ತೋಟಕ್ಕೆ ಬಂದ ಮುಟ್ಟಿದರೆ ಮುನಿ !

0
ಲೇಖಕರು: ಸಂತೋಷ್ ಕೌಲಗಿ

ಸುಮಾರು ೩೦ ವರ್ಷದ ಹಿಂದಿನ ಮಾತು. ಜನವರಿ/ಫೆಬ್ರವರಿ ಸಮಯ, ಫುಕುವೊಕಾನ(Masanobu Fukuoka) ಕೃಷಿ ವಿಚಾರವೆ ನಮ್ಮೆಲ್ಲರ ಕನಸು ಮನಸಿನಲ್ಲಿ. ಯಾವಾಗಲೂ ಅದರದೇ ಮಾತು. ಅದೇ ಗುಂಗಿನಲ್ಲೇ ಗೆಳೆಯ ಕೆ.ಪಿ.ಸುರೇಶ ಮತ್ತು ನಾನು ಬೈಕಿನಲ್ಲಿ ’ನಿರುತ್ತರ ’ ಕ್ಕೆ ಹೋದೆವು. ಆಗಲೇ ’ಒಂದು ಹುಲ್ಲಿನ ಕ್ರಾಂತಿ” (The One‑Straw Revolution) ಓದಿ ’ಸಹಜ ಕೃಷಿ ಒಂದು ಪರಿಚಯ’ ಬರೆಯುವ ಇರಾದೆಯಲ್ಲಿದ್ದರು ಪೂರ್ಣಚಂದ್ರ ತೇಜಸ್ವಿ. (Poornachandra Tejaswi) ಅಲ್ಲ ಕಣಯ್ಯ ನಮ್ಮಲ್ಲಿ ಆ ಫುಕುವೊಕಾ ಹೇಳುವ ಕ್ಲೋವರ್‍ (Clover) ಎಂಬ ಭೂ ಮುಚ್ಚಳಿಕೆಗೆ ಸಮಾನ ಸಸ್ಯ ಯಾವುದು ಇರಬಹುದು? ಎಂದು ನಮ್ಮನ್ನು ಕೇಳಿದರು.

ನಮ್ಮ ಅನುಭವವಿಲ್ಲದ ವಯಸ್ಸಿನಲ್ಲಿ ನಾವು ಆಗಲೇ ಜಪಾನಿನ ಕೆಲವು ಗೆಳೆಯರನ್ನು ಕ್ಲೋವರ್‍ ಬೀಜಕ್ಕಾಗಿ ಸಂಪರ್ಕಿಸಿದ್ದೆವು. ಅದನ್ನು ತೇಜಸ್ವಿಯವರ ಮುಂದೆ ನಾವು ಹೇಳಿ ಇಷ್ಟರಲ್ಲೇ ಆ ಬೀಜ ಸಿಗಬಹುದು ಎಂದೆವು. “ಏ, ಅವೆಲ್ಲ ಆಗಲ್ಲ ಕಣಯ್ಯ, ಇಲ್ಲೇ ಲೋಕಲ್ ಆಗಿ ಇರೋದು ಹುಡುಕಬೇಕು. ಅಲ್ಲಿ ಬೀಜ ಇಲ್ಲಿಗೆ ಬಂದರೆ ಏನೇನು ಅನಾಹುತ ಕಾದಿರುತ್ತೋ ನಮಗೆ ಗೊತ್ತೇನ್ರಯ್ಯಾ?” ಎಂದರು, ನಾವು ಪೆಂಗರಂತೆ ನಿಂತೆವು. ಹೀಗೆ ಇಡೀ ದಿನ ಈ ನೆಲ ಮುಚ್ಚಳಿಕೆಯ ಬಗ್ಗೆಯೇ ಮಾತನಾಡುತ್ತಾ ಕಳೆದೆವು.

ನೆಲ ಮುಚ್ಚಳಿಕೆಯ ಗಿಡದ ಸ್ವಭಾವಗಳೇನಿರಬೇಕು, ಅದು ಬೇರೆ ಸಸ್ಯಗಳನ್ನು ಎದುರಿಸಿ ಗೆಲ್ಲಲು ಇರಬೇಕಾದ ಗುಣಗಳೇನು, ಬೇಸಿಗೆಯಲ್ಲಿ ಅದು ಒಣಗಿ ಬೀಜ ಉದರಿಸಿ ಮತ್ತೆ ಮಳೆಗಾಲದಲ್ಲಿ ಎಲ್ಲ ಸಸ್ಯಗಳಿಗಿಂತ ಮೊದಲು ಹುಟ್ಟಿ ಭೂಮಿಯನ್ನು ಹೇಗೆ ಅಕ್ರಮಿಸ ಬೇಕು, ಸಾರಜನಕವನ್ನು ಹಿಡಿದಿಡುವ ಶಕ್ತಿಯನ್ನು ಹೇಗೆ ಹೊಂದಿರಬೇಕು, ಸೊಂಪಾಗಿ ಹಸಿರು ಗೊಬ್ಬರನ್ನು ಉತ್ಪತ್ತಿ ಮಾಡಬೇಕು ಹೀಗೆ…

ತೇಜಸ್ವಿಯವರ ತಲೆಗೆ ಏನಾದರೂ ಹೊಕ್ಕರೆ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣದೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಸಂಜೆ ಮೂಡಿಗೆರೆಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಙಾನಿ ಡಾ. ಚಂದ್ರಶೇಖರ ( ಅವರು ಮದ್ದೂರಿನವರು ಎಂದು ನೆನಪು) ತೇಜಸ್ವಿಯವರ ಮನೆಗೆ ಬಂದರು.

ಅವರೊಂದಿಗೂ ಈ ನೆಲಮುಚ್ಚಿಗೆಯ ಬಗ್ಗೆ ಚರ್ಚೆ ಪಾರಂಭವಾಯಿತು. ಈ ಮೊದಲೇ ಈ ಬಗ್ಗೆ ಒಂದೆರಡು ಸುತ್ತಿನ ಚರ್ಚೆ ಚಂದ್ರಶೇಖರ ಅವರೊಂದಿಗೂ ಆಗಿತ್ತು. ಅವರೂ ಅದೇ ಗುಂಗಿನಲ್ಲಿದ್ದರು. ಮಾತನಾಡುತ್ತಾ, ಆಡುತ್ತಾ ಅವರು ಮುಳ್ಳಿಲ್ಲದ ಮುಟ್ಟಿದರೆ ಮುನಿ ಗಿಡದ ಬಗ್ಗೆ ಪ್ರಸ್ತಾಪಿಸಿದರು. ಅದು ನೋಡಲು ಮಾಮೂಲಿ ಮುಟ್ಟಿದರೆ ಮುನಿ ಗಿಡದಂತೆಯೇ ಇರುತ್ತದೆ. ಆದರೆ ಮುಳ್ಳು ಇರುವುದಿಲ್ಲ, ಅದನ್ನು ಮುಟ್ಟಿದರೆ ಅದರ ಎಲೆ ಮುಚ್ಚಕೊಳ್ಳುವುದು ಸ್ವಲ್ಪ ನಿಧಾನ ಎಂದರು. ಮುಳ್ಳಿಲ್ಲದೇ ಇರುವುದರಿಂದ, ಇದನ್ನು ಬೆಳೆಸಿದರೆ ತೊಂದರೆ ಇಲ್ಲ ಎಂದರು.

ನಮ್ಮ ಮಿಕ್ಕ ಬೇಡಿಕೆಗಳಾದ ಸೊಂಪಾಗಿ ಎಲೆ ಉದುರಿಸಬೇಕು, ಸಾರಜನಕ ಹಿಡಿದಿಡುವ ಗುಣ ಇರಬೇಕು ಎಂಬ ಪ್ರಶ್ನೆಗಳಿಗೂ ಅವರು ವೈಜ್ಞಾನಿಕ ಶಬ್ದಗಳನ್ನು ಬಳಸಿ ಈ ಗಿಡವೇ ಅತ್ಯಂತ ಸೂಕ್ತ ಎನ್ನುವಂತೆ ಮಾತನಾಡಿದರು. ಜೊತೆಗೆ ಅದರ ಹೂವು ಜೇನನ್ನು ಆಕರ್ಷಿಸುವುದರಿಂದ ತೋಟದಲ್ಲಿ ಪರಾಗ ಸ್ಪರ್ಶ ಹೆಚ್ಚಾಗಿ ಇಳುವರಿ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದನ್ನೂ ಹೇಳಿದರು.

ನಾವು ’ಸ್ವಯಂವರ’ದಲ್ಲಿ ಮುಳ್ಳಿಲ್ಲದ ನಾಚಿಕೆ ಮುಳ್ಳಿಗೆ( ಮಿಮೋಸಾ ಇನ್ವಿಸಾ – Mimosa invisa) ಹೂವಿನ ಹಾರ ಹಾಕಲು ತೀರ್ಮಾನಿಸಿದೆವು. ನಂತರ ಬೀಜ ಪಡೆಯುವ ಬಗ್ಗೆ ನಮ್ಮ ಮಾತು ಹರಿಯಿತು. ಅದನ್ನೂ ಅವರು ಬಹಳ ಸುಲಭವಾಗಿ ಬಗೆಹರಿಸಿದರು. ತಮ್ಮ ಸಂಶೋಧನಾ ಕೇಂದ್ರದಲ್ಲಿ ಈಗ ಅದು ಬೀಜ ಬಿಟ್ಟಿರುವುದಾಗಿಯೂ, ನಾಳೆ ತಮ್ಮ ಸಹಾಯಕನನ್ನು ಬಿಟ್ಟುಒಂದಿಷ್ಟು ಬೀಜ ಆರಿಸುವುದಾಗಿಯೂ ಹೇಳಿ, ಮಾರನೆಯ ದಿನ ಬೀಜ ನೀಡುವ ಭರವಸೆಯನ್ನೂ ನೀಡಿದರು.

ತೇಜಸ್ವಿಯವರು “ಇದೊಂದು ಗಿಡ ಟ್ರೈ ಮಾಡ್ರಯ್ಯಾ,ಇದೇನಾದ್ರೂ ಯಶಸ್ವಿ ಆದರೆ ಒಂದು ಹೆಜ್ಜೆ ಮುಂದೆ ಹೋದಂತೆ” ಎಂದರು. ನಮ್ಮ ಪಡ್ಡೆತನಕ್ಕೆ ಅವರು ಇಂಬು ನೀಡಿದರು. ನಾವು ಫುಕುವೊಕಾರಾಗಲು ಒಂದೆರಡು ಅಡಿ ಕೆಳಗಿದ್ದೇವೆ ಎನಿಸತೊಡಗಿತು. ತೇಜಸ್ವಿ ಅವರೂ ಆ ಗಿಡವನ್ನು ಅಷ್ಟೊಂದು ಸೂಕ್ಷ್ಮವಾಗಿ ಗಮನಿಸಿದ್ದಂತೆ ಕಾಣಲಿಲ್ಲ. ಹೊರದೇಶದಿಂದ ಬರಬಹುದಾದ ಗಿಡಗಳು ತರಬಹುದಾದ ಸಮಸ್ಯೆಗಳ ಬಗ್ಗೆ ಮಾತನಾಡಿದರೇ ಹೊರತು ಮಲೆನಾಡಿನ ಮೂಲೆಯಲ್ಲಿ ಮಳೆಗೆ ಹೆದರಿ ಸುಮ್ಮನೆ ಕುಳಿತಿರುವ ಸಸ್ಯವೊಂದು ಬಯಲು ಸೀಮೆಯಲ್ಲಿ ಏನು ಮಾಡಬಹುದು ಎಂದು ಅವರಿಗೆ ಹೊಳೆಯಲಿಲ್ಲ. ನಾವಂತೂ ಬಿಡಿ, ೨೮/೩೦ ವರ್ಷದ ಅನನುಭವಿಗಳು. ನಮ್ಮ ಹೀರೋ ಹೇಳಿದ್ದನ್ನು ಮಾಡಲು ಸಜ್ಜಾಗಿ ನಿಂತಿದ್ದವರು.

ಅಂದು ರಾತ್ರಿ ಮಲಗಿದಾಗ ಕನಸಿನಲ್ಲಿ ಬರೀ ಮಿಮೋಸಾ ಇನ್ವಿಸಾ. ಅದು ಸೊಂಪಾಗಿ ಬೆಳೆದು ಇಡೀ ತೋಟವನ್ನು ಆಕ್ರಮಿಸಿದೆ, ಎಲ್ಲೆಲ್ಲೂ ಹಸಿರು, ಡಿಸೆಂಬರ್‍ ನಲ್ಲಿ ಹೂವು ಬಿಟ್ಟಿದೆ, ಜೇನುಗಳು ದಂಡುಗಳಲ್ಲಿ ಬಂದು ಮಕರಂದವನ್ನು ಹೀರುತ್ತಿವೆ, ಬೇಸಿಗೆಯಲ್ಲಿ ಅದು ರಾಶಿ, ರಾಶಿ ಎಲೆ ಉದುರಿಸಿ ಭೂಮಿಗೆ ದಂಡಿಯಾಗಿ ಗೊಬ್ಬರ ಸೇರಿಸಿದೆ, ಹೀಗೆ ಕನಸಿನ ಮೇಲೆ ಕನಸು.

ಬೆಳಗಾಯಿತು ಮತ್ತೆ ತೇಜಸ್ವಿಯವರೊಂದಿಗೆ ಸುತ್ತಾಟ ಮತ್ತು ಫುಕುವೊಕಾನ ಸುತ್ತಲೇ ಮಾತು. ಚಂದ್ರಶೇಖರ್‍ ಅವರ ಕಛೇರಿಗೆ ಹೋಗಿ ಮಿಮೋಸ ಬೀಜವನ್ನು ’ಮಹಾ ಪ್ರಸಾದ’ವೆಂಬಂತೆ ಪಡೆದು ಊರ ಕಡೆಗೆ ಹೊರಟೆವು. ಅದು ೧/೨ ಕೆ ಜಿಯಷ್ಟಿತ್ತು.

ಮುಂದುವರಿಯುತ್ತದೆ….

ಲೇಖಕರ ಪರಿಚಯ: ಸಂತೋಷ್ ಕೌಲಗಿ ಅವರು ಮಂಡ್ಯ ಜಿಲ್ಲೆ ಮೇಲುಕೋಟೆ ನಿವಾಸಿ.ಜಪಾನಿನ ಸಹಜ ಕೃಷಿಕ ಮಸನೋಬು ಪುಕುವೋಕ ಅವರ ಕೃಷಿ ವಿಚಾರಗಳಿಂದ ಪ್ರಭಾವಿತರಾದವರು. ಮೂರು ದಶಕದ ಹಿಂದೆ ಪುಕುವೋಕ ಅವರು ಬರೆದ “ಒನ್ ಸ್ಟ್ರಾ ರೆವಲ್ಯೂಶನ್” ಕೃತಿಯನ್ನು ಕನ್ನಡಕ್ಕೆ ಒಂದು ಹುಲ್ಲಿನ ಕ್ರಾಂತಿ ಹೆಸರಿನಲ್ಲಿ ಅನುವಾದಿಸಿದರು. ಹೊಸ ಜೀವನ ದಾರಿ ಹೆಸರಿನ ತೋಟದಲ್ಲಿ ಸಹಜ ಕೃಷಿ ಪ್ರಯೋಗಳನ್ನು ಆರಂಭಿಸಿ ಇತರರಿಗೂ ಮಾದರಿಯಾದರು

LEAVE A REPLY

Please enter your comment!
Please enter your name here