ಲೇಖಕರು: ಡಾ. ಬಿ.ಎಸ್. ಹರೀಶ್

ಹೌದು, ಕೇಳಿದರೆ ಆಶ್ಚರ್ಯ, ನಂಬವುದು ಕಷ್ಟ. ಆದರೂ, ಸತ್ಯ. ಸಾಧ್ಯವೆಂದು ತೋರಿಸಿದ್ದು ಶಂಕರೇಗೌಡ್ರು. ಮೈಸೂರು ತಾಲ್ಲೂಕಿನ ದೇವಗಳ್ಳಿಯವರು. ದಶಕದಿಂದ ಸಾವಯವದ ನಂಟು. ಆರೆಕರೆಯಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆ. ಏಳು ಗುಂಟೆ, ಆರೆಕರೆ, ಏನಿದು? ಇರಿ, ನಾನು ಹೇಳ ಹೊರಟಿರುವುದು, ಇವರು ಏಳು ಗುಂಟೆಯಲ್ಲಿ ಬೆಳೆವ ಅರಿಶಿಣದ ಬಗೆಗೆ ಮಾತ್ರ.

ಅರಿಶಿಣವೇ ಏಕೆ: ಗೌಡರು ಬೆಳೆವ ಬೆಳೆಗಳಲ್ಲಿ ಅರಿಶಿಣವೂ ಒಂದು. ಸದ್ಯ ಇವರು ಬೆಳೆಯುತ್ತಿರುವ ತಳಿ ‘ಈರೋಡ್ ಲೋಕಲ್’. ಮೊನ್ನೆ ತಾಯೂರಿನಲ್ಲಿ ಅರಿಶಿಣ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಗೌಡರು ಸಹ ಕೃಷಿಕರೊಟ್ಟಿಗೆ ತಮ್ಮ ಲಕ್ಷ ಗಳಿಕೆಯ ಬಗೆಗೆ ವಿವರಿಸಿದರು. “ಅರಿಶಿಣಕ್ಕೆ ಹೆಚ್ಚು ಕೀಟ-ರೋಗದ ಬಾಧೆ ಇಲ್ಲ, ಸಂಸ್ಕರಿಸಿ ವರ್ಷಕ್ಕೂ ಹೆಚ್ಚು ಅವಧಿ ಶೇಖರಿಸಿಡಬಹುದು, ಒಮ್ಮೆಲೇ ಮಾರಬೇಕೆಂದಿಲ್ಲ, ಬೇಡಿಕೆಯಲ್ಲೂ ಸ್ಥಿರತೆ ಇದೆ, ಔಷಧಿ ಗುಣಗಳ ಆಗರ, ಹೆಚ್ಚಾಗಿ ಅದು ನಮ್ಮ‌ಸಂಸ್ಕೃತಿಯ ಭಾಗ” ಗೌಡರ ಮಾತು.

ಏಳೇ ಗುಂಟೆಯಲ್ಲೇಕೆ ಅರಿಶಿಣ: ದಶಕದ ಹಿಂದೆ ಒಂದೆರಡು ಬೆಳೆ ಬೆಳೆದು ಮಾರುಕಟ್ಟೆಗೆ ಹಾಕುತ್ತಿದ್ದ ಗೌಡರಿಗೆ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಲೇ ಇಲ್ಲ ಅನಿಸಿತು. ಚಿಂತನೆಯ ಫಲವಾಗಿ, ಎರಡು ಬೆಳೆ ಬದಲಿಗೆ ಹತ್ತಾರು ಬೆಳೆ ಬೆಳೆಯಲು ಶುರು ಮಾಡಿದರು. ಅದರಲ್ಲಿ ಅರಿಶಿಣ ಕೂಡ ಒಂದು. ಆಗಲೂ ಸಹ ಕೃಷಿ ಅಷ್ಟೊಂದು ಲಾಭದ ಕಾಯಕ ಎನಿಸಲೇ ಇಲ್ಲ. ಮರುಚಿಂತನೆ, ಯೋಚನೆ, ಬೆಳೆದುದನ್ನು ನಾನೇ ಏಕೆ ಮಾರಬಾರದೆಂಬ ಪ್ರಶ್ನೆ? ಫಲವಾಗಿ ಶುರುವಾಯಿತು ನೇರ ಮಾರಾಟ.

ಹತ್ತಿರದಲ್ಲೇ ಮೈಸೂರು ಇದ್ದದ್ದು ಮಾರಾಟಕ್ಕೆ ಅನುಕೂಲವಾಯಿತು. ಇವರ ವಿಶೇಷವೆಂದರೆ ಎಷ್ಟನ್ನು ಸ್ವತಃ ಮಾರಲು ಸಾಧ್ಯವೋ ಅಷ್ಟನ್ನು ಮಾತ್ರ ಬೆಳೆವುದು. ಅಂತೇಯೇ ಒಂದೆರಡು ವರ್ಷಗಳ ಪ್ರಯೋಗ-ಅನುಭವದ ಮೇರೆಗೆ ವರ್ಷಕ್ಕೆ ಮುನ್ನೂರಿಂದ-ನಾನೂರು ಕಿಲೋ ಅರಿಶಿಣ ಪುಡಿ ಮಾರಬಹುದೆಂಬುದನ್ನು ಕಂಡುಕೊಂಡರು. ಅಷ್ಟು ಪುಡಿ ತಯಾರಿಸಲು ಇಪ್ಪತ್ತು ಕ್ವಿಂಟಲ್ ಹಸಿ ಅರಿಶಿಣ ಬೇಕು. ಅಷ್ಟು ಇಳುವರಿ ತೆಗೆಯಲು ಸಾವಯವದಲ್ಲಿ ಕನಿಷ್ಟ ಏಳು ಗುಂಟೆಯಾದರೂ ಬೇಕೆಂಬುದನ್ನು ಕಂಡುಕೊಂಡರು. ಅಂದಿನಿಂದ ಇವರ ಅರಿಶಿಣ ಏಳು ಗುಂಟೆಯ ಆಸು-ಪಾಸಿನಲ್ಲೇ ಇದೆ. “ಸರ್ ಏಳು ಗುಂಟೆ ಬೆಳೆದು ಬೀಳಲಿಲ್ಲ ನಾನು, ಬದಲಿಗೆ ಆರ್ಥಿಕವಾಗಿ ಎದ್ದಿದ್ದೇನೆ” ಎನ್ನುತ್ತಾರೆ.

ಬೆಳೆಯುವ ಬಗೆ: ಹೇಳಿ-ಕೇಳಿ ಗೌಡರದ್ದು ಸಾವಯವ ಕೃಷಿ. ಕೊಟ್ಟಿಗೆ ಗೊಬ್ಬರ, ಬೇವಿನಿಂಡಿ, ಇವರೇ ಮಾಡಿಕೊಳ್ಳುವ ಎರೆಗೊಬ್ಬರ, ಜೀವಾಮೃತ, ಈಗೀಗ ಪ್ರಯೋಗಿಸುತ್ತಿರುವ ‘ವೇಸ್ಟ್ ಡಿಕಂಪೋಸರ್’. ಇವೇ ಮೊದಲಾದ ಮುಖ್ಯ ಒಳಸುರಿಗಳು. ಬೆಳೆದುದೆಲ್ಲವನ್ನೂ ಮಾರದ ಗೌಡರು ಬಿತ್ತನೆಗೆ ಬೇಕಾಗುವಷ್ಟನ್ನು ಎಚ್ಚರಕಿಯಿಂದ ಸಂಗ್ರಹಿಸಿಡುತ್ತಾರೆ. ” ಸಾರ್ ರೈತ ಆದೋನು, ಅದ್ರಲ್ಲೂ ಸಾವಯವ ಕೃಷಿ ಮಾಡೋರು ಬಿತ್ತನೆಗೆ ಕೈಚಾಚಬಾರ್ದು, ನಮಗೆ ಬೇಕಾದಷ್ಟು ಬೀಜ-ಬಿತ್ತನೆಯನ್ನು ನಾವೇ ಮಾಡ್ಕೋಬೇಕು” ಅಂತಾರೆ.

ಶೇಖರಿಸಿಟ್ಟ ಅರಿಶಿಣ ಬಿತ್ತನೆಯನ್ನು ಪ್ರತಿ ವರ್ಷ ನಾಟಿ ಮಾಡುವುದು ಮೇ ಹದಿನೈದರೊಳಗೆ ರೋಗ-ಕೀಟ ನಿರ್ವಹಣೆಗೆ ಟ್ರೈಕೋಡರ್ಮ, ಸುಡೋಮೊನಾಸ್, ಬೇವಿನೆಣ್ಣೆ, ಹುಳಿ ಮಜ್ಜಿಗೆ ಇತ್ಯಾದಿ. ಎರಡಡಿ ಸಾಲುಗಳ ನಡುವೆ ಮುಕ್ಕಾಲು ಅಡಿ ಅಂತರದಲ್ಲಿ ಅರಿಶಿಣ ನಾಟಿ ಮಾಡಿತ್ತಾರೆ. ಏಳು ಗುಂಟೆಗೆ ಹೆಚ್ಚೂ-ಕಡಿಮೆ ನಾಲ್ಕು ಸಾವಿರ ಗಿಡಗಳ ಲೆಕ್ಕ. ಅರಿಶಿಣ ಕಟಾವು ಮಾಡೋದು ಸಂಕ್ರಾಂತಿಯ ನಂತರ, ಸೋಗೆಲ್ಲ ಒಣಗಿದಾಗ ಅದು ಕಟಾವಿಗೆ ಸಿದ್ದ.

ಸಂಸ್ಕರಣೆ ಹೀಗೆ: “ಗಡ್ಡೆ ಕಿತ್ತು, ಮಣ್ ಬಡ್ದು, ಸೋಗೆಲ್ಲ ಬಿಡ್ಸಿ ಮೂರ್ ದಿವ್ಸ ಬಿಟ್ಟು ಆಮೇಲೆ ಬೇಯ್ಸಿ ಎಂಟಂತ್ ದಿನ ಒಣಗ್ಸೋದು, ಅದಾದ ಮೇಲೆ ಪಾಲಿಷ್ ಮಾಡ್ಸಿ ಚೀಲಕ್ಕೆ ತುಂಬಿ ಇಡೋದು, ಬೇಕ್ ಬೇಕಾದಾಗ ತಗೊಂಡು ಪೌಡ್ರು ಮಾಡ್ಸಿ ಮಾರೋದು ಸಾರ್” ಗೌಡರ ಮಾತು. ನಾಲ್ಕು ಸಾವಿರ ಗಿಡಕ್ಕೆ ಏನಿಲ್ಲವೆಂದರೂ ಗಿಡಕ್ಕೆ ಅರ್ಧ ಕಿಲೋ ಹಸಿ ಅರಿಶಿಣದ ಲೆಕ್ಕದಲ್ಲಿ ಇವರಿಗೆ ಸಿಗೋ ಇಳುವರಿ ಇಪ್ಪತ್ತು ಕ್ವಿಂಟಲ್. ಕ್ವಿಂಟಲ್ ಹಸಿ ಅರಿಶಿಣದಿಂದ ಬೇಯಿಸಿ ಒಣಗಿಸಿ ಪುಡಿ ಮಾಡಿದರೆ ಸಿಗುವುದು ಇಪ್ತತ್ತು ಕಿಲೋ. ಅಂದರೆ, ಇಪ್ಪತ್ತು ಕ್ವಿಂಟಲ್ ಗೆ ನಾನೂರು ಕಿಲೋ ಅರಿಶಿಣ ಪುಡಿ.

ಲಕ್ಷದ ಗುಟ್ಟು: ಈರೋಡಿಗೆ ಸೇಲಂಗೋ ಕಳುಹಿಸದರೆ ನಾನೂರು ಕಿಲೋ ಸಂಸ್ಕರಿಸಿದ ಅರಿಶಿಣಕ್ಕೆ ಇವತ್ತಿನ ಬೆಲೆಯಲ್ಲೆ ಹೆಚ್ಚೆಂದರೆ ಸಿಗೋ ಆದಾಯ ಇಪ್ಪತ್ತೆಂಟು ಸಾವಿರ. ಗೌಡರ ಆಲೋಚನೆಯೇ ಬೇರೆ. “ಸಾರ್ ಮನೆ ಮುಂದೆ ತಗೋಳೋರು ಇರೋವಾಗ ಆ ಕಷ್ಟ ಯಾಕೇಳಿ, ಅದೂ ಅಷ್ಟು ಕಡಿಮೆ ಆದಾಯ?” ಪ್ರಶ್ನಿಸುವ ಸರದಿ ಅವರದ್ದು. “ಮತ್ತೇನ್ಮಾಡ್ತೀರಾ ಗೌಡ್ರೆ, ಲಕ್ಷ ಹೆಂಗೆ ಅಂತ ಹೇಳಲೇ ಇಲ್ಲಾ?” ನನ್ನ ಪ್ರಶ್ನೆ. “ಏನಿಲ್ಲ ಸರ್, ನನಗೆ ನನ್ನದೇ ಗ್ರಾಹಕ ಬಳಗ ಇದೆ, ಹತ್ತತ್ರ ಒಂದೆಂಟ್ನೂರ್ ಜನ ಅನ್ಕೋಳಿ, ಒಬ್ಬಬ್ರೂ ಅರ್ಧ ಕಿಲೋ ಅರಿಶಿಣ ತಗೊಂಡ್ರೂ, ನನ್‌ ಅರಿಶಿಣ ತೀರೋಯ್ತು” ಗೌಡರ ಉತ್ತರ.

ಅದ್ಸರಿ ಗೌಡ್ರೆ, ಲಕ್ಷ ಹೆಂಗೇಂತ ಹೇಳ್ಬಿಡಿ, ಸ್ವಲ್ಪ ಇರಿ ಸರ್. “ನೋಡಿ, ಕಷ್ಟ ಪಟ್ಟು ಬೆವರು ಸುರ್ಸಿ ಬೆಳೆಯೋರು ನಾವು, ಲಾಭದ ಮುಕ್ಕಾಲು ಪಾಲು, ನಮ್ಗೇ ಬರ್ಬೇಕಲ್ವ? ಅದಕ್ಕೇ ನಾನು ಬೆಳೆದದ್ದಕ್ಕೆಲ್ಲಾ ನಾನೇ ರೇಟು ಫಿಕ್ಸು ಮಾಡ್ತೀನಿ, ಹಂಗೇ ಅರಿಶಿಣಕ್ಕೂ ಅಷ್ಟೇ” ಅಂದ್ರು. ಗೌಡರ ಸಾವಯವ ಅರಿಶಿಣ ಪುಡಿಯ ದರ ಕಿಲೋಗೆ ಮುನ್ನೂರು ರೂ. ಇವರು ಕಳೆದೊಂದು ವರ್ಷದಲ್ಲಿ ಮಾರಿದ್ದು ಕಿಲೋಗೆ  ಮುನ್ನೂರರ ದರದಲ್ಲಿ ನಾನೂರು ಕಿಲೋ. ನೀವೇ ಲೆಕ್ಕ ನೋಡಿ. ಸಿಕ್ಕ ಆದಾಯ ಲಕ್ಷದ ಮೇಲೆ ಇಪ್ಪತ್ತು ಸಾವಿರ. ಮೇಲಿನದ್ದನ್ನು ಬಿಟ್ಟು ಬಿಡು, ಅದು ಏಳು ಗುಂಟೆ ಅರಿಶಿಣ ಬೆಳೆಯಲು, ಕೀಳಲು, ಬೇಯಿಸಲು, ಒಣಗಿಸಲು, ಪಾಲಿಷ್ -ಪೌಡರ್ ಮಾಡಿ ಪ್ಯಾಕ್ ಮಾಡಲು ತಗಲುವ ಖರ್ಚು. “ಉಳಿದದ್ದು ಒಂದೇ ಲಕ್ಷ, ಅದೂ ಏಳು ಗುಂಟೆಗೆ, ಇಷ್ಟು ಸಾಕಲ್ವ ಸಾರ್?” ಗೌಡರ ಕಟ್ಟ ಕಡೆಯ ಪ್ರಶ್ನೆ.

ಮಾತು ಮುಗಿಸುವ ಮುನ್ನ ಗೌಡರು ನನ್ನ ಕೈಗೂ ಅರ್ಧ ಕಿಲೋ ಅರಿಶಿಣ ಪುಡಿಯ ಪ್ಯಾಕ್ ಇಟ್ಟು, ಬಳಸಿ ನೋಡಿ ಸಾರ್, ಅಭಿಪ್ರಾಯ ತಿಳಿಸಿ, ಚೆನ್ನಾಗಿದ್ರೆ ನಿಮ್ಮ ಸ್ನೇಹಿತರಿಗೆಲ್ಲಾ ಹೇಳಿ ಅಂದ್ರು, ನಾನು ಅವರ ಕೈಗೆ ನೂರೈವತ್ತು ರೂಪಾಯಿ ಇಟ್ಟು ಹೊರಟೆ. ಬೆಳೆಯುವುದರ ಜೊತೆಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳಬೇಕೆನ್ನುವ ರೈತರಿಗೆ ಶಂಕರೇಗೌಡರು ನಿಜಕ್ಕೂ ಮಾದರಿ. ಅವರನ್ನ ನೋಡಲೇಬೇಕು, ಅವರೊಟ್ಟಿಗೆ ಮಾತ‌ನಾಡಲೇಬೇಕು ಅಂತ ನಿಮಗೆ ಅನ್ನಿಸಿರಬಹುದು. ತಡಮಾಡದೆ 9480909359 ಕರೆ ಮಾಡಬಹುದು

LEAVE A REPLY

Please enter your comment!
Please enter your name here