“ಹೈನುರಾಸುಗಳು ಹಸಿರು ಹುಲ್ಲಿಗಿಂತಲೂ ಅಡಿಕೆ ಹಾಳೆಯನ್ನು ಹೆಚ್ಚು ಇಷ್ಟ ಪಟ್ಟು ಮೇಯುತ್ತವೆ. ಅವುಗಳು ಉತ್ಪಾದಿಸುವ ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಇನ್ನೂ ಮಹತ್ವದ ಅಂಶವೆಂದರೆ ಅವುಗಳ ಹಾಲಿನಲ್ಲಿರುವ ಕೊಬ್ಬಿನ ಅಂಶದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ” ಹೀಗೆಂದು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಅಡಿಗರು ಹೇಳಿದರು. ನನಗೆ ನಂಬುವುದಕ್ಕೆ ಕಷ್ಟವೆನಿಸಿತು. ಒಣಗಿಸಿದ ಅಡಿಕೆ ಹಾಳೆಗಳನ್ನು ಹಸುಗಳು ನಿರಾಸಕ್ತಿಯಿಂದ ಮೇಯುವುದನ್ನು ಕಂಡಿದ್ದ ನನಗೆ ಹೀಗೆ ಅನಿಸಿದ್ದು ಸಹಜವೇ ಆಗಿತ್ತು. ನನ್ನ ಮನಸಿನ ಭಾವನೆಗಳನ್ನು ಓದಿಕೊಂಡವರಂತೆ ಅಡಿಗರು ಬನ್ನಿ ಎಂದು ಸೀದಾ ತಮ್ಮ ಮನೆಗೆ ಕರೆದೊಯ್ದರು. ಅಲ್ಲಿನ ಕೊಟ್ಟಿಗೆಯಲ್ಲಿ ಮಿಶ್ರ ತಳಿ ಹೈನುರಾಸು ಸಾವಕಾಶವಾಗಿ ಕೋ-1 ತಳಿ ಹಸಿರು ಹುಲ್ಲು ಮೇಯುತ್ತಿತ್ತು.

ಅಲ್ಲೇ ಮೂಲೆಯಲ್ಲಿ ಸೆಣಬಿನ ಚೀಲದಲ್ಲಿ ತುಂಬಿಟ್ಟಿದ್ದ ಅಡಿಕೆ ಹಾಳೆಯನ್ನು ದೊಡ್ಡ ಬೋಗುಣಿಗೆ ಹಾಕಿದ ಅಡಿಗರು ಅದನ್ನು ಹಸುವಿನ ಮುಂದೆ ಇರಿಸಿದ್ದೇ ತುಂಬ ಹಸಿದ ಮನುಷ್ಯ ಗಬಗಬನೇ ಆಹಾರ ಸೇವಿಸುವಂತೆ ಹಸು, ಅಡಿಕೆ ಹಾಳೆ ಅವಲಕ್ಕಿಯನ್ನು ತಿನ್ನತೊಡಗಿತು. ಇದಕ್ಕೂ ಮುನ್ನ ಗೊಂತಿನಲ್ಲಿದ್ದ ಹಸಿರು ಹುಲನ್ನು ಪೂರ್ತಿ ತೆಗೆಯಲಾಗಿತ್ತು. ಮೂರ್ನಾಲ್ಕು ನಿಮಿಷ ಕಳೆದ ನಂತರ ಹಸಿರು ಹುಲ್ಲನ್ನು ಅದರ ಮುಂದೆ ಹಾಕಲು ಸೂಚಿಸಿದೆ. ಹುಲ್ಲನ್ನು ಹಾಕಿದಾಗ ಅದರತ್ತ ಹಸು ಗಮನವೇ ನೀಡಲಿಲ್ಲ. ರಾಸುಗಳು ತುಂಬ ಇಷ್ಟಪಟ್ಟು ತಿನ್ನುವುದು ಹಸಿರುಹುಲ್ಲನ್ನು. ಹೀಗಿರುವಾಗ ಮುಂದಿರಿಸಿದ ಹಸಿರುಹುಲ್ಲಿನತ್ತ ಬಾಯಿ ಹಾಕದೇ ಬೋಗುಣಿ ಭರ್ತಿಯಿದ್ದ ಅಡಿಕೆ ಅವಲಕ್ಕಿಯನ್ನು ಕೆಲವೇ ನಿಮಿಷಗಳಲ್ಲಿ ಪೂರ್ತಿ ತಿಂದಿದನ್ನು ನೋಡಿ ಇದು ರಾಸುಗಳಿಗೆ ಸ್ವಾದಿಷ್ಟ ಮೇವು ಎನ್ನುವುದರಲ್ಲಿ ಯಾವುದೇ ಸಂಶಯ ಉಳಿಯಲಿಲ್ಲ.

ಬೆಂಗಳೂರಿನ ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಅಡಿಕೆ ಹಾಳೆಯನ್ನು ಸರಾಗವಾಗಿ ಅವಲಕ್ಕಿ ಮಾಡುವ ತಂತ್ರಜ್ಞಾನ ರೂಪಿಸಿದೆ. ಹಾಳೆಯನ್ನು ಅವಲಕ್ಕಿ ಮಾಡುವ ಮುನ್ನ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಅತ್ಯಧಿಕ ಪ್ರಮಾಣದಲ್ಲಿ ಅಡಿಕೆ ಕೃಷಿ ಮಾಡುವ ಪ್ರದೇಶಗಳಲ್ಲಿ ಅಡಿಕೆ ಸೋಗೆಯನ್ನು ಮನೆಗಳ ಮೇಲ್ಛಾವಣಿ ಹೊದಿಕೆಯಾಗಿ ಬಳಸಲಾಗುತ್ತಿತ್ತಾದರೂ ಅಡಿಕೆ ಹಾಳೆ ವ್ಯರ್ಥವಾಗುತ್ತಿತ್ತು. ಅಡಿಕೆ ಹಾಳೆ ಬಳಸಿ ತಟ್ಟೆ-ಲೋಟಗಳನ್ನು ಮಾಡುವ ತಂತ್ರಜ್ಞಾನ ಬಂದ ನಂತರವೇ ಇದರ ಸದುಪಯೋಗವಾಗತೊಡಗಿತ್ತು. ತಟ್ಟೆ-ಲೋಟಗಳನ್ನು ತಯಾರಿಸಲು ನಿರ್ದಿಷ್ಟ ಅಳತೆಯ ಹಾಳೆಗಳು ಬೇಕಾಗುವುದರಿಂದ ಲಭ್ಯವಾಗುವ ಹಾಳೆಗಳೆಲ್ಲ ಉಪಯೋಗವಾಗುತ್ತಿರಲಿಲ್ಲ. ಎಲ್ಲ ಕೃಷಿಕರು, ರಾಸುಗಳಿಗೆ ಅಡಿಕೆ ಹಾಳೆ ಕತ್ತರಿಸಿ ಮೇವಾಗಿ ನೀಡದ ಕಾರಣ ಹಾಳೆಗಳು ಕೊಳೆತು ವ್ಯರ್ಥವಾಗುತ್ತಿದ್ದವು.

ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ, ಕರಾವಳಿ ಪ್ರದೇಶದ ಹೈನುರಾಸು ಸಾಕಾಣಿಕೆದಾರರಿಗೆ ವರವಾಗಿದೆ. ಇದಕ್ಕೆ ಕಾರಣ ಒಣ ಹುಲ್ಲಿನ ಕೊರತೆ. ಈ ಕೊರತೆಯಿಂದಲೇ ಕರಾವಳಿ ಜಿಲ್ಲೆಯ ಕೊಟ್ಟಿಗೆಗಳಲ್ಲಿ ಸಮೃದ್ಧವಾಗಿದ್ದ ಹೈನುರಾಸುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯಿತು. ದುಬಾರಿ ಬೆಲೆ ಕೊಟ್ಟು ಬೈ ಹುಲ್ಲು ಖರೀದಿಸಿ ಮೇವಾಗಿ ನೀಡುವುದು ನಷ್ಟದಾಯಕ ಬಾಬತ್ತು. ಕರಾವಳಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುವ ಬೈ ಹುಲ್ಲುನ್ನು ಕಂತೆಗಳ ಲೆಕ್ಕದಲ್ಲಿ ಖರೀದಿಸುವುದು ಅತ್ಯಂತ ದುಬಾರಿ ಸಂಗತಿ. ಇನ್ನು ಕರಾವಳಿ ಜಿಲ್ಲೆಗಳಿಗೆ ಸಮೀಪವಿರುವ ಘಟ್ಟದ ಮೇಲಿನ ಜಿಲ್ಲೆಗಳಿಂದ ಬೈಹುಲ್ಲು ತರುವುದು ಕೂಡ ಎಲ್ಲರ ಕೈಗೆಟ್ಟುಕದ ಸಂಗತಿ. ಘಟ್ಟದ ಮೇಲಿನ ಪ್ರದೇಶಗಳಲ್ಲಿಯೂ ಕಾಲಕ್ರಮೇಣ ಬೈ ಹುಲ್ಲಿನ ಕೊರತೆ ಹೆಚ್ಚಾಗತೊಡಗಿತು. ಇದರ ಪರಿಣಾಮ ಅಲ್ಲಿಯೂ ಬೈ ಹುಲ್ಲು ದುಬಾರಿಯಾಯಿತು.

ಒಣಹುಲ್ಲು ಏಕೆ ಬೇಕು: ರಾಸುಗಳ ಜೀರ್ಣಕ್ರಿಯೆ ಸರಾಗವಾಗಿ ಸಾಗಲು ಒಣಹುಲ್ಲು ಅಥವಾ ಅದಕ್ಕೆ ಪರ್ಯಾಯವಾದ ಮೇವು ಬೇಕೇ ಬೇಕು. ಇದಿಲ್ಲದಿದ್ದರೆ ರಾಸುಗಳಿಗೆ ಅಜೀರ್ಣತೆ ಉಂಟಾಗುತ್ತದೆ. ಇತರ ಪಶು ಆಹಾರದಲ್ಲಿ ಪೌಷ್ಟಿಕಾಂಶವಿದ್ದರೂ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಸು, ಎಮ್ಮೆ, ಕುರಿ ಮತ್ತು ಮೇಕೆಗಳಿಗೆ ಇರುವ ರುಮೇನ್ ಎನ್ನುವ ದೊಡ್ಡ ಹೊಟ್ಟೆಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಸೂಕ್ಷ್ಮಜೀವಿಗಳ ಬೆಳವಣಿಗೆ ಹಾಗೂ ಅವುಗಳ ಕ್ರಿಯೆಗಳಿಗೆ ನಾರಿನ ಅಂಶ ಆಧಾರ. ಪೌಷ್ಟಿಕಾಂಶಗಳಾದ ಸಸಾರಜನಕ ಮತ್ತು ಶರ್ಕರ ಪಿಷ್ಟಾದಿಗಳ ಜೀರ್ಣಕ್ರಿಯೆಗೂ ನಾರು ಪೂರಕ. ಜಾನುವಾರುಗಳು ಸೇವಿಸುವ ಆಹಾರದಲ್ಲಿ ಶೇಕಡ 25 ರಿಂದ 30 ಭಾಗದಲ್ಲಿಯಾದರೂ ನಾರಿನ ಅಂಶವಿರಬೇಕು. ಇಂಥ ನಾರು ಭತ್ತ, ರಾಗಿ, ಜೋಳ ಮತ್ತು ಗೋಧಿಯ ಒಣಹುಲ್ಲಿನಲ್ಲಿ ಲಭ್ಯವಾಗುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಯೇ ಪ್ರಮುಖವಾದ ವಾಣಿಜ್ಯ ಬೆಳೆ. ಇಲ್ಲಿ ಇಲ್ಲಿ ಭತ್ತದ ಗದ್ದೆಗಳ ವಿಸ್ತೀರ್ಣ ಆತಂಕಕಾರಿ ಮಟ್ಟದಲ್ಲಿ ಕುಸಿದಿದೆ. ಇಲ್ಲಿ ಬೈ ಹುಲ್ಲಿಗೆ ಪರ್ಯಾಯವಾಗಿ ಒಣಮೇವು ಅಗತ್ಯವಾಗಿತ್ತು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅಡಿಕೆ ಹಾಳೆ ತಂತ್ರಜ್ಞಾನ ರೂಪಿತಗೊಂಡಿದೆ. ಅಡಿಕೆ ಹಾಳೆ ಮತ್ತು ಸೋಗೆಯಲ್ಲಿಯೂ ನಾರಿನ ಅಂಶ ಸಾಕಷ್ಟಿದೆ. ಆದರೆ ಸೋಗೆಯನ್ನು ಮೇವಾಗಿಸುವ ತಂತ್ರಜ್ಞಾನ ಇನ್ನೂ ರೂಪಿತಗೊಂಡಿಲ್ಲ. ಅಡಿಕೆ ಮರದಿಂದ ಬೀಳುವ ಅಡಿಕೆ ಹಾಳೆ ಹಸಿ ಅಂಶ ಪೂರ್ಣವಾಗಿ ಹೋಗಿರುವುದಿಲ್ಲ. ಇದರ ಒಳಭಾಗದಲ್ಲಿ ತೆಳು ಪ್ಲಾಸ್ಟಿಕ್ ಮಾದರಿಯ ಪದರವಿರುತ್ತದೆ. ಈ ಪದರವಿರುವ ಹಾಳೆಯನ್ನು ಜಾನುವಾರುಗಳಿಗೆ ಮೇವಾಗಿ ನೀಡಿದಾಗ ಅಜೀರ್ಣತೆ ಉಂಟಾಗುತ್ತದೆ. ಆದ್ದರಿಂದಲೇ ಅಡಿಕೆ ಹಾಳೆಯನ್ನು ಹೈನುರಾಸುಗಳಿಗೆ ನೀಡುವ ಅಭ್ಯಾಸವಿರುವ ಕೃಷಿಕರು ಇದನ್ನು ಬಿಸಿಲಿನಲ್ಲಿ ಮೂರ್ನಾಲ್ಕು ದಿನ ಚೆನ್ನಾಗಿ ಒಣಗಿಸಿ ನಂತರ ಹರಿದು ನೀಡುತ್ತಾರೆ. ಒಂದೆರಡು ರಾಸುಗಳಿದ್ದಾಗ ಮಾತ್ರ ಹೀಗೆ ಕೈಯಿಂದಲೇ ಹರಿದು ಕೊಡಬಹುದಾದರೂ ಕೆಜಿಗಟ್ಟಲೇ ಹರಿದು ಕೊಡುವುದು ಸಾಧ್ಯವಿಲ್ಲ. ಅಡಿಕೆ ಹಾಳೆಯನ್ನು ಅವಲಕ್ಕಿ ರೀತಿ ನೀಡುವುದಂತೂ ಆಗದ ಸಂಗತಿ. ಆದ್ದರಿಂದಲೇ ಸಂಸ್ಥೆ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದ ಮಹತ್ವ ಅರ್ಥವಾಗುತ್ತದೆ.

ಈ ಲೇಖನದ 2ನೇ ಭಾಗದಲ್ಲಿ ಮತ್ತಷ್ಟೂ ವಿವರಗಳನ್ನು ನಿರೀಕ್ಷಿಸಿ…

LEAVE A REPLY

Please enter your comment!
Please enter your name here