಕಗಳಿವೆ. 4,40,883 ಮೆಟ್ರಿಕ್ ಟನ್ ದಾಸ್ತಾನು ಮಾಡುವ ಸಾಮರ್ಥ್ಯವಿರುತ್ತದೆ.ಕೆಲವೊಂದು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಶಿಥಿಲೀಕರಣ ಘಟಕಗಳಲ್ಲಿ ಶೇಖರಣೆ ಮಾಡಲು ಕಾಪೆಕ್ ( ಕರ್ನಾಟಕ ಸ್ಟೇಟ್ ಅಗ್ರಿಕಲ್ಚರಲ್ ಪ್ರೊಡ್ಯೂಸ್ , ಪ್ರೊಸೆಸಿಂಗ್ ಎಂಡ್ ಎಕ್ಸಪೋರ್ಟ್ ಕಾರ್ಪೋರೇಷನ್) ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಅಪಪ್ರಚಾರಕ್ಕೆ ಕಿವಿಗೊಟ್ಟು ಬೆಳೆ – ಫಸಲು ನಾಶ ಮಾಡಬೇಡಿ:
ಕೆಲವು ಕಿಡಿಗೇಡಿಗಳು ಸಂದರ್ಭದ ದುರುಪಯೋಗ ಪಡೆದು ಅಪಪ್ರಚಾರಗಳನ್ನು ಮಾಡಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿರುವುದರಿಂದ ಇದು ನನಗೆ ಚೆನ್ನಾಗಿ ಅರ್ಥವಾಗಿದೆ. ಆದ್ದರಿಂದ ರೈತರು ಅಪಪ್ರಚಾರಗಳಿಗೆ ಕಿವಿಗೊಡಬಾರದು. ತಮ್ಮ ಬೆಳೆಗಳನ್ನು ರಸ್ತೆಗೆ ಚೆಲ್ಲುವುದಾಗಲೀ ನಾಶ ಮಾಡುವುದಾಗಲಿ ಮಾಡಬಾರದು. ಕರೋನಾ ರೋಗ ಜಗತ್ತಿಗೆ ಎದುರಾದ ಸಮಸ್ಯೆ.ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ರೈತರು ಆತುರಕ್ಕೊಳಗಾಗದೇ ಸ್ವಲ್ಪ ತಾಳ್ಮೆ ವಹಿಸಿ ಇಲಾಖೆ ನೀಡಿದ ಕ್ರಮ ಅನುಸರಿಸಿ ಎಂದು ಮನವಿ ಮಾಡಿದೆ. ಕೃಷಿಕರೆಲ್ಲರೂ ಇದಕ್ಕೆ ಸ್ಪಂದಿಸಿದರು.
ಕೆಲವೆಡೆ ಕಲ್ಲಂಗಡಿ – ಅನಾನಸ್ ತಿಂದರೆ ತೊಂದರೆಯಾಗುತ್ತದೆ ಎಂದು ಅಪಪ್ರಚಾರ ಮಾಡಲಾಯಿತು. ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆ ಬರುವುದಿಲ್ಲ. ಕಲ್ಲಂಗಡಿ ಹಣ್ಣಾಗಲೀ ಅನಾನಸ್ ಆಗಲಿ ತಿಂದರೆ ಕೊರೊನಾ ಬರುವುದಿಲ್ಲ.ತಪ್ಪು ಮಾಹಿತಿ ಅಪಪ್ರಚಾರಕ್ಕೆ ಬೆಲೆ ಕೊಡಬಾರದು. ನಿಂಬೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಲ್ಲಂಗಡಿ ಅನಾನಸ್ ನಿಂಬೆಹಣ್ದು ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಜನರು ಹೆಚ್ಚೆಚ್ಚು ಹಣ್ಣು ಬಳಸಿ ಎಂದು ಹೋದಲೆಲ್ಲ ಹೇಳಿದ್ದರಿಂದ ಗ್ರಾಹಕರು ವದಂತಿಗಳನ್ನು ನಂಬಲಿಲ್ಲ.
ಮಾರುಕಟ್ಟೆ ಪ್ರಾಂಗಣಗಳಿಗೆ ಭೇಟಿ:
ಬೆಂಗಳೂರು ನಗರದ ಕೃಷಿ ಉತ್ಪನ್ನಗಳ ಮಾರುಕಟ್ಟೆ – ಸರಬರಾಜು ವ್ಯವಸ್ಥೆಗಳ ಬಗ್ಗೆ ಗಮನ ಹರಿಸಲು ನಾನು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕಾ ಸಚಿವ ನಾರಾಯಣ ಗೌಡ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಭೇಟಿ ನೀಡಿದೆವು. ಸಲಹೆ – ಸೂಚನೆ ನೀಡಿದೆವು. ಸಭೆಗಳನ್ನು ಮಾಡಿ ಚರ್ಚಿಸಿದೆವು. ರೈತರು ಬೆಳೆದಿರುವ ಅನಾನಸ್, ಧ್ರಾಕ್ಷಿ, ಪಪಾಯ, ಹಾಗೂ ತರಕಾರಿ ಬೆಳೆಗಳನ್ನು ನೇರವಾಗಿ ಖರೀದಿ ಬಗ್ಗೆ ಚರ್ಚೆ ಮಾಡಿದೆವು.
ಬಿಬಿಎಂಪಿ ಅಪಾರ್ಟ್ಮೆಂಟ್ ಹಾಗೂ ಅಸೋಸಿಯೇಷನ್ ನಿವಾಸಿಗಳಿಗೆ ಹಾಪ್ ಕಾಮ್ಸ್ ಮೂಲಕ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ಬಗ್ಗೆ ಹಾಗೂ ಬಿಬಿಎಂಪಿಯ 198 ವಾರ್ಡ್ ಗಲ್ಲಿ ಹಾಪ್ಕಾಮ್ಸ್ ಮತ್ತು ಹಾಲುಬೂತ್ ಗಳ ಬಳಿ ಮಾರಾಟ, ಡೈರಿ ಮಾದರಿ ಯಲ್ಲಿ ತರಕಾರಿ ಹಾಗೂ ಹಣ್ಣು ಗಳನ್ನು ನೇರವಾಗಿ ರೈತರಿಂದ ಕೆಲ ತಿಂಗಳು ಖರೀದಿಸಲು ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.
ಬೆಳೆ ಸಮೀಕ್ಷೆಗೆ ಸೂಚನೆ:
ರಾಜ್ಯದ ಯಾವುದೇ ಭಾಗದಲ್ಲಿ ಇನ್ನೂ ಬೆಳೆ ಸಮೀಕ್ಷೆ ಆಗದಿದ್ದರೆ ತಕ್ಷಣ ನಡೆಸಿ “ಫಸಲ್ ಭೀಮಾ ಯೋಜನೆ” ವ್ಯಾಪ್ತಿಗೆ ತರಲು ಸೂಚನೆ ನೀಡಿದೆ. ಇದರಿಂದ ಅನಿರೀಕ್ಷಿತ ತೊಂದರೆಗಳಾದ ಸಂದರ್ಭಗಳಲ್ಲಿ ಕೃಷಿಕರು ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಕೃಷಿ ಯಂತ್ರೋಪಕರಣಗಳ ಅಂಗಡಿಗಳಿಗೆ ವಿನಾಯಿತಿ:
ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ನಿಂದ ಬೀಗ ಹಾಕಿರುವ ಕೃಷಿ ಯಂತ್ರೋಪಕರಣಗಳು, ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಇವುಗಳನ್ನು ರಿಪೇರಿ ಮಾಡುವ ಶಾಪ್ ಗಳಿಗೂ ತೆರೆದಿರಲು ಅನುಮತಿಸಲಾಯಿತು. ಇಲ್ಲಿ ಕೆಲಸ ಮಾಡುವ ನಿರ್ವಾಹಕರು, ಮೆಕ್ಯಾನಿಕ್ ಗಳಿಗೆ ಪಾಸ್ ವಿತರಿಸಲಾಯಿತು.
ಬಿತ್ತನೆಬೀಜ – ಗೊಬ್ಬರ – ಔಷಧಗಳ ದಾಸ್ತಾನು:
ಮುಂಗಾರು ಹಂಗಾಮಿನಲ್ಲಿ ಬಿತ್ತನೆಬೀಜ – ಗೊಬ್ಬರಗಳು ಅವಶ್ಯಕ ಕೃಷಿ ಪರಿಕರಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಲಾಯಿತು. ಆಯಾ ಜಿಲ್ಲೆಗಳಿಂದ ನಿಗದಿತವಾಗಿ ಬರುವ ಬೇಡಿಕೆಗಿಂತಲೂ ಹೆಚ್ಚೇ ದಾಸ್ತಾನು ಇಡಲು ತೀರ್ಮಾನಿಸಲಾಯಿತು. ಲಾಕ್ಡೌನ್ ಸಂದರ್ಭದಲ್ಲಿ ಪ್ರವಾಸ ಹೋದೆಡೆ, ಪತ್ರಿಕೆಗಳು – ದೂರದರ್ಶನ- ಖಾಸಗಿ ಟಿವಿ ವಾಹಿನಿಗಳಿಗೆ ಸಂದರ್ಶನ ಕೊಟ್ಟ ಸಮಯದಲ್ಲಿ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಜ್ಜಾಗಿದೆ. ಇವೆಲ್ಲ ಪರಿಕರಗಳಿಗೆ ಯಾವುದೇ ಕೊರತೆಯೂ ಆಗುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಪದೇಪದೇ ಮನವಿ ಮಾಡಿದ್ದೇನೆ. ರೈತರು ಮಳೆಗೂ ಮುನ್ನವೇ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಳ್ಳಬಹುದು ಎಂದು ಸಲಹೆ ಮಾಡಿದ್ದೇನೆ.

ಏಪ್ರಿಲ್ 6 ರಿಂದ ಕೃಷಿ ಪ್ರವಾಸ ಆರಂಭ; ಧಾರವಾಡದಲ್ಲಿ ಮೊದಲ ಜಿಲ್ಲಾ ಸಭೆ:
ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಿದ ಬಳಿಕ ಜಿಲ್ಲಾ – ತಾಲ್ಲೂಕು ಮಟ್ಟಗಳ ಕೃಷಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದೆ. ಏಪ್ರಿಲ್ 6 ರಂದು ಧಾರವಾಡದಲ್ಲಿ ಸಭೆ ನಡೆಸಿದೆ. ಅನಿರೀಕ್ಷಿತ ಕೊರೊನಾದಿಂದಾಗಿ ರೈತರ ಬೆಳೆಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಫಸಲುಗಳಲ್ಲಿ ಉತ್ತಮ ಬೆಲೆ ಬರಲಿದೆ. ಯಾರೂ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ರೈತರ ಪರಿಕರ ಬೆಳೆಗಳು, ತರಕಾರಿ ಹಣ್ಣುಹಂಪಲು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ. ಸರ್ಕಾರದಿಂದ ಉಗ್ರಾಣಗಳನ್ನು ತೆರೆಯಲು ನಿರ್ಧರಿಸಲಾಗಿದೆ. ತರಕಾರಿ ಮಾರುವ ಕೈಗಾಡಿಯವರೆಗೂ ಪಾಸ್ ನೀಡುವಂತೆ ಸೂಚಿಸಿದೆ.
ಆನ್ ಲೈನ್ ದ್ರಾಕ್ಷಿ ದ್ರಾಕ್ಷಿ ಮಾರಾಟ:
ಬಾಗಲಕೋಟೆ – ವಿಯಯಪುರ ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಅಲ್ಲಿ ಪ್ರವಾಸ – ಸಭೆ ಮಾಡಿದಾಗ ತಮ್ಮ ಸಮಸ್ಯೆಗಳನ್ನು ದ್ರಾಕ್ಷಿ ಬೆಳೆಗಾರರು ಗಮನಕ್ಕೆ ತಂದರು. ಆನ್ ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಗಮನ ಸೆಳೆದರು. ಅವುಗಳನ್ನು ಪರಿಹರಿಸಿ ಆನ್ ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಜೊತಗೆ ಕಡಲೇ ಖರೀದಿಗೆ ಕೇಂದ್ರಗಳನ್ನು ಕೂಡಲೇ ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ಹೇಳಿದೆ. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದೆ.
ಆತ್ಮಹತ್ಯೆ ಪರಿಹಾರವಲ್ಲ:

ರೈತರು ಯಾವುದೇ ಕಾರಣಕ್ಕೂ ದೃತಿಗೆಡೆಬಾರದು ಎಂದು ಮತ್ತೆಮತ್ತೆ ಮನವಿ ಮಾಡಿಕೊಳ್ಳುತ್ತಲೇ ಇದ್ದೇನೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಚಂದ್ರಕಾಂತ್ ಬಿರಾದರ್ ಅವರ ಕಲಬುರಗಿಯ ಲಾಡ್ ಚಿಂಚೋಳಿ ನಿವಾಸಕ್ಕೆ ಭೇಟಿ ನೀಡಿದೆ. ಸರ್ಕಾರದಿಂದ 5 ಲಕ್ಷ ರೂ.ಪರಿಹಾರದ ಚೆಕ್, ಹಾಗೂ ವೈಯಕ್ತಿಕವಾಗಿ 1ಲಕ್ಷ ಪರಿಹಾರ ನೀಡಿದೆ. ವಿಧವಾ ವೇತನದ ಆದೇಶದ ಪ್ರತಿ, ಅಂತ್ಯ ಸಂಸ್ಕಾರದ 5 ಸಾವಿರ ರೂ.ಗಳ ಚೆಕ್ ನೀಡಿ ಮೃತರ ಕುಟುಂಬಕ್ಕೆ ಧೈರ್ಯ ತುಂಬಿದೆ.


ಹುಮ್ನಾಬಾದ್ ನಲ್ಲಿ ಶೀಥಲೀಕರಣ ಘಟಕ,: 400ಟನ್ ತರಕಾರಿ ಸಂರಕ್ಷಿಸಲು ವ್ಯವಸ್ಥೆ:
ಬೀದರ್ ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ ಅಲ್ಲಿ ತೊಗರಿ – ಕಡಲೆ ಖರೀದಿಗೆ ಹಣ ಬಿಡುಗಡೆಯಾಗದಿರುವುದು ಗಮನಕ್ಕೆ ಬಂತು. ಕೂಡಲೇ ಅದರ ಪರಿಹಾರಕ್ಕೆ ಕ್ರಮ ತೆಗದುಕೊಳ್ಳಲು ಸೂಚಿಸಿದೆ. ಕಬ್ಬು ಅರೆಯುವ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದೆ.
ಲಾಕ್ಡೌನ್ನಿಂದಾಗಿ ರೈತರು ಬೆಳೆದ ಫಸಲಿಗೆ ನಷ್ಟವಾಗದಂತೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಟೊಮಾಟೋಗಾಗಿ ಕೆಚೆಪ್ ಕಾರ್ಖಾನೆಗಳು ಹಾಗೂ ದ್ರಾಕ್ಷಿಗಾಗಿ ವೈನರಿಗಳನ್ನು ತೆರೆಯಲಾಗಿದೆ ಹಾಗೂ ಬೀದರ್ನ ಹುಮ್ನಾಬಾದ್ ನಲ್ಲಿ ಸುಮಾರು 400ಟನ್ ತರಕಾರಿ ಕೊಳೆಯದಂತೆ ಸಂರಕ್ಷಿಸಲು ಶೀಥಲೀಕರಣ ಘಟಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ನೀಡಲಾದ ಪರಿಹಾರಗಳು:
ರಾಯಚೂರು ಜಿಲ್ಲೆಯಲ್ಲಿ ಪ್ರವಾಸ – ಸಭೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿರುವ ಪರಿಹಾರಗಳ ಬಗ್ಗೆ ತಿಳಿಸಿದೆ. 2018 – 19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲು ಭೀಮ ಯೋಜನೆಯಡಿಯಲ್ಲಿ ಸುಮಾರು 51838 ರಂತೆ ರೈತರಿಗೆ ಒಟ್ಟು 132 . 10 ಕೋಟಿ ರೂಪಾಯಿಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ 24407 ರೈತರಿಗೆ ಒಟ್ಟು 60 . 31 ಕೋಟಿ ರೂಪಾಯಿಗಳು ವಿಮಾ ಪರಿಹಾರ ನೀಡಲಾಗಿದೆ.
2019 – 20ನೇ ಸಾಲಿನಲ್ಲಿ ಮುಂಗಾರು ಹಂಗಾಮುನಲ್ಲಿ ಒಟ್ಟು 110925 ರೈತರು ವಿಮಾ ನೋಂದಣಿ, ಹಿಂಗಾರು ಹಂಗಾಮಿನಲ್ಲಿ ಒಟ್ಟು 43822 ರೈತರು ವಿಮಾ ನೋಂದಣಿ ಜಾಗೂಬಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ 202052 ಅರ್ಹ ರೈತ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 112 . 36 | ಹಾಗೂ ರಾಜ್ಯ ಸರ್ಕಾರದಿಂದ 36 . 11 ಒಟ್ಟು 148 . 47 ಕೋಟಿ ರೂಪಾಯಿಗಳು ನೇರವಾಗಿ ರೈತರ ಆಧಾರ್ ಜೋಡಣೆಯ ಖಾತೆಗೆ ಜಮೆಯಾಗಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
2018 – 19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯ ಕಾರಣದಿಂದ ಬೆಳೆ ಹಾನಿಯಾದ 93 , 563 ರೈತ ಫಲಾನುಭವಿಗಳಿಗೆ ಒಟ್ಟು 72 . 42 ಕೋಟಿ ರೂಪಾಯಿಗಳ ಬರ ಪರಿಹಾರವನ್ನು ನೀಡಲಾಗಿರುತ್ತದೆ . 2019 – 20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಬೆಳೆಹಾನಿಯಾದ 4935 ರೈತ ಫಲಾನುಭವಿಗಳಿಗೆ ಒಟ್ಟು 13 .13 ಕೋಟಿ ರೂಪಾಯಿಗಳ ಪರಿಹಾರವನ್ನು ರಾಜ್ಯ ಸರ್ಕಾರದಿಂದ ನೀಡಲಾಗಿರುತ್ತದೆ ಎಂದು ವಿವರಿಸಲಾಯಿತು.
ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ :
ಬಳ್ಳಾರಿಯಲ್ಲಿ ಬ್ಯಾಡಗಿ ಮಾದರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ತಡರೆಯುವ ಬಗ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಹಾಗೂ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಜೊತೆ ಚರ್ಚಿಸಿ ಸಾಧಕಬಾಧಕಗಳನ್ನು ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಅನಾನಸ್ ಘಟಕಗಳ ತೆರೆಯುವಿಕೆಗೆ ಕ್ರಮ:
ಶಿವಮೊಗ್ಗ ಜಿಲ್ಲೆಯಲ್ಲಿ ಸಭೆ ಮಾಡಿದಾಗ ಅನಾನಸ್ ಹಾಗೂ ಶುಂಠಿ ಕ್ವಾರಿಂಗ್ ಸಮಸ್ಯೆಗಳು ಬಗ್ಗೆ ಗಮನ ಬಂತು. ಉತ್ತರ ಭಾರತದಲ್ಲಿ ಅನಾನಸ್ ಕಾರ್ಖಾನೆಗಳು ಲಾಕ್ಡೌನ್ನಿಂದ ಮುಚ್ಚಿರುವುದರಿಂದ ಅನಾನಸ್ ಮಾರಾಟಕ್ಕೆ ತೊಂದರೆಯಾಗಿದೆ. ಅನಾನಸ್ ಬೆಳೆಗಾರರ ಸಮಸ್ಯೆ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಿ ಗಮನಕ್ಕೆ ತಂದು ದೆಹಲಿ, ರಾಜಸ್ಥಾನ ಸೇರಿದಂತೆ ಉತ್ತರ ಭಾರತ ರಾಜ್ಯಗಳಲ್ಲಿ ಅನಾನಸ್ ಕಾರ್ಖಾನೆಗಳು ತೆರೆಯಲು ಅಲ್ಲಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿ, ಸಾಧಕಬಾಧಕ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.


ಮುಖ್ಯಮಂತ್ರಿಗಳಿಗೆ ಮನವಿ:
ಏಪ್ರಿಲ್ 7ರಂದು ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಣೆಕಲ್ಲು ಗಾಳಿ ಮಳೆಯಿಂದಾಗಿ ಜಿಲ್ಲೆಯ ಗಂಗಾವತಿ, ಯಾದಗಿರಿ ಜಿಲ್ಲೆಯ ಸುರಪುರ ಭಾಗಗಳಲ್ಲಿ ಭತ್ತದ ಪೈರು ಹಾಗೂ ತೋಟಗಾರಿಕಾ ಬೆಳೆಗಳು ನಾಶವಾಗಿದೆ. ಬೆಳೆ ಹಾನಿ ಸಮೀಕ್ಷೆ ನಡೆಸಿ ಎನ್.ಡಿ.ಆರ್.ಎಫ್-ಎಸ್.ಡಿ.ಆರ್.ಎಫ್ ಮೂಲಕ ರೈತರಿಗೆ ಪರಿಹಾರ ನೀಡಲು ಕ್ರಮ ಜರುಗಿಸಬೇಕು. ಹಾಗೂ ರಾಜ್ಯಾದ್ಯಂತ ಹೂವಿನ ಬೆಳೆಗಾರರಿಗೆ ನಿರ್ಬಂಧಿತ ಅವಧಿಯಲ್ಲಿ ಹೂ ಮಾರಾಟವಾಗದೇ ಹಾನಿಯಾಗಿರುವುದರಿಂದ ತೋಟಗಾರಿಕಾ ಇಲಾಖೆಯಿಂದ ಬೆಳೆ ಸಮೀಕ್ಷೆ ನಡೆಸಬೇಕು ಹಾಗೂ ಹೂವಿನ ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕೋಲ್ಡ್ ಸ್ಡೋರೇಜ್, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೂ ಮನವಿ ಮಾಡಲಾಗಿದೆ… ಹಣ್ಣು – ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಶೀತಲ ಶೇಖರಣ ಬೃಹತ್ ಘಟಕಗಳನ್ನು ನಿರ್ಮಾಣ ಮಾಡಬೇಕಾಗಿದೆ. ಎಪಿಎಂಸಿಗಳನ್ನು ಮತ್ತಷ್ಟೂ ಬಲಪಡಿಸಬೇಕಾಗಿದೆ. ಪುಷ್ಪಕೃಷಿ ಬೆಳೆಗಾರರ ಸ್ಥಿತಿಗತಿ ಗಮನಕ್ಕೆ ತಂದ ತಕ್ಷಣ . ಪುಷ್ಪಕೃಷಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಸಭೆ:
ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಉನ್ನತಾಧಿಕಾರಿಗಳ ಸಭೆ ನಡೆಸಿ ವಿವರವಾಗಿ ಚರ್ಚಿಸಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಯಾವಯಾವ ರೀತಿ ನೆರವಾಗಬಹುದು ಎಂದು ಮಾಹಿತಿ ಪಡೆಯಲಾಯಿತು. ಕೃಷಿ ವಿಜ್ಞಾನಿಗಳು ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದರು. ಅವೆಲ್ಲವನ್ನೂ ಸ್ವತಃ ಟಿಪ್ಪಣಿ ಮಾಡಿಕೊಂಡಿದ್ದೇನೆ. ಅವುಗಳ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕೃಷಿ ಇಲಾಖೆ ಜಾಗೃತದಳ:
ಕಳಪೆ ಗುಣಮಟ್ಟದ ಬಿತ್ತನೆಬೀಜ – ಗೊಬ್ಬರ ಮತ್ತು ಇನ್ನಿತರ ಪರಿಕರಗಳ ಮಾರಾಟವಾಗದಂತೆ ತಡೆಯಲು ಕೃಷಿ ಇಲಾಖೆಯ ಜಾಗೃತದಳವನ್ನು ಮತ್ತಷ್ಟು ಬಲಪಡಿಸಲಾಯಿತು. ರಾಜ್ಯದ ವಿವಿಧೆಡೆ ಅಕ್ರಮ ಕಂಡು ಬಂದ ಅಂಗಡಿಗಳು – ಗೋದಾಮುಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಸ್ತಾನು ವಶಪಡಿಸಿಕೊಳ್ಳಲಾಯಿತು. ಅಂಥ ಅಂಗಡಿ – ಗೋದಾಮುಗಳ ಲೈಸನ್ಸ್ ರದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಇಂಥ ಅವ್ಯವಹಾರಗಳನ್ನು ನಡೆಸುತ್ತಿದ್ದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಕಳಪೆ ಬಿತ್ತನೆ ಬೀಜದ ಮಾಫಿಯಾಯನ್ನು ಬಯಲು ಮಾಡಲಾಗಿದೆ. ಆಂಧ್ರದ ಮೂಲವನ್ನು ಪತ್ತೆ ಮಾಡಲಾಗಿದೆ. ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳು ಸೇರಿದಂತೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಕಳಪೆ ಬೀಜ ವಶಕ್ಕೆ ಪಡೆದು ಎಂಟು ಕ್ರಿಮಿನಲ್ ಕೇಸ್ ದಾಖಲಾಗಿದೆ
ಮೆಕ್ಕೆಜೋಳ ನೇರ ಖರೀದಿ – ಬಿತ್ತನೆಬೀಜಗಳಿಗೆ ಏಕರೂಪ ಬೆಲೆ
ಪಶು ಆಹಾರ ತಯಾರಿಕೆಗೆ ಅವಶ್ಯವಾಗಿರುವ ಮೆಕ್ಕೆಜೋಳವನ್ನು ಕರ್ನಾಟಕ ಮಹಾಮಂಡಳಿಯು ಪ್ರತಿ ಕ್ವಿಂಟಾಲಿಗೆ 1760ರೂ.ನಂತೆ ಒಂದು ವರ್ಷದ ಅವಧಿಗೆ ರೈತರಿಂದ ನೇರವಾಗಿ ಖರೀದಿಸಲು ಮುಂದಾಗಿದೆ.ಇದು ರೈತರಿಗೆ ಸಂತಸದ ವಿಷಯ. ಇದು ಅವರ ಆತಂಕವನ್ನು ನಿವಾರಿಸಿದೆ.
ರಾಜ್ಯದ್ಯತ ಪ್ರವಾಸ ಮಾಡಿದ ನಂತರ ಗಮನಕ್ಕೆ ಬಂದ ವಿಷಯಗಳಲ್ಲಿ ಬಿತ್ತನೆಬೀಜಗಳಿಗೆ ಏಕರೂಪ ಬೆಲೆ ನಿಗದಿಯಿಲ್ಲದಿರುವುದು ಸೇರಿದೆ. ಆದ್ದರಿಂದ ಮುಂದಿನ ವರ್ಷದಿಂದ ರೈತರಿಗೆ ಬೇಕಾದ ಬಿತ್ತನೆ ಬೀಜಕ್ಕೆ ಸರ್ಕಾರವೇ ಬೆಲೆ ನಿಗದಿಪಡಿಸಲಿದೆ. ಏಕರೂಪ ಬೆಲೆ ಜಾರಿಯಾಗಲಿದೆ.
ಕೃಷಿಕರಿಗೆ ಕ್ರೆಡಿಟ್ ಕಾರ್ಡ್ ನೀಡಿಕೆ:
ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ರೈತರಿಗಾಗುತ್ತಿರುವ ಅನಾನುಕೂಲ ಪರಿಹರಿಸಲು ಸದ್ಯದಲ್ಲಿಯೇ ಕೃಷಿ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರಿಗೆ ಅನೇಕ ಅನುಕೂಲಗಳನ್ನು ನೀಡುತ್ತಿವೆ. ಅವುಗಳನ್ನು ಪಡೆಯಲು ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳಲು ರೈತರು ಕಚೇರಿಯಿಂದ ಕಚೇರಿಗೆ ಅಲೆಯಬೇಕು. ನಂತರ ದಾಖಲೆಗಳನ್ನು ಹೊತ್ತುಕೊಂಡು ತಿರುಗಬೇಕು. ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುವುದು
ಈ ಕಾರ್ಡಿನಲ್ಲಿ ಕೃಷಿಕರ ಹೆಸರು, ಊರು, ಜಮೀನಿನ ಪಹಣಿ ದಾಖಲೆಗಳು, ಇದುವರೆಗೂ ಬ್ಯಾಂಕ್ ಸೊಸೈಟಿ ಸಾಲವೂ ಸೇರಿದಂತೆ ಪಡೆದಿರುವ ಅಥವಾ ಪಡೆದಿರದ ಸೌಲಭ್ಯಗಳ ವಿವರಗಳು ಅಡಕವಾಗಿರುತ್ತವೆ. ಸಂಬಂಧಿಸಿದ ಕಚೇರಿಯಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಕಂಪ್ಯೂಟರಿನಲ್ಲಿ ಈ ಎಲ್ಲ ವಿವರಗಳು ಮೂಡುತ್ತವೆ.ಇಷ್ಟರಲ್ಲಾಗಲೇ ಈ ಯೋಜನೆ ಚಾಲ್ತಿಗೆ ಬರಬೇಕಿತ್ತು. ಕೋವಿಡ್ – 19ನಿಂದಾಗಿ ತುಸು ಮುಂದೆ ಹೋಗಿದೆ. ಅತೀ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಕೃಷಿ ಕ್ರೆಡಿಟ್ ಕಾರ್ಡ್ ಅನ್ನು ಪ್ರುಟ್ಸ್ ಎಂಬ ಆ್ಯಪ್ಗೆ ಟ್ಯಾಗ್ ಮಾಡಲಾಗುವುದು. ಈ ಆ್ಯಪ್ ನಲ್ಲಿ ಕೃಷಿಗೆ ಸಂಬಂಧಿಸಿದ ಸಕಲ ವಿವರಗಳೂ ಇರುತ್ತವೆ.


ರೈತಮಿತ್ರರ ನೇಮಕ:
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ಕೃಷಿಕರಿಗೆ ಅಗತ್ಯ ಸಹಾಯ – ಮಾರ್ಗದರ್ಶನ ಮಾಡಲು ಸದ್ಯದಲ್ಲಿಯೇ ರೈತಮಿತ್ರರ ನೇಮಕ ಮಾಡಲಾಗುವುದು. ಇದರಲ್ಲಿ ಶೇಕಡ 85ರಷ್ಟು ಹುದ್ದೆಗಳಿಗೆ ಕೃಷಿ ಡಿಪ್ಲೊಮಾ ಪಡೆದವರನ್ನು ಶೇಕಡ 15 ರಷ್ಟು ಹುದ್ದೆಗಳಿಗೆ ಕೃಷಿ ಪದವಿ ಪಡೆದವರನ್ನು ನೇಮಿಸಲಾಗುವುದು. ಪ್ರತಿ 2 ಗ್ರಾಮ ಪಂಚಾಯ್ತಿಗಳಿಗೆ ಒಬ್ಬರು ರೈತಮಿತ್ರರು ಇರುತ್ತಾರೆ
ಕೃಷಿ ಮೊಬೈಲ್ ಕ್ಲಿನಿಕ್
ಸದ್ಯದಲ್ಲಿಯೇ ರಾಜ್ಯದಲ್ಲಿ ಕೃಷಿ ಮೊಬೈಲ್ ಕ್ಲಿನಿಕ್ ಗಳು ಅಸ್ತಿತ್ವಕ್ಕೆ ಬರುತ್ತವೆ. ಇವುಗಳು ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಇರುತ್ತವೆ. ಈ ಮೊಬೈಲ್ ಕ್ಲಿನಿಕ್ ಗಳಲ್ಲಿ ಮಣ್ಣು – ಪೋಷಕಾಂಶ – ಕೀಟ – ರೋಗ ಪತ್ತೆ ಸೌಲಭ್ಯಗಳಿರುತ್ತವೆ. ಇದರಿಂದ ಕೃಷಿಕರು ದೂರದ ಜಿಲ್ಲಾ ಕೇಂದ್ರ – ತಾಲ್ಲೂಕು ಕೇಂದ್ರಗಳಿಗೆ ಹೋಗುವ ಖರ್ಚು ಉಳಿತಾಯವಾಗುತ್ತದೆ.

30 ದಿನ 30 ಜಿಲ್ಲೆ
ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಗಳ ಪ್ರವಾಸ – ಸರಣಿ ಸಭೆಗಳನ್ನು ನಡೆಸಿದ್ದರಿಂದ ಆನೇಕ ಸಮಸ್ಯೆಗಳು ಗಮನಕ್ಕೆ ಬಂದವು. ಅವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ತಕ್ಷಣ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳೋಣ ಎಂದು ಹೇಳಿದರು. ಈಗಾಗಲೇ ಹಂತಹಂತವಾಗಿ ಪರಿಹಾರಗಳು ಜಾರಿಯಾಗುತ್ತಿವೆ. ಪುಷ್ಪಕೃಷಿ ಬೆಳೆಗಾರರಿಗೆ ಪ್ಯಾಕೇಜ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಣ್ಣು – ತರಕಾರಿ ಬೆಳೆಗಾರರಿಗೂ ಪ್ಯಾಕೇಜ್ ಪ್ರಕಟವಾಗಲಿದೆ. ಇಂತಿಷ್ಟೆ ಕೊಡಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇವೆಲ್ಲ ಅಪತ್ಕಾಲದ ನೆರವು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

  • ನಿರೂಪಣೆ: ಸಂಧ್ಯಾ ಉರಣಕರ್

2 COMMENTS

  1. ಧನ್ಯವಾದಗಳು ಸರ್, ಎಲ್ಲ ರೈತರಿಗೂ ಸೌಲಭ್ಯ ಗಳು ದೊರೆಯುವಂತೆ ಆಗಬೇಕು.ಸೌಲಭ್ಯಗಳು ರೈತರು ಆಫೀಸ್ ಗೆ ಅಲೆದಾಡಿ ಪಡೆಯುವುದು ತಪ್ಪಿಸಿರಿ.ಶ್ರಮಪಟ್ಟ ನಿಜವಾದ ರೈತರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.ವಂದನೆಗಳು.

LEAVE A REPLY

Please enter your comment!
Please enter your name here