ಚುನಾವಣಾ ಪ್ರಚಾರಕ್ಕೆ ಸುಮಾರು ಜನ ಬಂದಿದ್ರು. ಹೆಚ್ಚಿನವರು ಹೇಳಿದ್ದು” ಬೆಳಗ್ಗೇನೆ ಬಂದು ಓಟ್ ಮಾಡಿ. ಮನೇಲೇ ಇರ್ತೀರಲ್ಲ. ಫ್ರೀ ಇರ್ತೀರಲ್ಲ ಹೇಗಂದ್ರೂ”
ನಮ್ಮಲ್ಲಿಗೆ ಕೆಲವರು ಮದುವೆ, ಗೃಹಪ್ರವೇಶ, ಸೀಮಂತ, ನಾಮಕರಣ, ವೈಕುಂಠ ಅಂತ ಕರೆಯೋಕೆ ಬರುವವರೂ ಕೂಡಾ ” ತಪ್ಪದೇ ಬರ್ಬೇಕು. ಹೇಗಂದ್ರೂ ಮನೇಲೇ ಇರ್ತೀರಲ್ಲ” ಅಂತಾರೆ. ಅವರ ಮಕ್ಕಳು ಅಣ್ಣ ತಮ್ಮಂದಿರ ಬಗ್ಗೆ ಕೇಳಿದ್ರೆ ” ಅವರು ಬರ್ತಿಲ್ಲ ಮಾರ್ರೇ.. ಆಫೀಸ್ ಇದೆ. ರಜೆ ಸಿಗಲ್ಲ ಅಂತೆ. ಒಬ್ರು ಆವತ್ತೇ ಬಂದು ರಾತ್ರಿ ಹೊರಡ್ತಾರೆ” ಅಂತಾರೆ.
ದೊಡ್ಡ ಊರುಗಳಲ್ಲಿ ಕೆಲ್ಸದಲ್ಲಿ ಇರುವವರ ಕೆಲವರ ಮಾತೂ ಇದೇ ” ನೀವು ಕೃಷಿಕರದ್ದು ಆರಾಮದ ಜೀವನ ಮಾರ್ರೇ. ಬೆಳಗ್ಗೆ ಹೋಗಿ ರಾತ್ರಿ ತನಕ ಒದ್ದಾಡೋ ಕರ್ಮ ನಿಮಗೆ ಇಲ್ಲ. ಯಾರಿಗೆ ಬೇಕು ಈ ಕತ್ತೆ ದುಡಿತ” ಅಂತ. ಅವರಿಗೆಲ್ಲಾ ಹೇಳ್ಬೇಕು ಅನಿಸುತ್ತೆ. ಯಾಕ್ರೀ ನಾವು ಹೇಳಿದ್ವಾ ನಿಮ್ಗೆ ಆ ಥರ ದುಡೀರಿ ಅಂತ? ನಮ್ಮ ಬದುಕು ಸುಲಭ ಅಂತ ಅನಿಸಿದ್ರೆ ಬನ್ನಿ ಕೃಷಿಗೆ. ತಡೆದವರು ಯಾರು ? ನಿಮ್ಮ ಬದುಕು ನಿಮಗೆ ಕಷ್ಟ ಇರಬಹುದು. ಆದ್ರೆ ನಮ್ಮ ಬದುಕು ಸುಲಭ ಅನ್ನೋದಕ್ಕೆ ನಿಮಗೆ ಹಕ್ಕಿಲ್ಲ. ಇನ್ನೊಂದು ವೃತ್ತಿಯ ಕಷ್ಟ ಆ ವೃತ್ತಿ ಮಾಡಿದಾಗಲಷ್ಟೇ ಗೊತ್ತಾಗೋದು.
ಕೃಷಿಕರು ಅಂದ್ರೆ ಮನೇಲೇ ಇರುವವರು ಅನ್ನೋದೇನೋ ನಿಜ. ಆದರೆ ಕೆಲ್ಸ ಇಲ್ಲದವರಲ್ಲ. ಫ್ರೀ ಇರೋರೂ ಅಲ್ಲ. ಎಲ್ಲೋ ಕೆಲವರು ಎಲ್ಲಾ ಕಡೆ ಆರಾಮಾಗಿ ಓಡಾಡಿಕೊಂಡು ಸಮಾರಂಭಗಳಲ್ಲಿ ಪಾಲ್ಗೊಂಡು ಸಮಯ ಕಳೀತಾರೆ ಅಂದ್ರೆ ಎಲ್ಲಾ ಕೃಷಿಕರೂ ಹಾಗೇ ಅನ್ನೋ ಭಾವನೆ ತಪ್ಪು.
ನಮ್ಮಲ್ಲಿ ಹರ್ಷ ಬೆಳಗ್ಗೆ 6 ಕ್ಕೆ ಎದ್ದು 7 ಕ್ಕೆ ತೋಟಕ್ಕೆ ಹೊರಟರು ಅಂದ್ರೆ ತಿಂಡಿ ಊಟಕ್ಕೆ ಅಷ್ಟೇ ಮನೆಗೆ ಬರೋದು. ಮದ್ಯಾಹ್ನ 1 ಗಂಟೆ ವಿಶ್ರಾಂತಿ ತಗೊಂಡು ಕೆಲ್ಸಕ್ಕೆ ಹೋದ್ರು ಅಂದ್ರೆ ಮತ್ತೆ ಕತ್ತಲಾದ ಮೇಲೆನೇ ಮನೆಗೆ ಬರೋದು.ನಮ್ಮದು ಎರಡೂವರೆ ಎಕರೆ ಜಮೀನಿನಲ್ಲೇ ಇಡೀ ದಿನ ದುಡಿದರೂ ಮುಗಿಯದಷ್ಟು ಕೆಲ್ಸ ಇದೆ ಅಂತಾರೆ..
ನನ್ನದು ಮನೆಕೆಲ್ಸ ಕೊಟ್ಟಿಗೆ ಕೆಲ್ಸ ಇರುತ್ತೆ. ಕೃಷಿ ಕೆಲ್ಸವನ್ನೂ ಆಫೀಸ್ ಕೆಲ್ಸ ಅನ್ನೋ ಥರ ಗಂಭೀರವಾಗಿ, ಶಿಸ್ತುಬದ್ಧವಾಗಿ ತೆಗೆದು ಕೊಳ್ಳದೇ ಇದ್ದರೆ ಖಂಡಿತವಾಗಿಯೂ ಉದ್ದಾರ ಆಗಲ್ಲನಾವು. ಈಗಿನ ಕೃಷಿ ಕಾರ್ಮಿಕರ ಕೊರತೆಯ ಸಮಯದಲ್ಲಿ ನಾವು ದಿನದ ಅತ್ಯಮೂಲ್ಯ ಸಮಯವನ್ನು ಸ್ವಲ್ಪವೂ ಹಾಳುಮಾಡುತ್ತಿಲ್ಲ.
ಒಂದು ಸಮಾರಂಭಕ್ಕೆ ಹೋಗೋದು ಅಂದ್ರೆ 1 ಇಡೀ ದಿನ ಹೋಗುತ್ತೆ. ಬೆಳಗ್ಗೆ 10ಕ್ಕೆ ಆದ್ರೂ ಹೋಗಬೇಕು. ಮದ್ಯಾಹ್ನ 4 ಆಗೇ ಆಗುತ್ತೆ ಬರೋದು. ಆಮೇಲೆ ಯಾವ ಕೆಲ್ಸವೂ ಆಗಲ್ಲ. ಕೆಲವು ಸಲ ರಾತ್ರಿ ಹೋಗಿ ಬರ್ತೇವೆ.ತೀರ ನಮ್ಮದೇ ಕುಟುಂಬದವರ ಕಾರ್ಯಕ್ರಮದ ಹೊರತಾಗಿ ಭಾನುವಾರವಷ್ಟೇ ಸಮಾರಂಭಗಳಿಗೆ ಹೋಗ್ತೇವೆ.
ಈ ಶಿಸ್ತು ಪಾಲಿಸದೇ ಇದ್ದರೆ ತೋಟದ ಕೆಲ್ಸವೆಲ್ಲವೂ ಹಿಂದೆ ಉಳಿದುಬಿಡುತ್ತದೆ. ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಮಾಡ್ಕೋತಾರೆ ಅನ್ನೋ ನಂಬಿಕೆ ಇದೆ.
ಇಂದು ಕೃಷಿಕರ ದಿನವಂತೆ. ಕೃಷಿ ಖುಶಿಯಾದರಷ್ಟೇ ನೆಮ್ಮದಿ ಸಾಧ್ಯ. ಭೂಮಿಯ ಆರೋಗ್ಯ ಕಾಪಾಡಿಕೊಂಡು ನಮ್ಮ ಆರೋಗ್ಯವನ್ನೂ ಕಾಪಾಡಿಕೊಂಡು ನೆಮ್ಮದಿ ಪಡೆದುಕೊಳ್ಳೋಣ. ದುಡಿಮೆಯೊಂದೇ ಯಶಸ್ಸಿನ ಹೆಬ್ಬಾಗಿಲ ಕೀಲಿ ಕೈ.