ತರಕಾರಿ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡ ಮಹಿಳೆಯರು !

0
ಲೇಖಕರು: ಶಿವಾನಂದ ಕಳವೆ

ಒಂದೂವರೆಯಿಂದ ಎರಡು ಸಾವಿರ ಎಕರೆ ಕಡಲ ಅಂಚಿನ ಭೂಮಿ,ಒಂದು ಅಂದಾಜಿನ ಪ್ರಕಾರ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೇಸಿಗೆ ತರಕಾರಿ ಬೆಳೆದು ಮಾರುವ ಪರಂಪರೆ ಉಳಿಸಿಕೊಂಡಿವೆ.ಇವರ ಬೇಲಿ, ನೀರಾವರಿ ಬಾವಿ, ನೀರಾವರಿ ವಿಧಾನ ಕೂಡ ವಿಶೇಷ. ಮುಂಜಾನೆ ಇಬ್ಬನಿ, ತರಕಾರಿ ಎಲೆಯಲ್ಲಿ ಬಿದ್ದು ಒಣಗಿದರೆ ಬೆಳೆಗೆ ಸಮಸ್ಯೆ. ಮುಂಜಾವು ಅದಕ್ಕೆ ನಾಲ್ಕು ಗಂಟೆಗೆ ಎದ್ದು ಬಿಂದಿಗೆಯಲ್ಲಿ ನೀರುಣಿಸಬೇಕು.

ಅರೇ ಅಷ್ಟು ಬೇಗ ಎದ್ದು ಕೆಲಸ ಮಾಡ್ತಾರಾ? ಕೇಳಬೇಡಿ .ಇವರು ನಿದ್ದೆ ಯಾವಾಗ ಮಾಡ್ತಾರೆ ಎಂಬುದು ನೀವೇ ಯೋಚಿಸಿ. ಮಧ್ಯಾನ್ಹ ನಾಲ್ಕು ಗಂಟೆಗೆ ಕೊಯ್ಲು ಮಾಡಿ ಮನೆಗೆ ಬುಟ್ಟಿ,ಚೀಲ ತರಬೇಕು. ರಾತ್ರಿ ಇವನ್ನು ಆಟೋ ಅಥವಾ ತಲೆ ಹೊರೆಯಲ್ಲಿ ಗೋಕರ್ಣ ಪಟ್ಟಣಕ್ಕೆ ಒಯ್ದು ಮಧ್ಯರಾತ್ರಿ ನಂತರ ತರಕಾರಿಯ ಸಗಟು ವಹಿವಾಟು ಶುರು.

ಇದು ಮುಗಿದ ಬಳಿಕ ಅವರಲ್ಲಿಯೇ ಕೆಲವರು ಕೆಲವು ತರಕಾರಿ ಖರೀದಿಸಿ ಅಂಕೋಲಾ,ಕುಮಟಾ, ಶಿರಸಿ, ಸಿದ್ದಾಪುರ, ಮಾದನಗೇರಿ ಮುಂತಾದ ಕಡೆ ಮಾರಲು ಒಯ್ಯುವ ತಯಾರಿ ಮಾಡುತ್ತಾರೆ.ತರಕಾರಿ ಸಗಟು ಮಾರಾಟ ಮಾಡಿ ಮನೆ ತಲುಪುವ ಹೊತ್ತಿಗೆ ಮುಂಜಾನೆ ಮೂರು ನಾಲ್ಕು ಗಂಟೆ ಆಗುತ್ತದೆ.ಈಗ ಬೆಳೆಗೆ ನೀರು ಹಾಕಲು ಹೋಗಬೇಕು.ನಾನು ಹಿಂದೆ ಸಂದರ್ಶನ ಮಾಡಿದ ಕೆಲವು ಮಹಿಳೆಯರು.ನಿತ್ಯ 400-500 ಬಿಂದಿಗೆ ನೀರು ಎತ್ತಿ ಹೊಯ್ಯುವ ಕಾರ್ಯ ಮಾಡುತ್ತಿದ್ದರು.ಇನ್ನೂ ಕೆಲವರು ಮಣ್ಣಿನ ಬಿಂದಿಗೆಯನ್ನೆ ಬಳಸುವವರು!

ಎರಡನೇ ಶತಮಾನಗಳಿಂದಲೂ ವಿಶ್ವದ ಪ್ರವಾಸಿಗರು ಬಂದ ಈ ನೆಲದಲ್ಲಿ ಕಣ್ಣೆದುರು ಹೆದ್ದಾರಿ,ರೈಲು ಮಾರ್ಗ ಸೇರಿದಂತೆ ಆಧುನಿಕ ಸೌಲಭ್ಯಗಳು ಇಂದು ಇವೆ. ಆದರೆ ಇದ್ಯಾವುದಕ್ಕೂ ಜಗ್ಗದೇ, ಓಡದೇ ತರಕಾರಿಯಲ್ಲಿ ಬದುಕು ಕಟ್ಟಿದ್ದು ಹೇಗೆ? ನಿಜ ಮಣ್ಣಿನ ಪ್ರೀತಿ ಇದಲ್ಲವೇ? ಇವರಲ್ಲಿ ಒಬ್ಬೊಬ್ಬರ ಬದುಕು ಒಂದೊಂದು ಕಥೆ, ಓದಿ ಹೇಳಿದವರು ಕಡಿಮೆ.


ಸರ್ ನಾನು ಇವರ ಬಗ್ಗೆ ತಿಳಿಯಬೇಕು ದಾಖಲೆ ಎಲ್ಲಿದೆ? ಕೇಳಬಹುದು. ಈ ಚಿತ್ರಗಳ ಮಹಿಳೆಯರ ಕಾಲು,ಕೈಗಳಲ್ಲಿ ಬರೆದಿಟ್ಟ ನೋಟವಿದೆ,ಓದಲು ನೀವು ಸಾಕ್ಷರರಾದರೆ ಸಾಲದು, ಇವರ ಜೊತೆಗೆ ಮಾತಾಡುವ ಸಂಯಮವೂ ಬೇಕು

ಚಿತ್ರಗಳ ಛಾಯಾಗ್ರಹಕರು: ಶಿವಾನಂದ ಕಳವೆ

LEAVE A REPLY

Please enter your comment!
Please enter your name here