ಮುಂಗಾರು ಮಳೆಯ ಕೊರತೆ ಈ ವರ್ಷ ಹೆಚ್ಚಾಗಿದೆ. ಇದರಿಂದಾಗಿ ಕರ್ನಾಟಕದ ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದ ರೈತರು ಕಠೋರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾವೇರಿ ನದಿ ಪ್ರಾಧಿಕಾರ, ನ್ಯಾಯಾಲಯದ ಸೂಚನೆ ಅನುಸಾರ ನೀರಿನ ಕೊರತೆ ನಡುವೆಯೂ ನೀರು ಹರಿಸಬೇಕಾಗಿರುವುದು ಸಮಸ್ಯೆಗಳನ್ನು ಹೆಚ್ಚಿಸಿದೆ.
ಈ ಕಾರಣದಿಂದ ನೀರಾವರಿ ಪ್ರದೇಶದ ರೈತರುಗಳ ಕೃಷಿಭೂಮಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ದೊರೆಯದೇ ಸಂಕಷ್ಟ ಎದುರಾಗಿದೆ. ಇದರಿಂದ ಅವರ ಚಿತ್ತ ಪರ್ಯಾಯ ಬೆಳೆಗಳತ್ತ ನೆಟ್ಟಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ರೈತ ಬೋರೇಗೌಡ ಅವರ ಜಮೀನಿಗೆ ಕಾಲುವೆಗಳ ನೀರು ಬರುತ್ತಿಲ್ಲ. “ಜಮೀನಿನಲ್ಲಿ ನಿಂತಿರುವ ಬೆಳೆಗಳಿಗೆ ನೀರು ಸಾಲುತ್ತಿಲ್ಲ. ಮಳೆಯ ಕೊರತೆಯೂ ಇದೆ. ಬೋರ್‌ವೆಲ್‌ಗಳಿಂದಲೂ ಅಗತ್ಯ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಅಂತರ್ಜಲ ಕುಸಿದಿದೆ ಎಂದ ಅವರು ಈ ವರದಿಗಾರರಿಗೆ ತಮ್ಮ ಕೈಯಿಂದ ಮಣ್ಣು ಎತ್ತಿಕೊಂಡು ಅದರ ಸ್ಥಿತಿ ತೋರಿಸಿದರು.
ಕಾವೇರಿ ನದಿಯ ನೀರು ಕೆಳಭಾಗದ ಮೂರು ಜಿಲ್ಲೆಗಳಲ್ಲಿ ಕಬ್ಬು ಮತ್ತು ಭತ್ತವನ್ನು ಬೆಳೆಯಲು ಸಹಾಯ ಮಾಡುತ್ತಿತ್ತು. ನಾಲೆಗಳ ಸಂಪರ್ಕವಿರುವ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ನಾಗಮಂಗಲ ತಾಲೂಕಿನ ಹೊಲಗದ್ದೆಗಳ ಬೆಳೆಗಳಿಗೆ 10 ದಿನಕ್ಕೊಮ್ಮೆ ನೀರು ಸಿಗುತ್ತಿದೆ.
ಹೆಚ್ಚು ಅಂತರದಲ್ಲಿ ನೀರು ನೀಡುವುದರಿಂದ ಬೆಳೆಗಳಿಗೆ ಸಾಕಾಗುವುದಿಲ್ಲ,. ಕನಿಷ್ಠ ಒಂದು ವಾರದವರೆಗೆ ಬೆಳೆಗಳಿಗೆ ನಿಂತಿರುವ ನೀರು ಬೇಕಾಗುತ್ತದೆ ಎಂದು ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತ ಮತ್ತು ಕೃಷಿಕ ಸೈಯದ್ ಘನಿ ಖಾನ್ ಹೇಳಿದರು.
“ಭತ್ತದ ರೈತರು ಈಗ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ಕೇವಲ 54,000 ಮಿಲಿಯನ್ ಘನ ಅಡಿ (ಟಿಎಂಸಿ) ನೀರು ಇದೆ. ನಾಲ್ಕು ಜಲಾಶಯಗಳ (ಕೆಆರ್‌ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ) ಒಳಹರಿವು ಲೆಕ್ಕಿಸದೆ ತಮಿಳುನಾಡು ತನ್ನ ಪಾಲಿಗೆ ಬೇಡಿಕೆಯಿಡುತ್ತಿರುವುದರಿಂದ ನಮ್ಮ ನಿರೀಕ್ಷೆ ಹುಸಿಯಾಗಿದೆ” ಎಂದು ಅವರು ಹೇಳಿದರು.
ಜಲಸಂಪನ್ಮೂಲಕ್ಕೆ ಹೆಸರಾದ ಪ್ರದೇಶದಲ್ಲಿ ಇಂಥ ಬೆಳವಣಿಗೆ ಆಗಿರುವುದು ಶೋಚನೀಯ ಸಂಗತಿ. ಮಂಡ್ಯ ಜಿಲ್ಲೆಯೊಂದರಲ್ಲೇ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇನ್ನೊಂದು ನೀರಿನ ಆವಶ್ಯಕ ಬೆಳೆಯಾದ ಕಬ್ಬಿನ ಬೇಸಾಯ ಕೂಡ ನಡೆಯುತ್ತಿತ್ತು. ಇದಲ್ಲದೇ ನೀರು ಅವಶ್ಯಕತೆ ಇರುವ ಅಡಿಕೆ ಬೆಳೆಯನ್ನು ಜಿಲ್ಲೆಯ ೬ ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯಾಗುತ್ತಿದೆ.
ಈ ಬಾರಿಯ ಮುಂಗಾರು ಮಳೆಯ ಕೊರತೆಯ ಜೊತೆಗೆ ನೀರಿನ ಅಗತ್ಯತೆಯಿರುವ ಈ ಬೆಳೆಗಳಿಗೆ ಅವಶ್ಯಕ ಪ್ರಮಾಣದಲ್ಲಿ ನೀರು ಒದಗದೇ ಇರುವುದು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳನ್ನು ಉಲ್ಲೇಖಿಸುತ್ತಾರೆ ಈ ಪ್ರದೇಶದಲ್ಲಿ ವಾಡಿಕೆಗಿಂತ ಶೇಕಡ 28ರಷ್ಟು ಕಡಿಮೆ ಮಳೆಯಾಗಿದೆ. ಇದು ಶೇಕಡ 30 ರಷ್ಟು ನೀರಿನ ಕೊರತೆಗೆ ಕಾರಣವಾಗಿದೆ. ಬೇಸಾಯಕ್ಕೆ ನೀರಿನ ಲಭ್ಯತೆ ಕಡಿಮೆಯಾಗಿದೆ, ನ್ಯಾಯಾಲಯದ ಆದೇಶದ ಕಾರಣದಿಂದ ತಮಿಳುನಾಡಿಗೆ ಬಿಡುವ ನೀರಿನ ಪ್ರಮಾಣ ಸ್ಥಿರವಾಗಿದೆ ಎಂದು ವಿವರಿಸುತ್ತಾರೆ.
ನೀರಿನ ಕೊರತೆ ನಡುವೆ ಬೇರೆ ಸಮಸ್ಯೆಗಳು
ನೀರು ಕೊರತೆ ನಡುವೆ ಬೇರೆ ಸಮಸ್ಯೆಗಳೂ ಇವೆ. ಮಂಡ್ಯ ನಗರವ ಬೆಂಗಳೂರಿಗೆ ಉತ್ತಮ ಸಂಪರ್ಕ ಹೊಂದಿದೆ. ಗ್ರಾಮೀಣ ಪ್ರದೇಶಗಳ ಯುವಕರು ಉದ್ಯೋಗಗಳನ್ನು ಅರಸಿ ಅಲ್ಲಿಗೆ ಹೋಗುತ್ತಿದ್ದಾರೆ. 2000 ನೇ ಇಸವಿಯಿಂದ ಓರ್ವ ಯುವಕ ಕೂಡ ಕೃಷಿಗೆ ಸೇರಿಲ್ಲ ಎಂಬುದು ಗಮನಿಸುವಿಕೆಯಿಂದ ತಿಳಿದಿದೆ ಎಂದು ವಿಧಾನಪರಿಷತ್ ಸದಸ್ಯ, ರೈತ ಮುಖಂಡ ಮಧು ಜಿ. ಮಾದೇಗೌಡ ಹೇಳುತ್ತಾರೆ. ನಾನು ರೈತ ಸಮುದಾಯದಿಂದ ಕಲಿತಿದ್ದೇನೆ
ಕಾರ್ಮಿಕ ಸಮಸ್ಯೆಗಳು
ರಾಜ್ಯ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಕೆಲವು ಸ್ಥಳೀಯ ಯುವಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಸದ್ಯ ನಡೆಯುತ್ತಿರುವ ನೀರಿನ ವಿವಾದಗಳು ಮತ್ತು ಕೃಷಿ ಇಳುವರಿ ಅನಿಶ್ಚಿತತೆ ಮತ್ತು ಆದಾಯದ ಮಟ್ಟದಲ್ಲಿನ ವ್ಯತ್ಯಾಸದ ಪರಿಣಾಮವಾಗಿ ಸಾಕಷ್ಟು ಮಂದಿ ಯುವಕರು ನಗರ ಪ್ರದೇಶಗಳ ಉದ್ಯೋಗಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಬೇರೆಬೇರೆ ಊರುಗಳಿಂದ ಬರುವ ವಲಸೆ ಕಾರ್ಮಿಕರು ಹೆಚ್ಚಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ( MGNREGS) ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿದ್ದಾರೆ ”ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಮಂಡ್ಯ ಜಿಲ್ಲೆಯ ಕೃಷಿಭೂಮಿಯ ಕೆಲಸ ಕಾರ್ಯಗಳು ಬೀದರ್, ರಾಯಚೂರು ಮತ್ತು ಗುಲ್ಬುರ್ಗಾದಂತಹ ಉತ್ತರ ಕರ್ನಾಟಕದ ಜಿಲ್ಲೆಗಳ ಕೂಲಿ ಕಾರ್ಮಿಕರಿಂದ ನಡೆಯುತ್ತಿವೆ ಎಂದು ರೈತ ಮುಖಂಡ ಬೋರೇಗೌಡ ಹೇಳುತ್ತಾರೆ. ಹೀಗೆ ವಲಸೆ ಬಂದ ಕಾರ್ಮೀಕರಿಗೂ ಅವರ ಊರುಗಳಲ್ಲಿ ತೋಟಗಳಿವೆ. ಇಲ್ಲಿಯ ಕೃಷಿ ಹಂಗಾಮಿನಲ್ಲಿ ಬಂದು ಮತ್ತೆ ತೆರಳುತ್ತಾರೆ ಎಂದು ಅವರು ವಿವರಿಸಿದರು. ಇದರಿಂದ ತೀರಾ ಅವಶ್ಯಕ ಸಂದರ್ಭದಲ್ಲಿ ಕೃಷಿ ಕಾರ್ಮೀಕರ ಅಲಭ್ಯತೆ ಹೆಚ್ಚುತ್ತಿದೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮಂಡ್ಯದ ಭತ್ತ- ಕಬ್ಬು ಬೆಳೆಯುವ ರೈತರು ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ ಈ ಪರಿಸ್ಥಿತಿ ನೀರಿನ ಕೊರತೆಯಿಂದ ಹೆಚ್ಚುತ್ತಿದೆ.
“ಮಂಡ್ಯ ಜಿಲ್ಲೆಯ ರೈತರು ಮಣ್ಣಿನ ಫಲವತ್ತತೆ ವಿಷಯದಲ್ಲಿ ಅದೃಷ್ಟವಂತರು. ಅತ್ಯಂತ ಫಲವತ್ತಾದ ಮತ್ತು ತೇವಾಂಶವುಳ್ಳ ಕಪ್ಪು ಮೆಕ್ಕಲು ಮಣ್ಣಿದೆ. ಅದರಲ್ಲಿ ಯಾವುದೇ ಬೆಳೆಯನ್ನಾದರೂ ಬೆಳೆಯಬಹುದು. ಕೆಲವು ರೈತರು ಈಗ ಭತ್ತದ ಬದಲಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಬಗ್ಗೆ ಆಲೋಚಿಸುತ್ತಿದ್ದಾರೆ. ನವೀನ ರೈತರ ಗುಂಪು ಈಗಾಗಲೇ ಕೃಷ್ಣಗಿರಿ-ಹೊಸೂರು ಪ್ರದೇಶದಲ್ಲಿ ಪ್ರವಾಸ ಮಾಡಿ ಹೆಚ್ಚಿನ ಮೌಲ್ಯದ ವೈನ್ ಉತ್ಪಾದನೆಗೆ ಮೊದಲ ಹಂತದ ಇನ್ಪುಟ್ ಆಗಿರುವ ದ್ರಾಕ್ಷಿಯನ್ನು ಬೆಳೆಯುವ ಬಗ್ಗೆ ತಿಳಿದುಕೊಂಡಿದೆ ಎಂದು ಮಂಡ್ಯದ ರೈತಪರ ವಕೀಲ ಜತೆಗೆ ಸ್ವತಃ ಕೃಷಿಕರು ಆಗಿರುವ ಡಿ ಆತ್ಮಾನಂದ ವಿವರಿಸುತ್ತಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಇತ್ತೀಚೆಗೆ ನಡೆದ ಕರ್ನಾಟಕ ಬಂದ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್), ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ ಜ್ಞಾಪಕ ಪತ್ರದಲ್ಲಿ ವಿಶಾಲ ನದಿ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಕೊರತೆಯಾಗುತ್ತಿರುವ ಜಟಿಲವಾದ ನೀರು ಹಂಚಿಕೆ ಡೈನಾಮಿಕ್ಸ್ ಅನ್ನು ಸಹ ಎತ್ತಿ ತೋರಿಸಿದೆ.