ಗೇರು ಕೃಷಿಯು  ಬರೀ ಬರಡು ಭೂಮಿಯನ್ನು ಹಸಿರಾಗಿಸಲು ಉಪಯೋಗಿಸುವ ವೃಕ್ಷಗಳು ಮಾತ್ರವಲ್ಲ;ಕೃಷಿಕನ ಆರ್ಥಿಕ ಭದ್ರತೆಗೆ ಬುನಾಧಿಯಾಗುವಂತಹ  ವರಮಾನದ ಕೊಡುಗೆಯೂ ಹೌದು. ಅಲ್ಲದೇ ಹಲವಾರು ಪ್ರಾಣಿ ಪಕ್ಷಿಗಳಿಗೆ,  ಆಹಾರ ಒದಗಿಸುವ ಈ ಹಣ್ಣಿನ ಮರ. ಬಂಜರು ಭೂಮಿಗೆ  ವರದಾನ.

ಪೋಷಕಾಂಶಗಳು: ಗೇರು ಗಿಡಗಳನ್ನು ನಾಟಿ ಮಾಡುವ ಮೊದಲು ಮಣ್ಣಿಗೆ ಸಾಕಷ್ಟು ಸಾವಯವ ಗೊಬ್ಬರವನ್ನು ಸೇರಿಸಿರಬೇಕು. ಗಿಡಗಳು ಬೆಳೆದು ನಾಲ್ಕು ವರ್ಷವಾದಾಗ  ಪ್ರತಿ ಮರಕ್ಕೆ 10 ರಿಂದ 15 kg ಹಟ್ಟಿಗೊಬ್ಬರವನ್ನು ಒದಗಿಸಬೇಕು . ಇದನ್ನು  ಮರದ ಬುಡದಿಂದ 2 ರಿಂದ 3 ಅಡಿ ಅಂತರದಲ್ಲಿ ವೃತ್ತಾಕಾರವಾಗಿ 10cm  ಅಗಲದ ಗುಂಡಿಯನ್ನು ತೆಗೆದು ಗೊಬ್ಬರವನ್ನು ತುಂಬಿಸಿ ಮಣ್ಣಿನಿಂದ ಮುಚ್ಚಬೇಕು. ಹಸಿರೆಲೆ ಗೊಬ್ಬರವನ್ನು ಗಿಡಗಳ ಬುಡಕ್ಕೆ ನೀಡುವುದು ಒಳ್ಳೆಯದು. ಇದು ಬೇಸಿಗೆಯಲ್ಲಿ ಮರದ ಬುಡಭಾಗದ ಮಣ್ಣು ಸಂಪೂರ್ಣವಾಗಿ ತೇವಾಂಶವನ್ನು ಕಳೆದುಕೊಳ್ಳದಂತೆ  ನೋಡಿಕೊಳ್ಳುತ್ತದೆ… ಇದಕ್ಕಾಗಿ ಮರದ ಬುಡದ ಸುತ್ತಲೂ ಒಣಗಿದ ಎಲೆ ಮತ್ತು ಕೃಷಿತ್ಯಾಜ್ಯ ವಸ್ತುಗಳನ್ನು ಹರಡಬಹುದು. ಗಿಡದ ನಡುವಿನ ಮಣ್ಣನ್ನು ಆಗಾಗ ಸಡಿಲಿಸುತ್ತಿರಬೇಕು. ಇದರಿಂದ ಕಳೆಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಗಿಡಗಳಿಗೆ ಹಾನಿಯನ್ನುಂಟು ಮಾಡಬಹುದಾದ ಕೀಟಗಳ ಮೊಟ್ಟೆ ಮತ್ತು ಕೋಶಗಳು ಇದ್ದರೆ ಅವು  ಕೂಡ ನಾಶವಾಗುತ್ತವೆ. ಗಿಡಗಳ ಬುಡದ ಮಣ್ಣನ್ನು ಕೆದಕುವಾಗ ಬೇರುಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು.

ನಾಟಿ ಸಾಮಾಗ್ರಿಗಳು ಮತ್ತು ಗೊಬ್ಬರ:    ಕಸಿ ಗಿಡಗಳು ನಾಟಿಗೆ ಬೇಕಾಗುವಷ್ಟು ಅಥವಾ ಅತಿ ಸಾಂದ್ರಬೇಸಾಯಕ್ಕೆ ಅವಶ್ಯಕತೆ ಇರುವಷ್ಟು. ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್    ೨೫ಗ್ರಾಂ ಪ್ರತಿ ಗಿಡಕ್ಕೆ / ವರ್ಷಕ್ಕೆ. ರಾಸಾಯನಿಕ ಗೊಬ್ಬರ (ಗ್ರಾಂ ಪ್ರತಿ ಗಿಡಕ್ಕೆ /ವರ್ಷಕ್ಕೆ)

      ಸಾರಜನಕ        ರಂಜಕ    ಪೊಟ್ಯಾಷಿಯಂ

ಮೊದಲನೇಯ ವರ್ಷ  ೬೦  ೬೦  ೬೦

ಎರಡನೇಯ “   ೧೨೫      ೧೨೫      ೧೨೫

ಮೂರನೇಯ “   ೨೫೦      ೧೨೫      ೧೨೫

ನಾಲ್ಕನೇಯ “   ೫೦೦      ೧೨೫      ೧೨೫

೯ ವರ್ಷದ ನಂತರ ಪ್ರತಿ ವರ್ಷ ಗಿಡವೊಂದಕ್ಕೆ—   ೫೦೦      ೨೫೦      ೨೫೦

4 ವರ್ಷದ ಹಾಗೂ ನಂತರದ ಗಿಡಗಳಿಗೆ ಶಿಫಾರಸ್ಸಿನ ಶೇ. 50ರಷ್ಟು ರಾಸಾಯನಿಕ ಗೊಬ್ಬರಗಳ ಜೊತೆಗೆ 40k.gram ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಸತತವಾಗಿ ಉತ್ತಮ ಇಳುವರಿಯನ್ನು ಪಡೆಯಬಹುದು. ಹೆಚ್ಚಿನ ಕೃಷಿಕರು ಗೇರು ಸಸಿಗಳನ್ನು ನೆಟ್ಟು ಮರೆತು ಬಿಡುತ್ತಾರೆ.  ಅದೊಂದು ಕಾಡು ಉತ್ಪತ್ತಿ ಅನ್ನುವ ಭಾವನೆಯಿಂದ…ಆದರೆ ಗೇರು ಗಿಡಗಳನ್ನು ಚೆನ್ನಾಗಿ ಪೋಷಿಸಿದರೆ ಖಂಡಿತಾ  ಫಲವುಂಟು.

ಸಸ್ಯಾಭಿವೃದ್ಧಿ ಅಥವಾ ಸಸ್ಯಸಂವರ್ಧನೆ: ಗೇರು ಹಣ್ಣಿನ ಗಿಡಗಳನ್ನು ಬೀಜದಿಂದ ಉತ್ಪಾದಿಸಬಹುದು  ಹಾಗೂ ಕಸಿ ಕಟ್ಟುವುದರಿಂದಲೂ ಮಾಡಬಹುದು. ಒಂದು ಕೆ.ಜಿಗೆ ಸುಮಾರು 145 ರಿಂದ 330 ಬೀಜಗಳು ಬರುತ್ತವೆ.  ಇದನ್ನು ಬಿತ್ತನೆಗೆ ಬಳಸಬಹುದು.  ಇದಕ್ಕೆ ಯಾವುದೇ ರೀತಿಯ ಬೀಜೋಪಚಾರದ ಅವಶ್ಯಕತೆ ಬೇಕಾಗಿರುವುದಿಲ್ಲ. ಗೇರು ಬೀಜಗಳು ಸುಮಾರು ಒಂದು ವರ್ಷದವರೆಗೂ ಮೊಳೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಸಸಿ ಉತ್ಪಾದನೆಗೆ ಹೊಸ ಬೀಜಗಳನ್ನು ಬಳಸುವುದು ಉತ್ತಮ.

ಬೀಜಗಳನ್ನು ಒಳ್ಳೆಯ ಗುಣಲಕ್ಷಣಗಳಿರುವ  15 ರಿಂದ 25 ವರ್ಷ ವಯಸ್ಸಿನ ಮರಗಳಿಂದ  ಸಂಗ್ರಹಿಸಬೇಕು. ಬಲಿತಿರುವ ಮಧ್ಯಮ ಗಾತ್ರದ ಬೀಜಗಳು ಬಿತ್ತನೆಗೆ ಸೂಕ್ತ. ಅವುಗಳನ್ನು ನೀರಿಗೆ ಹಾಕಿದರೆ ತೇಲಬಾರದು. ನೀರಿನಲ್ಲಿ ಮುಳುಗಬೇಕು. ಇಂತಹ ಬೀಜಗಳನ್ನು ಆರಿಸಿ 2 ಅಥವಾ 3 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ನಂತರ 18 ರಿಂದ  24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಸಸಿ ಉತ್ಪಾದನೆಗೆ ಬಳಸಬೇಕು. 20*15cm ಅಳತೆಯ ಪಾಲಿಥಿನ್ ಚೀಲಗಳಲ್ಲಿ ಮಣ್ಣು ಮರಳು ಮತ್ತು ಸಾವಯವ ಗೊಬ್ಬರದ ಮಿಶ್ರಣವನ್ನು 2:1:1 ಪ್ರಮಾಣದಲ್ಲಿ  ತುಂಬಿಸಿ ಇದರಲ್ಲಿ ಬೀಜಗಳನ್ನು ಅದರ ಕಣ್ಣಿನ ಭಾಗ ಮೇಲಿರುವಂತೆ ಬಿತ್ತಬೇಕು. ಪ್ರತಿದಿನ ನೀರು ನೀಡಬೇಕು .7 ರಿಂದ 10 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. 2ಅಥವಾ 3ನೇ ತಿಂಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

ಕಸಿ ವಿಧಾನ ಅಥವಾ ಗ್ರಾಫ್ಟಿಂಗ್: ಉತ್ತಮ ಇಳುವರಿಯನ್ನು ಪಡೆಯುವ ಉದ್ದೇಶದಿಂದ ಗೇರು ಗಿಡಗಳನ್ನು ಕಸಿ ಮಾಡುವ ಪದ್ಧತಿಯು ರೂಢಿಯಲ್ಲಿದೆ … ಇದನ್ನು ಮೃದು ಕಾಂಡ ಕಸಿ ಎಂದು ಕರೆಯುತ್ತಾರೆ.

ಪಾಲಿಥೀನ್ ಚೀಲಗಳಲ್ಲಿ ಬೆಳೆಸಿದ ಮೂರು ಅಥವಾ ನಾಲ್ಕು ತಿಂಗಳ ವಯಸ್ಸಿನ ಗಿಡಗಳಿಗೆ (root stock)ಒಳ್ಳೆಯ ಇಳುವರಿ ಕೊಡುವ ಮರದ ಕಾಂಡಗಳನ್ನು (scion)ಸಂಗ್ರಹಿಸಿ ಕಸಿ ಕಟ್ಟಬೇಕು . ಕಸಿ ಕಟ್ಟುವಿಕೆಯನ್ನು ವರ್ಷವಿಡೀ ಮಾಡಬಹುದಾದರೂ  ಸೆಪ್ಟಂಬರ್ ನಿಂದ ಮೇ ತಿಂಗಳು ಸೂಕ್ತಕಾಲ. 6 ರಿಂದ 12 ತಿಂಗಳುಗಳ ವಯಸ್ಸಿನ ಕಸಿ ಗಿಡಗಳನ್ನು ನಾಟಿಗೆ ಬಳಸಬಹುದು.

ಗೂಟಿ ವಿಧಾನ: ಅರೋಗ್ಯಯುತವಾದ ಉತ್ತಮ ಇಳುವರಿಯನ್ನು ಕೊಡುತ್ತಿರುವ ಗೇರು ಮರದ ಬಲಿತ ರೆಂಬೆಯನ್ನು  ಆಯ್ಕೆ ಮಾಡಿಕೊಂಡು ಒಂದುವರೆ ಸೆ.ಮೀ ಅಂತರದಲ್ಲಿ ಎರಡು ಉಂಗುರಗಳನ್ನು ಕೆತ್ತಬೇಕು. ಈ ಉಂಗುರಗಳ ಮಧ್ಯದ ಸಿಪ್ಪೆಯನ್ನು ಸುಲಿದು ತೆಗೆಯಬೇಕು. ಈ ಜಾಗಕ್ಕೆ ಸ್ಪಾಗ್ನೋಮೊಸ್ (spagnomoss)ಅಥವಾ ಮರಳು, ಎರೆಗೊಬ್ಬರ, ಸೇರಿಸಿ ಮಾಡಿದ ಮಿಶ್ರಣವನ್ನು  ಒಂದು ಹಿಡಿಯಷ್ಟು ತೆಗೆದುಕೊಂಡು  ಒದ್ದೆ ಮಾಡಿಕೊಂಡು ಸಿಪ್ಪೆ ಸುಳಿದ ಜಾಗಕ್ಕೆ ಮೆತ್ತಿ ಇದರ ಸುತ್ತ ಪಾಲಿಥೀನ್ ಶೀಟಿನಿಂದ  ಕಟ್ಟಬೇಕು. ಕೆಲವರು ಇದಕ್ಕೆ ಗೋಣಿ ಬಟ್ಟೆಯನ್ನು ಕೂಡ ಉಪಯೋಗಿಸುತ್ತಾರೆ. ಇದರಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಕೆಲವು ವಾರಗಳಲ್ಲಿ ಗೂಟಿ ಕಟ್ಟಿದ ಬಾಗದಲ್ಲಿ  ಬೇರುಗಳು ಮೂಡುತ್ತವೆ. ಒಂದೆರಡು ತಿಂಗಳುಗಳಲ್ಲಿ ಬೇರುಗಳು ಚೆನ್ನಾಗಿ ಬಂದ ಮೇಲೆ ತಾಯಿ ಮರದಿಂದ  ಕತ್ತರಿಸಿ ತೆಗೆದು  ಒಂದು ಕುಂಡದಲ್ಲಿ ಅಥವಾ ಪಾಲಿಥೀನ್ ಚೀಲದಲ್ಲಿ  ನೆಟ್ಟು ನೆರಳಿನಲ್ಲಿ ಬೆಳೆಸಬೇಕು. ನಂತರ ಸೂಕ್ತ ಜಾಗದಲ್ಲಿ ನಾಟಿ ಮಾಡಬಹುದು.

ಭೂಮಿ ಸಿದ್ಧ ಪಡಿಸುವುದು ಮತ್ತು ನಾಟಿ ವಿಧಾನ: ಗೇರು ಕೃಷಿಗೆ ಸಿದ್ಧಪಡಿಸಿದ ಭೂಮಿಯಲ್ಲಿ7.5ಮೀ ಅಂತರದಲ್ಲಿ 60*60*60 cm ಅಳತೆಯ ಗುಣಿಗಳನ್ನು ತೆಗೆಯಬೇಕು. ಈ ಗುಣಿಗಳನ್ನು ಮೇಲ್ಮಣ್ಣು ಮತ್ತು 25kg ಸಾವಯವ ಗೊಬ್ಬರದ ಮಿಶ್ರಣದಿಂದ ತುಂಬಬೇಕು. ಕಸಿ ಗಿಡಗಳನ್ನು ಗುಣಿಗಳ ಮಧ್ಯದಲ್ಲಿ ನೆಡಬೇಕು.. ಗಿಡಗಳನ್ನು ನಾಟಿ ಮಾಡಲು ಮುಂಗಾರು ಹೆಚ್ಚು ಸೂಕ್ತ. ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ  ಮೇ-ಜೂನ್ ಮತ್ತು ಸೆಪ್ಟಂಬರ್ – ಅಕ್ಟೋಬರ್ ತಿಂಗಳುಗಳಲ್ಲಿ ಗಿಡಗಳಿಗೆ ಒದಗಿಸಬೇಕು. ಆದರೆ ಕರಾವಳಿಯಲ್ಲಿ ಆಗಸ್ಟ್- ಸೆಪ್ಟಂಬರ್ ತಿಂಗಳಲ್ಲಿ ಒಂದೇ ಕಂತಿನಲ್ಲಿ ಕೊಡುವುದು ವಾಡಿಕೆ.

ಗಿಡಗಳನ್ನು ನಾಟಿ ಮಾಡಿದ  ಪ್ರಾರಂಭಿಕ ವರ್ಷಗಳಲ್ಲಿ ಗಿಡಗಳು ನೇರವಾಗಿ ಬೆಳೆಯಲು ಬಗಲಲ್ಲಿ  ಚಿಗುರುವ ರೆಂಬೆಗಳನ್ನು ತೆಗೆಯಬೇಕು ಮತ್ತು ಸ್ಥಳೀಯ ಹವಾಮಾನಕ್ಕೆ ಹಾಗೂ ಭೂಗುಣಕ್ಕೆ ಹೊಂದಿಕೊಂಡಂತೆ ಅಂತರಬೆಳೆಯಾಗಿ ತರಕಾರಿ, ಧ್ವಿದಳ ಧಾನ್ಯ ಮತ್ತು ಹುಲ್ಲಿನ ಬೆಳೆಯನ್ನುಬೆಳೆಯಬಹುದು..

ಮರಗಳು ದೊಡ್ಡದಾದ ಮೇಲೆ ಕರಿಮೆಣಸು  ಅಥವಾ ವೆಣಿಲ್ಲಾ ಬಳ್ಳಿಗಳನ್ನು ಮಧ್ಯಂತರ  ಬೆಳೆಯಾಗಿ ಬೆಳೆಯಬಹುದು. 2 ಅಥವಾ 3 ವರ್ಷಕ್ಕೊಮ್ಮೆ ಒಣಗಿದ ಮತ್ತು ರೋಗ ಕೀಟಗಳ ಭಾದೆಗೆ ಒಳಗಾದ ಹಾಗೂ ಅಡ್ಡಾದಿಡ್ಡಿಯಾಗಿ ಬೆಳೆದ ರೆಂಬೆ -ಕೊಂಬೆಗಳನ್ನು  ಕತ್ತರಿಸಿ ತೆಗೆದು ಗಾಳಿ-ಬೆಳಕು ಬೀಳುವಂತೆ ಮಾಡುವುದರಿಂದ ಇಳುವರಿ ಹೆಚ್ಚಿಸಿಕೊಳ್ಳಬಹುದು. ಕಳೆಗಿಡಗಳನ್ನು ಆದಷ್ಟು ನಿಯಂತ್ರಿಸಬೇಕು. ಜನವರಿಯಿಂದ ಮಾರ್ಚ್ ವರೆಗೂ 15 ದಿನಗಳಿಗೊಮ್ಮೆ ಪ್ರತಿ ಗಿಡಗಳಿಗೆ 40-50ltr ನೀರೊದಗಿಸಬೇಕಾಗುತ್ತದೆ.

ಕೀಟಗಳು:  ಟೀ ಸೊಳ್ಳೆಗಳು,  ಕಾಂಡ ಕೊರೆಯುವ ಹುಳು, ಎಲೆ ಸುರಂಗ ಕೀಟ, ಥ್ರಿಪ್ಸ್ ನುಸಿ. ರೋಗಗಳು: ತುದಿ ಒಣಗುವಿಕೆ. ಎಲೆಚುಕ್ಕೆ ರೋಗ

ಟೀ ಸೊಳ್ಳೆ: ಗೋಡಂಬಿ ಬೆಳೆಗೆ ಬರುವ ಪ್ರಮುಖ ಕೀಟ ಭಾದೆಗಳಲ್ಲಿ  ಇದೂ ಒಂದು .ಈ ಸೊಳ್ಳೆಯು ಕಂದು ಬಣ್ಣದಾಗಿದ್ದು ಕಾಲುಗಳು ಉದ್ದವಾಗಿರುತ್ತವೆ. ಈ ಕೀಟವು ತನ್ನ ಒಂದು ತಿಂಗಳ ಆಯುಷ್ಯದಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ. ಗೇರು ಮರದಲ್ಲಿ ಹೂ ಬಿಡುವ ಹಂತದಲ್ಲಿ ಇದರ ಭಾದೆ ಹೆಚ್ಚಾಗಿರುತ್ತದೆ. ಅತೀ ತೀವ್ರ ಸ್ವರೂಪದಲ್ಲಿ  ಗೋಡಂಬಿ ಬೆಳೆಯನ್ನು ಕಾಡುತ್ತದೆ ಟೀ ಸೊಳ್ಳೆಯ ದಾಳಿಗೆ ತುತ್ತಾದ  ಮರದ ಚಿಗುರೆಲೆಗಳು ಮತ್ತು ಪುಷ್ಪಮಂಜರಿಯು ಒಣಗಿ ಹೋಗುತ್ತದೆ.  ಇದರಿಂದ  ಸುಮಾರು 30ರಷ್ಟು ಬೆಳೆಯು ನಷ್ಟವಾಗುತ್ತಿರುವುದು ಕಂಡು ಬಂದಿದೆ…ಅಕ್ಟೋಬರ್ ಮಾರ್ಚ್ ಅವಧಿಯಲ್ಲಿ ಈ ಕೀಟದ ಭಾದೆ ಹೆಚ್ಚು.

ಚಹಾ ಸೊಳ್ಳೆಯ ನಿಯಂತ್ರಣಕ್ಕಾಗಿ  ಹೊಸ ಚಿಗುರು ಬರುವ ಸಮಯದಲ್ಲಿ..1.5 ml ಮಾನೋಕ್ರೋಟೊಪಾಸ್ ಅಥವಾ 1.7ml ಡೈಮಿಥೋಯೇಟ್ ಅಥವಾ 4gram ಕರ್ಬಾರಿಲ್ ನ್ನು ಪ್ರತೀ ಲೀಟರ್  ನೀರಿನಲ್ಲಿ ಮಿಶ್ರ ಮಾಡಿ ಸಿಂಪಡಿಸಬೇಕು.  ಹೂ ಬಿಡುವ ಸಮಯದಲ್ಲಿ ಮತ್ತು  ಕಾಯಿ ಕಚ್ಚುವ ಸಮಯದಲ್ಲಿ ಮತ್ತೆ ಪುನರಾವರ್ತಿಸಬೇಕು..

ಕಾಂಡ ಅಥವಾ ಬೇರು ಕೊರೆಯುವ ಕೀಟ: ಕಾಂಡ ಕೊರೆಯುವ ಹುಳು ಅಥವಾ ಕೀಟವನ್ನು ವೈಜ್ಞಾನಿಕವಾಗಿ ಪ್ಲೋಕಿಡೀರಸ್ ಪೆರುಜಿನಿಯಸ್ ಎಂದು ಕರೆಯುತ್ತಾರೆ. ಇದೊಂದು ದಪ್ಪನೆಯ ದುಂಬಿ. ಇದು ಬೂದು ಬಣ್ಣದಾಗಿದ್ದು  ಉದ್ದವಾದ ಕುಡಿ ಮೀಸೆಗಳಿರುತ್ತವೆ. ಗಡುಸಾದ ರೆಕ್ಕೆಗಳಿರುತ್ತವೆ. ಈ ಕೀಟಗಳು ಮರದ ಬುಡದಲ್ಲಿರುವ ರಂಧ್ರಗಳಲ್ಲಿರುತ್ತವೆ. ಮರದ ಬುಡಭಾಗದ ರೆಂಬೆ ಮತ್ತು ತೊಗಟೆಯನ್ನು ಕೊರೆದು ಒಳಗಿನ ಅಂಗಾಂಶವನ್ನು ತಿನ್ನುವುದರಿಂದ ಮರದ ಬೆಳವಣಿಗೆ ಮತ್ತು ಉತ್ಪಾದಕತೆ ಶಕ್ತಿ ಕುಂಠಿತವಾಗುತ್ತದೆ…ಈ ಕೀಟದ ಭಾದೆಗೆ ಒಳಗಾದ ಕಾಂಡದ ಭಾಗದಿಂದ ಅಂಟು ಮತ್ತು ಪುಡಿ ಹೊರ ಚೆಲ್ಲುತ್ತದೆ.  ಅಂತಹ ತೊಗಟೆಯ ಭಾಗವನ್ನು ಕೆರೆದು ತೆಗೆದು  ಅಲ್ಲಿ ಬೇವಿನ ಎಣ್ಣೆಯನ್ನು ಹಚ್ಚಬೇಕು.

ಭಾದೆಗೊಳಗಾದ ಭಾಗಗಳನ್ನು ಸಂಗ್ರಹಿಸಿ ನಾಶಪಡಿಸುವುದರಿಂದ  ತುಸುಮಟ್ಟಿಗೆ ತಡೆಗಟ್ಟಬಹುದು. ಕೆಲವು ಶಿಲೀಂದ್ರ ನಾಶಕಗಳನ್ನು ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯೊಂದಿಗೆ ಮಿಶ್ರಮಾಡಿ ಮರದ ಬುಡಕ್ಕೆ ಹಾಕುವುದರಿಂದ  ಶಿಲೀಂಧ್ರದ ಬೆಳವಣಿಗೆ ಆಗಿ ಈ ಕೀಟ ಭಾದೆ ಕಡಿಮೆಯಾಗುತ್ತದೆ. ಕಾಂಡಕೊರೆಯುವ ಕೀಟದ ಭಾದೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ 0.1 ಕಾರ್ಬರಿಲ್ ದ್ರಾವಣವನ್ನು ಕಾಂಡದ ರಂಧ್ರಗಳಲ್ಲಿ ಮತ್ತು ತೊಗಟೆ ತೆಗೆದ ಭಾಗದಲ್ಲಿ ಲೇಪಿಸಬೇಕು. ಹೀಗೆ ಮಾಡುವುದರಿಂದ  ಈ ಹುಳುಗಳ ಹಾವಳಿಯನ್ನು ತಪ್ಪಿಸಬಹುದು.

ತುದಿ ಒಣಗುವಿಕೆ: ತುದಿ ಒಣಗುವಿಕೆ ಕಾಣಿಸಿಕೊಂಡಲ್ಲಿ ಒಣಗಿದ ಭಾಗವನ್ನು  ಕತ್ತರಿಸಿ ನಂತರ 3 gram ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2gram ಕ್ಯಾಪ್ಟಾಫಾಲ್ ಒಂದು ಲೀಟರ್ ನೀರಿನಲ್ಲಿ ಕರಗಿಸಿ,  ಬಾಧಿತ ಗಿಡಗಳಿಗೆ ಸಿಂಪಡಿಸಬೇಕು…

ಎಲೆಚುಕ್ಕೆ ರೋಗ: ಇದರ  ನಿಯಂತ್ರಣಕ್ಕೆ 3gram ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2gram  ಮ್ಯಾಂಕೋಜೆಬ್ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ: ಗೋಡಂಬಿ ಅಥವಾ ಗೇರು ಹಣ್ಣುಗಳ  ಕೊಯ್ಲು ಕಾಲ ಬೇಸಿಗೆ.  ನಾಟಿ ಮಾಡಿದ ಮೂರನೇ ವರ್ಷದಿಂದ ಇಳುವರಿ ಪ್ರಾರಂಭಗೊಂಡು  8-10 ವರ್ಷದವರೆಗಿನ ಪ್ರತಿ ಮರದಿಂದ ವರ್ಷವೊಂದಕ್ಕೆ ಸರಾಸರಿ 8 ರಿಂದ 10 ಕಿ.ಗ್ರಾಂ ಗೇರು ಬೀಜವನ್ನು ಪಡೆಯಬಹುದು. ಸಾಮಾನ್ಯವಾಗಿ ಹಣ್ಣುಗಳನ್ನು ಹೆಚ್ಚಾಗಿ ಬಳಸದಿರುವುದರಿಂದ  ಬಿದ್ದ ಗೇರು ಹಣ್ಣುಗಳಿಂದ ಬೀಜಗಳನ್ನಷ್ಟೇ  ಸಂಗ್ರಹಿಸಲಾಗುತ್ತದೆ.

ಸಾಮಾನ್ಯವಾಗಿ ಗೋಡಂಬಿ ಮರಗಳ ಆರೈಕೆಯಲ್ಲಿ  ನಿರ್ಲಕ್ಷ್ಯ ಧೋರಣೆಯನ್ನು ತೋರುವುದೇ ಹೆಚ್ಚು. ಒಳ್ಳೆಯ ಆರೈಕೆ ನಿರ್ವಹಣೆಯನ್ನು  ಮಾಡಿದಲ್ಲಿ  ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಏಳನೇಯ ವರ್ಷದಿಂದ ಸರಾಸರಿ  ಪ್ರತಿ ಹೆಕ್ಟೇರ್ ಗೆ  1600kgಯಷ್ಟು ಗೋಡಂಬಿಯನ್ನು 30 ವರ್ಷಗಳವರೆಗೆ ನಿರೀಕ್ಷಿಸಬಹುದು.

ಲೇಖಕರು: ಡಾ. ಸುಜಾತ, ಹಿರಿಯ ಕೃಷಿವಿಜ್ಞಾನಿ

LEAVE A REPLY

Please enter your comment!
Please enter your name here